(www.vknews.in) ; ಹೃದಯ ವಿದ್ರಾವಕವಾದ ಆ ವಿಷಯವನ್ನು ಅವರು ಹೇಳಿದ ಹಾಗೆಯೇ ಹೇಳುತ್ತೇನೆ: ರೈಲ್ವೇ ಸ್ಟೇಶನ್ ಪಕ್ಕದ ಒಂದು ನಿರ್ಜನ ಜಾಗದಲ್ಲಿ ಒಂದು ಹಳೆ ಕಟ್ಟಡದ ಪಾಳು ಬಿದ್ದ ಗೋಡೆಗೆ ಒರಗಿ ಕೂತಿದ್ದ ಆ ಮನುಷ್ಯನನ್ನು ಕಂಡೆನು. ಕೆದರಿದ, ಎಣ್ಣೆ ಕಾಣದ ಒರಟು ತಲೆಗೂದಲು. ಮೈಮೇಲೆ ಚಿಂದಿ ಬಟ್ಟೆ. ವಿಕಾರವಾಗಿ ಇಳಿಬಿಟ್ಟ ಗಡ್ಡ, ಮೀಸೆ. ನೆರಿಗೆಗಟ್ಟಿದ ಮುಖ. ನನ್ನನ್ನು ಕಂಡ ಕೂಡಲೇ ಪಕ್ಕನೆ ಎದ್ದು ಗೋಡೆಯ ಆಚೆಗೆ ಮರೆಯಾಗಲೆತ್ನಿಸಿದ. ಆದರೆ ನಾನು ಹೆಸರೆತ್ತಿ ಕೂಗಿದಾಗ ನಿರ್ವಾಹವಿಲ್ಲದೆ ನಿಂತು ಬಿಟ್ಟ.
ಅವನ ಹತ್ತಿರ ಹೋದೆ. ಶೂನ್ಯಕ್ಕೆ ದೃಷ್ಟಿ ನೆಟ್ಟು ಸ್ಥಿತ ಪ್ರಜ್ಞನ ಹಾಗೆ ಯಾವುದೇ ಭಾವ ಬೇಧವಿಲ್ಲದೆ ಶಿಲಾ ಮೂರ್ತಿಯಂತೆ ನಿಂತಿದ್ದ ಅವನ ನ್ನು ಕಂಡು ದುಖ ತಡೆಯಲಾರದೆ ನನ್ನ ಕಣ್ಣುಗಳು ಹನಿಗೂಡಿದುವು. ನಾನು ಮಾತಾಡಲಿಲ್ಲ. ಅವನೂ ಮಾತಾಡಲಿಲ್ಲ. ಮಾತಾಡಲು ಏನೂ ಇರಲಿಲ್ಲ. ನಿನ್ನ ಲೈಫನ್ನು ನೀನೇ ಹಾಳು ಮಾಡಿ ಬಿಟ್ಟೆಯಲ್ಲೋ ಎಂದು ನಾನು ಹೇಳಿದ್ದರೆ ಅದೊಂದು ಸತ್ಯ ಮಾತ್ರ ಆಗಿದ್ದರೂ ಹೆಣದ ಮೇಲೆ ತಿವಿಯಲು ಮನಸ್ಸಾಗಲಿಲ್ಲ. ಅವನು ಮೌನವಾಗಿ ಕೆಲವು ಕ್ಷಣ ನನ್ನನ್ನೇ ನೋಡಿದ. ನಾನೂ ಮೌನವಾಗಿ ಕೆಲಕ್ಷಣ ಅವನನ್ನೇ ನೋಡಿ ಭಾರವಾದ ಹೆಜ್ಜೆ ಹಾಕುತ್ತಾ ಮುಂದಕ್ಕೆ ಸಾಗಿದೆ. ಮನಸ್ಸು ಅಲ್ಲೋಲ ಕಲ್ಲೋಲವಾಗಿತ್ತು.
ಕೆಲ ವರ್ಷಗಳ ಹಿಂದೆ ಅವನು ನಮ್ಮ ಕಾಲೇಜಿನಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಎಲ್ಲಾ ಪರೀಕ್ಷೆಗಳಲ್ಲೂ ಅತ್ಯಂತ ಹೆಚ್ಚು ಮಾರ್ಕ್ ಪಡೆಯುವ ವಿದ್ಯಾರ್ಥಿ. ಆಟೋಟಗಳಲ್ಲೂ ಭಾಷಣದಲ್ಲೂ ಮೇಲುಗೈ. ಹಾಗಾಗಿ ಇಡೀ ಕಾಲೇಜಿನ ವಿದ್ಯಾರ್ಥಿ, ಅದ್ಯಾಪಕರ ಮುಂದೆ ಗೌರವಾನ್ವಿತನಾಗಿದ್ದ. ಅದೆಷ್ಟೋ ಬಾರಿ ಅವನ ಅದೃಷ್ಟ ಕಂಡು ನನಗೂ ಇಂತಹ ಅದೃಷ್ಟ ಇರಬೇಕಿತ್ತು ಎಂದು ನಾನು ಆಸೆ ಪಟ್ಟದ್ದಿದೆ. ಕಾಲೇಜಿನಿಂದ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಅವನಿಗೆ ಹಲವು ತಾಂತ್ರಿಕ ಕಾಲೇಜುಗಳಿಂದ ಆಫರ್ ಬಂದಿತ್ತು. ಅತ್ಯಂತ ಗುಣ ಮಟ್ಟದ ಒಂದು ತಾಂತ್ರಿಕ ಕಾಲೇಜನ್ನು ಆಯ್ಕೆ ಮಾಡಿಕೊಂಡು ಉಚಿತ ಸೀಟು ಪಡೆದು ಕೊಂಡ. ಅಲ್ಲೂ ಅವನ ಪ್ರತಿಭೆ ಪ್ರಸಿದ್ಧವಾಯಿತು. ಉತ್ತಮ ಅಂಕಗಳಿಂದ ಅಲ್ಲೂ ಉತ್ತೀರ್ಣನಾದ ಆತನಿಗೆ ಅಮೆರಿಕದಿಂದ ಒಂದು ಪ್ರತಿಷ್ಠತ ಹುದ್ದೆ ಹುಡುಕಿಕೊಂಡು ಬಂದಿತ್ತು. ಭಾರತದ ಕೆಲವು ಅತ್ಯಂತ ಪ್ರತಿಭಾವಂತರನ್ನು ಮಾತ್ರ ಆಯ್ಕೆ ಮಾಡಲಾಗುವ ಆ ಹುದ್ದೆಗೆ ಕೇರಳ ರಾಜ್ಯದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಆತನಾಗಿದ್ದ.
ಅಮೆರಿಕಾದಲ್ಲಿ ಪ್ರತಿಷ್ಠಿತ ಹುದ್ದೆ. ಸುಮಾರು ಹದಿಮೂರು ಲಕ್ಷದಷ್ಟು ಭಾರತೀಯ ರೂಪಾಯಿಗೆ ಸಮಾನವಾದ ಮಾಸಿಕ ವೇತನ ! ಎಲ್ಲಾ ಪರೀಕ್ಷೆಗಳು ಮುಗಿದು ಅಮೆರಿಕೆಯಿಂದ ಬಂದಿದ್ದ ಪ್ರತಿನಿಧಿಗಳ ಜೊತೆಗೆ ಆತನೂ ಉಳಿದವರೂ ಹೊರಟರು. ಹೋಗುವ ಮುನ್ನ ಅಮೆರಿಕದ ಅಧಿಕಾರಿಗಳು ಮತ್ತು ಇವರು ಗೋವಾದ ಒಂದು ದುಬಾರಿ ಹೊಟೇಲಲ್ಲಿ ತಂಗಿದ್ದರು. ಅಮೆರಿಕಾಕ್ಕೆ ವಿಮಾನ ಹತ್ತಲು ಕೆಲವು ದಿನಗಳು ಮಾತ್ರ ಬಾಕಿ.
ಸಂಜೆ ಹೊತ್ತು ಗೋವಾದ ಬೀಚ್ ನಲ್ಲಿ ಆತ ಏಕಾಂಗಿಯಾಗಿ ಸುತ್ತಾಡುತ್ತಿದ್ದಾಗ ಮಾದಕ ದ್ರವ್ಯ ಮಾರಾಟಗಾರನೊಬ್ಬನ ಮಾತಿನ ಮೋಡಿಗೆ ಬಲಿಯಾಗಿ ಮಾದಕ ದ್ರವ್ಯ ಸೇವಿಸಿದ. ಮರುದಿನ ಅದೇ ಹೊತ್ತಾದಾಗ ಆತ ಅದೇ ಜಾಗಕ್ಕೆ ಹೋದ. ಅವನು ಬಂದೇ ಬರುತ್ತಾನೆ ಎಂದು ಗೊತ್ತಿದ್ದ ಮಾರಾಟಗಾರ ಅಲ್ಲಿ ಕಾದು ಕೂತಿದ್ದ. ಈತ ಅವನಿಂದ ಅಮಲು ದ್ರವ್ಯ ಖರೀದಿಸಿ ಸೇವಿಸಿದ.
ಕೆಲವು ದಿನ ಇದು ಆವರ್ತನೆಯಾದಾಗ ಅಮೆರಿಕಾದ ಅಧಿಕಾರಿಗಳಿಗೆ ವಿಷಯ ಗೊತ್ತಾಗಿ ಅವನನ್ನು ವಜಾಗೊಳಿಸಿ ಉಳಿದವರನ್ನು ಕರಕೊಂಡು ಹೊರಟು ಹೋದರು. ಆತ ಅಲ್ಲೇ ಅಲೆದಾಡಿ ಅಮಲು ದ್ರವ್ಯದ ದಾಸನಾಗಿ ಕೈಯ್ಯಲ್ಲಿದ್ದ ಹಣ ಮುಗಿದಾಗ ಕಳ್ಳತನಕ್ಕಿಳಿದ. ಪೊಲೀಸರು ಹಿಡಿಯಲೆತ್ನಿಸಿದಾಗ ಅಲ್ಲಿಂದ ಪರಾರಿಯಾದ ಆತ ಎಲ್ಲೆಲ್ಲೋ ಸುತ್ತಾಡಿ ಕೇರಳದ ಅವನ ಹುಟ್ಟೂರಿಗೆ ತಲುಪಿದ. ಅವನ ಅವಸ್ಥೆ ಕಂಡು ಕುಟುಂಬದವರು ದಂಗಾದರು. ಅಮಲು ದ್ರವ್ಯದ ಚಟ ಬಿಡಿಸಲು ನಾನಾ ವಿಧ ಚಿಕಿತ್ಸೆ ನಡೆಸಿದರು. ಪಲ ದೊರೆಯಲಿಲ್ಲವೆಂದು ಮಾತ್ರವಲ್ಲ ಹಣಕ್ಕಾಗಿ ದಿನಾಲೂ ಮನೆಯಲ್ಲಿ ಗಲಾಟೆಯಾದಾಗ ಮನೆಯವರು ಅವನ ಕೈ ಬಿಟ್ಟರು. ಇದೀಗ ಹುಚ್ಚರಂತೆ ಈ ರೀತಿ ಯಾಗಿ ಅಲೆದಾಡುತ್ತಿದ್ದಾನೆ !
ಹೇಗಾಗಬೇಕಿದ್ದವನು, ಹೇಗಾದ? ಇದು ಮಾದಕ ವಸ್ತುಗಳ ಹಿಂದೆ ಹೋಗುವವರ ಅವಸ್ಥೆ. ವಿದ್ಯಾರ್ಥಿಗಳೇ! ಈ ಬಗ್ಗೆ ನೀವು ತುಂಬಾ ಜಾಗರೂಕರಾಗಿರಬೇಕು. ಮಾದಕ ಮಾಫಿಯಾದವರು ಹೆಚ್ಚಾಗಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಆದ್ದರಿಂದ ಕಾಲೇಜಿನ ಬಳಿ ಸುಳಿದಾಡುವ ಅಪರಿಚಿತರ ಗೆಳೆತನ ಬೆಳೆಸಬಾರದು. ನಿಮ್ಮ ಜೀವನವನ್ನು ನಿಮ್ಮ ಕೈಯಾರೆ ಹಾಳುಮಾಡಿಕೊಳ್ಳಬೇಡಿರಿ.
✍️ ಡಿ.ಐ ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.