ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ಇಬ್ಬರು ಮನೆಯೊಡತಿಯ ಕೊಲೆಗೆ ಯತ್ನಿಸಿ ಚಿನ್ನ, ನಗದು ದರೋಡೆಗೈಯಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವರದರಾಜ್ (30), ಸೈಜಾನ್ (38) ಬಂಧಿತರು.
ಕರಿಕ್ಕಳದ ವಿಶ್ವನಾಥ್ ಅವರ ತೋಟದಲ್ಲಿ ವರದರಾಜ್ ಹಾಗೂ ಸೈಜಾನ್ ನಾಲ್ಕು ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾ. 2ರಂದು ಸಂಜೆ ಇಬ್ಬರು ಪಂಜ ಪೇಟೆಗೆ ಹೋಗುವುದಾಗಿ ಹೇಳಿ ತಲಾ 200 ರೂ. ಪಡೆದು, ಪೇಟೆಗೆ ತೆರಳಿ ಬಂದಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಇವರಿಬ್ಬರು ಮನೆಯ ಮಹಡಿಯನ್ನು ಹತ್ತಿ ಮನೆಯೊಳಗೆ ಬಂದಿದ್ದಾರೆ.
ಬಳಿಕ ಮನೆ ಮಾಲಕ ವಿಶ್ವನಾಥ್ ಅವರ ಪತ್ನಿ ಗಾಯತ್ರಿ (61) ಅವರ ಕುತ್ತಿಗೆಯನ್ನು ವರದರಾಜ್ ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದು, ಮನೆಯೊಡತಿ ಇಲ್ಲ ಎಂದಾಗ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸೈಜಾನ್ ಗಾಯತ್ರಿ ಅವರ ಎರಡೂ ಕಾಲುಗಳನ್ನೂ ಹಿಡಿದುಕೊಂಡಿದ್ದ. ಈ ವೇಳೆ ಗಾಯತ್ರಿ ಅವರ ಬೊಬ್ಬೆ ಕೇಳಿ ಮನೆ ಸಮೀಪದ ಸುರೇಶ್ ಹಾಗೂ ಕೆಲಸದ ಪ್ರೇಮಾ ಅಲ್ಲಿಗೆ ಬಂದು ಆರೋಪಿಗಳನ್ನು ಹಿಡಿಯುವಷ್ಟರಲ್ಲಿ ವರದರಾಜ್ ಆಯುಧದಿಂದ ಗಾಯತ್ರಿ ಅವರ ಕುತ್ತಿಗೆಗೆ ಎರಡು ಕಡೆ ಇರಿದ ಪರಿಣಾಮ ಗಾಯವಾಗಿದೆ. ಅವರಿಗೆ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.