ಧಾರವಾಡ (www.vknews.in) : ಮನುಕುಲದ ಆರೋಗ್ಯ ಸಂರಕ್ಷಣೆಗೆ ಪೂರಕವಾದ ಶ್ರೇಷ್ಠ ಔಷಧಿ ಗುಣದ ಹಾಲು ಕರೆಯುವ ದೇಸಿ ಹಸುಗಳ ಸಂತತಿ ಸಂವರ್ಧನೆಗೆ ಸಮಸ್ತ ರೈತ ಬಾಂಧವರು ಆಸಕ್ತಿಯಿಂದ ಶ್ರಮಿಸಬೇಕೆಂದು ಶಾಸಕ ಅಮೃತ ದೇಸಾಯಿ ಕರೆ ನೀಡಿದರು.
ಅವರು ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ರೈತ ಮೋರ್ಚ ಧಾರವಾಡ ಜಿಲ್ಲಾ ಘಟಕವು ಭಾರತೀಯ ಗೋವು ಬ್ಯಾಂಕ್, ಹೊಸನಗರ ರಾಮಚಂದ್ರಾಪೂರಮಠದ ಶ್ರೀಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮಾರ್ಗರ್ಶನದ ‘ಅಮೃತಧಾರಾ ಗೋವು ಶಾಲೆ’ ಹಾಗೂ ಉತ್ತರಕನ್ನಡ ಜಿಲ್ಲೆ ಸಿದ್ದಾಪೂರ ತಾಲೂಕು ಭಾನ್ಕುಳಿ ಗೋವು ಸ್ವರ್ಗ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ಮತ್ತು ಕುಸುಬೆ ಬೆಳೆಗಾರರಿಗೆ ದೇಸಿ ಹಸುಗಳ ಉಚಿತ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳ ಮೂಲಕ ರಾಷ್ಟ್ರೀಯತೆಯ ಉಳಿವಿಗಾಗಿ ಬಿಜೆಪಿ ರಾಷ್ಟ್ರದ ಉದ್ದಗಲಕ್ಕೂ ಪ್ರತಿಯೊಬ್ಬ ಭಾರತೀಯನಲ್ಲಿ ದೇಶಭಕ್ತಿಯ ಗಾಢ ತನ್ಮಯತೆಗಾಗಿ ಶ್ರಮಿಸುತ್ತಿದೆ ಎಂದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ದೇಸಿ ಹಸುಗಳ ಹಾಲು ಔಷಧಿ ಗುಣ ಹೊಂದಿದ್ದು, ಈ ಹಸುಗಳ ಸಾಕಾಣಿಕೆಗೆ ರೈತರು ಕಾಳಜಿ ವಹಿಸಬೇಕು. ಭಾರತೀಯತೆ ಮತ್ತು ಭಾರತದ ಮಣ್ಣಿನ ಸಂಸ್ಕೃತಿ, ಪರಂಪರೆ, ಧರ್ಮ ಸಮನ್ವಯತೆಯ ಆಶಯಗಳನ್ನು ರಕ್ಷಿಸಿ ಮುಂದಿನ ತೆಲೆಮಾರಿಗೆ ಅದನ್ನು ಉಳಿಸಿ-ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದ ಸಂಯೋಜಕಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ವಿದ್ಯಾ ವ್ಹಿ. ಎಂ. ಮಾತನಾಡಿ, ದೇಸಿ ಹಸುಗಳ ಸಾಕಾಣಿಕೆ, ಸಂರಕ್ಷಣೆ ಮತ್ತು ಸಂತತಿ ಸಂವರ್ಧನೆಗೆ ಬಿಜೆಪಿ ರೈತ ಮೋರ್ಚಾ ರಾಜ್ಯದ ಪ್ರತೀ ಜಿಲ್ಲೆಯಲ್ಲಿಯೂ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಲು ವ್ಯಾಪಕ ಚಿಂತನೆ ನಡೆಸಿದೆ. ಈಗಾಗಲೇ ರೈತ ಮೋರ್ಚಾ ಎಣ್ಣೆಕಾಳುಗಳ ಅಧಿಕ ಬೇಸಾಯಕ್ಕಾಗಿ ಧಾರವಾಡದಿಂದಲೇ ಕುಸುಬೆ ಬೆಳೆ ಪುನರುಜ್ಜೀವನ ಅಭಿಯಾನವನ್ನು ಆರಂಭಿಸಿದ್ದು, ಪ್ರಸ್ತುತ ಕುಸುಬೆ ಬೆಳೆಯುತ್ತಿರುವ ರೈತರಿಗೇ ಈ ದೇಸಿ ಹಸುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಹಸುಗಳ ಹಾಲಿನ ಮಾರಾಟದಿಂದ ಬರುವ ಆದಾಯ ತಕ್ಕಮಟ್ಟಿಗಾದರೂ ರೈತರ ಆರ್ಥಿಕ ಸಬಲತೆಗೆ ಸಹಾಯಕವಾಗಲಿದೆ ಎಂದರು.
ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿ, ರೈತರ ಬದುಕನ್ನು ಬಲಗೊಳಿಸಲು ಬಿಜೆಪಿ ರೈತ ಮೋರ್ಚಾ ವಿಶಿಷ್ಟ ಯೋಜನೆಗಳನ್ನು ರೂಪಿಸುತ್ತಿದೆ ಎಂದರು. ಮಾಜಿ ಶಾಸಕಿ ಸೀಮಾ ಮಸೂತಿ, ಭಾರತಿ ಗಂಗಾಧರ ಪಾಟೀಲ, ಮುರಳೀಧರ ಪ್ರಭು, *ಉಪನ್ಯಾಸ* : ಸುಭಾಸ ಪಾಳೇಕರ್ ಕೃಷಿ ಸಮೂಹದ ಸಂಚಾಲಕ ಟಿ.ಆರ್. ಪ್ರಸನ್ನಮೂರ್ತಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕುರಿತು ಉಪನ್ಯಾಸ ನೀಡಿದರು.
ಒಂದು ದಿನದ ಈ ಶಿಬಿರದಲ್ಲಿ ಸಾವಯವ ಕೃಷಿ ತಜ್ಞ ಉದಯಕುಮಾರ ಕೊಳ್ಳಿಮಠ, ನಿವೃತ್ತ ಪಶುತಜ್ಞ ವೈದ್ಯ ಡಾ. ಎನ್.ಎಸ್. ಪಾಟೀಲ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ವೀರಯ್ಯ ಚಿಕ್ಕಮಠ, ಮತ್ತಿತರರು ರೈತರಿಗೆ ಮಾಹಿತಿ ವಿನಿಮಯ ಮಾಡಿದರು. ಮಹಾದೇವ ದಂಡಿನ, ಮಾಲತೇಶ ಕರಿಕಾಯಿ, ಅಜ್ಜಪ್ಪ ದಂಡಿನ, ನಾಗಪ್ಪ ತಿರ್ಲಾಪೂರ, ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು, ರೈತ ಮುಖಂಡರು ಇದ್ದರು. ಒಟ್ಟು ೧೦೮ ದೇಸಿ ಹಸುಗಳನ್ನು ಜಿಲ್ಲೆಯಲ್ಲಿ ಗುರುತಿಸಿದ ರೈತ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. —
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.