(ವಿಶ್ವ ಕನ್ನಡಿಗ ನ್ಯೂಸ್) : ಇನ್ನಾ ಗ್ರಾಮದಲ್ಲಿ ಅಮ್ಮನಿಗೆ ಅವಮಾನ ನಡೆದ ಸ್ಥಳದಲ್ಲಿ ಗೌರವದ ಜತೆ ಇಡೀ ಗ್ರಾಮದ ಆಡಳಿತದ ಚುಕ್ಕಾಣಿ ಸಿಗುವಂತೆ ಮಾಡಿದ ದೀಪಕ್ ಕೋಟ್ಯಾನ್ ಸ್ವತಃ ರಾಜಕೀಯ ಪ್ರವೇಶಿಸಿ, ಜನರ ಸಂಘಟಿಸಿ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧೆ ಮಾಡುತ್ತಾರೆ. ಪಂಚಾಯತ್ ಎರಡೂ ಚುನಾವಣೆಗಳಲ್ಲಿ ದೊಡ್ಡ ಅಂತರದಿಂದ ಎದುರಾಳಿ ಬಿಜೆಪಿ ಬೆಂಬಲಿತರನ್ನು ಸೋಲಿಸಿದ ದೀಪಕ್ಗೆ ಎರಡನೇ ಅವಧಿಯಲ್ಲಿ 9೦೦ ಮತಗಳಲ್ಲಿ 7೦೦ಕ್ಕೂ ಮಿಕ್ಕಿ ಮತಗಳು ಬಂದಿದ್ದವು ಎಂದರೆ ಊರಿನ ಒಳಗೆ ಎಷ್ಟು ಜನಪ್ರೀತಿ ಗಳಿಸಿದರು ಎನ್ನುವುದನ್ನು ಊಹಿಸಬಹುದು.
ಹತ್ತೇ ದಿನಗಳಲ್ಲಿ ಎರಡು ಗೆಲುವು: ಸಂಘಟನಾ ಚತುರತೆಯಿಂದ ಉಡುಪಿ ಜಿಲ್ಲೆಯ ಗಮನ ಸೆಳೆದ ದೀಪಕ್, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಗೆಳೆಯರಿಂದ- ಹಿರಿಯರಿಂದ ಒತ್ತಡ. ಅಲ್ಲೂ ಭರ್ಜರಿ ಅಂತರದಲ್ಲಿ ಗೆಲುವು. ಪಂಚಾಯತ್ ಸದಸ್ಯನಾಗಿ ಗೆದ್ದು ಹತ್ತೇ ದಿನಗಳಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ಗೆದ್ದಿರುವುದು ಚಾಣಾಕ್ಷತನ ಭರಪೂರ ಇದೆ ಎನ್ನುವುದನ್ನು ತೋರಿಸಿದೆ.
ಹಿಂದೂ ಧರ್ಮವನ್ನು ಗೌರವಿಸುತ್ತಾ ಶ್ರಮಿಕ ವರ್ಗದವರ ಅಪಾರ ಬೆಂಬಲ ಪಡೆಯುತ್ತಾ ಇನ್ನಾದಿಂದ ಕೈ ಯುವ ಪಡೆಯ ದಿಗ್ವಿಜಯ ಆರಂಭವಾಗಿದೆ. ಒಂದೊಂದೇ ಕೋಟೆ ವಶಪಡಿಸಿಕೊಳ್ಳುತ್ತಾ..? 2೦ ವರ್ಷಗಳ ಹಿಂದೆ ಕಾರ್ಕಳದಲ್ಲಿ ನಾನು ವಿಜಯ ಕರ್ನಾಟಕ ವರದಿಗಾರನಾಗಿದ್ದಾಗ (ಈಗ ಇಲ್) ಕಾಂಗ್ರೆಸ್ ಭದ್ರ ಕೋಟೆಗೆ ಬಿಜೆಪಿ ಲಗ್ಗೆ ಹಾಕಿದ ಸಮಯವದು.
ವಿಧಾನಸಭೆ ಕ್ಷೇತ್ರ ಬಿಜೆಪಿಗೆ ದಕ್ಕಿದ್ದರೂ ಪಂಚಾಯತ್ಗಳು ಸರಿ ಸಮವಾಗಿದ್ದವು. 15, 16-17 ಈ ರೀತಿ ಕೈ, ಕಮಲ ಬೆಂಬಲಿತ ಪಂಚಾಯತ್ಗಳಿದ್ದವು. ಆ ಕಾಲದಲ್ಲಿ ಕೈ ಬೆಂಬಲಿತ, ಬಿಜೆಪಿ ಬೆಂಬಲಿತ ಗ್ರಾಮಗಳು ಈ ರೀತಿ ವಿಶ್ಲೇಷಣೆ ನಾನು ಶುರು ಮಾಡಿದ್ದೆ.
ಕ್ರಮೇಣ ಕಾಂಗ್ರೆಸ್ ಒಂದೊಂದೇ ಗ್ರಾಮಗಳನ್ನು ಕಳೆದುಕೊಳ್ಳುತ್ತಾ ಹೋಗಿ ಶೂನ್ಯದವರೆಗೆ ಸಾಗಿತ್ತು. ಈಗ ಕಾಂಗ್ರೆಸ್ ಗ್ರಾಮಗಳಲ್ಲಿ ಮತ್ತೆ ಬೂದಿಯಿಂದ ಬೀಜ ಮೊಳಕೆ ಒಡೆದಂತೆ ನಿಧಾನವಾಗಿ ಮೊಳೆಯುತ್ತಿದೆ, ಈ ಹಂತದಲ್ಲಿ ಪ್ರತಿಪಕ್ಷದ ನಿರಂಕುಶ ನೀತಿಯೇ ಬಾಯಾರಿ ಬಸವಳಿದ ಕಾಂಗ್ರೆಸ್ ಪಾಲಿಗೆ ಅಮೃತಹನಿ ಯಾಗಿದೆ.
ಹಿಂದುತ್ವಕ್ಕಾಗಿ ಜೀವ ತೆತ್ತವರು ಒಂದೆಡೆಯಾದರೆ ನಾಯಕರ ಸಂಚಿನಿಂದ ಬಲಿಪಶುಗಳಾದ ಹಿಂದುತ್ವದ ನಾಯಕರ ಪಟ್ಟಿ ಕರಾವಳಿಯಲ್ಲಿ ಹನುಮನ ಬಾಲದಂತೆಯೇ ಇದೆ. ರಾಷ್ಟ್ರದಲ್ಲಿ ತೊಗಾಡಿಯಾ, ರಾಜ್ಯದಲ್ಲಿ ಮುತಾಲಿಕ್, ಮಹೇಂದ್ರ ಕುಮಾರ್, ಸುಧೀರ್ ಕುಮಾರ್ ಮರೋಳಿ, ನಿಕೇತ್ ರಾಜ್, ಜಿಲ್ಲೆಯಲ್ಲಿ ಸತ್ಯಜಿತ್ ಸುರತ್ಕಲ್, ಮಹೇಶ್ ಶೆಟ್ಟಿ ತಿಮರೋಡಿ, ಗ್ರಾಮ ಗ್ರಾಮಗಳಲ್ಲಿಯೂ ಈ ಪಟ್ಟಿ ಇದೆ.
ದರ್ಪ- ಅವಮಾನ ಹಿಂದುತ್ವದ ಬಿಸಿರಕ್ತದ ಯುವಕನನ್ನು ಅವರ ಬಡತನವನ್ನು ತಾಯಿಯನ್ನು ಅವಮಾನಿಸದೇ ಇರುತ್ತಿದ್ದರೆ ಇಂದು ಬಿಜೆಪಿ ಸೇನೆಗೆ ತಡೆಗೋಡೆಯಾಗಿ ಇನ್ನಾದಲ್ಲಿ ಖಂಡಿತಾ ಕಾಂಗ್ರೆಸ್ ಬೆಳೆಯುತ್ತಿರಲಿಲ್ಲ. ಅಂದು ಕಾಂಗ್ರೆಸ್ ಆಡಳಿತದಲ್ಲಿ ಹಿಂದುತ್ವ ಸಂಘಟನೆಯಲ್ಲಿದ್ದ ದೀಪಕ್ ಮೇಲೆ ಮೂರು ಕೇಸ್ಗಳಿದ್ದವು, ಇದೀಗ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ರಾಜಕೀಯ ಪ್ರೇರಿತ ಮೂರು ಕೇಸ್ಗಳು ದಾಖಲಾಗಿದೆ.
ಬಡವರ ಆಸ್ಪತ್ರೆ ಖರ್ಚು, ಪೆನ್ಶನ್ ತೆಗೆಸಿಕೊಡುವ ಸೇವಾ ಕಾರ್ಯದ ಜತೆಯಲ್ಲಿ ಸಂಘಟನಾ ಶಕ್ತಿ ಅದರೊಂದಿಗೆ ಪ್ರಬಲ ಪ್ರತಿಪಕ್ಷವನ್ನು ಎದುರಿಸಿ ನಿಲ್ಲುವ ಆತ್ಮಬಲ, ತೋಳ್ಬಲದ ತಾಖತ್ ಕೂಡಾ ಇರುವುದರಿಂದಲೇ ಸುನಾಮಿ ಅಲೆಯನ್ನು ಎದುರಿಸಿ ನಿಲ್ಲಲು ಸಾಧ್ಯವಾಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿರಿಯರುಕೊಟ್ಟ ಜವಾಬ್ದಾರಿಯಂತೆ ಕಾಪು ಕ್ಷೇತ್ರದ ಬಿಜೆಪಿ ಕೋಟೆಯಾಗಿದ್ದ ತೊಟ್ಟಂ ಸಹಿತ ಎರಡು ಗ್ರಾಮಗಳನ್ನು ತನ್ನ ಚಾಣಾಕ್ಷತನದಿಂದ ಕಸಿದುಕೊಂಡಿರುವ ದೀಪಕ್ ಬಿಜೆಪಿ ಪಾಲಿಗೆ ಎಂದಿಗೂ..
ಕಾರ್ಕಳದ ಪ್ರತಿ ಗ್ರಾಮದಲ್ಲಿಯೂ ಅಧಿಕಾರ ಮದದಿಂದ ದಮನಿತರಾದ ನೊಂದ ನಿರ್ಲಕ್ಷಿತ ಯುವಕರ ಪಡೆಯೇ ಇದೆ. ಬಿಜೆಪಿಯಲ್ಲಿದ್ದುಕೊಂಡೇ ನಿರಂಕುಶ ನಾಯಕತ್ವ ವಿರೋಧಿಸಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಹೋಟೆಲ್ ಕ್ಯಾಶಿಯರ್ ಒಬ್ಬನ ಕಥೆ ರೋಮಾಂಚನಕಾರಿ ಇದೆ. ಅದೂ ಬಿಜೆಪಿ ಭದ್ರ ಕೋಟೆ ಕಾರ್ಕಳದ ಜಿಎಸ್ಬಿ ಸಮಾಜವೇ ಇರುವ ದೇವಸ್ಥಾನದ 6ನೇ ವಾರ್ಡ್.. ಸರ್ವಾಧಿಕಾರದ ವಿರುದ್ಧ ಸಿಡಿದೆದ್ದ ಈ ಯಶೋಗಾಥೆ ಮುಂದಿನ ಸಲ ಹೇಳುತ್ತೇನೆ..
– ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.