(www.vknews.in) ಅಮ್ಮಿನ ಬಾವಿ (ತಾ.ಧಾರವಾಡ) : ಪ್ರತಿಯೊಬ್ಬ ಮನುಷ್ಯನಿಗೆ ಅವನ ಕುಟುಂಬದ ಪರಿಸರದಲ್ಲಿ ತಂದೆ-ತಾಯಿಗಳು, ಸಾಮಾಜಿಕ ಪರಿಸರದಲ್ಲಿ ಗುರು-ಹಿರಿಯರು ಹಾಗೂ ಧರ್ಮದ ನೀತಿ ಸಂಹಿತೆಯು ನೀಡುವ ಸತ್ಯ ಶುದ್ಧ ಸಾತ್ವಿಕ ಸಂಸ್ಕಾರದಿಂದ ಶ್ರೇಷ್ಠ ವ್ಯಕ್ತಿತ್ವ ಸಂಪಾದನೆ ಸಾಧ್ಯವಾಗುತ್ತದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಗ್ರಾಮದ ಶ್ರೀಈಶ್ವರಾಂಜನೇಯ ಯುವಕ ಮಂಡಳದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಧನಾ ಸ್ಮರಣೆಯ ವಿಶೇಷ ಸನ್ಮಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಮನುಷ್ಯ ತನ್ನ ಬದುಕಿನುದ್ದಕ್ಕೂ ಶುದ್ಧವಾದ ಧರ್ಮಾಚರಣೆ, ಸಜ್ಜನಿಕೆಯ ಸರಳ ಜೀವನ ವಿಧಾನ, ಸ್ವಾಧ್ಯಾಯ, ಯೋಗ-ಧ್ಯಾನದಂತಹ ಉತ್ಕೃಷ್ಟ ಹವ್ಯಾಸಗಳನ್ನು ರೂಢಿಸಿಕೊಂಡಾಗ ವಿಶಿಷ್ಟವಾದ ಜ್ಞಾನ ಸಂಪಾದನೆ ಸಾಧ್ಯವಾಗಿ ಸಾಮಾಜಿಕ ಗೌರವ, ಸ್ಥಾನ-ಮಾನ ಅಧಿಕಗೊಂಡು ಉನ್ನತ ವ್ಯಕ್ತಿತ್ವದ ಸಾಧನೆಯಲ್ಲಿ ಅವನು ಮೇಲುಗೈ ಸಾಧಿಸುತ್ತಾನೆ ಎಂದರು.
ಜನ್ಮ ನೀಡಿದ ತಂದೆ-ತಾಯಿಗಳ ಋಣ ತೀರಿಸುವ ಗುರುತರ ಜವಾಬ್ದಾರಿ ಮಕ್ಕಳ ಮೇಲಿರುತ್ತದೆ. ಮುಪ್ಪಾವಸ್ಥೆಯ ಸಂಧ್ಯಾಕಾಲದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಗಳ ಸೇವೆಯಿಂದ ವಿಮುಖರಾಗದೇ ಇದು ತನ್ನ ಆದ್ಯ ಕರ್ತವ್ಯ ಎಂಬ ಬದ್ಧತೆಯಿಂದ ಸೇವೆಗೈದು ಅವರ ಕೃಪೆಗೆ ಪಾತ್ರರಾದರೆ ಜೀವನ ಸಾರ್ಥಕ ಕ್ಷಣಗಳಿಂದ ನಳನಳಿಸುತ್ತದೆ. ಇದಕ್ಕೆ ಪೂರಕವಾಗಿ ಪ್ರತಿಯೊಬ್ಬ ತಂದೆ-ತಾಯಿ ಇಲ್ಲವೇ ಪಾಲಕ ಪೋಷಕರು ತಮ್ಮ ಮಕ್ಕಳನ್ನು ಅಲಕ್ಷಿಸದೇ ಅವರಿಗೆ ಸಕಾಲದಲ್ಲಿ ದೊರೆಯಬೇಕಾದ ಎಲ್ಲಾ ರೀತಿಯ ಸಂಸ್ಕಾರ ಮತ್ತು ವಿದ್ಯಾರ್ಜನೆಯ ಅವಕಾಶ ಕೊಡಿಸಲು ಗಮನ ನೀಡಬೇಕೆಂದೂ ಅಭಿನವ ಶಾಂತಲಿಂಗ ಶ್ರೀಗಳು ನುಡಿದರು.
ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ, ನಿವೃತ್ತ ಕಾಲೇಜು ಪ್ರಾಧ್ಯಾಪಕ ಕೇದಾರೆಪ್ಪ ಜ್ಯಾಕೋಜಿ, ಕ.ವಿ.ವಿ. ಸ್ನಾತಕೋತ್ತರ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಾಣಿಗೇರ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.
*ಸನ್ಮಾನ* : ಸಾಮಾಜಿಕ ಸೇವೆಯಲ್ಲಿ ಸುದೀರ್ಘವಾಗಿ ತೊಡಗಿಸಿಕೊಂಡಿರುವ ಸುಧೀರ ದೇಶಪಾಂಡೆ, ನಿವೃತ್ತ ಕಾಲೇಜು ಪ್ರಾಧ್ಯಾಪಕ ಕೇದಾರೆಪ್ಪ ಜ್ಯಾಕೋಜಿ, ಕ.ವಿ.ವಿ. ಸ್ನಾತಕೋತ್ತರ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಾಣಿಗೇರ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಅವರನ್ನು ಶ್ರೀಈಶ್ವರಾಂಜನೇಯ ಯುವಕ ಮಂಡಳದ ಪರವಾಗಿ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.
ಮಾಳಪ್ಪ ಅಮರಶೆಟ್ಟಿ, ಬಸಪ್ಪ ಮುಂದಿನಮನಿ, ಮಲ್ಲಪ್ಪ ಮೊರಬದ, ವಿರೂಪಾಕ್ಷಿ ಕೋಡಬಳೆ, ಸಂತೋಷ ಗಾಣಿಗೇರ, ಯಲ್ಲಪ್ಪ ಕೋಡಬಳೆ, ರವಿ ಯಡಳ್ಳಿ, ಗದಿಗೆಪ್ಪ ಕೋಡಬಳೆ, ರವೀಂದ್ರ ವಂಡಕರ, ಬಸವರಾಜ ಬೂದಿಹಾಳ, ಕೃಷ್ಣಾ ಹಜೇರಿ, ಮಂಜುನಾಥ ಹಲಸಿ, ಮಾರುತಿ ಮಾನೆ ಇದ್ದರು. ವಕೀಲ ಬಸವರಾಜ ಕೋಡಬಳೆ ಸ್ವಾಗತಿಸಿದರು. ಚೇತನಾ ವಂಡಕರ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.