(www.vknews. in) ; ನನ್ನ ಸೋದರ ಸಂಬಂಧಿಯ ಮಗ ಮಡಿಕೇರಿ ನಿವಾಸಿ ಸಾಜಿದ್ ನ ಕೊಲೆಯಾಗಿದೆ ಎಂಬ ವಿಷಯ ತಿಳಿದಾಗ “ಯಾ ಅಲ್ಲಾಹ್ , ಈ ಸುದ್ದಿ ಸುಳ್ಳಾಗಲಿ ಎಂದು ಹಲವು ಬಾರಿ ಪ್ರಾರ್ಥಿಸಿದ್ದೆ “.
ಯಾವುದಾದರು ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗುವುದು ಸರ್ವೇ ಸಾಮಾನ್ಯ. ಇಂತಹ ಕ್ಷುಲ್ಲಕ ವಿಚಾರಕ್ಕೆ ಶ್ರೀನಿಧಿ ಎಂಬಾತ ಸಾಜಿದ್ ನನ್ನು ಕೊಲೆ ಮಾಡುತ್ತಾನೆಂದಾದರೆ ಸಮಾಜ ಎತ್ತ ಸಾಗುತ್ತಿದೆ ?ರಕ್ಷಣೆಗಾಗಿ ಯಾರ ಮೊರೆ ಹೋಗುವುದು ? ಇದೇ ವಿಷಯ ಅದಲು ಬದಲಾಗಿದ್ದರೆ ಊರಿಗೆ ಊರೇ ಹೊತ್ತಿ ಉರಿಯುತ್ತಿರಲಿಲ್ಲವೇ ? ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣ, ರಾಜಕಾರಣಿಗಳು ಕಪೋಲಕಲ್ಪಿತ ಕಥೆ ಕಟ್ಟಿ, ಘಂಟೆಗಟ್ಟಲೆ ಚರ್ಚಿಸಿ ಜನರ ಮನಸ್ಸಿನಲ್ಲಿ ವಿಷಬೀಜ ತುಂಬಿ, ಉದ್ರೇಕಿಸುತ್ತಿರಲಿಲ್ಲವೇ? ಆದರೆ ಕೊಲೆಯಾದವನು ಹದಿಹರೆಯದ ಮುಸ್ಲಿಂ ಯುವಕನಾದರಿಂದ ಎಲ್ಲವೂ ಶಾಂತವಾಗಿದೆ. ನಾವು ಬಯಸುವುದೂ ಕೂಡ ಅದನ್ನೇ.
ನನಗೆ ಹಾಗೂ ಅಲ್ಲಿ ನೆರೆದಿದ್ದವರೆಲ್ಲರಿಗೂ ಸಾಜಿದ್ ನ ತಂದೆತಾಯಿ, ಸಂಬಂಧಿಕರ ತಾಳ್ಮೆ ನೋಡಿ ಅಚ್ಚರಿಯಾಯಿತು. ಆಸರೆಯಾಗಬೇಕಿದ್ದ ಕಾಲದಲ್ಲಿ, ಮಗನ ಬಗ್ಗೆ ನೂರಾರು ಕನಸು ಕಂಡಿದ್ದ ಸಂಧರ್ಭದಲ್ಲಿ ಅಕಾಲಿಕವಾಗಿ ಮಗನ ಸಾವಾದಾಗ ಆ ತಂದೆತಾಯಿಯ ನೋವು ಊಹಿಸಲಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ತಾಳ್ಮೆವಹಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಬಹಳ ನೋವಿನ ಸಂಧರ್ಭದಲ್ಲೂ ಕೊಲೆಗಡುಕನ ಬಗ್ಗೆ ಒಂದೇ ಒಂದು ವಿರುದ್ದ ಶಬ್ದ ಕೂಡ ಅವರ ಬಾಯಲ್ಲಿ ಹೊರಡಲಿಲ್ಲ. ಬದಲಾಗಿ ಕಣ್ಣೀರಿಡುತ್ತಾ ಬಂದವರಲ್ಲೆಲ್ಲಾ ನನ್ನ ಮಗನಿಗಾಗಿ ಪ್ರಾರ್ಥಿಸಿರಿ, ಮಯ್ಯತ್ ನೋಡುವಾಗ ನನಗೆ ಸಹನೆ ನೀಡಲು ಬೇಡಿರಿ ಎಂದು ಹೇಳುವಾಗ ಎಂತಹ ಕಲ್ಲು ಹೃದಯವೂ ಕರಗದೇ ಇರದು.
“ತಾಳ್ಮೆ ಈಮಾನಿನ ಭಾಗವಾಗಿದೆ. ತಾಳ್ಮೆಯುಳ್ಳವರೊಂದಿಗೆ ಅಲ್ಲಾಹನು ಯಾವಾಗಲೂ ಜೊತೆ ಇರುತ್ತಾನೆ” ಎಂಬ ಪ್ರವಾದಿ ವಚನವನ್ನು ಪಾಲಿಸಿ ನಮಗೆಲ್ಲಾ ಮಾದರಿಯಾದರು. ಮಕ್ಕಳೆಂದರೆ ಹೆತ್ತವರಿಗೆ ಸರ್ವಸ್ವ. ಬರಲು ಸ್ವಲ್ಪ ತಡವಾದರೂ, ದೇಹಕ್ಕೆ ಒಂದು ಚೂರು ನೋವಾದರೂ ಅವರಿಗಿಂತ ಹೆಚ್ಚಾಗಿ ನಾವು ಚಡಪಡಿಸುತ್ತೇವೆ. ಶಾಶ್ವತವಾಗಿ ಮಗ ದೂರವಾದಾಗ ಮರಣವಾದವರೆಗೂ ಆ ನೋವನ್ನು ಹೊತ್ತುಕೊಂಡೇ ಬದುಕು ಸಾಗಿಸಬೇಕಾಗುತ್ತದೆ. ಇಲ್ಲಿಯ ಕಾನೂನಿನಿಂದ ಕೊಲೆಗಡುಕನಿಗೆ ಶಿಕ್ಷೆಯಾಗಬಹುದೆಂಬ ನಿರೀಕ್ಷೆ ಯಾರಲ್ಲೂ ಇಲ್ಲ. ಹೆತ್ತವರಿಗೂ, ಕುಟುಂಬಕ್ಕೂ ಸಾಜಿದ್ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡು ಎಂದು ದುಆ ಮಾಡೋಣ. ಅತೀವ ದುಃಖದ ಸಮಯದಲ್ಲೂ ತನ್ನ ಪತ್ನಿ, ತಾಯಿಗೆ ಧೈರ್ಯ ತುಂಬಿ ಸಮಧಾನಿಸುತ್ತಿರುವ ತಂದೆಯ ಸಹನೆಯನ್ನು ಅಲ್ಲಾಹನು ಸ್ವೀಕರಿಸಿ ತಕ್ಕುದಾದ ಪ್ರತಿಫಲ ನೀಡಲಿ. ಸಾಜಿದ್ ನ ಮೃತದೇಹವನ್ನು ನೋಡಿ ಮುಗುಳ್ನಗುತ್ತಾ ಶರೀರವನ್ನು ಚುಂಬಿಸಿ ಹುತಾತ್ಮನಾದ ನೀನು ನಾಳೆ ಯಾರೂ ಬಾರದ ಪಾರತ್ರಿಕ ಲೋಕದಲ್ಲಿ ನನ್ನನ್ನು ಸ್ವರ್ಗಕ್ಕೆ ಕೈಹಿಡಿದುಕೊಂಡು ಹೋಗು ಎಂಬ ಆ ತಾಯಿಯ ಮನದಾಳದ ಪ್ರಾರ್ಥನೆ ಅಲ್ಲಾಹನು ಈಡೇರಿಸಿ ಸಹನೆ ದಯಪಾಲಿಸಲಿ. ಆಮೀನ್ ಯಾ ರಬ್ಬ್.
— ರಹ್ಮತ್ ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.