(www.vknews.in): ಅಲ್ಲಾಹ್ ಕೂಗ್ತು ಏಳೋ ಮಗಾ. ಬಿರ್ಬಿರ್ನೆ ಎದ್ದು ಹೊಲಕ್ಕೆ ಹೋಗಿ ಹುಲ್ ಕೊಯ್ಕೊಂಡ್ ಬಾ – ಇದು ನಮ್ಮ ಕಡೆಯ ಹಳ್ಳಿ ಭಾಷೆ. ಅಲ್ಲಾ ಕೂಗ್ತು ಅಂದರೆ ಅಜಾನ್ ಎಂದರ್ಥ. ಬೆಳಕು ಹರಿಯಲಿದೆ ಎಂದು ಗೊತ್ತಾಗಲು ಹಳ್ಳಿಗರಿಗೆ ಅಜಾನ್ ಕೂಗು ಒಂದು ಅಲಾರಂ ಇದ್ದ ಹಾಗೆ. ಎಲ್ಲಾ ಧರ್ಮದವರು ಬಾಳಿ ಬದುಕುತ್ತಿರುವ ಹಳ್ಳಿಗಳಲ್ಲಿ ಈಗಲೂ ತಾತ-ಅಜ್ಜಂದಿರು ಬಸ್ಸುಗಳ ಹಾರನ್ ಮತ್ತು ಅಜಾನ್ ಕೂಗನ್ನು ಕೇಳಿ ಈಗ ಸಮಯ ಎಷ್ಟಾಗಿರಬಹುದು ಎಂದು ಹೇಳಿ ಬಿಡುತ್ತಾರೆ. ಬಸ್ಸುಗಳು ಏರಿ ಮೇಲಿಂದಲೇ ಹಾರನ್ ಮಾಡುತ್ತಾ ಬರುತ್ತವೆ. ಇದೇ ಬಸ್ಸು ಬರುತ್ತಿರುವುದು ಎಂದು ಹಳ್ಳಿ ಜನರು ಥಟ್ಟನೆ ಹೇಳಿ ಬಿಡುತ್ತಾರೆ. ದಿನದಲ್ಲಿ ಐದು ಹೊತ್ತು ಅಜಾನ್ ಕೂಗಲಾಗುತ್ತದೆ. ಹಳ್ಳಿಯ ನಿಶ್ಯಬ್ಧ ವಾತಾವರಣದಲ್ಲಿ ದೂರದ ಹಳ್ಳಿಗಳವರೆಗೂ ಅಜಾನ್ ಕೂಗು ಕೇಳಿಸುವುದುಂಟು.
ಬೆಳಗ್ಗಿನ ಅಜಾನ್ ಕೂಗಿದಾಕ್ಷಣ ಸರಸರನೆ ಸಿದ್ಧಗೊಂಡು ತಮ್ಮ ಕೆಲಸಕಾರ್ಯಗಳನ್ನು ಹಳ್ಳಿಯ ಜನರು ಪ್ರಾರಂಭಿಸಿಬಿಡುತ್ತಾರೆ. ಮನೆ ಮುಂದೆ ಕಸ ಗುಡಿಸಿ, ಗೊಬ್ಬರ ಸಾರಿಸಿ, ರಂಗೋಲಿ ಬಿಡಿಸುತ್ತಾರೆ. ರೈತರು ಹೊಲಗದ್ದೆ ಕಡೆ ಹೊರಡುತ್ತಾರೆ. ಹೆಂಗಸರು ಹಾಲು ಕರೆದು ಹತ್ತಿರದ ಹಾಲು ಡೈರಿಗೆ ತೆಗೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ಬೀಡಿ ಹತ್ತಿಸಿ, ತಟ್ಟೆ ಇಡ್ಲಿಗೋಸ್ಕರ ಗುಡಿಸಲು ಹೋಟೆಲ್ ಮುಂದೆ ಕಾದು ಕುಳಿತಿರುತ್ತಾರೆ. ಬಿಸಿಬಿಸಿ ಬೆಲ್ಲದ ಟೀ ಸವಿಯುತ್ತಾ ಹರಟೆ ಮಾತು ಪ್ರಾರಂಭಿಸುತ್ತಾರೆ. ಕೆಲವರು ತೆಂಗಿನ ತೊಗಟೆಗಳಲ್ಲಿ ನೀರು ಕಾಯಿಸಿ, ಸ್ನಾನ ಮಾಡಿ, ಹಣೆ ತುಂಬಾ ನಾಮ ಬಳಿದು, ಸಿದ್ಧರಾಗಿ ಪೂಜೆ ಮಾಡಲು ಹಳ್ಳಿಯ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ. ಮುಸಲ್ಮಾನರು ಮಸೀದಿಗೆ ಹೋಗಿ ನಮಾಜ್ ಮುಗಿಸಿ, ಕೆಲವರು ಮನೆಯ ಕಡೆ ಹೋದರೆ , ಮತ್ತೆ ಕೆಲವರು ಬೆಚ್ಚನೆಯ ಟೀ ಕುಡಿಯಲು ಹೋಟೇಲಿನತ್ತ ಧಾವಿಸುತ್ತಾರೆ. ಅಲ್ಲಿ ಸಿದ್ಧ, ಉಸ್ಮಾನ್, ಕುಮಾರ, ಹಿರಿಗೌಡ್ರು, ಮೂರ್ತಿ ಮತ್ತು ರಮೀಮ್ ಭೈ ಮುಂತಾದವರು ಭೇಟಿಯಾಗುತ್ತಾರೆ. ಸುಂಕವಿಲ್ಲದ ಹಳ್ಳಿ ಪಾರ್ಲಿಮೆಂಟ್ ಪ್ರಾರಂಭವಾಗುತ್ತದೆ. ಮಾತನಾಡಲು ಊರಿನ ಕಥೆಗಳೆಲ್ಲಾ ಅವರ ಬಳಿ ಇರುತ್ತವೆ. ಬಿಟ್ಟರೆ ದಿನವಿಡೀ ಮಾತನಾಡುತ್ತಾರೆ. ಹೋಟೆಲ್ ಬಿಟ್ಟರೆ ಅರಳಿ ಮರದ ಕಟ್ಟೆಯ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಿರುತ್ತಾರೆ.
ಎಲ್ಲ ಧರ್ಮದವರು ತನ್ನ ಊರಿನ ಪರಧರ್ಮದ ಸ್ನೇಹಿತರನ್ನು ಮದುವೆಮುಂಜಿ ಸಮಾರಂಭಗಳಲ್ಲಿ, ಸಾವುನೋವುಗಳಲ್ಲಿ, ಹಬ್ಬಹರಿದಿನಗಳಲ್ಲಿ, ಕಷ್ಟಸುಖಗಳಲ್ಲಿ ಮತ್ತು ಚುನಾವಣೆಗಳಲ್ಲಿ ಮರೆಯುವುದಿಲ್ಲ. ಅನ್ಯೋನ್ಯವಾಗಿ ಇಂದಿಗೂ ಬಾಳಿ ಬದುಕುತ್ತಿದ್ದಾರೆ. ಚಿಕ್ಕಂದಿನಿಂದಲೂ ನಮ್ಮ ಅಜ್ಜಿಯ ಊರಲ್ಲಿ ನಾನು ಇದನ್ನೆಲ್ಲಾ ನೋಡಿ ಬೆಳೆದಿದ್ದೇನೆ. ಇಂದಿಗೂ ನಮ್ಮ ನಡುವಿನ ಸ್ನೇಹ ಸತ್ತಿಲ್ಲ. ಬಾಂಧವ್ಯ ಮುರಿದಿಲ್ಲ. ನಮ್ಮೂರ್ ಜನ ಅಂದರೆ ಪ್ರೀತಿ ಸ್ವಲ್ಪ ಜಾಸ್ತಿಯೇ. ಪ್ರಪಂಚದ ಯಾವ ಮೂಲೆಗಾದರೂ ಹೋಗಿ, ನಿಮ್ಮೂರಿನ ಜನರು ಸಿಕ್ಕರೆ, ಎಷ್ಟು ಸಂತೋಷವಾಗುತ್ತದೆ ಅಲ್ಲವೇ. ಇವರು ನಮ್ಮೂರಿನವರು ಎಂದು ಹೆಮ್ಮೆಯಿಂದ, ವಾತ್ಸಲ್ಯದಿಂದ ಬೇರೆಯವರಿಗೆ ಪರಿಚಯ ಮಾಡಿಸಿಕೊಡುವುದಿಲ್ಲವೇ. ಏನಾದರು ಅಗತ್ಯ ಬಿದ್ದರೆ ಅವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ . ಅಲ್ಲಿ ಜಾತಿ ಧರ್ಮ ಅಡ್ಡ ಬರಲ್ಲ. ವೈಷಮ್ಯದ ಗೋಡೆಗಳನ್ನು ನಿರ್ಮಿಸಲು ಪ್ರಯತ್ನ ಪಡುತ್ತಿರುವುದು ಕೆಲ ರಾಜಕೀಯ ವ್ಯಕ್ತಿಗಳು ಮಾತ್ರ.
ನಮ್ಮ ಕಷ್ಟಸುಖಗಳಿಗೆ ತಕ್ಷಣ ಸ್ಪಂದಿಸುವುದು ನಮ್ಮ ಸುತ್ತಮುತ್ತಲ ಜನರು ಮಾತ್ರ. ಯಾವುದೇ ರಾಜಕೀಯ ವ್ಯಕ್ತಿ ನಮ್ಮ ಮನೆಗಳಿಗೆ ಬಂದು ಸಮಸ್ಯೆಗಳನ್ನು ಪರಿಹಾರ ಮಾಡುವುದಿಲ್ಲ. ಅಕಸ್ಮಾತ್ ಬಂದರೆ ಅದರ ಹಿಂದೆ ರಾಜಕೀಯವಿರುತ್ತದೆ. ಇದನ್ನು ಅರ್ಥ ಮಾಡಿಕೊಂಡ ಹಳ್ಳಿಯ ಜನರು ಮಾಧ್ಯಮಗಳು ಬಿತ್ತುತ್ತಿರುವ ವಿಷಬೀಜಕ್ಕೆ ನೀರು ಹಾಕುತ್ತಿಲ್ಲ. ಆದುದರಿಂದಲೇ ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ರಾಮರಹೀಮರ ಸ್ನೇಹ ಮುಂದುವರೆದುಕೊಂಡು ಹೋಗುತ್ತಿದೆ. ಕರೋನ ಕಾಲದಲ್ಲಿ ಮುಸಲ್ಮಾನರು ಹಿಂದೂಗಳ ನೂರಾರು ಅಂತ್ಯ ಕ್ರಿಯೆಗಳನ್ನು ಹಿಂದೂ ಆಚರೆಣಗಳ ಪ್ರಕಾರ ಮಾಡಿದ್ದು ಹಿಂದುಮುಸಲ್ಮಾನರ ಸ್ನೇಹಕ್ಕೆ ಸಾಮರಸ್ಯಕ್ಕೆ ಮನುಷ್ಯತ್ವಕ್ಕೆ ಸಾಕ್ಷಿಯಾಯಿತು.
ಬೇಕಂತಲೇ ಕೆಲ ಕಿಡಿಗೇಡಿಗಳು ಅಜಾನ್ ಸಮಸ್ಯೆಯನ್ನು ಹುಟ್ಟುಹಾಕಿದರು. ಆದರೆ ಹಳ್ಳಿ ಜನರು ಅಜಾನ್ ನಿಂದ ನಮಗೆ ಯಾವ ಸಮಸ್ಯೆಯೂ ಇಲ್ಲ ಎಂದರು. ನಮ್ಮ ಧರ್ಮ ನಾವು ಆಚರಿಸುತ್ತಿದ್ದೇವೆ. ಅವರ ಧರ್ಮ ಅವರು ಆಚರಿಸಿಕೊಳ್ಳುತ್ತಿದ್ದಾರೆ. ತಲೆತಲಾಂತರಗಳಿಂದ ನಾವು ಮಸೀದಿ ನೋಡುತ್ತಾ, ಅಜಾನ್ ಕೇಳುತ್ತಾ ಬೆಳೆದಿದ್ದೇವೆ. ಮೈಕ್ ಇಲ್ಲದಿದ್ದಾಗ ಎತ್ತರವಾದ ಜಾಗದಲ್ಲಿ ನಿಂತು ಅಲ್ಲಾ ಕೂಗುತ್ತಿದ್ದರು. ಈಗ ಧ್ವನಿವರ್ಧಕಗಳು ಬಂದಿವೆ. ನಾವು ಸಹ ದೇವಸ್ಥಾನದ ಅನೇಕ ಕಾರ್ಯಕ್ರಮಗಳಿಗೆ, ಭಜನೆಗಳಿಗೆ, ಹರಿಕಥೆಗಳಿಗೆ, ಯಾಗಯಜ್ಞಾದಿಗಳಿಗೆ, ಹಬ್ಬಹರಿದಿನಗಳಿಗೆ ಮೈಕ್ ಬಳಸುತ್ತೇವೆ. ಬೆಳಗ್ಗೆ ದೇವಸ್ಥಾನದಲ್ಲಿ ಕೀರ್ತನೆಯ ಹಾಡುಗಳನ್ನು ಹಾಕುತ್ತೇವೆ ಅಲ್ಲವೇ ಎಂದು ನಮ್ಮೂರಿನ ಹಿರಿಯರು ಹೇಳುವುದುಂಟು.
ಅಜಾನ್ ಗೆ ಹಳ್ಳಿ ಭಾಷೆಯಲ್ಲಿ ಅಲ್ಲಾ ಕೂಗ್ತು ಎನ್ನುತ್ತಾರೆ. ಏನಿದು ಅಜಾನ್? ಇದರ ಅರ್ಥ ಏನು? ಅಲ್ಲಾಹು ಅಕ್ಬರ್ ಎಂದರೆ ಅಕ್ಬರ್ ಮಹಾರಾಜನ ಹೆಸರಲ್ಲ. ಅಜಾನ್ ವಾಕ್ಯಗಳ ಅರ್ಥ – ದೇವರು ಬಹಳ ದೊಡ್ಡವನು. ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರು ಯಾರೂ ಇಲ್ಲವೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. ಪ್ರವಾದಿ ಮುಹಮ್ಮದ್ (ಸ) ಅವರು ಅಲ್ಲಾಹನ ಸಂದೇಶವಾಹಕರಾಗಿರುವರೆಂದು ನಾನು ಸಾಕ್ಷಿ ನುಡಿಯುತ್ತೇನೆ. ಬನ್ನಿ ನಮಾಜ್ ನ ಕಡೆಗೆ. ಬನ್ನಿ ಯಶಸ್ಸಿನ ಕಡೆಗೆ. ಅಲ್ಲಾಹನಲ್ಲದೆ ಮತ್ತಾರೂ ಆರಾಧನೆಗೆ ಅರ್ಹರಿಲ್ಲ. ಬೆಳಗ್ಗಿನ ಅಜಾನ್ ನಲ್ಲಿ ಇನ್ನೊಂದು ವಾಕ್ಯವನ್ನು ಬಳಸಲಾಗುತ್ತದೆ. ಅದೇನೆಂದರೆ ನಿದ್ದೆಗಿಂತ ಪ್ರಾರ್ಥನೆ ಉತ್ತಮ.
ದೇವರು ದೊಡ್ಡವನು ಎಂದು ಬಾಯಿ ಮಾತಲ್ಲಿ ಹೇಳುವುದಲ್ಲ. ಆ ಮಾತಿಗೆ ಮನಸಾರೆ ಸಾಕ್ಷಿಯಾಗಬೇಕು. ಹೌದು ದೇವರು ಎಲ್ಲಕ್ಕಿಂತ ದೊಡ್ಡವನು. ನನ್ನ ಆಸ್ತಿಅಂತಸ್ತು ದೊಡ್ಡದಲ್ಲ, ನನ್ನ ಅಧಿಕಾರ ದೊಡ್ಡದಲ್ಲ, ನನ್ನ ಸಂಪತ್ತು ದೊಡ್ಡದಲ್ಲ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಇಂದು ನಾವು ಹಣದ ಪೂಜಾರಿಗಳಾಗಿ ಹೋಗಿದ್ದೇವೆ. ಅಧಿಕಾರದ ಆರಾಧಕರಾಗಿ ಹೋಗಿದ್ದೇವೆ. ದೇವರು ನನಗೆ ಪ್ರಾಥಮಿಕ ಆದ್ಯತೆ ಕೊಡಿ ಎಂದು ಹೇಳುತ್ತಿದ್ದಾನೆ. ಆದರೆ ನಮ್ಮ ಆದ್ಯತೆಗಳ ಪಟ್ಟಿಯ ಪ್ರಥಮ ದರ್ಜೆಯಲ್ಲಿ ಏನಿದೆ ? ನಮ್ಮನ್ನು ನಾವೇ ಅವಲೋಕಿಸಿ ನೋಡಿಕೊಳ್ಳಬೇಕಾಗುತ್ತದೆ.
ಅಜಾನ್ ಗೆ ತನ್ನದೆ ಆದ ಒಂದು ಹಿನ್ನೆಲೆ ಇದೆ. ಸಾರ್ವಜನಿಕರಲ್ಲಿ ಮೊದಲನೇಯ ಬಾರಿಗೆ ಅರಬ್ ದೇಶದ ಮಕ್ಕಾ ಪಟ್ಟಣದಲ್ಲಿರುವ ಪವಿತ್ರ ದೇವರ ಭವನ ಕಾಬಾ ದ ಮೇಲೆ ಹತ್ತಿ ಅಜಾನ್ ಕೂಗಿದ್ದು ಹಜ್ರತ್ ಬಿಲಾಲ್ ಎಂಬುವರು. ಈ ಬಿಲಾಲ್ ಯಾರು ಗೊತ್ತೇ? ಅರಬ್ ದೇಶದಲ್ಲಿ ಜನರನ್ನು ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಗುಲಾಮಗಿರಿಯ ಪದ್ಧತಿ ಜಾರಿಯಲ್ಲಿತ್ತು. ಜನರಲ್ಲಿ ಮೇಲುಕೀಳು ಬಡವಬಲ್ಲಿದ ಎಂಬ ಬೇಧಭಾವ ಬಹಳ ಹೆಚ್ಚಾಗಿತ್ತು. ಅಂತಹ ಕೆಟ್ಟ ಗುಲಾಮಗಿರಿ ಪದ್ಧತಿಗೆ ಸಿಲುಕಿ ನಲುಗಿ ಹೋಗಿದ್ದ ಗುಲಾಮ ಬಿಲಾಲ್. ಆಫ್ರಿಕಾ ದೇಶದ ಜನರ ಮೈಬಣ್ಣ, ಶರೀರದ ಲಕ್ಷಣಗಳು ನೀವು ನೋಡಿರಬಹುದು. ಅದೇ ತೀರಾ ಕಪ್ಪು ಬಣ್ಣದವರು ಬಿಲಾಲ್. ಮೇಲು ಕೀಳು ಎಂಬ ಭಾವನೆಗಳನ್ನು ಜನರ ಮನಸ್ಸುಗಳಿಂದ ಕೊತ್ತೊಗೆಯಲು, ಮನುಷ್ಯರೆಲ್ಲರೂ ಸಮಾನರು ಎಂದು ಸಾರಲು, ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳ ದೇವರಭವನ ಕಾಬಾ ಕಟ್ಟಡದ ಮೇಲೆ ಹಜ್ರತ್ ಬಿಲಾಲರನ್ನು ಹತ್ತಿಸಿ, ಅಜಾನ್ ಕೂಗಲು ಪ್ರವಾದಿವರ್ಯರು ಹೇಳಿದರು. ಸಮಾನತೆಯ ಕ್ರಾಂತಿಯ ಆ ಕ್ಷಣಗಳು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದುಹೋದವು. ಪ್ರಪಂಚದ ಮೂಲೆ ಮೂಲೆಗಳಲ್ಲಿ ಅಜಾನ್ ಕೂಗು ಕೇಳಿಸಿಕೊಂಡಾಗ ಈ ಸಮಾನತೆಯ ಪಾಠ ಸಹ ಸ್ಮರಣೆಗೆ ಬರುತ್ತದೆ. ಅಜಾನ್ ಜನರಿಗೆ ಒಳಿತಿನ ಕಡೆಗೆ ಕರೆಯುವ ಒಂದು ನಿಮಂತ್ರಣ. ಅಜಾನ್ ಕೂಗಿದ ನಂತರ ಎಲ್ಲರು ನಮಾಜ್ ಮಾಡಲು ಮಸೀದಿಗೆ ಹಾಜರಾಗುತ್ತಾರೆ. ಮಸೀದಿಯಲ್ಲಿ ಒಂದೇ ಪಂಕ್ತಿಯಲ್ಲಿ ಸಾಲಾಗಿ ಸರಿಸಮನಾಗಿ ನಿಲ್ಲಬೇಕಾಗುತ್ತದೆ. ಮಹಾರಾಜ, ಗುಲಾಮ, ಕರಿಯ ಬಿಳಿಯ, ಯಾರೇ ಇರಲಿ ಬೇಧಭಾವ ತೋರುವ ಹಾಗಿಲ್ಲ. ಎಲ್ಲರೂ ಸರಿಸಮಾನರು. ದೇವರು ಬಹಳ ದೊಡ್ಡವನು.
ಅಜಾನ್ ಅನ್ನು ಲಯಬದ್ಧವಾಗಿ ಕೂಗುವುದು ಅಥವಾ ಹಾಡುವುದು ರೂಢಿಯಲ್ಲಿದೆ. ಅದಕ್ಕಾಗಿಯೇ ಮಸೀದಿಯ ಮೇಲ್ವಿಚಾರಕರು ಒಬ್ಬರನ್ನು ನೇಮಿಸಿರುತ್ತಾರೆ. ಅಜಾನ್ ಕೂಗುವವರ ಕಂಠ ಮನಮೋಹಕವಾಗಿದ್ದರೆ, ಕಿವಿಗೆ ಇಂಪಾಗಿದ್ದರೆ, ಮನಸ್ಸಿಗೆ ಆಹ್ಲಾದಕರವಾಗಿದ್ದರೆ ಪುನಃ ಅದನ್ನು ಕೇಳುವ ಆಸೆಯಾಗುತ್ತದೆ. ಅಜಾನ್ ಕೂಗುವವನ ಕಂಠ ಎಮ್ಮೆ ಕೂಗುವ ಹಾಗಿದ್ದರೆ, ಕೇಳಲು ಹಿತಕರವೆನಿಸುವುದಿಲ್ಲ. ಅಂತಹ ಕೂಗಲ್ಲಿ ಯಾವ ರೀತಿಯ ಸೆಳೆತವೂ ಇರುವುದಿಲ್ಲ. ಅಂತರಾಳದಿಂದ ಬರುವ ಅಜಾನ್ ಕೂಗಿನ ಮಾಧುರ್ಯವೇ ಬೇರೆಯಾಗಿರುತ್ತದೆ. ನೀವು ನೆಂಟರಸ್ಥರಿಗೆ ಶುಭ ಕಾರ್ಯಗಳಿಗೆ ಕರೆಯಬೇಕಾದರೆ ಎಷ್ಟು ವಿನಮ್ರತೆಯಿಂದ ಪ್ರೀತಿಯಿಂದ ಮನಸಾರೆ ಕರೆಯುತ್ತೀರೋ ಅದರ ಪ್ರಭಾವ ಅವರ ಮನಸ್ಸುಗಳ ಮೇಲೆ ಅಷ್ಟೇ ಪ್ರಮಾಣದಲ್ಲಿ ಬೀಳುತ್ತದೆ. ಹೃತ್ಪೂರವಕ ನಿಮಂತ್ರಣಕ್ಕೆ ನಾವು ಬರುವುದಿಲ್ಲ ಎಂದು ಹೇಳಲು ಮನಸ್ಸು ಒಪ್ಪುವುದಿಲ್ಲ ಅಲ್ಲವೇ. ಸಮಾರಂಭ ಎಷ್ಟೇ ದೂರವಿದ್ದರೂ ಹಣ ಖರ್ಚು ಮಾಡಿಕೊಂಡು ಹೋಗುತ್ತೇವೆ ಅಲ್ಲವೇ.
೧೯೭೩ ರಲ್ಲಿ ಗಾನಗಂಧರ್ವ ಮೊಹಮ್ಮದ್ ರಫಿ ಪವಿತ್ರ ಹಜ್ ಯಾತ್ರೆಗೆ ಹೋದರು. ಅವರಿಗೆ ಮಕ್ಕಾ ಪಟ್ಟಣದ ಪವಿತ್ರ ಸ್ಥಳ ಕಾಬಾ ದ ಮಸೀದಿಯಲ್ಲಿ ಅಜಾನ್ ಕೂಗಲು ಆಸೆಯಾಯಿತು. ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಭೇಟಿ ಮಾಡಿ ಮಕ್ಕಾದಲ್ಲಿ ಅಜಾನ್ ಕೂಗಲು ಅನುಮತಿ ಪಡೆದುಕೊಂಡರು. ಅವರ ಮಧುರ ಕಂಠದಲ್ಲಿ ಅಜಾನ್ ಕೂಗಿದರು. ಆದರೆ ಅದರ ರೆಕಾರ್ಡಿಂಗ್ ಇಲ್ಲ. ಆ ಧ್ವನಿಯ ರೆಕಾರ್ಡಿಂಗ್ ಇದ್ದಿದ್ದರೆ ಅವರ ಫ್ಯಾನ್ಸ್ ಗಳಿಗೆ ಅವರ ಸುಮಧುರ ಕಂಠದಲ್ಲಿ ಅಜಾನ್ ಕೇಳುವ ಅವಕಾಶ ಇಂದಿಗೂ ಸಿಗುತ್ತಿತ್ತು.
ಮಸೀದಿಯ ಮೇಲ್ವಿಚಾರಕರಲ್ಲಿ ಒಂದು ಮನವಿ. ಅಜಾನ್ ಕೂಗುವವರಿಗಾಗಿ ಒಂದು ತರಬೇತಿಯನ್ನು ಏರ್ಪಡಿಸಬೇಕು. ಯಾರು ಆ ಕಾರ್ಯಕ್ಕೆ ಅರ್ಹರೋ ಅಂಥವರನ್ನು ಅಜಾನ್ ಕೂಗಲು ನೇಮಿಸಬೇಕು. ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ, ಸಂಬಂಧಪಟ್ಟ ಸೌಂಡ್ ಇಂಜಿನೀಯರುಗಳಿಗೆ ಭೇಟಿ ನೀಡಿ ಅತ್ಯಂತ ಶ್ರೇಷ್ಠ ಧ್ವನಿವರ್ಧಕಗಳನ್ನು ಬಳಸಿಕೊಳ್ಳಬೇಕು. ಶುಕ್ರವಾರದ ಪ್ರವಚನಗಳಿಗೂ ಸಹ ಉತ್ತಮ ಧ್ವನಿವರ್ಧಕಗಳನ್ನು ಬಳಸಬೇಕು. ಖುತ್ಬಾ ಕಿರುಚಿಕೊಳ್ಳುವ ಹಾಗೆ ಭಾಸವಾಗುವ ರೀತಿಯಲ್ಲಿ ಸೌಂಡ್ ಇಡಬಾರದು. ಒಳಾಂಗಣ ಆಡಿಟೋರಿಯಂ ಗಳಲ್ಲಿ “ಸೌಂಡ್ ಸಿಸ್ಟಮ್” ವ್ಯವಸ್ಥೆ ಎಷ್ಟು ಉತ್ತಮವಾಗಿರುತ್ತದೆ ಎಂದು ಗಮನಿಸಿ. ಅಂತಹ ವ್ಯವಸ್ಥೆ ಮಸೀದಿಗಳಲ್ಲಿ ಏಕಿಲ್ಲ. ಜನರು ದೇಣಿಗೆ ಕೊಡಲು ಸಿದ್ಧರಿರುತ್ತಾರೆ. ಮಸೀದಿಯ ಸಮಿತಿ ವ್ಯವಸ್ಥೆ ಬದಲಿಸಲು ಸಿದ್ಧವಾಗಬೇಕು ಅಷ್ಟೆ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.