ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಭಾನುವಾರ ಬೆಳಗ್ಗೆ ವೇಣೂರು ರಸ್ತೆಯ ಗರ್ಡಾಡಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತರಾದ ಧಾರ್ಮಿಕ, ಸಾಮಾಜಿಕ ಮುಂದಾಳು ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಂತ್ಯಸಂಸ್ಕಾರ ಸೂರಲ್ಪಾಡಿಯಲ್ಲಿ ನಡೆಯಿತು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಬೆಳ್ತಂಗಡಿಯ ದಾರುಸ್ಸಲಾಂ ಶಿಕ್ಷಣ ಸಂಸ್ಥೆಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಮೃತದೇಹವನ್ನು ಸೂರಲ್ಪಾಡಿಯ ಅವರ ನಿವಾಸಕ್ಕೆ ತರಲಾಯಿತು. ಕುಟುಂಬಸ್ಥರಿಗೆ ತೋರಿಸಿದ ಬಳಿಕ ಬಳಿಕ ಮೃತದೇಹವನ್ನು ಸೂರಲ್ಪಾಡಿ ಜುಮ್ಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಯಿತು. ಅಂತಿಮ ದರ್ಶನಕ್ಕೆ ಸಾವಿರಾರು ಜನರು ಜಮಾಯಿಸಿದ್ದರು. ಪರಿಸರದಲ್ಲಿ 1 ಕಿ.ಮೀ. ವರೆಗೂ ಜನಸಂದಣಿಯಿತ್ತು. ಈ ವೇಳೆ ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ SKSSFನ ಕಾರ್ಯಕರ್ತರು ಸಹಕರಿಸಿದರು.
ನೌಶಾದ್ ಹಾಜಿ ಸೂರಲ್ಪಾಡಿ ಅವರ ಮರಣ ವಾರ್ತೆ ಹಬ್ಬುತ್ತಿದ್ದಂತೆಯೇ ಅವರ ಮನೆಯ ಸುತ್ತಮುತ್ತ ಪರಿಸರದಲ್ಲಿ ಜಾತಿ, ಮತ ಮರೆತು ಸಾವಿರಾರು ಮಂದಿ ಜಮಾಯಿಸಿದ್ದರು. ಮೃತದೇಹ ಸೂರಲ್ಪಾಡಿಗೆ ಬರುತ್ತಿದ್ದಂತೆಯೇ ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಪ್ರತಿಯೊಬ್ಬರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಬದವರ ಆಕ್ರಂದನ ಈ ವೇಳೆ ಮುಗಿಲುಮುಟ್ಟಿತ್ತು. ಈ ವೇಳೆ ಅಲ್ಲಿದ್ದ ಜನ ಕಣ್ಣೀರು ಸುರಿಸುತ್ತಿರುವ ದೃಶ್ಯ ಕಂಡು ಬಂದವು.
ಭಾನುವಾರ ಬೆಳಗ್ಗೆ ಬೆಳ್ತಂಗಡಿ ಕಡೆ ಹೋಗುತ್ತಿದ್ದ ಕಾರಿಗೆ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನೌಶಾದ್ ಹಾಜಿ ಸೂರಲ್ಪಾಡಿ ಹಾಗು ಅವರ ಕಾರು ಚಾಲಕ ಉಳಾಯಿಬೆಟ್ಟು ನಿವಾಸಿ ಮುಷರಫ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.