(www.vknews.in) ಹಿರಿಯ ವಿದ್ವಾಂಸರಾಗಿದ್ದ ನಂದಾರಪಡ್ಪು ಅಬ್ದುಲ್ ಖಾದಿರ್ ಮುಸ್ಲಿಯಾರ್ ಇಂದು ವಫಾತಾದರು.
ಮೂಲತಃ ಕೇರಳದವರಾಗಿದ್ದ ಇವರು ಹಲವು ವರ್ಷಗಳ ಕಾಲ ಮುಡಿಪು ಸಮೀಪದ ಎಚ್. ಕಲ್ಲು ಎಂಬಲ್ಲಿ ಸೇವೆ ಸಲ್ಲಿಸಿ ನಂತರ ಕೈರಂಗಳದ ತೋಟಾಲು ಜುಮುಆ ಮಸ್ಜಿದ್ ನಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದರು. ನಾನು ಮತ್ತು ನನ್ನ ಸಹೋದರಿಯರಿಗೆ ಮದ್ರಸದಲ್ಲಿ ಕಲಿಸಿದ ಉಸ್ತಾದರಾಗಿದ್ದರು. ಬಹಳ ನಿಯ್ಯತ್ತಿನ ವ್ಯಕ್ತಿಯಾಗಿದ್ದ ಉಸ್ತಾದರು ಧಾರ್ಮಿಕ ವಿಚಾರದಲ್ಲಿ ಬಹಳ ಶಿಸ್ತುಬದ್ಧರಾಗಿದ್ದು ಯಾರ ಮುಂದೆಯೂ ಧಾರ್ಮಿಕ ವಿಷಯದಲ್ಲಿ ರಾಜಿಮಾಡಿಕೊಳ್ಳದ ನಿಷ್ಠುರರಾಗಿದ್ದರು. ಧಾರ್ಮಿಕ ವಿಚಾರದಲ್ಲಿ ಎಷ್ಟು ನಿಷ್ಠುರರೋ ವೈಯಕ್ತಿಕವಾಗಿ ಅಷ್ಟೇ ಮೃದು ಸ್ವಭಾವದವರಾಗಿದ್ದರು. ನಾವು ಬಾಲ್ಯದಲ್ಲಿ ಅವರಿಗೆ ಎಷ್ಟು ಹೆದರುತ್ತಿದ್ದೆವೆಂದರೆ ಉಸ್ತಾದರು ಬರುತ್ತಿರುವುದು ಕಂಡರೆ ಓಡಿ ಹೋಗಿ ಅಡಗಿ ಕೂತುಕೊಳ್ಳುತ್ತಿದ್ದೆವು. ಅವರು ಮಕ್ಕಳಿಗೆ ಖುರ್ ಆನ್ ಕಲಿಸುತ್ತಿದ್ದ ರೀತಿ ವಿಶೇಷವಾಗಿತ್ತು. ಶುಕ್ರವಾರದಂದು ಓದುವ ಅಲ್ ಕಹ್ಫ್ ಸೂರಾ ಹಾಗೂ ನಮಾಝ್ ನಲ್ಲಿ ನಿತ್ಯ ಓದುವ ಫಾತಿಹಾ ಸೂರಾ ಮುಂತಾದವುಗಳನ್ನು ಬಹಳ ಮುತುವರ್ಜಿ ವಹಿಸಿ ಕಲಿಸುತ್ತಿದ್ದರು. ಮಕ್ಕಳಿಂದ ಅನೇಕ ಬಾರಿ ಓದಿಸುತ್ತಿದ್ದರು. ಒಂದಕ್ಷರ ಅಥವಾ ಒಂದು ಚುಕ್ಕೆ ವ್ಯತ್ಯಾಸವಾಗದ ಹಾಗೆ ಬಹಳ ಸೂಕ್ಷ್ಮವಾಗಿ ಕಲಿಸಿ ಮಕ್ಕಳಿಗೆ ಪರಿಪೂರ್ಣವಾಗಿ ಓದಲು ಬರುವಂತೆ ಮಾಡುತ್ತಿದ್ದರು. ಸುಮಾರು ನಲ್ವತ್ತು ವರ್ಷಗಳ ಕಾಲ ಖತೀಬರಾಗಿ, ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ್ದ ಅವರು ನಂತರ ಅನಾರೋಗ್ಯ ನಿಮಿತ್ತ ನಂದರಪಡ್ಪು ಎಂಬಲ್ಲಿರುವ ಸ್ವಂತ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅಲ್ಲಾಹು ಅವರ ಪಾರತ್ರಿಕ ಜೀವನವನ್ನು ಸುಗಮಗೊಳಿಸಲಿ, ಮಗ್ಫಿರತ್, ಮರ್ಹಮತ್ ನೀಡಿ ಅನುಗ್ರಹಿಸಲಿ. ಉಸ್ತಾದರು ವಫಾತಾದ ಮುನ್ನಾದಿನ ಕೈರಂಗಳದ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾಗಿದ್ದ ಶ್ರೀ ಪಶುಪಾಲ ಭಟ್ಟರು ಕೂಡಾ ನಿಧನರಾಗಿದ್ದಾರೆ. ಬಹಳ ಸಾಧು ಸ್ವಭಾವದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಶ್ರೀ ಪಶುಪಾಲ ಭಟ್ಟರು ಊರಿನ ಎಲ್ಲಾ ಜನರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು. ಒಂದೇ ಊರಲ್ಲಿ ಎರಡು ಸಮುದಾಯಗಳ ಇಬ್ಬರು ಹಿರಿಯ ಧರ್ಮಗುರುಗಳು ಒಂದೇ ದಿನದ ವ್ಯತ್ಯಾಸದಲ್ಲಿ ಅಗಲಿದ್ದು ಒಂದು ವಿಶೇಷವಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಊರಿನ ಹಿಂದೂಬಾಂಧವರಿಗೆ ಭಾವಪೂರ್ಣ ಸಹಾನುಭೂತಿಯನ್ನು ಸಲ್ಲಿಸುತ್ತಿದ್ದೇನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.