(www.vknews.in) : ಗಣರಾಜ್ಯೋತ್ಸವದ ಅಂಗವಾಗಿ, ಜೆ ಪಿ ನಗರ ಸಿಟಿಜೆನ್ ವೆಲ್ಫೇರ್ ಮತ್ತು ಕಲ್ಚರಲ್ ಅಸೋಸಿಯೇಷನ್ ನೇತೃತ್ವದಲ್ಲಿ, ಕ್ಷೇಮ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ನಯನ್ ಕುಮಾರ್ ರವರ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು. ದಿನಾಂಕ: ಜನವರಿ 26 – ಸಮಯ: ಬೆಳಗ್ಗೆ 9 ರಿಂದ ಮದ್ಯಾಹ್ನ 1 ಗಂಟೆಯವರೆಗೆ – ಸ್ಥಳ: ಬಿಬಿಎಂಪಿ ಕಚೇರಿ ಆವರಣ, ಜೆ.ಪಿ.ನಗರ 2 ನೇ ಹಂತ, ಬೆಂಗಳೂರು. ಧ್ವಜಾರೋಹಣವನ್ನು ಮುಖ್ಯ ಅತಿಥಿಗಳಾದ ಡಾ. ನಯನ್ ಕುಮಾರ್ ಮತ್ತು ಟ್ರಸ್ಟಿನ ಮುಖ್ಯಸ್ಥರು ನೆರೆವೇರಿಸಿದರು. ರಾಷ್ಟ್ರಗೀತೆಯ ನಂತರ ಪದ್ಮನಾಭನ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಉಪಾಧ್ಯಕ್ಷರಾದ ರಾಜಣ್ಣರವರು ಅತಿಥಿಗಳಿಗೆ ಸನ್ಮಾನ ಸಲ್ಲಿಸಿದರು.
ಡಾ.ನಯನ್ ಕುಮಾರ್ ರವರು ಭಾಷಣ ಮಾಡಿದರು; ನಮ್ಮ ದೇಶದಲ್ಲಿ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಏಕೆಂದರೆ ಈ ದಿನದಂದು ಸ್ವತಂತ್ರ ಭಾರತವು 1950 ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು. ನಾವು ನಮ್ಮ ಸಂವಿಧಾನವನ್ನು ಗೌರವಿಸಬೇಕು ಮತ್ತು ಅದೇ ರೀತಿ ನಡೆದುಕೊಳ್ಳಬೇಕು.
ಗಣರಾಜ್ಯೋತ್ಸವದ ಅಂಗವಾಗಿ ದೇಶದಲ್ಲಿ ಹಲವಾರು ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂದು ಜೆ ಪಿ ನಗರ ಸಿಟಿಜನ್ ವೆಲ್ಫೇರ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಮೆಡಿಕಲ್ ಕ್ಯಾಂಪನ್ನು ಹಮ್ಮಿಕೊಂಡಿದ್ದೇವೆ. ಇದರ ಸದುಪಯೋಗ ಇಲ್ಲಿನ ನಿವಾಸಿಗಳು ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ಮೆಡಿಕಲ್ ಕ್ಯಾಂಪ್ ಮಾಡಲು ನಮ್ಮ ಕ್ಷೇಮ ಆಸ್ಪತ್ರೆಗೆ ಅವಕಾಶ ಸಿಕ್ಕಿದೆ, ಆಸ್ಪತ್ರೆವತಿಯಿಂದ ನಿಮ್ಮ ಟ್ರಸ್ಟ್ ಗೆ ಧನ್ಯವಾದಗಳ್ನ್ನು ಸಲ್ಲಿಸಲು ಇಷ್ಟಪಡುತ್ತೇನೆ.
ನಾನೊಬ್ಬ ವೈದ್ಯನಾದ ಕಾರಣ ಆರೋಗ್ಯದ ಬಗ್ಗೆ ಮಾತಾಡಿದರೆ ಒಳಿತು ಎನಿಸುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಆಗಾಗ ನಾವು ಕೇಳುತ್ತಿರುತ್ತೇವೆ. ಆದರೆ ಆ ಭಾಗ್ಯವನ್ನು ಪಡೆದುಕೊಳ್ಳಲು ಬೇಕಾದ ಬದ್ಧತೆಗಳನ್ನು ನಿರ್ಲಕ್ಷಿಸುತ್ತೇವೆ. ಇಂದಿನ ಸಮಾಜದಲ್ಲಿ ನಮಗೆ ಶಾರೀಕ ಅರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಆರೋಗ್ಯಕ್ಕೂ ನಮ್ಮ ಜೀವನ ಶೈಲಿಗೂ ನೇರ ಸಂಬಂಧ ಉಂಟು. ಹಿರಿಯರು ಒಂದು ಮಾತನ್ನು ಹೇಳುತ್ತಾರೆ; ಚೆನ್ನಾಗಿ ಸಾಯಬೇಕಾದರೆ ಚೆನ್ನಾಗಿ ಬದುಕಬೇಕಂತ. ಚೆನ್ನಾಗಿ ಬದುಕುವುದು ಅಂದರೆ ಹಣ ಒಂದೇ ಅಲ್ಲ. ನಮ್ಮ ಅರೋಗ್ಯ ಚೆನ್ನಾಗಿ ಇರಬೇಕು. ಆಗಲೇ ನಾವು ಮನೆಯಲ್ಲಿ ಶಾಂತಿಯಿಂದ ಯಾವುದೇ ಕಾಯಿಲೆಗಳಿಲ್ಲದೆ ಸಾಯಲು ಸಾಧ್ಯ. ಹಾಗಾದರೆ ಇಂದಿನ ಬ್ಯುಸಿ ಲೈಫಿನಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು.? ನಾನು ನಿಮಗೆ ಕೆಲವು ಟಿಪ್ಸ್ ಗಳನ್ನೂ ಹೇಳುತ್ತಾ ಹೋಗುತ್ತೇನೆ. ದಯವಿಟ್ಟು ಗಮನವಿಟ್ಟು ಕೇಳಿ ಮತ್ತು ಅದನ್ನು ಪಾಲಿಸಲು ಪ್ರಯತ್ನಿಸಿ.
ನಾನು ಅರೋಯ್ಗವಾಗಿರಬೇಕಾದರೆ ಏನು ಮಾಡಬೇಕು? ನಿಮ್ಮ ಮನಸ್ಸಿಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ. ಆಗ ನಿಮಗೆ ನಿಮ್ಮ ಅರೋಗ್ಯ ಕಾಪಾಡಿಕೂಳ್ಳುವುದರಲ್ಲಿ ಕಷ್ಟ ಎನಿಸುವುದಿಲ್ಲ.
ದಿನವೊಂದಕ್ಕೆ ಕನಿಷ್ಠ ಪಕ್ಷ 30 ನಿಮಿಷಗಳ ಬಿರುಸು ನಡಿಗೆ ಅಥವಾ ಇನ್ನಾವುದೇ ವ್ಯಾಯಾಮ ಮಾಡಿ. ದಿನದಲ್ಲಿ ಕನಿಷ್ಠ ಒಂದು ಹೊತ್ತಿನ ಊಟ ಕುಟುಂಬದವರೊಂದಿಗೆ ಮಾಡಿ. ಪ್ರತಿದಿನ ಕನಿಷ್ಠ ಒಂದು ಗಂಟೆಗಳ ಕಾಲ ಹೊರಾಂಗಣದಲ್ಲಿ ನೈಸರ್ಗಿಕ ಸೂರ್ಯ ಬೆಳಕಿಗೆ ಮೈಯೊಡ್ಡಬೇಕು ಅಥವಾ ಅಡ್ಡಾಡಬೇಕು. ಮಲಗುವುದಕ್ಕಿಂತ ಕನಿಷ್ಠ ಎರಡು ಗಂಟೆಗಳ ಮೊದಲು ರಾತ್ರಿಯ ಆಹಾರವನ್ನು ಸೇವಿಸಿ. ಆದಷ್ಟು ಯಾವುದೇ ಜಂಕ್ ಆಹಾರ ತಿನ್ನಬಾರದು. ತಿಂದ ಕೂಡಲೇ ಮಲಗುವುದನ್ನು ರೂಡಿ ಮಾಡಿಕೊಳ್ಳಬಾರದು. ದಿನವೊಂದರಲ್ಲಿ ಕನಿಷ್ಠ ಪಕ್ಷ 3 ರಿಂದ 4 ಲೀಟರ್ ನೀರನ್ನು ಸೇವಿಸಲೇಬೇಕು. ಮಾನಸಿಕ ಖಿನ್ನತೆ ಇದ್ದಲ್ಲಿ ಮತ್ತು ಮಾನಸಿಕ ತುಮಲಗಳಿದ್ದಲ್ಲಿ ಪ್ರೀತಿ ಪಾತ್ರರಲ್ಲಿ, ಆತ್ಮೀಯರಲ್ಲಿ ಹಂಚಿಕೊಳ್ಳಬೇಕು. ದೈನಂದಿನ ಚಟುವಟಿಕೆಗಳಲ್ಲಿ, ಕೆಲಸಗಳಲ್ಲಿ ಲಿಪ್ಟ್ ಬಳಸುವುದು ಮತ್ತು ಏಸ್ಕುಲೇಟರ್ನ್ನು ಅನಿವಾರ್ಯವಾದಾಗ ಮಾತ್ರ ಬಳಸಿ. ಮೆಟ್ಟಿಲುಗಳನ್ನು ಬಳಸಿದಲ್ಲಿ ಕ್ಯಾಲರಿ ಕರಗಿ ಆರೋಗ್ಯ ವೃದ್ಧಿಸುತ್ತದೆ.
ಇಲೆಕ್ಟ್ರಾನಿಕ್ ಉಪಕರಣಗಳಿಂದ ಅದಷ್ಟು ದೂರವಿರಿ. ಮೊಬೈಲ್, ಟಿ.ವಿ, ಕಂಪ್ಯೂಟರ್ ಇತ್ಯಾದಿಗಳನ್ನು ಅನಿವಾರ್ಯವಾದಲ್ಲಿ ಮಾತ್ರ ಬಳಸಿ. ಅದಷ್ಟು ಇಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ. ಅತಿಯಾದ ಕೋಪ ಬಂದಾಗ ದೈಹಿಕ ವ್ಯಾಯಾಮ ಮಾಡಿ, ಅಂಕಿ ಎಣಿಸಿ, ಬೇರೆ ವಿಷಯದತ್ತ ಮನಸ್ಸು ಹೊರಳಿಸಿ ಕೋಪವನ್ನು ಶಮನ ಮಾಡಿ. ಆದಷ್ಟು ಮೈ ಮನಸುಗಳು ಉಲ್ಲಾಸದಿಂದ ಇಡಲು ಪ್ರಯತ್ನಿಸಿ. ಊಟದ ನಡುವೆ ಮತ್ತು ಊಟದ ಬಳಿಕ ಅತಿಯಾದ ಕ್ಯಾಲರಿ ಇರುವ ಐಸ್ಕ್ರೀಮ್ ಅಥವಾ ಇನ್ನಾವುದೇ ಸಿಹಿ ತಿಂಡಿಯನ್ನು ತಿನ್ನಬೇಡಿ. ಹೊಟ್ಟೆ ತುಂಬಿದ ಬಳಿಕವೂ ನಾಲಗೆಯ ದಾಸನಾಗಿ ತಿನ್ನುವುದನ್ನು ಖಂಡಿತ ಮಾಡಲೇಬಾರದು. ದಿನದಲ್ಲಿ ಕನಿಷ್ಠ ಪಕ್ಷ ಒಂದು ಗಂಟೆಗಳ ಕಾಲ ಮನೆ ಮಂದಿಗಳ ಜೊತೆ ಮುಕ್ತ ಮನಸ್ಸಿನಿಂದ ಸುಖ, ದುಃಖ, ನೋವು, ನಲಿವುಗಳನ್ನು ಹಂಚಿಕೊಳ್ಳಬೇಕು. ದುಃಖ ಹಂಚಿದಷ್ಟ್ಟೂ ಕಡಿಮೆಯಾಗುತ್ತದೆ ಮತ್ತು ಸುಖ ದುಪ್ಪಟ್ಟಾಗುತ್ತದೆ ಎಂಬ ಸತ್ಯವನ್ನು ತಿಳಿದುಕೊಳ್ಳಿ.
ಭಾಷಣ ಮುಗಿದ ನಂತರ ಅರೋಗ್ಯ ತಪಾಸಣ ಶಿಬಿರ ಪ್ರಾರಂಭವಾಯಿತು. ಅದರಲ್ಲಿ ಫಿಜಿಯೋಥೆರಪಿ, ಸಕ್ಕರೆ ಕಾಯಿಲೆ ಮತ್ತು HbA1c ತಪಾಸಣೆ, ಬಿ.ಪಿ. ಮತ್ತು ಇ.ಸಿ.ಜಿ.,ಹಲ್ಲು ಪರೀಕ್ಷೆ, ವೈದ್ಯರ ಸಲಹೆ ಇತ್ಯಾದಿಗಳನ್ನು ಮಾಡಲಾಯಿತು. 103 ನಾಗರೀಕರು ಇದರ ಲಾಭವನ್ನು ಪಡೆದುಕೊಂಡರು. ಮೆಡಿಕಲ್ ಕ್ಯಾಮ್ಪ್ ಮುಗಿದ ನಂತರ ವಂದನಾರ್ಪಣೆಗಳ ಮೂಲಕ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸುತ್ತಾ ಕ್ಷೇಮ ಆಸ್ಪತ್ರೆಯ ವೈದ್ಯರನ್ನು ಬೀಳ್ಕೊಡಲಾಯಿತು.
ವರದಿ ; ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.