(ವಿಶ್ವ ಕನ್ನಡಿಗ ನ್ಯೂಸ್) : ಕಾರ್ಕಳದ ಇನ್ನಾ ಎಂಬ ಊರಿನ ಹಳ್ಳಿಯ ಗದ್ದೆಯಲ್ಲಿ ಮಳೆಗಾಲದ ಒಂದು ದಿನ… ಗದ್ದೆಯಲ್ಲಿ ಒಂದು ಬದಿ ರೈತ ಊಳುತ್ತಿದ್ದರೆ ಇನ್ನೊಂದು ಬದಿಯಲ್ಲಿ ಮಹಿಳೆಯರು ಸೊಂಟಕ್ಕೆ ಸೆರಗನ್ನು ಕಟ್ಟಿ ಭತ್ತ ನಾಟಿ ಮಾಡುತ್ತಿದ್ದರು. ಯಕ್ಷಗಾನದ ಅಬ್ಬರದಂತೆಯೇ ಏಕಾಏಕಿ ಶಿಕ್ಷಣಾಧಿಕಾರಿಯ ಪ್ರವೇಶ.. ಅಂಗನವಾಡಿಯಲ್ಲಿ ಅಡುಗೆ ಮಾಡುವುದು ಬಿಟ್ಟು ಇಲ್ಲಿ ನಾಟಿ ಮಾಡುತ್ತಿರುವುದೇಕೆ ಎಂದು ಮಹಿಳೆಯೊಬ್ಬರನ್ನು ಗದರಿಸುತ್ತಾರೆ..
ಅಂಗನವಾಡಿಯಲ್ಲಿ ಅಡುಗೆ ಸಹಾಯಕಿ ರಜೆ ಹಾಕಿ ಹೆಚ್ಚು ಕೂಲಿ ಸಿಗ್ತದೆ ಹೇಳಿ ನಾಟಿ ಮಾಡಲು ಹೋಗಿದ್ದಾರೆ ನೀವು ಹೋಗಿ ಚೆನ್ನಾಗಿ ಝಾಡಿಸಿ ಬನ್ನಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಬಂದಿರುತ್ತದೆ. ಈ ರೀತಿ ಚಾಡಿ ಹೇಳಿದವರು ಸ್ಥಳೀಯ ಚಿಲ್ಲರೆ ರಾಜಕೀಯ ಮಾಡುವ ಲಾಟ್ ಪೊಟ್ಟು ಪುಢಾರಿಗಳು..
ತಿಂಗಳಿಗೆ ಕೇವಲ 900 ರೂಪಾಯಿ ಜುಜುಬಿ ಸಂಬಳದಲ್ಲಿ ಹೊಟ್ಟೆ ಹೊರೆಯೋದು ಅಸಾಧ್ಯ. ಪತಿಯೂ ಇಲ್ಲ. ಹೀಗಾಗಿ ಉದರ ಪೋಷಣೆಗಾಗಿ ತಾಯಿ ಹೃದಯ ಹೆಚ್ಚಿನ ಕೂಲಿ ಆಸೆಗೆ ಅಡುಗೆ ಕೆಲಸಕ್ಕೆ ಅಧಿಕೃತವಾಗಿ ರಜೆ ಹಾಕಿ ಬಂದಿದ್ದರು. ಅವರ ಕಷ್ಟಕ್ಕೆ ನೆರವಾಗುವುದು ಬಿಟ್ಟು ಇಲ್ಲಸಲ್ಲದ ಚಾಡಿ ಹೇಳಿದರೆ ಹೇಗಾಗಬಹುದು..
ಎಲ್ಲರ ಎದುರು ಅವಮಾನಿತರಾದ ಮಹಿಳೆ ಸುಲೋಚನ ಮನೆಗೆ ಬಂದು ಮಗನ ಬಳಿ ಹೇಳುತ್ತಾರೆ. ಆ ಮಗ ಬೇರೆ ಯಾರೂ ಅಲ್ಲ. ಹಿಂದುತ್ವ ಸಂಘಟನೆಯಲ್ಲಿ ವೀರಾವೇಶದಿಂದ ದುಡಿಯುತ್ತಿದ್ದ ಯುವಕ ದೀಪಕ್ ಕೋಟ್ಯಾನ್. ಒಂದುವರೆ ದಶಕದ ಹಿಂದೆ ಹಿಂದುತ್ವದ ಫಯರ್ ಬ್ರ್ಯಾಂಡ್ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸಿಡಿದೆದ್ದ ಹಿಂದೂ ಸಂಘಟನೆ ದಂಡು ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ನಡೆಸಿದಾಗ ಅದರಲ್ಲಿ ಮುಂಚೂಣಿಯಲ್ಲಿದ್ದ ದಿನೇಶ್, ಪ್ರೇಮ್.. ಅವರಿಬ್ಬರು ಗೋಲಿಬಾರಿಗೆ ಬಲಿಯಾದರು. ಅವರಿಬ್ಬರ ಜತೆಗಿದ್ದವನೇ ಈ ದೀಪಕ್.!!!
ಸಂಘಟನೆಯನ್ನು ತಾಯಿಯಂತೆ ಕಂಡು ಕೊಂಡಿದ್ದ ದೀಪಕ್ಗೆ ದೇಶಭಕ್ತಿ ಎಂದು ಹೇಳಿಕೊಳ್ಳುವ ಪಕ್ಷದವರೇ ತನ್ನ ತಾಯಿಗೆ ಅವಮಾನ ಮಾಡಿದ್ದನ್ನು ನೋಡಿ ನಖಶಿಖಾಂತ ವ್ಯಗ್ರನಾಗಿ, ತಾಯಿಗೆ ಅವಮಾನ ಮಾಡಿದ ಊರಿನಲ್ಲಿಯೇ ಅದೇ ಜನರಿಂದಲೇ ಗೌರವ ಪಡೆಯುವಂತೆ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ… ಒಂದು ಕಾಲದಲ್ಲಿ ಬಿಜೆಪಿ ಬೆಂಬಲಿತರ ಆಡಂಬೋಲವಾಗಿದ್ದ ಇನ್ನಾದಲ್ಲಿ ಹತ್ತು ವರ್ಷದ ಬಳಿಕ ಬಿಜೆಪಿ ಪ್ರತಿನಿಧಿಗಳನ್ನು ಸಂಪೂರ್ಣ ನೆಲಸಮ ಗೊಳಿಸಿ ಪ್ರತಿಜ್ಞೆ ಈಡೇರಿಸಿಕೊಳ್ಳುತ್ತಾನೆ ಆ ಹುಡುಗ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನೆರವಾಗುತ್ತದೆ. ಇಡೀ ಕಾರ್ಕಳ ತಾಲೂಕಿನ 32 ಪಂಚಾಯತ್ಗಳಲ್ಲಿ ಒಂದೇ ಒಂದು ಪಂಚಾಯತ್ ಇನ್ನಾ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದೆ. ಇನ್ನೊಂದು ಈದು ಗ್ರಾಮ, ಅದು ಬಿಜೆಪಿ ಕೈಯಲ್ಲಿ ಇಲ್ಲದೇ ಇದ್ದರೂ ಅದು ಬಿಜಪಿಯ ವಿರೋಧಿಗಳು ಮತ್ತು ಕಾಂಗ್ರೆಸ್ ಬೆಂಬಲಿತರು ಸೇರಿ ಸ್ವಾಭಿಮಾನಿಗಳ ಹೆಸರಲ್ಲಿ ಆಡಳಿತ ನಡೆಸುತ್ತಿದ್ದಾರೆ.
ದೀಪಕ್ ಕೋಟ್ಯಾನ್ ಎಂಬ ಬಡ ಯುವಕನಿಂದ ಈ ಸಾಧನೆ ಹೇಗಾಯಿತು..? ಕೇಳಿ… ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಅಂಗನವಾಡಿ ಕಾರ್ಯಕರ್ತೆ, ಪರಿಶಿಷ್ಟ ಮಹಿಳೆ ಪುಷ್ಪಾವತಿ ಗೆಲ್ಲುತ್ತಾರೆ. ಬಿಜೆಪಿಗೆ ಬೆಂಬಲಿತರಿಗೆ ಪಂಚಾಯತ್ನಲ್ಲಿ ಸಂಪೂರ್ಣ ಬಹುಮತ ಬಹುಮತ! ಅದೃಷ್ಟಕ್ಕೋ ದುರದೃಷ್ಟಕ್ಕೋ ಅಧ್ಯಕ್ಷ ಹುದ್ದೆಯೂ ಪರಿಶಿಷ್ಟ ಮಹಿಳೆ ಮೀಸಲು ಬಂತು. ಆಗ ಸಾಮಾನ್ಯ ವರ್ಗದವರಿಗಾಗಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಲಿಖಿತವಾಗಿ ಬರೆದು ಕೊಡುವಂತೆ ಪುಷ್ಪಾವತಿಯ ಮೇಲೆ ಉಳಿದ ಸದಸ್ಯ ಮುಖಂಡರು ಒತ್ತಡ ಹಾಕಿದರು. ಕೇವಲ ಪಂಚಾಯತ್ ಸದಸ್ಯೆ ಆಗಿ ಮುಂದುವರಿಯುವುದಕ್ಕಿಂತ ಅಂಗನವಾಡಿ ಕಾರ್ಯಕರ್ತೆಯಾದರೆ ಕಿಂಚಿತ್ ಸಂಬಳವಾದರೂ ಸಿಗುತ್ತದೆ ಎಂಬ ಕಾರಣಕ್ಕೆ ಪಂಚಾಯತ್ ಸದಸ್ಯ ಸ್ಥಾನಕ್ಕೆ ಅವರು ಬೇಸರದಿಂದಲೇ ರಾಜೀನಾಮೆ ನೀಡಿದರು.
ತೆರವಾದ ಸ್ಥಾನಕ್ಕೆ ಇದೇ ಸಂದರ್ಭದಲ್ಲಿ ದೀಪಕ್ ಕೋಟ್ಯಾನ್ ತನ್ನ ತಾಯಿಯನ್ನು ಅದೇ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿಸಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿದರು. ಬಳಿಕ ಜನ ಬಲ ಗಳಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನಾಗಿಯೂ ಮಾಡುವ ಮೂಲಕ ಅಮ್ಮನಿಗೆ ಅವಮಾನವಾದ ಪರಿಸರದಲ್ಲಿಯೇ ವಿಜಯ ಲಕ್ಷ್ಮಿಯ ಗೌರವ- ಸನ್ಮಾನ.! ಸಿಗುವಂತೆ ಮಾಡಿದರು.
ಸ್ವತಃ ರಾಜಕೀಯ ರಣರಂಗ ಪ್ರವೇಶಿಸಿದ ದೀಪಕ್ ಬಳಿಕ ಏನಾದರು… ಮುಂದಿನ ಭಾಗದಲ್ಲಿ ವಿಸ್ತೃತವಾಗಿ ಹೇಳುತ್ತೇನೆ
– ಜಿತೇಂದ್ರ ಕುಂದೇಶ್ವರ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.