(ವಿಶ್ವ ಕನ್ನಡಿಗ ನ್ಯೂಸ್) : ಫೋಟೋ ಕಂಡಾಗಲೇ ನಿಮಗೆ ವ್ಯಕ್ತಿಯ ಪರಿಚಯ ಸಿಕ್ಕಿರಬಹುದು. ದ.ಕ. ಜಿಲ್ಲೆಯಲ್ಲಿ ಈ ಮಹಾನುಭಾವರ ಪರಿಚಯ ಯಾರಿಗೂ ಹೇಳಬೇಗಾಗಿಲ್ಲ. ಕರ್ನಾಟಕದ ಹೆಚ್ಚಿನ ಕಡೆಗಳಲ್ಲೂ ಈ ಮುಖ ಪರಿಚಿತ.
ಹೌದು ಕಣಚೂರು ಮೋನು ಹಾಜಿ ಎಂಬ ಬಿಲಿಯನೇರ್..! ಪ್ರತಿಷ್ಠಿತ ಕಣಚೂರು ಹಾಸ್ಪಿಟಲ್ & ಮೆಡಿಕಲ್ ಕಾಲೇಜಿನ ಮಾಲಕ, ಹಲವಾರು ಟಿಂಬರ್ ಮಿಲ್ಲುಗಳ ಓನರ್, ಕೊಡುಗೈ ದಾನಿ, ಸಿರಿಸಂಪತ್ತು ಕಾಲಬುಡದಲ್ಲಿ ನಲಿದಾಡುತ್ತಿದ್ದರೂ ವಿನಯ ಮರೆಯದ ಸಹೃದಯಿ ಕಣಚೂರು ಮೋನು ಎಂಬ ಮೋನು ಹಾಜಿ.
ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ಭೇಟಿಯಾಗಿ ಅದೂ ಇದೂ ಅಂತ ಲೋಕಾಭಿರಾಮ ಮಾತಾಡಿ ಹೊರಬರುವಾಗ ಮನೆಯ ಗೋಡೆಯ ಬಳಿ ನಿಲ್ಲಿಸಲಾಗಿದ್ದ ಹಳೆಯ ಬುಲೆಟ್ ಬೈಕ್ ಕಾಣಿಸಿಕೊಂಡಿತು. ಮೋನು ಹಾಜಿಯವರ ಗತಕಾಲದ ಇತಿಹಾಸದಲ್ಲಿ ಒಂದು ಬೈಕ್ ನ ಕತೆ ಗೊತ್ತಿರುವುದರಿಂದ ಇದು ಅದೇ ಬೈಕ್ ಆಗಿರಬೇಕೆಂದು ಭಾವಿಸಿ ಅವರಲ್ಲೇ ಕೇಳಿದೆ; “ಇದು ನಿಮ್ಮ ಅಂದಿನ ಹಳೆ ಬೈಕಾ?” “ಹೌದು, ಅದೇ ಬೈಕು. ನಲ್ವತ್ತು ವರ್ಷಗಳ ಹಿಂದಿನದ್ದು” ನನ್ನ ಮನದಲ್ಲಿ ಅವರೇ ಹಿಂದೊಮ್ಮೆ ಹೇಳಿದ್ದ ಅಂದಿನ ಆ ದೃಶ್ಯಗಳು ಕಣ್ಣಂಚಿನಲ್ಲಿ ಸುಳಿದವು.
ಪಟ್ಟೋರಿ ಎಂಬ ನಾಡಿನಿಂದ ಬರಿಗೈಯ್ಯಲ್ಲಿ ಜೀವನ ಅರಸಿಕೊಂಡು ದುಡಿಯಲು ಹೋದ ಮೋನು ಎಂಬ ಹದಿಹರೆಯದ ಯುವಕ. ನಿಯ್ಯತಿನಿಂದ ದುಡಿದು ಕೂಡಿಟ್ಟ ಹಣದಲ್ಲಿ ಮರದ ವ್ಯಾಪಾರ ಶುರುಮಾಡಿ ಹಲವಾರು ಏಳು ಬೀಳುಗಳನ್ನು ಕಂಡರೂ ಛಲಬಿಡದೆ ಮುನ್ನೇರುತ್ತಾ ಬಂದು ಒಂದು ಬುಲೆಟ್ ಬೈಕಿನ ಒಡೆಯರಾದ ಮೋನು.
ಮೂಡಿಗೆರೆಯಿಂದ ಊರಿಗೆ, ಊರಿಂದ ಮೂಡುಗೆರೆಗೆ ಅದರಲ್ಲೇ ಪಯಣ. ಮುಂದೊಮ್ಮೆ ಮೂರ್ನಾಲ್ಕು ಕೋಟಿಯ ಅನೇಕ ಕಾರುಗಳ ಒಡೆಯ ನಾನಾಗಬಲ್ಲೆ ಎಂಬ ಯೋಚನೆ ಅವರಿಗೆ ಆಗ ಇತ್ತೋ ಇಲ್ಲವೋ ಗೊತ್ತಿಲ್ಲ. ಯಾವ ವಿಷಯದಲ್ಲೂ ತಾನು ನಡೆದು ಬಂದ ದಾರಿಯನ್ನು ಮರೆಯದ ಕಣಚೂರು ಮೋನು ಎಂಬ ಅಂದಿನ ಬರೀ ಒಂದು ಬುಲೆಟ್ ನ ಒಡೆಯ, ಇಂದು ಕೋಟಿಗಳ ಕಾರುಗಳ ಮಾಲೀಕ ಮೋನು ಹಾಜಿ ಎಂಬ ಬಿಲಿಯನೇರ್ ಆ ಬೈಕನ್ನು ಕೂಡಾ ಉಳಿಸಿಕೊಂಡಿದ್ದಾರೆ. ಒಬ್ಬ ಯಶಸ್ವೀ ಛಲಗಾರ ಬೃಹತ್ ಉದ್ಯಮಿಯ ಗತ ಇತಿಹಾಸವನ್ನು ಮೆಲುಕು ಹಾಕುತ್ತಾ ಆ ಬುಲೆಟ್ ಇಂದಿಗೂ ಮೋನು ಹಾಜಿಯವರ ಭವ್ಯ ಬಂಗಲೆಯ ಅಂಗಳದಲ್ಲಿ ನಿಂತುಕೊಂಡಿದೆ.
“ನೀವು ಅದರ ಪಕ್ಕದಲ್ಲಿ ಒಮ್ಮೆ ನಿಲ್ಲಿ, ನಾನು ಫೋಟೋ ತೆಗೆಯುತ್ತೇನೆ” ಎಂದೆ. ವಿನಯದ ಸಾಕಾರವಾದ ಅವರು ಬೈಕ್ ಪಕ್ಕದಲ್ಲಿ ನಿಂತುಕೊಂಡರು, ನಾನು ಕ್ಲಿಕ್ಕಿಸಿದೆ. ನಾನು ಇದು ಬರೆಯುವ ವಿಷಯ ಅವರಿಗೆ ಹೇಳಿಲ್ಲ. ಆದರೂ ಅವರು ಕೋಪಿಸಿಕೊಳ್ಳಲಾರರು ಎಂಬ ಧೈರ್ಯದಿಂದ ಬರೆದಿದ್ದೇನೆ. ಕಣಚೂರು ಮೋನು ಹಾಜಿ ಇನ್ನಷ್ಟು ಎತ್ತಕ್ಕೇರಲಿ. ಆಯುರಾರೋಗ್ಯ ಉಂಟಾಗಲಿ.
– ಡಿ. ಐ. ಅಬೂಬಕರ್, ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.