ಪೋಲಿಸ್ ಕಮಿಷನರ್ ಅನುಪಮ್ ಅಗರ್ ವಾಲ್ ರಲ್ಲೊಂದು ಮನವಿ- ಮಂಗಳೂರು ನಗರಕ್ಕೆ ಸಮರ್ಥ ಅಧಿಕಾರಿಗಳ ಅಗತ್ಯವಿದೆ! ಭ್ರಷ್ಟ ಪೋಲಿಸ್ ಅಧಿಕಾರಿಗಳ ಕತ್ತು ಹಿಡಿದು ಹೊರ ದಬ್ಬಲು ದಕ್ಷ ಪೋಲಿಸ್ ಕಮಿಷನರ್ ಅನುಪಮ್ ಅಗರ್ ವಾಲ್ ಸಿದ್ಧರಾಗುವರೇ?
(www.vknews.in) : ಮಂಗಳೂರು ನಗರದ ಪೋಲಿಸ್ ಕಮಿಷನರ್ ವ್ಯಾಪ್ತಿ ಗೊಳಪಟ್ಟ 22 ಠಾಣೆಗಳ ಪೈಕಿ ಒಂದೆರಡು ಪೋಲಿಸ್ ಠಾಣೆ ಹಾಗೂ CCBಯ 8 ಸಿಬ್ಬಂದಿ ಗಳನ್ನು ಬಿಟ್ಟರೆ ಬಹುತೇಕ ಠಾಣೆ ಗಳಲ್ಲಿ ಬರೇ ಅದಕ್ಷ ಅಧಿಕಾರಿಗಳೇ ಕಾಲ ಕಳೆಯುತ್ತಿದ್ದಾರೆ. ಅಕ್ರಮ ಜುಗಾರಿ ಕ್ಲಬ್ ಗಳಿಂದ, ಹವಾಲಕೋರರಿಂದ, ಅಕ್ರಮ ಮಸಾಜ್ ಪಾರ್ಲರ್ ಗಳಿಂದ ಅಕ್ರಮ ಮದ್ಯ ವ್ಯಾಪಾರಿಗಳಿಂದ, ಕಳ್ಳ ಸಾಗಾಣಿಕೆದಾರರಿಂದ, ಭೂಗತ ಪಾತಕಿಗಳಿಂದ, ರಿಯಲ್ ಎಸ್ಟೇಟ್ ಮಾಲಕರಿಂದ, ಅಕ್ರಮ ದಾಸ್ತಾನುದಾರರಿಂದ ಮಾಮೂಲು ಪಡೆದು ಸಾಕಷ್ಟು ಅಕ್ರಮ ಸಂಪಾದನೆ ಮಾಡಿ ಕೊಂಡು ಕಳೆದ 5-10 ವರ್ಷಗಳಿಂದ ಮಂಗಳೂರು ನಗರ ವ್ಯಾಪ್ತಿ ಯಲ್ಲೇ ಬೀಡು ಬಿಟ್ಟಿರುವ ಅದಕ್ಷ ಪೋಲಿಸ್ ಅಧಿಕಾರಿಗಳು ಸಾಕಷ್ಟು ಅಕ್ರಮ ಸಂಪಾದನೆ ಮಾಡಿಕೊಂಡು ಮೂಗಿನ ತನಕ ಕುಡಿದು ಕುಪ್ಪಳಿಸುವುದಲ್ಲದೆ ಕೊಲೆಯಾಗಲೀ, ದೊಂಬಿ ಯಾಗಲೀ, ಲೂಟಿಯಾಗಲೀ, ದರೋಡೆಯಾಗಲೀ, ಸ್ತ್ರೀಯರ ಮಾನ ಭಂಗವಾಗಲಿ, ದುರ್ಬಲ ರ ಮೇಲೆ ದೌರ್ಜನ್ಯ ವಾಗಲೀ ಏನೇ ಆದರೂ ತಮಗಿದು ದೊಡ್ಡ ಸಂಗತಿಯೇ ಅಲ್ಲವೆಂಬಂತೆ ದಡ್ಡರಂತೆ ಒದ್ದಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಅಪರಾಧ ಪತ್ತೆ ಹಚ್ಚಲು ಸಾಧ್ಯವಾಗದೆ CCB ಯ ಮೊರೆ ಹೊಕ್ಕಿ ಅವರಿಂದ ಪತ್ತೆ ಮಾಡಿಸುವುದು ಒಂದು ವಾಡಿಕೆಯಾಗಿದೆ. ಹಲವು ವರ್ಷ ಗಳ ಹಿಂದೆ ಸಿ.ಎಸ್. ರುದ್ರಯ್ಯ, ಸಿ.ಕೆ. ಶಶಿಧರ್, ದಿ: ಎಂ. ವಿ. ನಾಗರಾಜ್, ಸಾಯಿಕುಮಾರ್ ಪೂಂಜಾ, ಪಿ.ಎಂ. ಪೆಮ್ಮಯ್ಯ ಉದಯ ನಾಯಕ್, ದಿ: ಅಯ್ಯಮ್ಮ, ಪಿ.ಸಿ. ಗಣಪತಿ, ವಿಶ್ವನಾಥ ಪಂಡಿತ್, ವಿನಯ್ ಗಾಂವ್ ಕರ್, ಕೆ. ಮೂತಿ೯, ಪ್ರಮೋದ್, ತಿಲಕ್ ಚಂದ್ರ, ದಿನಕರ್ ಶೆಟ್ಟಿ, ಜಯಂತ್ ಶೆಟ್ಟಿ, ಮಂಜುನಾಥ ಶೆಟ್ಟಿ, ಆಶೋಕನ್, ಶಾಂತರಾಂ ಕುಂದರ್, ಟಿ.ಆರ್. ಜಗನ್ನಾಥ್, ಸುನೀಲ್ ನಾಯ್ಕ, ಶೃುತಿ, ಮಹೇಶ್ ಪ್ರಸಾದ್, ಕಬ್ಬಾಳ್ ರಾಜ್, ವೆಲೆಂಟಿನ್ ಡಿಸೋಜ, ಇನ್ಸ್ಪೆಕ್ಟರ್ ಡಿಸೋಜಾ, ಭಾರತಿ, ಪ್ರಭುದೇವ ಮಾನೆ, ಸಂಜೀವ ನಾಯಕ್, ನಾಗಭೂಷಣ್ ಮುಂತಾದ. ಎಸ್. ಐ. ಗಳು ಇನ್ಸ್ಪೆಕ್ಟರುಗಳು ಜಿಲ್ಲೆಯನ್ನೇ ನಡುಗಿಸಿದ್ದರು. ಆ ಪೋಲಿಸ್ ಅಧಿಕಾರಿಗಳನ್ನು ಕಂಡಾಕ್ಷಣ ಜನ ಬೆಚ್ಚಿ ಬೀಳುತ್ತಿದ್ದರು. ಅಂದು ಅವರು ಪೊಲೀಸ್ ಇಲಾಖೆಗೂ ಗೌರವ ತಂದಿದ್ದರು. ಇಂದಿನ ಪೊಲೀಸ್ ಅಧಿಕಾರಿಗಳನ್ನು ಕಂಡರೆ ಮಕ್ಕಳು ಕೂಡ ಹೆದರುವುದಿಲ್ಲ. ಒಳ್ಳೆಯ ಮೊತ್ತ ಕೊಟ್ಟರೆ ಎಂತಹ ಅಪರಾಧಗಳನ್ನು ಮುಚ್ಚಿ ಹಾಕುತ್ತಾರೆ. ಅವರಿಗೆ ಹೆಸರು ಬೇಕಾಗಿಲ್ಲ. ಯಾರು ಸತ್ತರೂ ಬದುಕಿದರೂ ಅವರಿಗೆ ಹಣ ಆದರೆ ಸಾಕು! ಇದು ಇಂದಿನ ಪೊಲೀಸ್ ಅಧಿಕಾರಿ ಗಳ ಧ್ಯೇಯ.
ಹೀಗಾಗಿ ಮಂಗಳೂರಲ್ಲಿ ಕೆಲವೊಮ್ಮೆ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಅಪರಾಧಗಳು ಎಲ್ಲಿಯ ವರೆಗೆ ಹೆಚ್ಚಿತೆಂದರೆ ಪಾಂಡೇಶ್ವರದ ಹಿಂದಿನ ಪೋಲಿಸ್ ಇನ್ಸ್ಪೆಕ್ಟರ್ ಶ್ರೀ ಹರಿರಾಂ ಭಂಡಾರಿ ಹಾಗೂ ಕಂಕನಾಡಿ ಗ್ರಾಮಾಂತರ ಠಾಣೆ ಯ ಹಿಂದಿನ ಎಸ್.ಐ.ಯೊಬ್ಬರಿಗೆ ಸಾರ್ವಜನಿಕರು ಥಳಿಸಿದ್ದು ಮಾತ್ರವಲ್ಲ ಅಂದಿನ ಉರ್ವ ಎಸ್.ಐ. ಕೆ.ಎನ್. ಹಾಸಟ್ಟಿ ಎಂಬವರನ್ನು ಹಾಡು ಹಗಲೇ ದುಷ್ಕಮಿ೯ಯೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆಂದರೆ ಪೋಲಿಸ್ ಇಲಾಖೆಗೆ ಇದಕ್ಕಿಂತ ದೊಡ್ಡ ಅವಮಾನ ಬೇರೇನು ಬೇಕಾಗಿಲ್ಲ. ಸುಮಾರು 22 ರಿಂದ 24 ಜನ ಇನ್ಸ್ಪೆಕ್ಟರ್ ಗಳು 60 ರಿಂದ 70 ಸಬ್ ಇನ್ಸ್ಪೆಕ್ಟರ್ ಗಳ ಪೈಕಿ ದಕ್ಷ ಹಾಗೂ ಭ್ರಷ್ಟ ಅಧಿಕಾರಿಗಳು ಯಾರೆಂದು ಪೋಲಿಸ್ ಕಮಿಷನರ್ ಶ್ರೀ ಅನುಪಮ ಅಗರ್ ವಾಲ್ ಈಗಾಗಲೇ ಗುರುತಿಸಿಕೊಂಡು ಕಂಕನಾಡಿ ಗ್ರಾಮಾಂತರ ಪೋಲಿಸ್ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರದ ಆರೋಪದನ್ವಯ ಈಗಾಗಲೇ ಅಮಾನತು ಗೊಳಿಸಿದ್ದಾರೆ.
ಶ್ರೀಘ್ರದಲ್ಲೇ ಭ್ರಷ್ಟ ಅಧಿಕಾರಿಗಳ ಕತ್ತು ಹಿಡಿದು ಮಂಗಳೂರು ಕಮಿಷನರೇಟ್ಸ್ ವ್ಯಾಪ್ತಿಯಿಂದ ಹೊರದಬ್ಬಲು ಅತ್ಯಂತ ಸಮರ್ಥ ಹಾಗೂ ದಕ್ಷ ಅಧಿಕಾರಿ ಎಂದು ಖ್ಯಾತಿವೆತ್ತ ಶ್ರೀ ಅನುಪಮ್ ಅಗರ್ ವಾಲ್ IPS ಸಿದ್ಧರಾಗಬೇಕೆಂದು ಮಂಗಳೂರಿನ ಜನತೆ ಅಗ್ರಹಿಸುತ್ತಾರೆ.
ಆದ್ದರಿಂದ ಮಾಮೂಲಿನ ಅಮಲಿನಲ್ಲಿ ಮೈ ಮೆರೆಯುತ್ತಿರುವ ಕೆಲ ಪೋಲಿಸ್ ಅಧಿಕಾರಿಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳ ಅಕ್ರಮ ಸಂಪತ್ತನ್ನು ಮುಟ್ಟುಗೋಲು ಹಾಕಲು ಅದಾಯ ತೆರಿಗೆ ಇಖಾಖೆಯವರು ಸನ್ನದ್ಧ ರಾಗಬೇಕು. ಯಾವ್ಯಾವ ಅಧಿಕಾರಿಗಳು ಎಲ್ಲೆಲ್ಲಿ ಎಷ್ಟೆಷ್ಟು ಲಕ್ಷ-ಕೋಟಿಗಳ ಆಸ್ತಿ ಪಾಸ್ತಿ ಹೊಂದಿದ್ದಾರೆಂಬುವುದನ್ನು ಮುಂದೆ ಬೆಳಕಿಗೆ ತರಲಿದ್ದೇವೆ.
ಶೇಕ್ – ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.