(www.vknews.in) ಕನ್ಯಾಕುಮಾರಿಯಿಂದ ಕಾಶ್ಮೀರದವೆರೆಗೆ ಒಂದು ಪಾದ ಯಾತ್ರೆ ಅಂದರೆ ಯಾರಿಗಾದರೂ ಊಹಿಸಲು ಸಾಧ್ಯಾನಾ? ಕಾಂಗ್ರೆಸ್ ನಾಯಕ ರಾಹುಲ್ ಜೀ ಅವರ ನೇತ್ರತ್ವದಲ್ಲಿ ಸುಮಾರು 4080 ಕಿ.ಮಿ.ದೂರ ನಡೆದು ಸಾಗಿದ್ದು ಭಾರತದಲ್ಲಿ ಒಂದು ದೊಡ್ಡ ಇತಿಹಾಸವಾದರೆ ಅದರಲ್ಲಿ ಒಬ್ಬ ಯಾತ್ರಿಯಾಗಿ ಭಾಗವಹಿಸಿದ ನನಗೆ ಅದು ಕಟ್ಟಿಕೊಟ್ಟದ್ದು ಮಾತ್ರ ಎಂದಿಗೂ ಮರೆಯಲಾಗದ ಒಂದು ಸುಂದರ ಅನುಭವ.ಸುಮಾರು ನೂರೈವತ್ತು ದಿನಗಳ ಪಾದಯಾತ್ರೆಯಲ್ಲಿ ಹೃದಯ ಸೆರೆಹಿಡಿದ ಅಮೂಲ್ಯ ಕ್ಷಣಗಳಲ್ಲಿ ಒಂದಷ್ಟು ಬಿಚ್ಚಿಡಲೇಬೇಕೆನ್ನುವ ತುಡಿತ.
ಸೆಪ್ಟಂಬರ್ ಐದಕ್ಕೆ ಕನ್ಯಾಕುಮಾರಿ ತಲುಪಿ ಅದೇ ಏಳರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಉದ್ಘಾಟನೆಗೊಂಡ ಭಾರತ್ ಜೋಡೋ ಯಾತ್ರೆ ಕೇರಳ, ಕರ್ನಾಟಕ, ಆಂದ್ರ, ತೆಲಂಗಾಣ ಮಹರಾಷ್ಟ್ರ, ಮದ್ಯ ಪ್ರದೇಶ, ರಾಜಸ್ಥಾನ, ದೆಹಲಿ,ಹರಿಯಾಣ,ಪಂಜಾಬ್, ಹಿಮಾಚಲ ಪ್ರದೇಶ,ಉತ್ತರ ಪ್ರದೇಶ, ಜಮ್ಮು,ನಂತರ ಜಮ್ಮು ಕಾಶ್ಮೀರ ಹೀಗೆ ಒಂದೊಂದು ರಾಜ್ಯದಲ್ಲೂ ನೂರಾರು ವಿಶೇಷತೆಗಳ ಸುಂದರ ಅನುಭವಗಳನ್ನು ನೀಡುತ್ತಾ ಸಾಗಿದಾಗ ಮಳೆಯಾಗಲಿ ಚಳಿಯಾಗಲಿ ಸುಡು ಬಿಸಿಲಾಗಲಿ ಯಾವುದನ್ನೂ ಲೆಕ್ಕಿಸದ ರಾಹುಲ್ ಜೀ ಅವರ ಹುರುಪು ನಮಗೆಲ್ಲ ಮಾದರಿಯಂತಿತ್ತು.
ಕನ್ಯಾಕುಮಾರಿಯಿಂದ ಯಾತ್ರೆ ಶುರುವಾಗುವಾಗ ಸುಮಾರು ನಲ್ವತ್ತು ಡಿಗ್ರಿಯ ಸುಡು ಬಿಸಿಲಿನ ವಾತಾವರಣವಿತ್ತು.ನಂತರ ಕೇರಳಕ್ಕೆ ದಾಪುಗಾಲಿಟ್ಟ ಮೊದಲ ದಿನವೇ ವಿಪರೀತ ಮಳೆ ನಮ್ಮನ್ನು ಸ್ವಾಗತಿಸಿತ್ತು.ಅಲ್ಲಿ ಅಸಂಖ್ಯಾತ ಭಾರತ್ ಯಾತ್ರಿಗಳು ಅದೇ ಮಳೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಅಚ್ಚರಿಯಾಗಿತ್ತು. ಕರ್ನಾಟಕ್ಕೆ ಹೆಜ್ಜೆಯಿಟ್ಟ ಮರುದಿನ ಬಹಳ ಬಿರುಸಾದ ಮಳೆಗೆ ರಾಹುಲ್ ಜೀ ಅವರ ಹುರುಪಿನ ಭಾಷಣದ ದೇಶದಾದ್ಯಂತ ವೈರಲ್ ಆಗಿಬಿಟ್ಟಿತ್ತು. ನಂತರ ರಾಯಚೂರಿನ ಬಿಸಿಲಿನ ಝಳ, ದಿನಗಳ ಬಳಿಕ ಮದ್ಯ ಪ್ರದೇಶ ತಲುಪುತ್ತಲೇ ವಿಪರೀತ ಚಳಿ ನಮ್ಮೊಂದಿಗಿತ್ತು. ಮಹಾರಾಷ್ಟ್ರದಲ್ಲಿ ಮತ್ತಷ್ಟು ಹೆಚ್ಚಿದ ಚಳಿ ರಾಜಸ್ಥಾನದಲ್ಲಿ ವಿಪರೀತ ಮಟ್ಟ ತಲುಪಿತ್ತು. ನಂತರ ನಮಗೆ ಸಿಕ್ಕಿದ್ದು ದಟ್ಟ ಹಿಮದ ಸವಾಲು ಎಲ್ಲೆಂದರಲ್ಲಿ ಬೀಳುವ ಹಿಮದ ಅಟ್ಟಹಾಸ ಭಾರತ್ ಯಾತ್ರೆಗೆ ಬಹಳ ದೊಡ್ಡ ಸವಾಲಾಗಿತ್ತು. ಆದರೆ ಎಲ್ಲವನ್ನೂ ಪ್ರಕೃತಿಯ ಕೊಡುಗೆಯಂತೆ ಭಾವಿಸಿದ ಸಂತನಂತಿರುವ ರಾಹುಲ್ ಜೀ ಅವರ ಅತ್ಯುತ್ಸಾಹದ ಸೆಳೆತ ನಮ್ಮನ್ನು ಗುರಿಯಿಂದ ಕದಲದಂತೆ ಮಾಡಿ ಬಿಟ್ಟಿತ್ತು.ಕೊನೆಯಲ್ಲಿ ಸಿಕ್ಕ ಹಿಮ ಮಳೆಯ ಅನುಭವ ಒಂದು ರೋಚಕ ಸನ್ನಿವೇಶ.
ನಾನು ರಾಹುಲ್ ಜೀ ಅವರ ಸುರಕ್ಷತಾ ತಂಡದಲ್ಲಿದ್ದ ನನಗೆ ರಾಜಸ್ಥಾನ ತಲುಪುವ ಹೊತ್ತು ಬಿದ್ದು ಕೈ ಬೆರಳು ಮುರಿದು ಹೋಯಿತು.ಪರಿಣಾಮ ಹತ್ತು ದಿನಗಳ ಕಾಲ ವಿಶ್ರಾಂತಿಯಲ್ಲಿರಬೇಕಾಯಿತು. ನಂತರ ಭಾರತ್ ಜೋಡೋ ವನ್ನು ಕೂಡಿಕೊಂಡ ನನಗೆ ಈ ಭಾರತ್ ಜೋಡೋ ಯಾತ್ರೆಯ ನಿಜವಾದ ಉದ್ದೇಶ ಅರ್ಥವಾಯಿತು. ಯಾತ್ರೆಯ ಯಾವುದೇ ಸ್ಥರದಲ್ಲೂ ಬರೀ ಪ್ರೀತಿಯ ಹೊರತು ಎಲ್ಲೂ ದ್ವೇಶದ ಹನಿಯೂ ಕಾಣ ಸಿಗಲಿಲ್ಲ. ಭಾರತದ ಪ್ರತಿ ಊರು ಕೇರಿ ಕಣ ಕಣದಲ್ಲಿ ಬಂದುತ್ವ ಶಾಂತಿ ಸಹಭಾಳ್ವೆ ಇಂದಿಗೂ ಜೀವಂತವಾಗಿದೆ ಅನ್ನುವುದು ಸ್ಪಷ್ಟವಾಯಿತು.
ಹಿಮಾಚಲ ಪ್ರದೇಶ ತಲುಪಿದಾಗ ಒಬ್ಬರು ಭಾರತ ಜೋಡಿಸಿಯೇ ಇದೆಯಲ್ಲ ನಿಮ್ಮದೇನಿದು ಹೊಸದು ಭಾರತ್ ಜೋಡೋ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಭಾರತ್ ಜೋಡಿಸಿಯೇ ಇದೆ. ಇದು ದ್ವೇಷದಿಂದ ಕಲುಷಿತಗೊಂಡ ಮನಸು ಮನಸುಗಳ ಬೆಸುಗೆ. ಎಲ್ಲ ಜಾತಿ ಧರ್ಮಗಳು ಒಂದೇ ಎನ್ನುವ ಸುಂದರ ಸಂದೇಶದ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲಿನ ಉದಾತ್ತ ಸಂದೇಶಗಳೊಂದಿಗೆ ಮನಸುಗಳನ್ನು ಜೋಡಿಸುವ ಭಾರತ್ ಜೋಡೋ ಎಂದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿಯೂ ನಿರುದ್ಯೋಗ ತಾಂಡವವಾಡುತ್ತಿರುವುದರಿಂದ ಅದರಿಂದ ಹೊರ ಬರುವ ದಾರಿ ಈ ಭಾರತ್ ಜೋಡೋ ಯಾತ್ರೆಯ ಉದ್ದೇಶ ಅಂದೆ.
ನಾನು ಗಮನಿಸಿದ ಇನ್ನೊಂದು ಪ್ರಮುಖ ವಿಷಯ ಸಂಘಟಾನ್ಮಕ ವಿಭಿನ್ನತೆ. ದಕ್ಷಿಣ ಭಾರತದಲ್ಲಿ ಜನರು ಸಂಘಟಿತರಾಗಿರುವಷ್ಟು ಉತ್ತರ ಭಾರತ ಸಂಘಟಿತವಾಗದೇ ಇರುವುದು ಕಂಡು ಬಂತು.ಪ್ರಮುಖವಾಗಿ ಕೇರಳದಲ್ಲಿ ಜನರು ಹೆಚ್ಚು ಹೆಚ್ಚು ಸಂಘಟಿತರಾಗಿ ಇರುವುದು ಕಂಡು ಬಂತು. ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಯಾತ್ರೆ ಆರಂಭಿಸಿದ್ದರೂ ಪಕ್ಷದ ಧ್ವಜವನ್ನು ಹಿಡಿಯದೇ ಭಾರತದ ತ್ರಿವರ್ಣ ಪತಾಕೆಯನ್ನು ಬಳಸಿದ್ದು ಬಹಳ ವಿಶೇಷವಾಗಿತ್ತು. ಇದರಡಿಯಲ್ಲಿ ಸರ್ವರಿಗೂ ಒಂದುಗೂಡಲು ಒಂದು ಅವಕಾಶ ನೀಡಿದ್ದು ಕಾಂಗ್ರೆಸ್ಸಿನ ಬಗ್ಗೆ ಬಹಳ ಹೆಮ್ಮೆ ಎನಿಸಿತು. ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಕೇವಲ ಕಾಂಗ್ರೆಸ್ಸಿಗರು ಮಾತ್ರವಲ್ಲದೆ ಕಾಂಗ್ರೆಸ್ಸೇತರರು ಹೆಚ್ಚು ಹೆಚ್ಚು ಭಾಗವಹಿಸಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಸ್ಥಿತಿ ಚೆನ್ನಾಗಿಲ್ಲದಿದ್ದರೂ ಜನರ ಸ್ಪಂದನೆ ಮಾತ್ರ ಅಭೂತಪೂರ್ವವಾಗಿತ್ತು. ದೆಹಲಿ ತಲುಪುವಾಗ ಕೊರೋನ ಮುನ್ನೆಚ್ಚರಿಕೆ ಇನ್ನೇನು ಜಮ್ಮು ತಲುಪುವಷ್ಟರಲ್ಲಿ ಬಾಂಬ್ ಸ್ಪೋಟ ಪೋಲೀಸರ ಭದ್ರತಾ ವೈಫಲ್ಯ ಹೀಗೆ ಸಾಲು ಸಾಲು ಸವಾಲುಗಳನ್ನು ಎದುರಿಸಿದ ಯಾತ್ರಿಗಳು ದೇಶದ ಭವಿಷ್ಯ ಹೊತ್ತ ಧೀರ ಯೋದರಂತೆ ಕಂಡುಬಂದರು.
ರಾಹುಲ್ ಗಾಂಧಿಯೊಂದಿಗೆ ಕಳೆದ ಮಧುರ ನೆನಪುಗಳು, ರಾಹುಲ್ ಜೀಯ ಹೃದಯ ವೈಶಾಲ್ಯತೆಯ ಮೆಲುಕುಗಳು ನನ್ನೆದೆಯಲ್ಲಿ ಬಹಳವಾಗಿ ಪಡಿಮೂಡಿವೆ. ಅವರ ಸರಳತೆಯನ್ನು ಯಾತ್ರೆಯುದ್ದಕ್ಕೂ ಬಹಳಷ್ಟು ಬಾರಿ ಅವರು ತೋರಿಸಿ ಕೊಟ್ಟರು. ಯಾತ್ರೆ ಅಂದ್ರಪ್ರದೇಶದ ಒಂದು ಗ್ರಾಮ ತಲುಪಿದಾಗ ಒಂದು ಅಪರಾಹ್ನ ಟೀ ಕುಡಿಯಲು ತಂಗಿದಾಗ ಅಲ್ಲಿ ಒಂದು ಮರದ ಕೆಳಗೆ ಮಡಚುವ ಮಂಚದಲ್ಲಿ ಟೀ ಬಿಸ್ಕೆಟ್ಟುಗಳನ್ನು ಇಡಲಾಗಿತ್ತು. ಅಲ್ಲೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ರಾಹುಲ್ ಜೀ ಗೆ ಶೌಚಾಲಯಕ್ಕೆ ಹೋಗಬೇಕಾಗಿ ಬಂತು.ಶೌಚಾಲಯಕ್ಕೆ ಹೋದ ರಾಹುಲ್ ಜೀಗೆ ಅಲ್ಲಿ ಟಾರ್ಪಾಲಿನಿಂದ ನಿರ್ಮಿಸಿದ ಒಂದು ಬಡವರ ಶೌಚಾಲಯ ಕಂಡು ಮರುಗಿ ಆ ಮನೆಯವರಿಗೆ ಮತ್ತು ಶೌಚಾಲಯ ನಿರ್ಮಿಸಲು ಅಲ್ಲೇ ಧನ ಸಹಾಯವನ್ನು ನೀಡಿ ಹೃದಯವಂತಿಕೆಯನ್ನು ಮೆರೆದರು. ತೆಲಂಗಾಣದಲ್ಲಿ ಕೂಡ ಒಂದು ಘಟನೆ ನಡೆಯಿತು. ಹುಡುಗ ನೊಬ್ಬ ಭಧ್ರತಾ ತಂಡವನ್ನು ಮೀರಿ ರಾಹುಲ್ ಜೀ ಅವರ ಕಾಲಿಗೆ ಎರಗಿದ್ದ. ಅವನು ಎರಗಿದ ರಭಸಕ್ಕೆ ರಾಹುಲ್ ಜೀ ಅವರ ಕಾಲೇ ಮುರಿದು ಹೋಗುವ ಸಂಭವ ಇತ್ತು. ಅಷ್ಟರಲ್ಲಿ ಸಿಬ್ಬಂದಿಗಳು ಅವನನ್ನು ತಡೆದು ಹೊರಗಟ್ಟುವ ಪ್ರಯತ್ನದಲ್ಲಿದ್ದಾಗ ಬಳಿ ಕರೆದ ರಾಹುಲ್ ಅವರ ಮೇಲೆ ಆತ್ಮೀಯತೆಯಿಂದ ಮಾತನಾಡಿ ಫೋಟೋ ತೆಗೆಯಲು ಅನುಮತಿ ಕೊಟ್ಟು ಅಪ್ಪುಗೆ ನೀಡಿ ಖುಷಿಯಿಂದ ಕಳುಹಿಸಿಕೊಟ್ಟರು. ಮದ್ಯಪ್ರದೇಶದ ಬುಲ್ದಾನ ತಲುಪಿದಾಗ ಒಂದು ಬಿಲ್ಡಿಂಗ್ ಮೇಲೆ ನೂರಾರು ಮಹಿಳೆಯರು ಮಕ್ಕಳು ಕಾಯುತ್ತಾ ನಿಂತಿದ್ದರು. ಅದನ್ನು ಕಂಡ ರಾಹುಲ್ ಜೀ ನೇರವಾಗಿ ಬಿಲ್ಡಿಂಗಿನ ಮೇಲೇರಿ ಅವರೊಂದಿಗೆ ಕುಶಲೋಪರಿ ನಡೆಸಿ ಫೋಟೋ ತೆಗೆಸಿ ಯಾವ ಭದ್ರತೆಯಿಲ್ಲದೆ ಕೆಳಗಿಳಿದಾಗ ಅವರ ಸರಳತೆಗೆ ಹಿಡಿದ ಕೈಗನ್ನಡಿಯಂತೆ ಬಾಸವಾಯಿತು.
ಕೋಮುವಾದದ ಅಟ್ಟಹಾಸಕ್ಕೆ ಬಂಧುತ್ವ ಬಹುತ್ವ ದೇಶದ ಶಾಂತಿ ಸಮಾನತೆ ಬಲಿಯಾಗುತ್ತಿರುವ ಈ ದುರಿತ ಕಾಲದಲ್ಲಿ ಮಾದ್ಯಮಗಳು, ಜಾಲತಾಣಗಳು, ತೋರಿಸುವ ಹಾಗೆ ನಮ್ಮ ದೇಶ ಈಗಲೂ ಇಲ್ಲ ಅನ್ನುವುದು ಮನದಟ್ಟಾಯಿತು. ಕಾಶ್ಮೀರದ ವಿಚಾರ ಹೇಳುವುದಾದರೆ ಈ ಮಣ್ಣಿನ ಸ್ವರ್ಗದಂತಿರುವ ಬಹಳ ಒಳ್ಳೆಯ ವ್ಯಕ್ತಿತ್ವಗಳಿರುವ ಕಾಶ್ಮೀರ ಎನ್ನುವ ಸ್ವರ್ಗ ಜಾತಿ ಮತದ ಭೇದವಿಲ್ಲದೆ ಬಹಳ ಒಗ್ಗಟ್ಟಿನಿಂದ ಬದುಕುತ್ತಿರುವುದು ತಿಳಿದು ಮನಸ್ಸು ತುಂಬಿತು. ಯಾತ್ರೆಯುದ್ದಕ್ಕೂ ರಾಹುಲ್ ಜೀ ಅವರು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರನ್ನೂ ಬಹಳ ಪ್ರೀತಿಯಿಂದ ಯಾವುದೇ ಹಂತದಲ್ಲೂ ಕೋಪಗೊಳ್ಳದೆ ಭಾರತೀಯರನ್ನು ಭರಸೆಳೆದು ತಬ್ಬಿಕೊಂಡು ಸಾಗಿದ್ದು ನಿಜಕ್ಕೂ ರಾಹುಲ್ ಜೀ ಅವರ ಮಾನವ ಪ್ರೇಮವನ್ನು ಸಾಬೀತುಮಾಡಿದೆ. ಯಾವುದೇ ನಾಟಕೀಯತೆಯಿಲ್ಲದೆ ರಾಹುಲ್ ಜೀ ಅವರ ಮೇರು ವ್ಯಕ್ತಿತ್ವ ನನಗೆ ಬಹಳ ಆಪ್ತವಾಗಿ ಕಂಡಿತು. ರಾಹುಲ್ ಜೀ ಅವರನ್ನು ಬಹಳ ಹತ್ತಿರದಿಂದ ನೋಡಿ ಗಮನಿಸುವ ಸಂಭ್ರಮ ಸುಮಾರು ತೊಂಬತ್ತು ದಿನಗಳು ನನ್ನದಾಗಿತ್ತು. ನನ್ನನ್ನು ಪಿ.ಕೆ. ಅನ್ನುತ್ತಾ ಸಂಭೋದಿಸುತ್ತಿರುವ ರಾಹುಲ್ ಜೀ ಅವರ ನಿಸ್ವಾರ್ಥ ನಡೆ ನನ್ನಲ್ಲೂ ಕೂಡ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಆಯಾಯ ಊರಿನ ಸಂಸ್ಕೃತಿ ವೈಭವ ಆಹಾರ ಪದ್ದತಿ ಭಾಷಾ ವಿಭಿನ್ನತೆ ನನ್ನನ್ನು ಬಹಳವೇ ಸೆಳೆಯಿತು. ಭಾರತವೊಂದು ಭ್ರಹ್ಮಾಂಡವೆಂದ ಕವಿ ವಾಣಿಯ ನಿಜ ಪ್ರಸ್ತುತಿಯಂತಿತ್ತು ಈ ಭಾರತ್ ಜೋಡೋ ಯಾತ್ರೆ ಎನ್ನುವುದಲ್ಲಿ ಎರಡು ಮಾತಿಲ್ಲ!
ಜುನೈದ್ ಪಿ.ಕೆ ರಾಜ್ಯಧ್ಯಕ್ಷರು ಯಂಗ್ ಬ್ರಿಗೇಡ್ ಸೇವಾದಳ ಕರ್ನಾಟಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.