(www.vknews.in) ಯಾವುದೇ ಸಾವಾಗಲಿ, ನೋವಾಗಲಿ ಉದ್ದೇಶಪೂರಕವಾಗಿಯೇ ಜರುಗುವುದಿಲ್ಲ ಹಾಗಂತ ಸುಮ್ಮನೆಯೂ ಒದಗಿ ಬರುವುದಿಲ್ಲ ಆ ಕ್ಷಣದಲ್ಲಿ ನಮ್ಮಿಂದಾಗುವ ಸಣ್ಣ ಪುಟ್ಟ ತಪ್ಪುಗಳಿಂದ ಅಥವಾ ನಮ್ಮನ್ನೆ ನಾವು ಮರೆತು ಬೇರೊಂದು ವಿಚಾರದ ಕುರಿತು ಆಲೋಚಿಸುತ್ತಾ ಆ ಕ್ಷಣದ ಜವಾಬ್ದಾರಿಯನ್ನು ಮರೆತು ಬೀಳುವುದೇ ರಸ್ತೆಯ ಅಪಘಾತ. ಒಮ್ಮೊಮ್ಮೆ ನಾವು ಎಷ್ಟೇ ಪರಿಪೂರ್ಣವಾಗಿ ಸಮಯ ಪರಿಪಾಲನೆ ಮತ್ತು ನಿಗದಿತ ದಾರಿಯ ಪರಿಮಿತಿಯಲ್ಲಿ ಚಲಿಸುತ್ತಿದ್ದರು ನಮ್ಮ ಎದುರುಗಡೆ ಬರುವ ಸವಾರರು ಅಡ್ಡದಿಡ್ಡಿಯಾಗಿ ಬಂದರು.
ಅಪಘಾತದ ಸುಳಿಯಿಂದ ತಪ್ಪಿಸಿಕೊಳ್ಳಲಾಗದು, ಆಗಂತ ಒಂದೆಡೆಯೇ ಕುಳಿತುಕೊಳ್ಳಲಾಗದು. ದಿನನಿತ್ಯ ಅದೆಷ್ಟೋ ಅಪಘಾತಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಲೆ ಇರುತ್ತವೆ ಕೆಲವು ಅಪಘಾತಗಳಲ್ಲಿ ಒಂದಷ್ಟು ರಕ್ತಪಾತ ಸಂಭವಿಸಿ ದವಾಖಾನೆಯಲ್ಲಿ ಗುಣಮುಖವಾದರೆ ಇನ್ನೂ ಕೆಲವು ಅಪಘಾತಗಳು ಸ್ಥಳದಲ್ಲಿಯೇ ಅಸುನೀಗುವಂತೆ ಮಾಡುತ್ತವೆ. ಹುಟ್ಟು ಉಚಿತ ಸಾವು ಖಚಿತವೇ ಆದರೆ ಸಾವು ಇಂತದ್ದೇ ರೂಪದಲ್ಲಿ ಬರುತ್ತದೆ ಎಂದು ಯಾರು ಅಂದಾಜಿಸಲಾಗುವುದಿಲ್ಲ ಒಂದಿಲ್ಲೊಂದು ಅಪಘಾತದಲ್ಲಿಯೇ ಸಾವು ಸಂಭವಿಸುವುದು ಸರ್ವಕಾಲಿಕ ಸತ್ಯ ಆದರೆ ಸತ್ತವರ ನೆನಪಿಗಾಗಿ/ಗಲಿಕೆಗಾಗಿ ಕಂಬನಿ ಮಿಡಿದು ಯಥಾವತ್ತಾದ ಜೀವನನ್ನು ಸಾಗಿಸುವುದನ್ನು ಮನುಕುಲ ರೂಡಿಸಿಕೊಂಡಿದೆ.
ಈ ಅಪಘಾತ ನನ್ನ ಜೀವನದಲ್ಲಿ ಆಗಾಗ ನೋಡಿದ್ದೇನೆ ನಮ್ಮ ಕುಟುಂಬದಲ್ಲಿ ಅತಿಯಾಗಿ ಕಾಡಿದೆ ಎಂತಲೇ ಹೇಳಬಹುದು ಸಾವನ್ನಾದರೂ ನೋಡಬಹುದು ಆದರೆ ಈ ನೋವನ್ನು ನೋಡಲು ಮತ್ತು ಸಹಿಸಲು ಆಗುವುದಿಲ್ಲ ಅಪಘಾತವೆಂದರೆ ನನಗೆ ಮೊದಲಿನಿಂದಲೂ ಶತೃತ್ವದ ಭಾವನೆ ಒಂದು ತರಹದ ನೋವಿನ ಹೊಂಡ ಎಂತಲೇ ಹೇಳಬಹುದು. ಎಂತಹ ಶತೃಗಳಿಗೂ ಈ ಅಪಘಾತ ಬಾದಿಸಬಾರದು.
ಮೊನ್ನೆ ಹೀಗೆಯೆ ಕರ್ತವ್ಯ ನಿಮಿತ್ತ ತೆರಳುವಾಗ ಮಾರ್ಗ ಮಧ್ಯದಲ್ಲಿ ನನ್ನ ದ್ವಿಚಕ್ರ ವಾಹನ ಜಾರಿ ಬಿದ್ದಾಗ ನನಗೆ ಅರಿವಿಲ್ಲದೆಯೇ ಡಾಂಬರು ರಸ್ತೆಯ ಮೇಲೆ ಬಿದ್ದೆ ಕ್ಷಣ ಕಾಲ ಏನು ನಡೆಯಿತೆಂಬ ಪರಿವೆಯೇ ಇಲ್ಲದಂತಾಯ್ತು ಕೆಲಹೊತ್ತಿನ ಬಳಿಕ ಯಾರೋ ದಾರಿ ಹೋಕರು ಎದ್ದೇಳಿಸಿ ನೀರು ಕುಡಿಸಿ ರಸ್ತೆಯ ಬದಿಯಲ್ಲಿ ನನ್ನ ವಾಹನ ನಿಲ್ಲಿಸಿ ಸಂತೈಸಿ ನನಗಾದ ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿದರು. ನಮ್ಮದು ಕಂದಾಯ ಇಲಾಖೆಯಾದ್ದರಿಂದ ಕೊಂಚ ಜನಸಂಪರ್ಕ ಜಾಸ್ತಿಯೇ ಎನ್ನಬಹುದು.
ಆದ್ದರಿಂದ ಜನರು ಸಾಮಾನ್ಯವಾಗಿಯೇ ನೋವಿಗೆ ಮಿಡಿಯುತ್ತಾರೆ ನೋವ ಸಂತೈಸಲು ರಕ್ತ ಸಂಬಂಧವೇ ಆಗಬೇಕಿಲ್ಲ ರಕ್ತದ ನೋವರಿತರೆ ಸಾಕು. ರಸ್ತೆ ಅಪಘಾತವಾದಾಗ ಜನರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳೆಂದರೆ “ನೋಡಿಕೊಂಡು ಗಾಡಿ ಓಡಿಸುವುದಲ್ಲವೇ”?, “ಹೇಗೆ ಬಿದ್ದಿರಿ”?, “ನಿಧಾನವಾಗಿ ಹೋಗಬೇಕಲ್ಲವೇ”?, “ಯಾಕೆ ಬಿದ್ದಿರಿ”? ಎಂದು ಕೇಳಿ ತಮ್ಮ ಪ್ರೀತಿಯನ್ನು ಮತ್ತು ಈ ಅಪಘಾತದ ಸರಮಾಲೆಗಳ ಗಂಟನ್ನೇ ತೆರೆದಿಟ್ಟು ಬಿಡುತ್ತಾರೆ.
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.