(www.vknews.in) : ಹೆಸರಾಂತ ಸೂಫಿ ಸಂತ ಹಜ್ರತ್ ನಿಜಾಮುದ್ದೀನ್ ರವರ ಹೆಸರು ಎಲ್ಲರು ಕೇಳಿರುತ್ತಾರೆ. ಅವರ ಹೆಸರಲ್ಲಿ ಒಂದು ರೈಲು ಸಹ ಇದೆ. ಅವರ ಸಮಾಧಿ ದೆಹಲಿಯಲ್ಲಿದೆ. ಆ ರೈಲು ನಿಲ್ದಾಣ ಮತ್ತು ಬಡಾವಣೆಯ ಹೆಸರು ಸಹ ಹಜ್ರತ್ ನಿಜಾಮುದ್ದೀನ್ ಎಂದಾಗಿದೆ. ಅವರ ನೆಚ್ಚಿನ ಶಿಷ್ಯ ಹಜ್ರತ್ ಅಮೀರ್ ಖುಸ್ರೋ. ಸುಮಾರು ಏಳು ನೂರು ವರ್ಷಗಳ ನಂತರವೂ ಅವರ ಕವಿತೆ ಕವನಗಳನ್ನು ಸಿನಿಮಾರಂಗ, ಕಾವ್ಯ ಮತ್ತು ಕಲಾಪ್ರೇಮಿಗಳು ಬಳಸಿಕೊಳ್ಳುತ್ತಿದ್ದಾರೆ.
ಭಾರತದ ಗಿಳಿ ಎಂದೇ ಹೆಸರು ಬಿರುದು ಪಡೆದ ಅಮೀರ್ ಖುಸ್ರು ತನ್ನ ಗುರುಗಳಾದ ಹಜ್ರತ್ ನಿಜಾಮುದ್ದೀನ್ ರವರ ಜೊತೆ ಎಷ್ಟು ಪ್ರೀತಿಯಿಂದ ಇದ್ದರು ಎಂದರೆ ಶರಿಯತ್ ಕಾನೂನು ಒಪ್ಪಿಗೆ ಕೊಟ್ಟಿದ್ದಿದ್ದರೆ ನಾನು ಮತ್ತು ಖುಸ್ರು ಒಂದೇ ಸಮಾಧಿಯಲ್ಲೇ ಸಮಾಧಿಗೊಳ್ಳುತ್ತಿದ್ದೆವು ಎಂದು ಹಜ್ರತ್ ನಿಜಾಮುದ್ದೀನ್ ಹೇಳಿದ್ದರು. ಅಂದರೆ ಗುರುಶಿಷ್ಯರ ಅಷ್ಟೊಂದು ಗಾಢ ಬಾಂಧವ್ಯ. ಗುರುಗಳು ಸ್ವರ್ಗವಾಸಿಯಾದಾಗ ಅಮೀರ್ ಖುಸ್ರೋ ಬಂಗಾಳದಲ್ಲಿದ್ದರು. ವಿಷಯ ತಿಳಿದಾಕ್ಷಣ ಅವರ ದುಃಖಕ್ಕೆ ಪಾರವೇ ಇರಲಿಲ್ಲ. ದೆಹಲಿಗೆ ಹೆಚ್ಚಿನ ಸಮಯ ಗುರುಗಳ ಸಮಾಧಿಯ ಬಳಿಯೇ ಕಳೆದು ಕೆಲವು ತಿಂಗಳುಗಳ ನಂತರ ಅಮೀರ್ ಖುಸ್ರೋ ಸಹ ಗುರುಗಳ ಅಗಲಿಕೆಯ ದುಃಖದಲ್ಲೇ ಸ್ವರ್ಗವಾಸಿಯಾಗಿಹೋದರು. ಅವರ ಸಮಾಧಿಯನ್ನು ಗುರುಗಳ ಸಮಾಧಿಯ ಸಮೀಪದಲ್ಲೇ ಮಾಡಲಾಗಿದೆ.
ಹಜ್ರತ್ ನಿಜಮುದ್ದೀನ್ ಅಧ್ಯಾತ್ಮ ಲೋಕದ ಪರಾಕಾಷ್ಠತೆಯನ್ನು ತಲುಪಿದ್ದರು. ಆದರೂ ತನ್ನ ಶಿಷ್ಯನಿಗೆ ತನ್ನ ಜೀವಂತ ಕಾಲದ ಓರ್ವ ಆಧ್ಯಾತ್ಮಿ ಗುರುಗಳಾದ ಹಜ್ರತ್ ಬೂಅಲಿ ಷಾ ಖಲಂದರ್ ರವರ ಬಳಿ ಪ್ರತಿ ಗುರುವಾರ ಹೋಗಲು ಹೇಳಿದರು. ಅಮೀರ್ ಖುಸ್ರೋ ತನ್ನ ಗುರುಗಳ ಅಪ್ಪಣೆಯಂತೆ ಪ್ರತಿ ಗುರುವಾರ ಹೋಗುತ್ತಿದ್ದರು. ಒಂದು ದಿನ ಹಜ್ರತ್ ಬೂ ಅಲಿ ಷಾ ಪಾನಿಪತಿ ಅಮೀರ್ ಖುಸ್ರೋ ರವರನ್ನು ಉದ್ದೇಶಿಸಿ ಮಾತನಾಡಿದರು – “ಎಲ್ಲಿ ನಿಮ್ಮ ಗುರುಗಳು ಪ್ರವಾದಿ ಮುಹಮ್ಮದರ(ಸ) ಸಭೆಯಲ್ಲಿ ಕಾಣಿಸುತ್ತಿಲ್ಲವಲ್ಲ. ಅದನ್ನು ಕೇಳಿ ಅಮೀರ್ ಖುಸ್ರು ರವರ ಮನಸ್ಸಿಗೆ ಆಘಾತವಾಯಿತು. ಆದರೂ ಏನೂ ಹೇಳದೆ ಚಾಚು ತಪ್ಪದೆ ಪ್ರವಚನ ಕೇಳಲು ಸಭೆಗೆ ಹೋಗುತ್ತಿದ್ದರು. ಒಮ್ಮೆ ತನ್ನ ಶಿಷ್ಯನ ಮುಖವನ್ನು ನೋಡಿ ಹಜ್ರತ್ ನಿಜಾಮುದ್ದೀನ್ ರವರು ನಿನ್ನ ಮುಖ ನೋಡಿದರೆ ಬಾಡಿದಂತಿಗೆ, ಏನೋ ನೋವು ಮನಸ್ಸಿನಲ್ಲಿಟ್ಟುಕೊಂಡಿದ್ದೀಯ, ಅದೇನು ಹೇಳಿ ಎಂದರು. ಆಗ ಅಮೀರ್ ಖುಸ್ರೋ ಹೇಳಿದರು – ಹಜ್ರತ್ ಬೂ ಅಲಿ ಷಾ ಹೇಳಿದರು ನೀವು ಪ್ರವಾದಿವರ್ಯರ ಕಚೇರಿಯಲ್ಲಿ ಕಾಣಸಿಗುತ್ತಿಲ್ಲವಂತೆ.
ಇದನ್ನು ಕೇಳಿದ ಗುರುಗಳು – ನೀವೇ ನನ್ನನ್ನು ಪ್ರವಾದಿವರ್ಯರ ಸಭೆಗೆ ಕರೆದುಕೊಂಡು ಹೋಗಿ ನಾನು ಸಹ ನನ್ನ ಗುರುಗಳನ್ನು ಅಲ್ಲಿ ಹುಡುಕುತ್ತೇನೆ ಎಂದು ಅವರಿಗೆ ಹೇಳಿ ಎಂದರು. ಅಮೀರ್ ಖುಸ್ರೋ ರವರು ಬೂಅಲಿ ಷಾ ರವರ ಬಳಿ ಬಂದು ಹೀಗೆಯೇ ಹೇಳಿದರು. ಆಗ ಬೂ ಅಲಿ ಷಾ ರವರು ಅಮೀರ್ ಖುಸ್ರೋ ರವರ ಎದೆಯ ಮೇಲೆ ಕೈಯನ್ನಿಟ್ಟರು. ಅಮೀರ್ ಖುಸ್ರೋ ಪ್ರವಾದಿವರ್ಯರ ಸಭೆಯಲ್ಲಿ ಹಾಜರಿದ್ದರು. ಅತ್ತಇತ್ತ ಕಣ್ಣು ಹಾಯಿಸುತ್ತಾ ತನ್ನ ಗುರುಗಳನ್ನು ಹುಡುಕಲಾರಂಭಿಸಿದರು. ಪ್ರವಾದಿವರ್ಯರು ಅಮೀರ್ ಖುಸ್ರೋ ರವರನ್ನು ನೋಡಿ, ಏನು ಹುಡುಕುತ್ತಿರುವೆ ಎಂದು ಕೇಳಿದಾಗ, ನನ್ನ ಗುರುಗಳು ಸಭೆಯಲ್ಲಿ ಎಲ್ಲಿ ಕುಳುತಿರುವರು ಎಂದು ಹುಡುಕಾಡುತ್ತಿದ್ದೇನೆ ಎಂದರು. ಮೊದಲ ಸಭೆಯಲ್ಲಿ ಗುರುಗಳು ಸಿಗಲಿಲ್ಲ. ಪ್ರವಾದಿವರ್ಯರು ಮೇಲ್ದರ್ಜೆಯ ಸಭೆಗೆ ಗುರುಗಳನ್ನು ಹುಡುಕಲು ಖುಸ್ರೋ ರವರನ್ನು ಕಳುಹಿಸಿದರು. ಆಲೂ ಸಿಗಲಿಲ್ಲ. ಹೀಗೆ ಏಳು ಅಂತಸ್ತುಗಳಲ್ಲಿಯೂ ಗುರುಗಳು ಕಣ್ಣಿಗೆ ಬೀಳಲಿಲ್ಲ. ಪ್ರವಾದಿವರ್ಯರ ಬಳಿ ಇಬ್ಬರು ವ್ಯಕ್ತಿಗಳು ಕುಳಿತಿದ್ದರು. ಅವರು ಮುಖವನ್ನು ಮರೆಸಿಕೊಂಡಿದ್ದರು.
ಅಮೀರ್ ಖುಸ್ರೋ ರವರ ಹುಡುಕಾಟವನ್ನು ನೋಡಿ ತನ್ನ ಸಮೀಪ ಕುಳಿತಿದ್ದ ಆ ವ್ಯಕ್ತಿಗೆ ಹೇಳಿದರು – ನಿಜಾಮುದ್ದೀನ್ ಮುಖದ ಮೇಲಿನ ಪರದೆಯನ್ನು ಸರಿಸಿ. ಖುಸ್ರೋ ತನ್ನ ಗುರುಗಳ ಮುಖ ನೋಡಿ ದಿಗ್ಭ್ರಮೆಗೊಂಡರು. ಅವರ ಬಳಿ ಮಹಾಗುರು ಹಜ್ರತ್ ಅಬ್ದುಲ್ ಖಾದರ್ ಜೀಲಾನಿ ಸಹ ಆಸೀನರಾಗಿದ್ದರು. ತನ್ನ ಗುರುಗಳನ್ನು ನೋಡಿದಾಕ್ಷಣ ಅವರನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಲು ಮುಂದಾದರು. ಆದರೆ ಹಜ್ರತ್ ಬೂ ಅಲಿ ಷಾ ಖಲಂದರ್ ತನ್ನ ಹಸ್ತವನ್ನು ಖುಸ್ರೋ ರವರ ಎದೆಯ ಮೇಲಿಂದ ಎತ್ತಿಕೊಂಡರು. ಈ ಆಧ್ಯಾತ್ಮಿಕ ಪಯಣ ನೋಡಿದ ನಂತರ ಅಮೀರ್ ಖುಸ್ರೋ ಅದೇ ಗುಂಗಲ್ಲಿ ಒಂದು ಕವನವನ್ನು ಬರೆದರು – ನಮಿ ದಾನಂ ಚೆ ಮಂಜಿಲ್ ಬೂದ್…. ಅದು ಪರ್ಷಿಯನ್ ಭಾಷೆಯಲ್ಲಿದ್ದರೂ, ಭಾಷೆ ಅರ್ಥವಾಗದೇ ಇದ್ದರೂ ಇಂದಿಗೂ ಸಹ ಕೇಳಲು ಆಹ್ಲಾದಕರವಾಗಿದೆ. ಆದುದರಿಂದಲೆ ಬಹುಶಃ ಸಂಗೀತಕ್ಕೆ ಕಾವ್ಯಕ್ಕೆ ಯಾವುದೇ ಬೇಲಿಗಳಿಲ್ಲ ಎನ್ನುವುದು.
ಹಜ್ರತ್ ನಿಜಾಮುದ್ದೀನ್ ಮತ್ತು ಹಜ್ರತ್ ಬೂಅಲಿಷಾ ಇಬ್ಬರೂ ಮಹಾನ್ ಸೂಫಿ ಸಂತರು. ಅಧ್ಯಾತ್ಮಲೋಕದಲ್ಲಿ ಅಷ್ಟು ಬಲಿಷ್ಠವಾಗಿ ಬೆಳೆದಿದ್ದರೂ ಕಿಂಚತ್ತು ಅಸೂಯೆ ಇರಲಿಲ್ಲ. ಯಾರಾದರೂ ಮಠಾಧಿಪತಿಗಳು ತನ್ನ ಶಿಷ್ಯನನ್ನು ಬೇರೆ ಮಠಾಧಿಪತಿಯ ಬಳಿಗೆ ವಿದ್ಯೆ ಕಲಿಯಲು ಕಳುಹಿಸುತ್ತಾರೆಯೇ. “ನಾನು” ಎಂಬ ಅಹಂ ಅಲ್ಲಿ ಅಡ್ಡ ಬಂದುಬಿಡುತ್ತದೆ. ಶಿಷ್ಯರೂ ಸಹ ತನ್ನ ಗುರುಗಳ ಅಪ್ಪಣೆ ಪಾಲಿಸುವುದುಂಟೆ? ಇಂದಿನ ಪರಿಸ್ಥಿತಿ ಅಣುಕಿದಾಗ ನಮಗೆ ಏನು ಗೋಚರವಾಗುತ್ತದೆ. ಒಂದು ಪಕ್ಷವನ್ನು ಕಂಡರೆ ಇನ್ನೊಂದು ಪಕ್ಷದವರಿಗೆ ಆಗುವುದಿಲ್ಲ. ಒಂದು ಜಾತಿಯವರನ್ನು ಕಂಡರೆ ಇನ್ನೊಂದು ಜಾತಿಯವರಿಗೆ ಆಗುವುದಿಲ್ಲ. ಒಂದು ಧರ್ಮವನ್ನು ಕಂಡರೆ ಇನ್ನೊಂದು ಧರ್ಮದವರಿಗೆ ಆಗುವುದಿಲ್ಲ. ಒಬ್ಬ ಅಧಿಕಾರಿಯನ್ನು ಕಂಡರೆ ಇನ್ನೊಬ್ಬ ಅಧಿಕಾರಿಗೆ ಆಗುವುದಿಲ್ಲ.
ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕಾರಣ ಏನು ? ಅಸೂಯೆ. ಅಸೂಯೆ ಎಂಬ ವಿಷ ಮನಸ್ಸುಗಳಲ್ಲಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೂ ಮನಸ್ಸಿಗೆ ಶಾಂತಿ ಸಿಗುವುದಿಲ್ಲ. ಮನಸ್ಸಿಗೆ ಶಾಂತಿ ಸಿಗಬೇಕಾದರೆ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಪಂಚವೇ ಉಲ್ಟಾ ನಡೆಯುತ್ತಿದೆಯಲ್ಲ, ನಾನೇಕೆ ಸುಮ್ಮನಿರಬೇಕು ಎಂದುಕೊಂಡರೆ ಆ ಕ್ಷಣದಿಂದಲೇ ಸ್ಪರ್ಧೆ ಪ್ರಾರಂಭವಾಗುತ್ತದೆ. ನಮ್ಮದು ಆರೋಗ್ಯಕರ ಸ್ಪರ್ಧೆ ಅಲ್ಲವೇ ಅಲ್ಲ ಅಂದ ಮೇಲೆ ಅಲ್ಲಿ ದ್ವೇಷ, ಅಸೂಯೆ, ಅನ್ಯಾಯ ಹುಟ್ಟುತ್ತದೆ. ಅಲ್ಲಿ ಶಾಂತಿ ಬದುಕುಳಿಯಲು ಸಾಧ್ಯವೇ ? ಎಲ್ಲವೂ ಕ್ಷಣಿಕ. ತಿಳಿದು, ಬಾಳಿ ಬದುಕು, ನೀ ಇರುವ ತನಕ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.