(vknews.in) : ಕಳೆದ ವಾರ ನನ್ನ ಸ್ನೇಹಿತ ಕೆಲಸ ಕಳೆದುಕೊಂಡ. ಅವನ ಜೊತೆ ೬೫೦ ಸಹಉದ್ಯೋಗಿಗಳು ಸಹ ಕೆಲಸ ಕಳೆದುಕೊಂಡರು. ಇಲ್ಲಿ ಕಂಪನಿಯ ಹೆಸರು ಹೇಳುವುದು ಸೂಕ್ತವಲ್ಲ. ನನ್ನ ಸ್ನೇಹಿತ ಅನುಭವಿಸುತ್ತಿರುವ ಮಾನಸಿಕ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರತಿ ತಿಂಗಳು ಅನೇಕ ಉದ್ಯೋಗಿಗಳನ್ನು ಕಂಪನಿಗಳು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಗಣಕಯಂತ್ರಗಳಿಗೆ ಸಂಬಂಧಪಟ್ಟ ಉದ್ಯೋಗಿಗಳಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಗೊಳ್ಳುತ್ತಿದೆ.
ಕರೋನ ಬಂದು ಲಕ್ಷಾಂತರ ಜನರ ಉದ್ಯೋಗ ಕಳಚಿಕೊಂಡಿತು. ಈಗ ಕಂಪನಿಗಳು “ಕಾಸ್ಟ್ ಕಟಿಂಗ್” ಹೆಸರಲ್ಲಿ ಉದ್ಯೋಗಿಗಳ ಕಡಿತ ಪ್ರಾರಂಭ ಮಾಡಿವೆ. ಹತ್ತಾರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ದುಡಿದ ಉದ್ಯೋಗಿಗಳ ಗತಿ ಏನಾಗಬೇಕು. ಯೌವ್ವನದ ಅಮೃತ ಘಳಿಗೆಗಳನ್ನು ಕಂಪನಿಗಳು ಬೆವರು ಸಮೇತ ಹೀರಿಕೊಂಡಿರುತ್ತವೆ. ವಯಸ್ಸಾದ ನಂತರ ಬೇರೆ ಕಂಪನಿಗಳು ಕೆಲಸ ಕೊಡಲು ನಿರಾಕರಿಸುತ್ತವೆ. ಎಲ್ಲ ಕಂಪನಿಗಳಿಗೆ ಬಿಸಿ ರಕ್ತದ ಯುವ ಜನರೇ ಬೇಕು. ೪೦ ದಾಟಿದ ಉದ್ಯೋಗಿ ಮತ್ತು ನಿರುದ್ಯೋಗಿಗಳು ಹಳೆ ಪಾತ್ರೆ ಪೇಪರ್ ಕಬ್ಬಿಣಕ್ಕಿಂತ ಕಡೆಯಾಗಿ ಹೋಗುತ್ತಿದ್ದಾರೆ.
ಕೆಲಸಗಳನ್ನು ನಂಬಿಕೊಂಡು ಸಾಲದ ಹೊರೆಯಲ್ಲಿ ಯುವಕಯುವಕಿಯರು ಮುಳುಗಿರುತ್ತಾರೆ. ಕಾರುಗಳಲ್ಲಿ ಓಡಾಡಿದ ವ್ಯಕ್ತಿಗಳು ಪೆಟ್ರೋಲ್ ದುಡ್ಡಿಗೂ ಪರದಾಡುವಂತಾಗುತ್ತಿದೆ. ಸಂಸಾರ ನಡೆಸುವುದು, ಸಮಾಜದಲ್ಲಿ “ಸ್ಟೇಟಸ್” ಕಾಪಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಕೆಲವರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವುದು ಮುಖ್ಯವಾಹಿನಿಗಳಲ್ಲಿ ಬರುತ್ತಿಲ್ಲ. ಮತ್ತೆ ಕೆಲವರು ಮಾನಸಿಕ ರೋಗಿಗಳಾಗುತ್ತಿ ದ್ದಾರೆ, ಕುಡಿತಕ್ಕೆ ದಾಸರಾಗುತ್ತಿ ದ್ದಾರೆ, ನಿದ್ರೆ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳುತ್ತಿದ್ದಾರೆ, ಹಣಗಳಿಸುವ ಅಡ್ಡದಾರಿಗಳನ್ನು ಹುಡುಕುತ್ತಿದ್ದಾರೆ. ಮಧ್ಯಮವರ್ಗದವರ ಬಾಳು ನರಕವಾಗುತ್ತಿದೆ. ಒಟ್ಟಾರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ.
ಕೆಲಸ ಕಳೆದುಕೊಂಡ ನಿರುದ್ಯೋಗಿಗಳು ಕಡಿಮೆ ಸಂಬಳಕ್ಕೂ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳಿಂದ ಪಟ್ಟಣದ ಕಡೆ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೇರೆ ರಾಜ್ಯಗಳಿಂದ ಕೆಲಸ ಹುಡುಕಿಕೊಂಡು ಬರುತ್ತಿರುವವರ ಸಂಖ್ಯೆಯು ಸಹ ಹೆಚ್ಚಾಗುತ್ತಿದೆ. ಜನಸಾಂಧ್ರತೆ ಹೆಚ್ಚಿದಂತೆ ಅನೇಕ ರೀತಿಯ ಸಮಸ್ಯೆಗಳು ಸಹ ಪಟ್ಟಣಗಳಲ್ಲಿ ಉಲ್ಬಣಗೊಳ್ಳುತ್ತವೆ. ದೇಶದ ಆರ್ಥಿಕತೆ ಹಗ್ಗದ ಮೇಲೆ ನಡೆಯುತ್ತಿರುವ ಡೊಂಬರಾಟಗಾರನಂತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಸಂಪಾದನೆ ಕಡಿಮೆ, ಖರ್ಚು ಹೆಚ್ಚು, ಉಳಿತಾಯ ಸೊನ್ನೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ಬಡವರು ಬಡವರಾಗುತ್ತಿದ್ದರೆ. 5G ನೆಟ್ವರ್ಕ್, ಡಿಜಿಟಲ್ ಕರೆನ್ಸಿ ಮಾರುಕಟ್ಟೆಗೆ ಲಗ್ಗೆ ಹಾಕಲಿವೆ, ಬ್ಯಾಂಕುಗಳ ಗತಿ ಏನಾಗುತ್ತದೋ ಗೊತ್ತಿಲ್ಲ. ಬಡವರ ಮನಸ್ಸುಗಳಲ್ಲಿ ಅಸಾಹಾಯಕ ಪರಿಸ್ಥಿತಿಯ ಲಾವ ಕುದಿಯುತ್ತಿದೆ. ಅದು ಯಾವಾಗ ಉಕ್ಕಿ ಹರಿಯುತ್ತದೋ ಗೊತ್ತಿಲ್ಲ.
ಜನರ ಜೀವನದ ನೈಜ ಸಮಸ್ಯೆಗಳನ್ನು ತೋರಿಸಿ, ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳು ವಿಫಲವಾಗಿವೆ. ಚುನಾವಣೆಗಳನ್ನು ಗೆಲ್ಲಲು ಏನನ್ನು ಯಾವ ರೀತಿ ಬಿಂಬಿಸಬೇಕೆಂದು ಮಾಧ್ಯಮಗಳಿಗೆ ಯಾವುದೋ ಹಿಂದಿನ ಕೈಗಳು ಕೆಲಸ ಮಾಡುತ್ತಿವೆ ಎಂದು ಭಾಸವಾಗುತ್ತಿದೆ. ಕೋಮುಗಲಭೆಗಳನ್ನು ಸೃಷ್ಟಿಸುವುದು, ಒಂದು ರಾಜಕೀಯ ಪಕ್ಷ ಮತ್ತೊಂದು ರಾಜಕೀಯ ಪಕ್ಷದ ಅಭ್ಯರ್ಥಿಗಳನ್ನು ಖರೀದಿಸುವುದು, ಸತ್ಯ ಹೇಳುವವರನ್ನು, ಬರೆಯುವವರನ್ನು, ತೋರಿಸುವವರನ್ನು ಜೈಲಿಗೆ ತಳ್ಳುವುದು, ಕೊಲೆ ಮಾಡಿಸುವುದು, ಬೆದರಿಸುವುದು – ಇದನ್ನೆಲ್ಲವನ್ನೂ ಜನರು ನೋಡುತ್ತಿದ್ದಾರೆ. ಸುಮ್ಮನಿದ್ದಾರೆ. ಎಲ್ಲರೂ ಸುಮ್ಮನಾಗಿಬಿಟ್ಟರೆ ಕಾಲ ಮತ್ತು ಪ್ರಕೃತಿ ನಿಯಮ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ ? ಶ್ರೀಲಂಕಾದಲ್ಲಿ ಉಂಟಾದ ಪರಿಸ್ಥಿಗೆ ಯಾರು ಕಾರಣ? ಯುಕ್ರೇನ್ ಯುದ್ಧಕ್ಕೆ ಯಾರು ಕಾರಣ? ಮುಂದೆ ಆಗಲಿರುವ ಚೀನಾ ತೈವಾನ್ ಯುದ್ಧಕ್ಕೆ ಯಾರು ಕಾರಣಕರ್ತರು ? ಪಾಕಿಸ್ತಾನ, ಟರ್ಕಿ ಮತ್ತು ಇರಾನ್ ಯಾವ ಪರಿಸ್ಥಿತಿಗಳನ್ನು ಎದುರಿಸುತ್ತಿವೆ, ಎದುರಿಸಲಿವೆ ? ಅನ್ಯಾಯವನ್ನು ಜನರು ಅಥವಾ ರಾಜಕೀಯವ್ಯಕ್ತಿಗಳು ಎಷ್ಟು ಎತ್ತರವಾಗಿ ಬೆಳೆಸುತ್ತಾರೋ, ಬೆಳೆಯಲು ಬಿಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಸಾಮಾನ್ಯ ಪ್ರಜೆಗಳು ಅದರ ಬೆಲೆಯನ್ನು ತೆತ್ತಬೇಕಾಗುತ್ತದೆ. ರೋಗಗಳ ರೂಪದಲ್ಲಿ, ಯುದ್ಧಗಳ ರೂಪದಲ್ಲಿ, ಕ್ರೂರಿ ನಾಯಕರ ರೂಪದಲ್ಲಿ, ಬರಗಾಲದ ರೂಪದಲ್ಲಿ, ಅಣು ಬಾಂಬುಗಳ ರೂಪದಲ್ಲಿ, ಡಿಜಿಟಲ್ ವಾರ್ ರೂಪದಲ್ಲಿ, ಕೆಮಿಕಲ್ ವಾರ್ ರೂಪದಲ್ಲಿ “ಸಮಯ” ಸೇಡನ್ನು ತೀರಿಸಿಕೊಳ್ಳುತ್ತದೆ. ಮುಂಬಯಿಯಂತಹ ವಾಣಿಜ್ಯ ನಗರಿಗಳು ಭೂಕಂಪ ಬಂದು ೨ ನಿಮಿಷಗಳಲ್ಲಿ ನೆಲಸಮವಾಗಬಹುದು. ಊಟದ, ಔಷಧಿಗಳ ಮತ್ತು ಇನ್ನಿತರೆ ಸೌಲಭ್ಯಗಳ ಕೊರತೆ ಉಂಟಾಗಬಹುದು.
ನಾನು ನನ್ನ ಸಂಸಾರ ಚೆನ್ನಾಗಿರಬೇಕು ಸಾಕು, ಊರಿನ ಉಸಾಬರಿ ನಮಗೇಕೆ. ನಾವು ಯಾರ ತಂಟೆಗೂ ಹೋಗಲ್ಲ, ನಾವು ,ನಮ್ಮ ಕೆಲಸ, ನಮ್ಮ ಸಂಸಾರ ಅಷ್ಟೆ. ಹಾಗಂತ ಸಾಮೂಹಿಕ ಜವಾಬ್ದಾರಿ ಮರೆತರೆ, “ಕಾಲ” ಮಾತ್ರ ಸುಮ್ಮನಿರಲ್ಲ.
ಚುನಾಯಿತ ನಾಯಕರು ನೈಜ ಸೇವಕರಾಗಬೇಕು. ಸೇವಕರು ಸ್ವಾರ್ಥಿ ನಾಯಕರಾಗಬಾರದು. ಆಗಲೇ ಸಮಾಜಲ್ಲಿ ಸುಧಾರಣೆ ಸಾಧ್ಯ. ಇಡೀ ವಿಶ್ವದಲ್ಲಿ ಜನರು ಶಾಂತಿಯಿಂದ ಬದುಕಬೇಕು. ಅದು ನಮ್ಮೆಲ್ಲರ ಹೊಣೆ ಮತ್ತು ಸಾಮೂಹಿಕ ಜವಾಬ್ದಾರಿ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.