(www.vknews.in): ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿ ಕೊಳ್ಳುವುದು ಹೇಗೆ ? ನಿಮ್ಮ ಪರಿಚಯ ಏನಾದರು ಒಂದು ಸಂಭಾಷಣೆಯಿಂದ ಪ್ರಾರಂಭ ಮಾಡಬೇಕಾಗುತ್ತದೆ. ಅಲ್ಲವೇ ? ಆ ಮೊದಲ ಸಂಭಾಷಣೆಯೇ “ಶುಭಾಶಯ” ದಿಂದ ಪ್ರಾರಂಭವಾದರೆ ಅದರ ಅನುಭವ ಸಕಾರಾತ್ಮಕವಾಗಿರುತ್ತದೆ. ನಗು ಮುಖದಿಂದ ನೀವು ಯಾರಿಗಾದರೂ ಶುಭಾಶಯ ಹೇಳಿದಾಕ್ಷಣ ಅವರು ಪ್ರತಿಯುತ್ತರ ಕೊಡದೆ ಇರಲಾರರು. ಅಲ್ಲಿಂದ ನಿಮ್ಮ ಮುಂದಿನ ಸಂಭಾಷಣೆ ಮುಂದುವರೆಯಬಹುದು. ಒಂದೇ ಒಂದು ಶುಭಾಶಯಕ್ಕೆ ಎಷ್ಟೊಂದು ಶಕ್ತಿ ಇದೆ ನೋಡಿ. ಇವರನ್ನು ಹೇಗೆ ಪರಿಚಯಿಸಿಕೊಳ್ಳುವುದು, ಪ್ರಶ್ನೆಗಳನ್ನು ಹೇಗೆ ಕೇಳುವುದು ಎಂಬ ಸಂಕೋಚ ಒಂದೇ ಒಂದು ಸಕಾರಾತ್ಮಕ ಶುಭಾಶಯದಲ್ಲಿ ಮಾಯವಾಗಿ ಹೋಗುತ್ತದೆ. ಎಷ್ಟೋ ವರ್ಷಗಳಿಂದ ಚಿರಪರಿಚಿತರೇನೋ ಎಂಬಂತೆ ಕೆಲವೊಮ್ಮೆ ಸಂಭಾಷಣೆಗಳು ಮುಂದುವರೆಯುವುದುಂಟು.
ವ್ಯಕ್ತಿತ್ವ ವಿಕಸನದಲ್ಲಿ ಶುಭಾಶಯದ ಮಹತ್ವ ಬಹಳ ಮುಖ್ಯವಾದುದು. ನೀವು ಎಲ್ಲಿ ಹೋದರೂ ಶುಭಾಶಯದಿಂದ ಸಂಭಾಷಣೆ ಪ್ರಾರಂಭ ಮಾಡಿ ನೋಡಿ, ಅದರ ಮೋಡಿಯೇ ಬೇರೆಯಾಗಿರುತ್ತದೆ. ಉದಾಹರಣೆಗೆ ನೀವು ಆಫೀಸಿಗೆ ಹೋಗಿ. ಮೊಟ್ಟ ಮೊದಲು ನಿಮ್ಮ ಕಣ್ಣಿಗೆ ಬೀಳುವುದು ಸೆಕ್ಯೂರಿಟಿ. ನಗುನಗುತ್ತಾ ಶುಭಾಶಯ ಹೇಳಿ. ಹಾಯ್, ಹೆಲೋ, ಗುಡ್ ಮಾರ್ನಿಂಗ್, ನಮಸ್ಕಾರ, ಸಲಾಂ – ಏನೇ ಆಗಿರಬಹುದು. ಆತನಿಗೆ ಎಷ್ಟು ಸಂತೋಷವಾಗುತ್ತದೆಂದು ಗಮನಿಸಿ. ನಂತರ ನಿಮ್ಮ ಸಹೋದ್ಯೋಗಿಗಳು, ಮ್ಯಾನೇಜರ್ ಗಳು, ಇನ್ನಿತರೆ ಪರಿಚಿತ ಅಪರಿಚಿತ ವ್ಯಕ್ತಿಗಳಿಗೆ ಕಾಣುವ ಮಾತನಾಡುವ ಅವಕಾಶ ಸಿಗಬಹುದು. ಪ್ಲಾಸ್ಟಿಕ್ ನಗು ಬೇಡ. ಅದು ಬೇರೆಯವರ ಸುಪ್ತ ಮನಸ್ಸಿಗೆ ಬೇಗನೆ ಅರ್ಥವಾಗಿ ಹೋಗುತ್ತದೆ. ನಾಟಕದ ಮುಗುಳ್ನಗೆಗೆ ಹೆಚ್ಚು ಉಳಿಗಾಲವಿಲ್ಲ. ಅಂದರೆ ಆ ವ್ಯಕ್ತಿಗೂ ಜನರು ನಂಬುವುದಿಲ್ಲ. ಮನಸಾರೆ ಮುಗುಳ್ನಗೆ ಬೀರುತ್ತಾ “ಶುಭಾಶಯ” ಹೇಳಿ. ಅಪರಿಚಿತರೂ ಸಹ ನಿಮ್ಮ ಸ್ನೇಹಿತರಾಗಿ ಹೋಗುತ್ತಾರೆ.
ಮುಸಲ್ಮಾನರಲ್ಲಿ ಶುಭಾಶಯ ಕೋರುವುದು ಸರ್ವೇಸಾಮಾನ್ಯ. ಪರಿಚಿತ ಅಥವಾ ಅಪರಿಚಿತ ವ್ಯಕ್ತಿ ಯಾರೇ ಆಗಿರಲಿ ಅವರು ಸಂಭಾಷಣೆ ಪ್ರಾರಂಭಿಸುವುದೇ ಶುಭಾಶಯದಿಂದ. ನೀವೂ ಗಮನಿಸಿರಬಹುದು. “ಅಸ್ಸಲಾಮು ಅಲೈಕುಂ” ಅಥವಾ ಸಾಲಮಲೈಕುಂ ಎನ್ನುತ್ತಾರೆ. ಅಲ್ಲಿ ಮುಖಾಮುಖಿ ವ್ಯಕ್ತಿಗಳ ನಡುವಿನ ಸಂಕೋಚ ದೂರವಾಗಿ ಹೋಗುತ್ತದೆ. ಸರಾಗವಾಗಿ ಸಂಭಾಷಣೆಯಲ್ಲಿ ತೊಡಗಲು “ಶುಭಾಶಯ” ಅನುವು ಮಾಡಿಕೊಡುತ್ತದೆ. ಪ್ರವಾದಿ ಮುಹಮ್ಮದ್(ಸ) ರವರು ಒಬ್ಬರನ್ನೊಬ್ಬರು ಶುಭಾಶಯ ಕೋರಿ ಎಂದು ಹೇಳಿ ಕೊಟ್ಟರು. ಅಸ್ಸಲಾಮು ಅಲೈಕುಂ ಎಂದರೆ “ನಿನ್ನೊಂದಿಗೆ ಶಾಂತಿ ನೆಲಸಿರಲಿ” ಎಂದರ್ಥ. ಶುಭಾಶಯವು ಸಂವಹನದ ಮೂಲಭೂತ ಕಾರ್ಯಗಳಲ್ಲಿ ಒಂದಾಗಿದೆ ಮತ್ತು ಸಕಾರಾತ್ಮಕ ಸಂಭಾಷಣೆಗಳನ್ನು ಪ್ರಚೋದಿಸುತ್ತದೆ. ಇದು ಹೆಚ್ಚು ವೈಯಕ್ತಿಕ ಮಟ್ಟದಲ್ಲಿ ಜನರನ್ನು ಸಂಪರ್ಕಿಸಲು ನಮಗೆ ಸಹಾಯ ಮಾಡುತ್ತದೆ. ಇದರಲ್ಲಿ ಜನರು ಉದ್ದೇಶಪೂರ್ವಕವಾಗಿ ತಮ್ಮ ಅಸ್ತಿತ್ವವನ್ನು ಪರಸ್ಪರ ತಿಳಿಯ ಪಡಿಸುತ್ತಾರೆ. ಗಮನವನ್ನು ಸೆಳೆಯುತ್ತಾರೆ. ಪರಸ್ಪರ ಸಂಪರ್ಕದಲ್ಲಿ ಸಾಮಾನ್ಯವಾಗಿ ಸೌಹಾರ್ದಯುತ ಅಥವಾ ಸಾಮಾಜಿಕ ಸ್ಥಾನಮಾನವನ್ನು ಸೂಚಿಸಲಾಗುತ್ತದೆ. ಅದು ಔಪಚಾರಿಕ ಅಥವಾ ಅನೌಪಚಾರಿಕವಾಗಿರಬಹುದು. ಒಟ್ಟಾರೆ “ಶುಭಾಶಯ” ನಾವು ಬೇರೆ ವ್ಯಕ್ತಿಗೆ ನೀಡುವ ಗೌರವವೂ ಹೌದು.
ನಿಮ್ಮದೇ ಥಾಟಿನಲ್ಲಿ ಅಹಂ ಭಾವನೆಯಲ್ಲಿ ಮುಳುಗಿರಬೇಡಿ. ಅದರಿಂದ ಬೇರೆಯರಿಗೆ ಯಾವ ರೀತಿಯ ನಷ್ಟವೂ ಆಗಲ್ಲ. ಮನೆಗಳಲ್ಲಿ, ಆಫೀಸುಗಳಲ್ಲಿ, ಸ್ನೇಹಿತರಲ್ಲಿ, ಪರಿಚಿತ ಅಪರಿಚಿತ ವ್ಯಕ್ತಿಗಳಲ್ಲಿ ಸಲಾಂ ಮಾಡುವುದನ್ನು ಅಭ್ಯಸಿಸಿಕೊಳ್ಳಿ. ನಿಮಗರಿಯದೆಯೇ ನಿಮ್ಮ ಸ್ನೇಹಿತರ ಗುಂಪು ಹೆಚ್ಚಾಗುತ್ತಾ ಹೋಗುತ್ತದೆ. ನಿಮ್ಮ ವ್ಯಕ್ತಿತ್ವ ವಿಕಸನದ ನಡೆ ರೂಪುಗೊಳ್ಳುತ್ತಾ ಹೋಗುತ್ತದೆ. ನಾಚಿಕೆ ಬಿಡಿ. ಧೈರ್ಯದಿಂದ ಮುಗುಳ್ನಗುತ್ತಾ ಮನಸಾರೆ ಶುಭಾಶಯ ಕೋರಿ ನೋಡಿ. ಅದರ ಮಹತ್ವ ನಿಧಾನವಾಗಿ ನಮಗೇ ತಿಳಿಯುತ್ತದೆ. ಫಲದ ಬಗ್ಗೆ ಯೋಚಿಸಬೇಡಿ. ಮುಗುಳ್ನಗೆಯೊಂದಿಗೆ ಶುಭಾಶಯದ ಹೂಗಳನ್ನು ಚೆಲ್ಲುತ್ತಾ ಹೋಗಿ. ಅದರ ಪರಿಮಳ ಹರಡೇ ಹರಡುತ್ತದೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.