ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯ ಪಡೆದ ಬಳಿಕ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದುವರೆಗೆ ಬಂದ ಅರ್ಜಿಗಳನ್ನು ಆಯಾ ಜಿಲ್ಲಾ ಕಚೇರಿಗಳಿಗೆ ಕಳುಹಿಸಲಾಗುವುದು, ಅಲ್ಲಿ ಪ್ರತಿ ಬ್ಲಾಕ್ ಮಟ್ಟದ ನಾಯಕರನ್ನು ಕರೆದು ಚರ್ಚೆ ನಡೆಸಲಾಗುತ್ತದೆ. ರಾಜ್ಯಮಟ್ಟದ ಚುನಾವಣಾ ಸಮಿತಿಯಿಂದ ಇಬ್ಬರು ಸದಸ್ಯರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗುವುದು. ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಸೇರಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಬಳಿಕ ಪ್ರತಿ ಕ್ಷೇತ್ರಗಳಲ್ಲಿ 1 ರಿಂದ 3 ಆಕಾಂಕ್ಷಿಗಳ ಹೆಸರನ್ನು ಪರಿಷ್ಕರಿಸಿ ಕೆಪಿಸಿಸಿಗೆ ಕಳುಹಿಸುವಂತೆ ನಾವು ಸೂಚನೆ ನೀಡಿದ್ದೇವೆ. ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲಿ ಅಂತಹ ಕ್ಷೇತ್ರಗಳ ವಿಚಾರವನ್ನು ರಾಜ್ಯಮಟ್ಟದಲ್ಲಿ ಕೂತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಡಿಸೆಂಬರ್ 31ರ ಒಳಗಾಗಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕು. ಜನವರಿ 1ರ ಒಳಗಾಗಿ ಎಲ್ಲಾ ಜಿಲ್ಲೆಗಳ ಕ್ಷೇತ್ರದ ಪರಿಷ್ಕೃತ ಅರ್ಜಿಗಳ ಪಟ್ಟಿಯನ್ನು ನೀಡಬೇಕು. ಜನವರಿ 5ರಂದು ರಾಜ್ಯ ಮಟ್ಟದ ಚುನಾವಣಾ ಸಮಿತಿ ಸಭೆ ಸೇರಿ ಮುಂದಿನ ಪ್ರಕ್ರಿಯೆಯನ್ನು ನಡೆಸಲಿದ್ದು, ಜನವರಿ 15ರ ಒಳಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಅರ್ಜಿ ಹಾಕಿರುವವರ ಜೊತೆಗೆ ಅರ್ಜಿ ಹಾಕದವರ ಹೆಸರನ್ನು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಯಾರೆಲ್ಲ ಅರ್ಜಿ ಹಾಕಿದ್ದಾರೆ ಅವರ ಹೆಸರುಗಳನ್ನು ಮಾತ್ರ ಪರಿಗಣಿಸುತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅಭ್ಯರ್ಥಿ ಸಿಕ್ಕಿದರೆ ಅವರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚಿಸುತ್ತೇವೆ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.