(www.vknews.in) : A.D.1187 ರಲ್ಲಿ ಬರೇ ಹನ್ನೆರಡು ಸಾವಿರ ಸೈನಿಕರೊಂದಿಗೆ ಅರವತ್ತಮೂರು ಸಾವಿರದಷ್ಟಿದ್ದ ಶಿಲುಬೆ ಯೋಧರನ್ನೆದುರಿಸಲು ಸಲಾಹುದ್ದೀನ್ ಅಯ್ಯೂಬಿಯವರು ಹೊರಡುತ್ತಾರೆ. ಪ್ಯಾಲಸ್ತೀನಿನ ಹಿತ್ತೀನ್ ಪಟ್ಟಣದ ಯುದ್ಧ ಮುಖದಲ್ಲಿ ಅತಿ ಜಾಣಾಕ್ಷ ಮತ್ತು ತಂತ್ರಗಾರಿಕೆಯ ಹೆಜ್ಜೆಯ ಮೂಲಕ ಅಲ್ಲಾಹನ ಸಹಾಯದೊಂದಿಗೆ ಸಲಾಹುದ್ದೀನ್ ಅಯ್ಯೂಬಿಯವರು ಆ ಪಟ್ಟಣವನ್ನು ವಶಪಡಿಸಿಕೊಳ್ಳುತ್ತಾರೆ.
ಹಿತ್ತೀನ್ ಯುದ್ಧಕ್ಕೆ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ.ಮುಸ್ಲಿಮರ ಪಾಲಿಗೆ ಹಿತ್ತೀನ್ ಯುದ್ಧದ ಗೆಲುವು ಯರ್ಮೂಕ್ ಯುದ್ಧದಲ್ಲಿ ಖಾಲಿದ್ ಬಿನ್ ವಲೀದ್(ರ)ರವರ ನೇತೃತ್ವದಲ್ಲಿ ಪಡೆದ ಗೆಲುವಿಗೆ ಸಮಾನವಾದದ್ದು.ಈ ಗೆಲುವಿನೊಂದಿಗೆ ಮುಸ್ಲಿಮರಿಗೆ ಖುದುಸ್ ಪ್ರವೇಶದ ಬಾಗಿಲು ತೆರೆಯಲ್ಪಟ್ಟಿತು. ಕೊನೆಗೂ 1188 ಸಪ್ಟಂಬರ್-5 ಹಿಜರಿ 583 ರಜಬ್27 ಶುಕ್ರವಾರ ಖುದುಸ್ ಸಲಾಹುದ್ದೀನ್ ಅಯ್ಯೂಬಿಯವರ ವಶವಾಯಿತು. ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ರವರು ಮಸ್ಜಿದುಲ್ ಅಕ್ಸಾದಿಂದ ಮಿಹ್ರಾಜ್ ನಡೆಸಿದ್ದು ಕೂಡ ಇದೇ ರಜಬ್ ತಿಂಗಳ 27ರಂದೇ ಆಗಿತ್ತು ಎಂಬುದು ಇತಿಹಾಸದಲ್ಲಿ ನೆನಪಿಡಬೇಕಾದ ಘಟನೆ.
ಸಲಾಹುದ್ದೀನ್ ಅಯ್ಯೂಬಿಯವರು ತನ್ನ ಸಹೋದರ ಮಲಿಕುಲ್ ಅದಿಲ್ ಹಾಗೂ ಮುಸ್ಲಿಂ ಸೈನಿಕರೊಂದಿಗೆ ಖುದುಸ್ ಪ್ರವೇಶಿಸುತ್ತಾರೆ.90 ವರ್ಷಗಳ ಹಿಂದೆ ತಮ್ಮ ಪೂರ್ವಿಕರು ಆ ನಗರವನ್ನು ಮುಸ್ಲಿಮರ ಕೈಯಿಂದ ವಶಪಡಿಸಿಕೊಂಡಾಗ ಅವರು ಅಲ್ಲಿ ನಡೆಸಿದ ನರಮೇಧಕ್ಕೆ ಇಂದು ಮುಸ್ಲಿಮರು ಪ್ರತಿಕಾರ ತೀರಿಸಿಕೊಂಡಾರೆಂದು ಅಲ್ಲಿದ್ದ ಕ್ರೈಸ್ತರು ಭೀತರಾಗಿದ್ದರು.ಆದರೆ ಮಹನೀಯರಾದ ಸಲಾಹುದ್ದೀನ್ ಅಯ್ಯೂಬಿಯವರು ತನ್ನ ಮಾರ್ಗದರ್ಶಕರೂ-ಮಾದರಿಯೂ ಆದ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ರವರ ಮಾರ್ಗದಲ್ಲೇ ಮುಂದುವರಿದರು. ಮಕ್ಕಾ ವಿಜಯದ ಸಂದರ್ಭದಲ್ಲಿ ಪ್ರವಾದಿಯವರು ಕುರೈಷರಿಗೆ ಕ್ಷಮೆ ನೀಡಿದಂತೆ ಅಲ್ಲಿನ ಕ್ರೈಸ್ತರಿಗೆ ಅಭಯ ಮತ್ತು ಆಶ್ರಯವನ್ನು ನೀಡಿದರು.ಈ ಘಟನೆಯನ್ನು ಸ್ಮರಿಸಿ ನಂತರದ ಇತಿಹಾಸಕಾರರು ಸಲಾಹುದ್ದೀನ್ ಅಯ್ಯೂಬಿಯವರನ್ನು saladeen the great ಎಂದು ಕರೆದರು.
ತನ್ನ ಪೂರ್ವಿಕರಾದ ನೂರುದ್ದೀನ್ ಝೆಂಗಿಯವರು ನಿರ್ಮಿಸಿಟ್ಟಿದ್ದ ಮಿಂಬರ್ ನ್ನು ಮಸ್ಜಿದುಲ್ ಅಕ್ಸಾದಲ್ಲಿ ಸ್ಥಾಪಿಸಿದ ಅಯ್ಯೂಬಿ ಅವರ ಕನಸನ್ನು ಸಾಕಾರಗೊಳಿಸಿದರು. ಬೈತುಲ್ ಮುಖದ್ದಸಿನಲ್ಲಿದ್ದ ಕ್ರೈಸ್ತ ದೇವಾಲಯಗಳನ್ನು ಕೆಡವಬೇಕೆಂಬ ತಮ್ಮ ಸೈನಿಕರ ಒತ್ತಾಯವನ್ನು ಕೇಳಿದ ಸಲಾಹುದ್ದೀನ್ ರವರು”ಖಲೀಫ ಉಮರ್(ರ) ಉಳಿಸಿದ್ದನ್ನು ಸಲಾಹುದ್ದೀನ್ ಕೆಡವಬೇಕೆಂದು ನೀವು ಬಯಸುತ್ತೀರಾ.”ಎನ್ನುತ್ತಾ ಅವರ ಬಾಯಿ ಮುಚ್ಚಿಸಿದರು.
ಸಲಾಹುದ್ದೀನ್ ಅಯ್ಯೂಬಿ ಖುದುಸ್ ವಶಪಡಿಸಿಕೊಂಡದ್ದನ್ನು ಅರಿತ ಯುರೋಪ್ ಕಂಪಿಸಿತು. ಅಂದಿನ ಪೋಪ್ ಹೃದಯಘಾತದಿಂದ ಸಾವನ್ನಪ್ಪಿದ್ದರು. ಯುರೋಪ್ ಮೂರನೇ ಶಿಲುಬೆ ಯುದ್ಧಕ್ಕೆ ಸಿದ್ಧತೆಯನ್ನು ಆರಂಭಿಸಿತು. ಇಂಗ್ಲೆಂಡಿನ ರಾಜ ರಿಚರ್ಡ್(Richard the lion heart) ಮತ್ತು ಫ್ರಾನ್ಸಿನ ರಾಜ ಫಿಲಿಪ್ ರವರ ನಾಯಕತ್ವದಲ್ಲಿ ಬೃಹತ್ ಸೇನೆಯೊಂದು ಸಲಾಹುದ್ದೀನ್ ರವರ ವಿರುದ್ಧ ಸಮರಸನ್ನದ್ಧರಾಗಿ ಬಂದರೂ ಯಾವುದೇ ಫಲ ಕಾಣದೇ ಮರಳ ಬೇಕಾಯಿತು. ಸಲಾಹುದ್ದೀನ್ ಅಯ್ಯೂಬಿಯವರ ಕಾಲಾನಂತರವೂ ಶಿಲುಬೆಯೋಧರ ಉಪಟಳವು ನಿರಂತರವಾಗಿದ್ದರೂ ಪ್ಯಾಲೆಸ್ತೀನ್-ಖುದುಸ್ ಶತಮಾನಗಳ ಕಾಲ ಮುಸ್ಲಿಂ ಆಡಳಿತದಲ್ಲೇ ಮುಂದುವರಿಯಿತು. ಆನಂತರ ಪಟ್ಟವೇರಿದ ಉಸ್ಮಾನಿಯ ಖಲೀಫರ ಅಧೀನದಲ್ಲಿದ್ದ ಪ್ಯಾಲೇಸ್ತೀನಿನ ಆಡಳಿತವು 1917ರಲ್ಲಿ ಪ್ರಥಮ ಜಾಗತಿಕ ಮಹಾಯುದ್ಧದಲ್ಲಿ ಕೊನೆಯ ಉಸ್ಮಾನಿಯ ಖಲೀಫರವರು ಸೋತು ಸ್ಥಾನ ಬೃಷ್ಟರಾಗುವುದರೊಂದಿಗೆ ಪ್ಯಾಲೇಸ್ತೀನ್-ಖುದುಸ್ ಮತ್ತೊಮ್ಮೆ ಮುಸ್ಲಿಮರಿಗೆ ನಷ್ಟವಾಯಿತು.
— ಸಲಾಹುದ್ದೀನ್ ಅಯ್ಯೂಬಿ-ಕಡಬ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.