ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹಾಗೂ ಮಾಜಿ ಸಚಿವ ಎಚ್.ನಾಗೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಕೋಲಾರ ಯುವ ಜನತಾ ದಳ ಘಟಕದ ಅಧ್ಯಕ್ಷ ದಯಾನಂದ ಮೊದಲಾದವರು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಎಲ್ಲಾ ನಾಯಕರು ಹಾಗೂ ಮುಖಂಡರನ್ನು ಪಕ್ಷದ ಬಾವುಟ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ಎಚ್.ನಾಗೇಶ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮಗೆ ಸಿಕ್ಕಿದ್ದ ಅಧಿಕಾರ ತ್ಯಾಗ ಮಾಡಿ ಕಾಂಗ್ರೆಸ್ ಪಕ್ಷದ ಸಹ ಸದಸ್ಯತ್ವ ಪಡೆದು ಪಕ್ಷ ಸೇರ್ಪಡೆಯಾಗಿದ್ದಾರೆ. ವೈ.ಎಸ್.ವಿ.ದತ್ತ ಅವರನ್ನು 48 ವರ್ಷಗಳಿಂದ ನಾನು ಬಲ್ಲೆ, ಒಳ್ಳೆಯ ವಾಗ್ಮಿ, ಕಡೂರು ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು, ಜೆಡಿಎಸ್ ಪಕ್ಷದಲ್ಲಿ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ದಯಾನಂದ ಅವರು ಜೆಡಿಎಸ್ ಬಿಟ್ಟು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇದು ಆರಂಭ, ವಾರಕ್ಕೊಮ್ಮೆ ಪತ್ರಿಕಾಗೋಷ್ಠಿ ಮಾಡಿ, ಹಲವು ನಾಯಕರನ್ನು ಸೇರ್ಪಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವೈ.ಎಸ್.ವಿ.ದತ್ತ ಪ್ರಬುದ್ಧ ರಾಜಕಾರಣಿ. ಶಾಸಕ, ವಿಧಾನಪರಿಷತ್ ಸದಸ್ಯರಾಗಿ ದೇಶದ, ರಾಜ್ಯದ ರಾಜಕಾರಣ, ರಾಜಕೀಯ ಪಕ್ಷಗಳ ಸಿದ್ಧಾಂತಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಜೆಡಿಎಸ್ಗೆ ಯಾವುದೆ ಸಿದ್ಧಾಂತ ಇಲ್ಲ. ಯಾರು ಗೆಲ್ಲುತ್ತಾರೊ ಅವರೊಂದಿಗೆ ಹೋಗುತ್ತಾರೆ. ಬಿಜೆಪಿಯದ್ದು ಕೋಮುವಾದಿ ಸಿದ್ಧಾಂತ. ಕಾಂಗ್ರೆಸ್ ಪಕ್ಷ ಮಾತ್ರ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡಿರುವುದು ಎಂದರು.
ನಾನು 50 ವರ್ಷಗಳಿಂದ ಒಂದು ಪರಿವಾರ, ಪಕ್ಷದಲ್ಲಿ ಇದ್ದವನು. ಐತಿಹಾಸಿಕ ತುರ್ತು, ಅನಿವಾರ್ಯತೆ ರಾಜ್ಯ, ರಾಷ್ಟ್ರವನ್ನು ಕಾಡುತ್ತಿದೆ. ಆಯಾ ಕಾಲಘಟ್ಟದಲ್ಲಿ ರಾಜಕೀಯವಾಗಿ ಹೊಸ ಆಯಾಮಗಳೊಂದಿಗೆ ನಮ್ಮ ಶತ್ರು ಯಾರು ಎಂದು ಗುರುತಿಸಿಕೊಂಡು ಸಂಘಟಿತವಾಗಿ, ಹೋರಾಟ ಮಾಡಬೇಕು ಎಂದು ವೈ.ಎಸ್.ವಿ.ದತ್ತ ಹೇಳಿದರು.
ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗೆದ್ದು, ಅನಿವಾರ್ಯ ಕಾರಣಗಳಿಂದ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಬೇಕಾಯಿತು. ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಸುರಕ್ಷಿತವಾಗಿರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಮಹದೇವಪುರ ಕ್ಷೇತ್ರದ ಟಿಕೆಟ್ ತನಗೆ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ರಾಜ್ಯಾದ್ಯಂತ ಪ್ರವಾಸ ಮಾಡಿ, ನಮ್ಮ ಜನಾಂಗಕ್ಕೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡುತ್ತೇನೆ ಎಂದು ಎಚ್.ನಾಗೇಶ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.