ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್ .ಎಂ. ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಖಾಸಗಿ ಕಾಲೇಜಿನ ಬಿಡಿಎಸ್ ವಿದ್ಯಾರ್ಥಿ ವಿದೇಶಿ ಪ್ರಜೆ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದೆ. ಆತನಿಂದ ಒಟ್ಟು 2 ಕೆ.ಜಿ. ತೂಕದ ರೂ. 50,000 ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, 7,000 ರೂ., ಡಿಜಿಟಲ್ ತೂಕ ಮಾಪನ, ಆಟಿಕೆ ಪಿಸ್ತೂಲು ವಶಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ನೀಡಿದ ಮಾಹಿತಿಯಂತೆ, ಪ್ರಕರಣಕ್ಕೆ ಸಂಬಂಧಿಸಿ ನಗರದ ವಿವಿಧ ಹಾಸ್ಟೆಲ್, ಪಿಜಿ ಹಾಗೂ ಖಾಸಗಿ ನಿವಾಸಗಳಿಂದ ಕೇರಳ ಮೂಲದ ಡಾ ಸಮೀರ್ (32), ಡಾ. ನಾದಿಯಾ ಸಿರಾಜ್ (24), ತಮಿಳುನಾಡಿನ ಡಾ ಮಣಿಮಾರನ್ ಮುತ್ತು (28), ಆಂಧ್ರದ ಡಾ ವರ್ಷಿಣಿ ಪ್ರತಿ (26), ಪಂಜಾಬ್’ನ ಡಾ ಭಾನು ಧಾಹಿಯಾ (27), ಚಂಡಿಘಡದ ಡಾ. ರಿಯಾ ಚಡ್ಡಾ (22), ದೆಹಲಿಯ ಡಾ. ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಡಾ ಇರಾ ಬಸಿನ್ (23) ಮತ್ತು ಬಂಟ್ವಾಳ ಮಾರಿಪಳ್ಳದ ಮುಹಮ್ಮದ್ ರವೂಫ್ ಗೌಸ್ (34) ಮೊದಲಾದವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.