ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್) : ಶಾಲಾ ಮಕ್ಕಳನ್ನು ಅಡ್ಯನಡ್ಕದಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಡ್ಯನಡ್ಕ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಹತ್ತನೇ ತರಗತಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಆಡಳಿತ ಮಂಡಳಿಯ ಅವಗಾಹನೆಗೆ ತಾರದೆ ಫೆ.18 ರಂದು ಶೈಕ್ಷಣಿಕ ಕಾರ್ಯಾಗಾರಕ್ಕೆ ಕಳುಹಿಸಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಅಡ್ಯನಡ್ಕದ ಧಾರ್ಮಿಕ ಸಂಘಟನೆಯೊಂದರ ನೇತೃತ್ವದಲ್ಲಿ ರಾಜಕಮಲ್ ಖಾಸಗಿ ಹಾಲ್ನಲ್ಲಿ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ ಹಾಗೂ ರಫೀಕ್ ಮಾಸ್ಟರ್ ಆತೂರ್ ಮತ್ತು ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯಷನ್ ನ ಪದಾಧಿಕಾರಿಗಳು ಶೈಕ್ಷಣಿಕ ಕಾರ್ಯಾಗಾರವೊಂದನ್ನು ಆಯೋಜಿಸಿದ್ದರು.
ಆದರೆ ಜನತಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು, ಕಾರ್ಯಾಗಾರದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿಧ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಾಧವ ಮೂಲ್ಯ ಎಂಬವರು ದೂರು ನೀಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯಕ್, ರಫೀಕ್ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯಷನ್ನ ಪದಾಧಿಕಾರಿಗಳ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಹಲವಾರು ಶೈಕ್ಷಣಿಕ ಕಾರ್ಯಗಾರಗಳನ್ನು ನಡೆಸಿ ಎಲ್ಲಾ ವರ್ಗದವರಲ್ಲೂ ನೆಚ್ಚಿನವರಾದ ರಫೀಕ್ ಮಾಸ್ಟರ್ ಅವರಂತವರ ಮೇಲೆ ಕೇಸು ದಾಖಲಿಸಿ ಕಾರ್ಯಾಗಾರಕ್ಕೆ ಅಡ್ಡಿಪಡಿಸಿರುವುದರ ಬಗ್ಗೆ ಹಲವು ಸಂಘಟನೆಗಳು, ನಾಯಕರು ಖಂಡನೆ ವ್ಯಕ್ತಪಡಿಸಿದ್ದು, ಇದೊಂದು ಕೋಮುಭಾವನೆ ಕೆರಳಿಸುವ ಷಡ್ಯಂತ್ರ ಎಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.