(www.vknews.in) : ಇಂದು ಭಾನುವಾರ ಬೆಳಿಗ್ಗೆ ಆಝಾದ್ ಗ್ರೂಪ್ ಹಾಗೂ ಆಕ್ಸಿಬ್ಲೂ ಕುಡಿಯುವ ನೀರಿನ ಕಂಪೆನಿ ಮಾಲಕ ಮನ್ಸೂರ್ ಹಾಜಿಯವರಿಗೆ ಕಾಲ್ ಮಾಡಿದೆ. ಭಾನವಾರ ನಾವು ತೌಡಿಗೋಳಿಯಲ್ಲಿರುವ ಅವರ ಫಾರ್ಮ್ ಗೆ ಒಟ್ಟಾಗಿ ಹೋಗುವುದು ರೂಢಿ. ಆ ವಿಷಯದಲ್ಲಿ ಮಾತಾಡೋಣ ಎಂದು ಕಾಲ್ ಮಾಡಿದಾಗ ಹಾಜಿಯವರು ಫೋನೆತ್ತಿದರೂ ಏನೂ ಮಾತಾಡುತ್ತಿಲ್ಲ. ಏನೋ ಆಘಾತಕ್ಕೊಳಗಾದಂತೆ ಭಾಸವಾಯಿತು. ನನಗೆ ಆಶ್ಚರ್ಯ, ಭಯ ಒಮ್ಮಲೆ ಉಂಟಾಯಿತು. ಮತ್ತೂ ಮತ್ತೂ ಕಾಲ್ ಮಾಡಿದಾಗ ಅವಾಕ್ಕಾಗಿದ್ದ ಅವರು ತಡಕಾಡುತ್ತಾ ನೌಶಾದ್ ಹಾಜಿಯವರ ಮರಣ ವಾರ್ತೆಯನ್ನು ಗದ್ಗದಿತರಾಗಿ ಹೇಳಿದರು. ಎಷ್ಟು ಆಘಾತದಲ್ಲಿದ್ದರೆಂದರೆ ಬಾಯಿಂದ ಸರಿಯಾಗಿ ಮಾತೇ ಬರುತ್ತಿರಲಿಲ್ಲ.
ಹೌದು ” ನಂಡೆ ಪೆಂಙಳ್ ” ಮದುವೆಯ ಯೋಜನೆಯ ಸಹಪ್ರವರ್ತಕ, ಅನೇಕ ವರ್ಷಗಳ ಕಾಲದ ಗಳಸ್ಯ ಕಂಠಸ್ಯ ಮಿತ್ರ, ಸಾಮಾಜಿಕ ಸೇವಾ ಕ್ಷೇತದ ಜೊತೆಯಾಳು ನೌಶಾದ್ ಹಾಜಿಯವರು ತೀರಿಕೊಂಡರು ಎಂಬ ಸುದ್ದಿಯನ್ನು ಸಹಿಸಿಕೊಳ್ಳುವುದಾದರೂ ಹೇಗೆ?
ಪೆಂಙಳ್ ಅಂದರೆ ಸಹೋದರಿ. ಆಙಳ ಅಂದರೆ ಸಹೋದರ. ಮದುವೆಯಾಗದೆ ವಯಸ್ಸು ಮೀರಿ ಮನೆಯೊಳಗೆ ದುಖದ ದಾವಾಗ್ನಿಯಲ್ಲಿ ಬೇಯುವ ಅವಿವಾಹಿತ ಮಹಿಳೆಯರಿಗೆ ಲಗ್ನ ಭಾಗ್ಯ ಕೊಡಿಸಿ ಅವರ ಬಾಳಿಗೆ ಬೆಳಕು ನೀಡುವ ಯೋಜನೆ
“ನಂಡೆ ಪೆಙಳ್ ” . ನನ್ನ ಸಹೋದರಿ ಎಂದರ್ಥ. ಯಾವುದೇ ಕೌಟುಂಬಿಕ ಸಂಬಂಧ ಇಲ್ಲದ ಕೇವಲ ಮಾನವೀಯ ಸಂಬಂಧ ಮಾತ್ರ ಇರುವ ಅದೆಷ್ಟೋ ಅವಿವಾಹಿತ ಮಹಿಳೆಯರಿಗೆ ಎಲ್ಲಾ ವಿಧ ಆರ್ಥಿಕ ಸಹಾಯ ನೀಡಿ ಲಗ್ನ ಭಾಗ್ಯ ಒದಗಿಸುತ್ತಾ ಬಂದ
” ನಂಡೆ ಪೆಂಙಳ್ ” ಯೋಜನೆಯ ಸುರಲ್ಪಾಡಿ ನೌಶಾದ್ ಹಾಜಿಯವರ ಆಕಸ್ಮಿಕವಾಗಿ ಅಗಲಿಕೆ ದ.ಕ. ಜಿಲ್ಲೆಯ ಜನರನ್ನು ಶೋಕತಪ್ತಗೊಳಿಸಿದೆ. ಸರಳ ಸಜ್ಜನಿಕೆಯ ಸಹೃದಯಿಯಾಗಿ ಜನಮನ ಗೆದ್ದಿದ್ದ ಈ ನಾಯಕ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸೇವೆ, ಕೊಡುಗೆ ಅನನ್ಯ. ಇಷ್ಟು ಸಣ್ಣ ಪ್ರಾಯದಲ್ಲಿ ಅವರ ಮರಣ ಸಂಭವಿಸಬಾರದಿತ್ತು. ಇದು ಎಲ್ಲರ ಅನಿಸಿಕೆ. ಆದರೆ ವಿಧಿಯ ಮುಂದೆ ನಮ್ಮ ಅನಿಸಿಕೆ ನಗಣ್ಯ.
ನೌಶಾದ್ ಹಾಜಿಯವರ ಪರವಾಗಿ ಇಂದು ಲಕ್ಷಾಂತರ ಮದರಸ ಮಕ್ಕಳು, ಉಸ್ತಾದ್ ಗಳು, ಸಾದಾತ್ ಗಳು ಹಾಗೂ ಸೇವಾರಂಗದಲ್ಲಿದ್ದ ಎಲ್ಲಾ ಕ್ಷೇತ್ರದ ಜನರು ಆತ್ಮಾರ್ಥವಾಗಿ ಪ್ರಾರ್ಥಿಸುತ್ತಿದ್ದಾರೆ. ಇದರ ಪೈಕಿ ಅತ್ಯಂತ ಮನನೀಯವಾಗಿರುವುದು ಅದೆಷ್ಟೋ ” ಪೆಂಙಳ್” ಗಳ ದುಆ. ನಂಡೆ ಪೆಂಙಳ್ ಯೋಜನೆಯಡಿಯಲ್ಲಿ ಲಗ್ನಭಾಗ್ಯ ದೊರೆತ ನೂರಾರು ಹೆಣ್ಣುಮಕ್ಕಳು ಇಂದು ತಮ್ಮ ಆ ಪ್ರೀತಿಯ “ಆಙಳ” ಗಾಗಿ ಮನನೊಂದು ಪ್ರಾರ್ಥಿಸುತ್ತಿದ್ದಾರೆ. ನೌಶಾದ್ ಹಾಜಿಯವರ ಪಾರತ್ರಿಕ ಕ್ಷೇಮಕ್ಕೆ ಈ ಸಹೋದರಿಯರ ಹೃತ್ಕರ್ಣದ ದುಆ ಒಂದೇ ಸಾಕು.
ಶ್ರೀಮಂತಿಕೆಯಿದ್ದರೂ ವಿನಯ ಸ್ವಭಾವ, ಎಲ್ಲರೊಡನೆ ಸೌಮ್ಯ ವರ್ತನೆ, ಸಮಾಜ ಸೇವೆಯಲ್ಲಿ ಅಗತ್ಯವಾದ ಸಹನೆ, ತಾಳ್ಮೆಗಳ ವಿಷಯದಲ್ಲಿ ಆಶ್ಚರ್ಯ ಹುಟ್ಟಿಸುವ ಗುಣ, ಯಾರ ಬಗ್ಗೆಯೂ ಕೆಟ್ಟ ಮಾತು ಹೇಳದ, ಎಲ್ಲರಿಗೂ ಹಿತವನ್ನೇ ಬಯಸುವ ಹೃದಯ ವೈಶಾಲ್ಯ, ವಯಸ್ಸಿಗೂ ಮೀರಿದ ಪಕ್ವತೆ ಮುಂತಾದ ವಿಶೇಷ ಗುಣಗಳು ನೌಶಾದ್ ಹಾಜಿಯವರನ್ನು ಜನಮನದಲ್ಲಿ ಎತ್ತರಕ್ಕೇರಿಸಿದ್ದವು. ಕಡಿಮೆ ಪ್ರಾಯದಲ್ಲೇ ಅಪಾರ ಸಾಧನೆ ಹಾಗೂ ನೆನಪುಗಳನ್ನು ಉಳಿಸಿ ಹೋದರು. ಅಲ್ಲಾಹು ನೌಶಾದ್ ಹಾಜಿಯವರಿಗೆ ಪಾರತ್ರಿಕ ಸದ್ಗತಿ ಕರುಣಿಸಲಿ, ಕುಟುಂಬಕ್ಕೆ ತಕ್ಕುದಾದ ಪುಣ್ಯ ದಯಪಾಲಿಸಲಿ. ಆಮೀನ್
– ಡಿ. ಐ. ಅಬೂಬಕರ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.