(www.vknews.in) ; ಜಗತ್ತಿನ ಇತಿಹಾಸದಲ್ಲಿ ‘ಇಸ್ರಾ-ಮಿಅರಾಜ್’ ಅನ್ನೋ ಚಾರಿತ್ರಿಕ ಘಟನೆಯು ವೈಜ್ಞಾನಿಕ ಲೋಕವನ್ನೇ ಬೆರಗಾಗಿಸಿ, ಸವಾಲಾಗಿ ನಿಂತ ಒಂದು ಅತ್ಯದ್ಭುತ ಎನ್ನಬಹುದು. ಈ ಕುರಿತು ಆಳವಾದ ಅಧ್ಯಯನಕ್ಕಿಳಿದರೆ ಇದನ್ನು ಮನನ ಮಾಡಿ ಮನದಟ್ಟು ಮಾಡುವುದರಲ್ಲಿ ನಾವಿನ್ನೂ ಬಹಳ ಹಿಂದಿದ್ದೇವೆ. ಅದರ ಒಳಗುಟ್ಟಿನ ಸಾರವನ್ನು ಅರ್ಥೈಸಿ ಜನತೆಗೆ ತಿಳಿಸಿಕೊಡುವಲ್ಲಿ ಇಂದಿನ ಹಲವು ಲೇಖಕರು,ಭಾಷಣಕಾರರು ಮುಂದಡಿಯಿಟ್ಟಿಲ್ಲ ಅನ್ನೋದು ಈ ಚರ್ಚೆಯಲ್ಲಿ ಮುಂದುವರಿದರೆ ನಮಗೆ ತಿಳಿಯಬಹುದಾಗಿದೆ. ಇಸ್ರಾ ಮಿಅರಾಜ್ ನ ಬಗ್ಗೆ ಆಳವಾದ ಪರಿಜ್ಞಾನ ಹೊಂದಿದವರು ಆ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿರುವುದೇ ಇಂತಹ ವಿಜ್ಞಾನಗಳು ಇಂದು ತಲೆಮಾರುಗಳಿಂದ ತಲೆಮಾರುಗಳಿಗೆ ಹಸ್ತಾಂತರವಾಗುತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಬರಹ ಅಲ್ಪವಾದರೂ ಆ ಬಗ್ಗೆ ತಿಳಿಸಿಕೊಡಬಹುದೆಂಬುದು ನನ್ನ ಅನಿಸಿಕೆ.
ಇಸ್ರಾ ಮಿಅರಾಜ್ ನ ಬಗ್ಗೆ ಈಗಲೂ ಜನಸಾಮಾನ್ಯರಲ್ಲಿ ಊಹಾಪೋಹಗಳಿವೆ. ನಾವಂದು ಕೊಂಡಂತೆ ಪೈಗಂಬರ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ನಡೆಸಿದ ಬರಿಯ ಆಕಾಶಾರೋಹಣವಲ್ಲ ಮಿಅರಾಜ್.ರಾತ್ರಿಯೊಂದರ ಅಲ್ಪ ಭಾಗದಲ್ಲಿ ಸಪ್ತ ಮುಗಿಲು ಮತ್ತು ಭೂಮಿಗಳನ್ನು ಕಂಡು ಅಂತಿಮವಾಗಿ ಅಲ್ಲಾಹನನ್ನು ಸಮೀಪಿಸಿ ಈ ಸಮುದಾಯಕ್ಕೆ ಐದು ವಕ್ತ್ ನಮಾಝಿನ ಉಡುಗೊರೆಯಾಗಿ ಪಡೆದು ಬಂದಿರೋದನ್ನ ನಾವು ಮಿಅರಾಜ್ ಅಂದುಕೊಂದಿದ್ದರೆ ಅದು ಬಾಹ್ಯವಾದ ಜ್ಞಾನ ಎಂದು ಹೇಳಬಹುದು. ಆದರೆ ಅದರ ಒಳಗುಟ್ಟೇನೆಂದು ಇದುವರೆಗೂ ನಾವು ಚಿಂತಿಸಿಲ್ಲ. ಪ್ರತ್ಯಕ್ಷವಾಗಿ ನಾವು ಕೇಳಿ ಕಲಿತ ಮಿಅರಾಜ್ ನ ಬಗ್ಗೆ ಕೂಲಂಕಷವಾಗಿ ಕಲಿತಲ್ಲಿ ಅಧ್ಬುತಗಳ ಬಾಗಿಲು ತೆರೆದುಕೊಳ್ಳುತ್ತದೆ. ಅವುಗಳನ್ನು ನಿಮಗೂ ತಲುಪಿಸುವ ಸೇವಾ ಜವಾಬ್ದಾರಿ ನನ್ನದು.
ಇಲ್ಲಿ ನನಗೆ ಕೆಲವೊಂದು ವಾದಗಳಿವೆ.ಅವುಗಳನ್ನು ಹೇಳಿ ಒಂದೊಂದರ ತಿರುಳನ್ನೂ ಸಮರ್ಥಿಸಿ ನಿಮ್ಮ ಮುಂದಿಡುತ್ತೇನೆ. ಮೊದಲನೆಯ ನನ್ನ ವಾದವೇನೆಂದರೆ ‘ಇಸ್ರಾಅ ಅನ್ನೋದು ಪ್ರವಾದಿ ಪೈಗಂಬರರ ಪ್ರತ್ಯೇಕತೆಯೇ ಅಲ್ಲ’ ಎಂಬುದು. ಇನ್ನು ವಿಷಯಕ್ಕೆ ಬರೋಣ.ಇಸ್ರಾ ಅಂದರೆ ‘ರಾತ್ರಿ ಸಂಚಾರ’ ಎಂದಾಗಿದೆ. ಇದೇ ಇಸ್ರಾ ಇತರ ಪ್ರವಾದಿಗಳಿಂದಲೂ ಸಂಭವಿಸಿದ್ದಾಗಿ ವಿಶುದ್ದ ಖುರಾನ್ ಸಾಕ್ಷ್ಯಪಡಿಸುತ್ತದೆ. ಸಯ್ಯಿದುನಾ ಲೂತ್ ಅಲೈಹಿಸ್ಸಲಾಮರೊಡನೆ ಅಲ್ಲಾಹನು ಹೇಳಿರೋದನ್ನ ನೋಡಿ.. ಸೂರತುಲ್ ಹೂದ್ ನ 81 ನೇಯ ಸೂಕ್ತದಲ್ಲಿ.. “ಆಗ ದೇವಚರರು ಹೇಳಿದರು’ನಾವು ನಿಮ್ಮ ಪ್ರಭುವಿನ ದೂತರಾಗಿರುತ್ತೇವೆ.ನಿಮ್ಮ ಕಡೆಗೆ (ಕೇಡುಂಟು ಮಾಡಲು)ಅವರಿಗೆ ಖಂಡಿತ ಬರಲಾಗದು.ಆದ್ದರಿಂದ ರಾತ್ರಿಯ ಒಂದು ಯಾಮದಲ್ಲಿ ನಿಮ್ಮ ಕುಟುಂಬದವರನ್ನು ಸಂಗಡ ಕರೆದುಕೊಂಡು ಯಾತ್ರೆ ಹೊರಡಿರಿ.ನಿಮ್ಮಲ್ಲಿ ಯಾರೊಬ್ಬರೂ ಹಿಂದೆ ತಿರುಗಿ ನೋಡಬಾರದು.ಆದರೆ ನಿಮ್ಮ ಪತ್ನಿಯನ್ನು ಹೊರತು.ಏಕೆಂದರೆ ಇವರಿಗೆ ತಲುಪಿದ ಶಿಕ್ಷೆಯು ಅವಳಿಗೂ ತಲುಪುವುದು.ಅವರ ವಿನಾಶಕ್ಕಾಗಿ ನಿಶ್ಚಯಿಸಿದ ಅವಧಿಯು ಪ್ರಾತಃಕಾಲವಾಗಿದೆ.ಪ್ರಾತವಾದರೋ ಹತ್ತಿರವೇ ಇದೆಯಲ್ಲ..”
ಇಲ್ಲಿ ಲೂತ್ ನೆಬಿಯವರೊಂದಿಗೆ ರಾತ್ರಿಯೊಂದರ ಅಲ್ಪ ಭಾಗದಲ್ಲಿ ಅಥವಾ ಮುಂಜಾನೆಯಾಗೋದಕ್ಕಿಂತ ಮುಂಚೆ ಇರುವ ಸಣ್ಣ ಸಮಯದಲ್ಲಿ ಕುಟುಂಬ ಸಮೇತ ಇಸ್ರಾ ಕೈಗೊಳ್ಳಲು ಅಲ್ಲಾಹನ ಆಜ್ಞೆ. ಹಾಗೆ ನೋಡಿದರೆ ಪ್ರವಾದಿಯವರ ಇಸ್ರಾ ಗಿಂತ ಪ್ರತ್ಯೇಕತೆ ಲೂತ್ ಅಲೈಹಿಸ್ಸಲಾಮರ ಯಾತ್ರೆಗಲ್ಲವೇ..? ನೆಬಿಯವರ ಇಸ್ರಾ ರಾತ್ರಿಯಾಗಿದ್ದರೆ,ಲೂತ್ವ್ ರವರದ್ದು ರಾತ್ರಿ ಸಣ್ಣ ಸಮಯ ಮಾತ್ರ.ನೆಬಿಯವರೊಡನೆ ಬುರಾಕ್ ಇತ್ತು.ಲೂತ್ವ್ ರ ಬಳಿ ಏನೂ ಇರಲಿಲ್ಲ.ಅವರು ಕುಟುಂಬ ಸಮೇತರಾಗಿದ್ದರು.ಪ್ರವಾದಿಯವರು ಒಬ್ಬಂಟಿಗರಾಗಿದ್ದರು. ಆದ್ದರಿಂದಲೇ ಪ್ರವಾದಿವರೇಣ್ಯರು ಕೈಗೊಂಡ ಇಸ್ರಾ ಇತರ ಇಸ್ರಾದೊಂದಿಗೆ ಹೋಲಿಕೆ ಮಾಡುವುದಾದ್ರೆ ಮಹಾದ್ಭುತವಾಗಲ್ಲ.. ಇಂತಹುದೇ ಇನ್ನೊಂದು ಘಟನೆ ಖುರಾನ್ ಹೇಳುತ್ತದೆ ನೋಡಿ… ಸೂರತ್ ದುಖಾನ್ 23-24 ಸೂಕ್ತಗಳು. “(ಆಗ ಅಲ್ಲಾಹನು ಆದೇಶಿಸಿದನು)ಹಾಗಿದ್ದರೆ ನನ್ನ ದಾಸರನ್ನು ಕರೆದುಕೊಂಡು ನೀವು ರಾತ್ರಿಯಲ್ಲಿ ಪ್ರಯಾಣ ಬೆಳೆಸಿರಿ.ನಿಮ್ಮನ್ನು (ಶತ್ರುಗಳಿಂದ)ಬೆನ್ನಟ್ಟಲಾಗುವುದು.”
‘ಸಮುದ್ರವನ್ನು ಶಾಂತವಾಗಿರಲು ಬಿಡಿ.ಅವರು ಮುಳುಗಿ ನಾಶವಾಗುವ ಒಂದು ಸೈನ್ಯವೇ ಆಗಿದ್ದಾರೆ’ ಇಲ್ಲಿ ಅಲ್ಲಾಹನು ಮೂಸಾ ಅಲೈಹಿವಸಲಾಮರೊಂದಿಗೆ ತನ್ನ ಜನತೆಯೊಂದಿಗೆ ಇಸ್ರಾ ಗೈಯ್ಯಲು ಸೂಚಿಸಿದ.ಭೂಮಿ ಕಂಡ ಮೂರನೇ ಅತಿ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಮೂಸಾ ಅಲೈಹಿಸ್ಸಲಾಮ್. ತನ್ನ ಹನ್ನೆರಡು ಲಕ್ಷದಷ್ಟಿರುವ ಇಸ್ರಾಈಲರನ್ನು (ಹನ್ನೆರಡು ಲಕ್ಷ ಬೈಬಲ್ ಪುರಾವೆ) ಒಗ್ಗೂಡಿಸಿ ಯಾತ್ರೆ ಹೊರಡಿ ಎಂದು ಹೇಳಿದಾಗಲೂ ಅದೊಂದು ಮಹಾ ಅದ್ಭುತವಾಗಿತ್ತು. ಲೂತ್ವ್ ನೆಬಿಯವರು ತನ್ನ ಕುಟುಂಬ ಸಮೇತವಾಗಿ ಹೊರಟರೆ,ಇಲ್ಲಿ ಮೂಸಾ ನೆಬಿಯವರು ತನ್ನ ಜನತೆಯನ್ನೇ ಜತೆಗೂಡಿಸಿ ಹೊರಟರು. ಈ ಎರಡೂ ಘಟನೆಗಳನ್ನು ನೋಡಿದರೆ ಇವೆರಡಕ್ಕಿಂತಲೂ ಮಿಗಿಲಾದುದಂತೆ ಕಂಡು ಬರುತ್ತಿಲ್ಲ ಪ್ರವಾದಿಯವರ ಇಸ್ರಾ.
ಇನ್ನು ಕೆಲವರು ‘ಲಿನುರಿಯಹು ಮಿನ್ ಆಯಾತಿನಾ’ ಎಂಬುದಕ್ಕೆ ದುನಿಯಾದಲ್ಲಿನ ಅದ್ಭುತವ ಕಾಣಲು ಇಸ್ರಾ ಕೈಗೊಂಡರು ಎಂದು ಅರ್ಥ ವ್ಯಾಖ್ಯಾನವನ್ನು ನೀಡುತ್ತಾರೆ.(ಹಾಗೇ ಅದರ ಅರ್ಥವೆಂದಲ್ಲ) ಹಾಗಂತ ಹೇಳುವವರೊಂದಿಗೆ ಕೇಳಬಹುದು. ಪ್ರವಾದಿಯವರು ಇಸ್ರಾ ನಲ್ಲಿ ಕಂಡ ಅದ್ಬುತಗಳೇನೂ ಲೂತ್ವ್ ಮತ್ತು ಮೂಸಾ ನೆಬಿಯರು ಅವರ ಇಸ್ರಾನಲ್ಲಿ ಕಂಡಂತಹ ಅದ್ಬುತಗಳಿಗಿಂತ ದೊಡ್ಡದೇನಲ್ಲ. ಏನಾಗಿತ್ತು ಅವರು ಕಂಡದ್ದು..!? ಲೂತ್ವ್ ನೆಬಿಯವರು ತನ್ನ ಸ್ವಂತ ಪತ್ನಿಯು ಕಲ್ಲಾಗಿ ಹೋಗೋದನ್ನ ನೋಡಬೇಕಾಗಿ ಬಂದರೆ,ಮತ್ತೊಂದೆಡೆ ಮೂಸಾ ನೆಬಿಯವರಿಗೆ ಅವರ ಶತ್ರು ಫರೋವಾ ಮತ್ತು ಅವನ ಆರು ಲಕ್ಷಕ್ಕೂ ಮಿಕ್ಕ ಪಡೆಯು ಸಮುದ್ರದಲ್ಲಿ ಮುಳುಗಿ ಹೋಗುವುದನ್ನ ನೋಡಬೇಕಾಯಿತು.ಇದಲ್ಲವೇ ಅತ್ಯದ್ಭುತ..!!
ಫೆಲೆಸ್ತೀನ್ ಕಡೆಗೆ ಹೊರಟ ತನ್ನ ಇಸ್ರಾ ನಲ್ಲಿ ಪ್ರತ್ಯೇಕಾದ್ಬುತಗಳೇನೂ ನೆಬಿಯವರು ಕಂಡಿಲ್ಲ..ಅವರು ಕಂಡಿದ್ದು ಮೂಸಾ ನೆಬಿಯರ ಗೋರಿ,ಮತ್ತು ಮಸ್ಜಿದುಲ್ ಅಖ್ಸಾ ಇವೆರಡೂ ಅತ್ಯದ್ಭುತಗಳೇನಲ್ಲವಲ್ಲ… ಇನ್ನು ಫೆಲೆಸ್ತೀನನ್ನೇ ಪ್ರವಾದಿಯವರು ನೋಡಲಿಕ್ಕಾಗಿ ಹೋಗಿದ್ದರೆ ಅದನ್ನು ನೋಡಲೂ ಇಲ್ಲ’ಅದಕ್ಕೆ ಸಾಕ್ಷಿಯಾಗಿ ಆ ನಂತರ ನಡೆದ ಘಟನೆಯೊಂದು ನೀವು ತಿಳಿಯಬೇಕು.
ಇಸ್ರಾ ಮಿಅರಾಜ್ ನ ಬಳಿಕ ಹಿಂತಿರುಗಿದ ಪ್ರವಾದಿ ಪುಣ್ಯರೊಂದಿಗೆ ಮಕ್ಕಾ ಮುಶ್ರಿಕ್ ಗಳು ಬೈತುಲ್ ಮುಖದ್ದಸ್ ನ ಬಗ್ಗೆ ನಮಗೆ ಹೇಳಿಕೊಡಿ ಎಂದಾಗ ಅಷ್ಟೇನೂ ಸ್ಪಷ್ಟವಾಗಿ ಖುದುಸನ್ನು ಕಾಣದ್ದರಿಂದ ಕಾಬಾದ ಬಳಿ ಇದ್ದ ಪ್ರವಾದಿಯರು ಕಾಬಾಗೆ ಒರಗಿ ನಿಂತು ಬೈತುಲ್ ಮುಖದ್ದಸ್ ನ ಕಡೆಗೆ ಮುಖ ಮಾಡಿದಾಗ ಅಲ್ಲಾಹನು ಅವರಿಗೆ ಖುದುಸನ್ನು ತೋರಿಸಿಕೊಟ್ಟ.ಆ ಮೂಲಕ ಪ್ರವಾದಿಯರು ಅವರ ಪ್ರಶ್ನೆಗೆ ಉತ್ತರಿಸುತ್ತಲೇ ಇದ್ದರು.ಈ ಘಟನೆಯು ನೆಬಿವರ್ಯರು ಫೆಲೆಸ್ತೀನ್ನನ್ನೇ ಸರಿಯಾಗಿ ಕಂಡಿಲ್ಲ ಅನ್ನೋದನ್ನ ತಿಳಿಯಪಡಿಸುತ್ತದೆ.ಅಂದರೆ ಭೂಮಿಯಲ್ಲಿರೋ ಅದ್ಬುತಗಳನ್ನು ಕಾಣಿಸಲಿಕ್ಕಾಗಿ ಅಲ್ಲವೇ ಅಲ್ಲ ಪ್ರವಾದಿಯವರ ಇಸ್ರಾ.ಅದು ಖುರ್ ಆನ್ ಹೇಳಿದಂತೆ ಆಕಾಶ ಲೋಕದಲ್ಲಿರುವ ಮಹಾ ದೃಷ್ಟಾಂತಗಳನ್ನು ತೋರಿಸಿ ಕೊಡಲಾಗಿತ್ತು. ಆದ್ದರಿಂದಲೇ ಮಿಅರಾಜ್ ಇಲ್ಲದ ಒಂದು ಇಸ್ರಾ ಪ್ರವಾದಿಯವರ ಪ್ರತ್ಯೇಕತೆಯೇ ಅಲ್ಲ ಎಂದು ಈ ಹಿಂದೆ ಹೇಳಿದ್ದು.
ಇನ್ನು ಮಿಅರಾಜ್(ಆಕಾಶಾರೋಹಣ) ದ ಕುರಿತು ಚರ್ಚೆಗೈಯುವಾಗ ಮಿಅರಾಜ್ ಆತ್ಮೀಯವಾದುದಾಗಿದ್ದರೆ ಅದೂ ಪ್ರವಾದಿ ಪ್ರತ್ಯೇಕತೆಯಲ್ಲ.ಕಾರಣ ಎಲ್ಲಾ ಪ್ರವಾದಿಗಳಿಂದಲೂ ಆತ್ಮೀಯವಾದ ಮಿಅರಾಜ್ ನಡೆದಿದೆ.ಅದರಲ್ಲೂ ನೆಬಿ ಪುಂಗವರಿಗೇನೆ ಮೂವತ್ನಾಲ್ಕು ಬಾರಿ ಆತ್ಮೀಯ ಮಿಅರಾಜ್ ಸಂಭವಿಸಿದೆ. ಹಾಗಿರುವಾಗ ಅದು ಪ್ರವಾದಿಯವರ ಮಾತ್ರ ಪ್ರತ್ಯೇಕತೆಯಾಗದು. ಮಾತ್ರವಲ್ಲ ಆತ್ಮೀಯವಾದ ಮಿಅರಾಜ್ ಗೆ ಪ್ರವಾದಿಯಾಗಬೇಕೆಂದೂ ಇಲ್ಲ.ಅದು ಅಲ್ಲಾಹನ ಔಲಿಯಾಗಳಿಂದಲೂ ಸಾಧ್ಯವಾದುದು. ಮಹಾನರಾದ ಅಹ್ಮದುಲ್ ಕಬೀರ್ ರಿಫಾಈ ರ ಹಾಡಿದ ಒಂದು ಕವನ ಸಾಲುಗಳು ಹೀಗಿವೆ ” ನೆಬಿಯೇ ತಮ್ಮಿಂದ ತುಂಬಾ ದೂರದಲ್ಲಿದ್ದಾಗ ಆ ಪವಿತ್ರ ಭೂಮಿಯನ್ನು ಚುಂಬಿಸಲೆಂದು ನಾನು ನನ್ನ ಆತ್ಮವನ್ನು ತಮ್ಮ ಬಳಿಗೆ ಅಥವಾ ಮದೀನಾದೆಡೆಗೆ ಕಳುಹಿಸುತ್ತಿದ್ದೆ. ಇದೀಗ ತಮ್ಮ ಸನಿಹ ತಲುಪಿರುವೆನು.ಆದ್ದರಿಂದ ತಮಗೆ ಹಸ್ತದಾನ ಮಾಡಿ ಆ ಕೈಗಳನ್ನು ನೇರವಾಗಿ ಚುಂಬಿಸಲೆಂದೇ ನಾನು ಬಂದಿರುವೆ”
ಎಂಬ ಗೆರೆಗಳು ರಿಫಾಈ ಶೈಖ್ ರಿಗೆ ಆತ್ಮೀಯ ಮಿಅರಾಜ್ ನಡೆದಿರೋದನ್ನ ದೃಢಪಡಿಸುತ್ತದೆ. ಮತ್ತೇಕೆ ಮಿಅರಾಜ್ ಪ್ರವಾದಿ ಪ್ರತ್ಯೇಕತೆ ಆಗುತ್ತೆ..!? ಅದಾಗಿದೆ ನಾವು ತಿಳಿಯಬೇಕಾದುದು. ಇನ್ನು ಆತ್ಮೀಯವಾಗಿದ್ದಲ್ಲಿ ಅದು ಪ್ರವಾದಿ ಪ್ರತ್ಯೇಕತೆ ಅಲ್ಲ ಎಂದು ಹೇಳಿದಾಗ ಆತ್ಮೀಯವಲ್ಲ ಅದು ಶಾರೀರಿಕವಾದ ಯಾತ್ರೆಯಾಗಿತ್ತು ಎಂದು ತಿಳಿಯಲು ಹೆಚ್ಚಿನ ಸಮಯ ಬೇಕಾಗಿಲ್ಲ. ಇನ್ನು ಶಾರೀರಿಕವಾದರೂ ಎರಡನೇ ಆಕಾಶಕ್ಕೆ ಪ್ರವಾದಿ ತಲುಪಿದರೂ ಅದು ಪ್ರವಾದಿ ಪ್ರತ್ಯೇಕತೆ ಅಲ್ಲ .ಏಕೆ..!?
ಕಾರಣ ಎರಡನೇ ಆಕಾಶಕ್ಕೆ ಮಿಅರಾಜ್ ಅಥವಾ ಶಾರೀರಿಕವಾಗಿಯೇ ಯಾತ್ರೆಗೈದ ಮತ್ತೋರ್ವ ನೆಬಿಯವರಿದ್ದಾರೆ.ಸಯ್ಯಿದುನಾ ಈಸಾ ಅಲೈಹಿಸ್ಸಲಾಮ್. ಮತ್ತೇಗೆ ಅದು ನಮ್ಮ ಪ್ರವಾದಿಯರ ಪ್ರತ್ಯೇಕತೆಯಾಗುತ್ತದೆ…? ಅಂದರೆ ಎರಡನೇ ಆಕಾಶಕ್ಕಿಂತಲೂ ಮೇಲೆ ಶಾರೀರಿಕವಾಗ ಯಾತ್ರೆಮಾಡಿದರೆ ಮಾತ್ರ ಅದು ಪ್ರವಾದಿ ಪ್ರತ್ಯೇಕತೆಯಾಗೋದು..! ಈಸಾ ಅ ರು ಮಾಡಿದ ಮಿಅರಾಜ್ ಅದು ಶಾರೀರಿಕವೆನ್ನುವುದಕ್ಕೆ ಖುರಾನ್ ಸಾಕ್ಷಿ. ‘ವಮಾ ಖತಲೂಹು ವಮಾ ಸ್ವಲಬೂಹು ವಲಾಕಿನ್ ಶುಬ್ಬಿಹ ಲಹು’ ಎಂಬ ಸೂಕ್ತವು ಅದನ್ನ ವ್ಯಕ್ತಪಡಿಸುತ್ತದೆ. ಈ ವಿಚಾರವನ್ನು ಪ್ರಪಂಚದ ಯಾವ ಪಂಗಡವೂ ನಿಷೇಧಿಸಿಲ್ಲ.ಖಾದಿಯಾನಿ ನಿಷೇಧಿಸಿದ್ದರೆ ಅವರು ಕಾಫಿರ್ ಎಂದು ಎಲ್ಲಾ ಉಲಮಾಗಳು ಫತ್ವಾ ಹೊರಡಿಸಿಯೂ ಆಗಿದೆ. ಅಂದರೆ ಈ ವಿಚಾರದಲ್ಲಿ ಎಲ್ಲರಿಗೂ ಒಮ್ಮತ ಅಭಿಪ್ರಾಯ ಎಂದರ್ಥ. ಒಟ್ಟಿನಲ್ಲಿ ಹೇಳುವುದಾದರೆ ಪ್ರವಾದಿಯವರ ಇಸ್ರಾ ಮಿಅರಾಜ್ ಅದೊಂದು ಸಾಮಾನ್ಯ ಯಾತ್ರೆಯೇ ಆಗಿರಲಿಲ್ಲ.ಅದೊಂದು ಜಗತ್ತು ಕಂಡ ಮಹಾದ್ಭುತವಾಗಿತ್ತು..!.ಆತ್ಮೀಯವಾದ ಯಾತ್ರೆಯೇ ಅಲ್ಲ ಎಂಬುದಕ್ಕೆ ಬುರಾಕ್ ಕೂಡಾ ಒಂದು ಸ್ಪಷ್ಟ ನಿದರ್ಶನ. ಆತ್ಮೀಯವಾಗಿದ್ದರೆ ಮತ್ತೇಕೆ ಬುರಾಖ್ ನ ಅವಶ್ಯಕತೆ..??ಉಮ್ಮುಹಾನೀ ರಳಿಯಲ್ಲಾಹು ಅನ್ಹಾ ರ ಮನೆಯಲ್ಲಿ ಅಥವಾ ಕಾಬಾದ ಹೊರಾಂಗಣದಲ್ಲಿ ಮಲಗಿದ್ದ ನೆಬಿಯರಿಗೆ ಕನಸಿನಲ್ಲಿ ಅಲ್ಲಾಹನನ್ನು ಕಾಣಲೇಕೆ ಬುರಾಕ್ ನ ಅವಶ್ಯಕತೆ..?
ಬುರಾಖ್ ಇರೋದ್ರಿಂದಲೂ ಅದು ಪಕ್ಕಾ ಶಾರೀರಿಕ ಅನ್ನೋದು ಇಲ್ಲಿ ವ್ಯಕ್ತ. ಇನ್ನು ‘ಲೈಲನ್’ – ರಾತ್ರಿ ವೇಳೆಯಲ್ಲಿ ಮಿಅರಾಜ್ ಕೈಗೊಂಡಿದ್ದೇಕೆ ಎಂದು ಕೇಳುವುದಾದರೆ ಅದು ಪ್ರಯಾಣದ ದಾರಿದೂರವು ಅವರಿಗೆ ಕಡಿಮೆಯಾಗಿ ಅನುಭವವಾಗಲೆಂದು ಹೇಳಬಹುದು. ಪ್ರವಾದಿ ಸ ರು ಹೇಳಿದರು “ನೀವು ರಾತ್ರಿ ವೇಳೆಯಲ್ಲಿ ಯಾತ್ರೆ ಕೈಗೊಳ್ಳಿರಿ.ಅದು ನಿಮ್ಮ ದಾರಿದೂರವನ್ನು ಕಡಿಮೆಗೊಳಿಸುವುದು”. ಪ್ರಸ್ತುತ ನೆಬಿ ವಚನವು ಇಲ್ಲಿ ಗಮನಾರ್ಹ. ಇನ್ನು ಶಾರೀರಿಕವಾಗಿಯೇ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೋಗಿ ಬಂದರು ಎಂದು ಹೇಳಿದರೆ ಅದು ತಪ್ಪು.ನೆಬಿಯವರು ಹೋದುದ್ದಲ್ಲ ,ಅವರನ್ನು ಕರೆದು ಕೊಂಡು ಹೋದದ್ದಾಗಿತ್ತು. ಅದಾಗಿದೆ ಖುರಾನ್ ಹೇಳಿದ್ದು ‘ಅಸ್ರಾ ಬಿ ಅಬ್ದಿಹಿ’ ಎಂದು.
ಇನ್ನು ‘ಅಬ್ದ್’ ಎಂಬ ಪದಬಳಕೆ ಏಕೆ ಮಾಡಿದ್ದು ಅನ್ನೋ ಚರ್ಚೆಯೂ ಗರಿಗೆದರುವಾಗ ನಮಗೆ ಮಿಅರಾಜ್ ನಡೆದದ್ದು ಶಾರೀರಿಕ ಅನ್ನೋದು ಮನದಟ್ಟಾಗುತ್ತದೆ. ಹೇಗೆಂದರೆ ನಿಜವಾಗಿಯೂ ಈ ಯಾತ್ರೆಯು ಆತ್ಮೀಯವಾದುದಾಗಿದ್ದರೆ ‘ಅಸ್ರಾ ಬಿ ರೂಹಿಹಿ’ ಎಂದೋ ‘ನಫ್ಸಿಹೀ’ ಎಂದೋ ಖುರಾನ್ ಹೇಳಬೇಕಿತ್ತು. ಇಲ್ಲಿ ಅಬ್ದಿಹಿ ಎಂದು ಹೇಳಿದೆ.ಈ ಪದಕ್ಕೆ ವ್ಯಾಖ್ಯಾನಕಾರರು ವ್ಯಾಖ್ಯೆ ನೀಡಿರೋದು ‘ಬಿ ಜಸದಿಹಿ ‘ ಎಂದಾಗಿದೆ. ಜಸದ್ ಅಂದರೆ ಶರೀರ ಎಂದರ್ಥ. ಈಗ ನಿಮ್ಮ ಇನ್ನಷ್ಟು ಕುತೂಹಲ ಮೂಡಿರಬಹುದು. ಮತ್ತೇಗೆ ಇಸ್ರಾ ಮಿಅರಾಜ್ ರಸೂಲರ ಪ್ರತ್ಯೇಕತೆಯಾಗುತ್ತದೆ ಎಂದು. ಅದು ಕುರಾನ್ ಹೇಳಿದ್ದರಿಂದಲೇ ಅದ್ಬುತವೆಂದು ನಮಗೆ ತಿಳಿಯುತ್ತದೆ. ಖುರಾನ್ ನ ಇಸ್ರಾಅ ಅಧ್ಯಾಯವು ಪ್ರಾರಂಭಗೊಳ್ಳೋದು ಸುಬುಹಾನಲ್ಲಾಹ್ ಎಂಬ ಪದದಿಂದಾಗಿದೆ. ಒಮ್ಮೆ ಓರ್ವ ಸ್ವಹಾಬಿ ಪ್ರಮುಖರು ನೆಬಿಯವರಲ್ಲಿ ಸುಬುಹಾನಲ್ಲಾಹ್ ಎಂಬುದರ ಅರ್ಥವೇನೆಂದು ಕೇಳಿದರು.ಆಗ ಪ್ರವಾದಿ ಪುಂಗವರು ಹೇಳಿದರು “ಅದು ಆಕಾಶ ಭೂಮಿಯ ಅಂತರವನ್ನು ತುಂಬಬಲ್ಲದಾಗಿದೆ”. ಅಂದರೆ ಅದರ ಅರ್ಥವನ್ನು ಯಾರಿಂದಲೂ ಮನದಟ್ಟು ಮಾಡಲು ಸಾಧ್ಯವಿಲ್ಲ ಎಂಬುವುದನ್ನಾಗಿದೆ.
ಹಝ್ರತ್ ಅಲೀ ರಳ್ವಿಯಲ್ಲಾಹು ಅನ್ಹು ಹೇಳಿದರು ” ಸುಬುಹಾನಲ್ಲಾಹ್ ಎಂಬುದರ ಅರ್ಥವನ್ನು ನಾನು ವಿವರಿಸಿದರೆ ಅದರ ಭಾರವನ್ನು ಹೊರಲು 8೦ ಒಂಟೆಗಳು ಬೇಕಾಗಬಹುದು’.ಊಹಿಸಿ ನೋಡಿ ಎಷ್ಟೊಂದು ವಿಶಾಲಾರ್ಥವಿರಬಹುದು.! ಪರಿಪೂರ್ಣತೆಯನ್ನು ಹೊಂದಿದ ಪ್ರವಾದಿ ಪುಣ್ಯರಿಗೆ ಸಂಭವಿಸಿದ ಒಂದು ಘಟನೆಯನ್ನು ಪೂರ್ಣತೆ ಹೊಂದದ ನಮಗೆಲ್ಲಿ ಅರ್ಥವಾಗುತ್ತದೆ. ನಮ್ಮೆಡೆಯಲ್ಲಿ ಹಲವು ಸೂಫಿಗಳು ಮಹಾತ್ಮರು ಜೀವಿಸಿ ಕಣ್ಮರೆಯಾಗಿದ್ದಾರೆ. ನೀವು ಕೇಳಿರಬಹುದು.ಆಲುವ ಅಬೂಬಕರ್ ಮುಸ್ಲಿಯಾರ್ ಎಂಬವರ ಕುರಿತು.ಅವರು ತನ್ನ ಸೇವಕನ ಜೊತೆ ಆಲುವಾ ಕಡೆಗೆ ಟ್ರೈನೇರಲು ಬಂದಾಗ ರೈಲು ನಿಲ್ದಾಣ ಬಿಟ್ಟು ಸಾಗಿತ್ತು. ಕೂಡಲೇ ತನ್ನ ಖಾದಿಮರೊಂದಿಗೆ ಕಣ್ಣು ಮುಚ್ಚಲು ಹೇಳಿದರು.ನಂತರ ಕೈ ಹಿಡಿದು ಕಣ್ಣು ತೆರೆಯಲು ಹೇಳಿದಾಗ ಇಬ್ಬರೂ ಆಲುವಾದಲ್ಲಿದ್ದರು. ಅದೇಗೆ ಸಂಭವಿಸಿತು..!!
ಅಂತಹ ಕೆಲವು ವಿಷಯಗಳು ನಮ್ಮ ಬುದ್ದಿಯಿಂದ ಅಳೆಯಲಾಗಲ್ಲ. ಅದು ಅರಿವಾಗಿ ಸಮ್ಮತಿಸಿದರೆ ಅದನ್ನು ಸುನ್ನಿಯ್ಯತ್ ಅನ್ನಬಹುದು. ಆ ಕ್ರಿಯೆಯನ್ನು ಮಾಡಲು ಸಾಧ್ಯವಾದರೆ ಅದನ್ನು ವಿಲಾಯತ್ ಅನ್ನಬಹುದು. ಇನ್ನು ಇಸ್ರಾಗಿಂತ ಮಿಅರಾಜ್ ಗೆ ಪ್ರಾಧಾನ್ಯತೆ ಇದೆಯೆಂದಾದರೆ ಮತ್ತೇಕೆ ಇಸ್ರಾ ಕೈಗೊಳ್ಳಲಾಯಿತು.ಮಕ್ಕಾದಿಂದಲೇ ಹೊರಡಬಹುದಿತ್ತಲ್ಲವೇ..? ಯಾಕೆ ಫೆಲೆಸ್ತೀನ್ ಅನ್ನು ಆಯ್ಕೆ ಮಾಡಕಾಯಿತು. ಫೆಲೆಸ್ತೀನ್ ಗೆ ಇರುವ ಪ್ರತ್ಯೇಕತೆ ಏನು? ಫೆಲೆಸ್ತೀನ್ ಮತ್ತು ನಮ್ಮ ನೆಬಿಯವರೊಂದಿಗಿನ ಸಂಬಂಧವಾದರೂ ಏನು? ಅದರೊಳಗೆ ಕೆಲವೊಂದು ರಹಸ್ಯಗಳಿವೆ.ಅವುಗಳನ್ನು ತಿಳಿಯೋಣ.
ಫೆಲೆಸ್ತೀನ್ ಗೆ ಹೋದ ನೆಬಿಯವರು ಯಾತ್ರೆ ಕೈಗೊಂಡದ್ದು ಮಸ್ಜಿದುಲ್ ಅಖ್ಸಾ ಮಸೀದಿಯಿಂದ ಎಂಬುವುದು ನಿಮ್ಮ ಗ್ರಹಿಕೆಯಾಗಿದ್ದರೆ ಅದು ತಪ್ಪು. ಬೈತುಲ್ ಮುಖದ್ದಸ್ ನಿಂದ ಐನೂರು ಮೀಟರ್ ಹತ್ತಿರದಲ್ಲಿ ಒಂದು ಸಣ್ಣ ಬಂಡೆಕಲ್ಲಿದೆ. ಅದರ ಪ್ರತ್ಯೇಕತೆ ಏನೆಂದರೆ ಅದು ಸ್ವರ್ಗದಿಂದ ಭೂಮಿಗೆ ತಂದದ್ದಾಗಿದೆ. ಅದು ಒಂದೆರೆಡು ಅವಶ್ಯಕತೆಗಳಿಗಾಗಿ ಅಲ್ಲಿ ಸ್ಥಾಪಿಸಲಾಗಿದೆ. ಒಂದನೇ ಅವಶ್ಯಕತೆ ಮಿಅರಾಜ್ ಆಗಿತ್ತು.ನೆಬಿಯವರು ಬುರಾಖ್ ಏರಿದ್ದು ಆ ಕಲ್ಲಿನ ಮೇಲೆ ಕಾಲಿಟ್ಟಾಗಿತ್ತು.ಅದಕ್ಕೆ ಪುರಾವೆ ಎಂಬಂತೆ ಅದರ ಮೇಲೆ ಈಗಲೂ ಪ್ರವಾದಿಯರ ಪಾದಮುದ್ರೆ ಇದೆ.ಎರಡನೇ ಪ್ರತ್ಯೇಕತೆ ಎಂದರೆ ಇಸ್ರಾಫೀಲ್ ಅ ರು ಸೂರ್ ಎಂಬ ಕಹಳೆಯನ್ನು ಊದುವುದೂ ಕೂಡಾ ಈ ಕಲ್ಲಿನ ಮೇಲೆ ನಿಂತಾಗಿರುತ್ತದೆ.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಂತಿಮ ಕಾಲದ ದೂತರಾಗಿದ್ದರೆ ಈ ಕಲ್ಲು ಅಂತಿಮ ದಿನದ ಕಲ್ಲಾಗಿದೆ.ಆದ್ದರಿಂದಲೇ ಅಂತಿಮರಾದ ಪ್ರವಾದಿಯರನ್ನು ಅಂತಿಮ ದಿನದ ಕಲ್ಲಿನ ಕಡೆಗೆ ಕರೆದೊಯ್ಯಲಾಯಿತು. ಈ ಕಲ್ಲಿನ ಬಗ್ಗೆ ಖುರಾನಿನ ಕ್ವಾಫ್ ಅನ್ನೋ ಅಧ್ಯಾಯದಲ್ಲಿ ಪ್ರಸ್ತಾಪವಿದೆ. ಹೀಗೇ ನೆಬಿಯವರಿಗೆ ಸಂಬಂಧಿಸಿದ ಹಲವು ದೃಷ್ಟಾಂತಗಳು ಅಲ್ಲಿದ್ದವಾದ್ದರಿಂದಲೇ ಫೆಲೆಸ್ತೀನನ್ನು ಆಯ್ಕೆ ಮಾಡಲಾಯಿತು. ಅಲ್ಲಾಹನು ನಮಗೆ ನಾಫಿ ಆದ ವಿಜ್ಞಾನ ವನ್ನು ನೀಡಿ ಅನುಗ್ರಹಿಸಲಿ ಆಮೀನ್.
– ನಿಝಾಮ್ ಅನ್ಸಾರಿ, ಕಲ್ಲಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.