(www.vknews. in) ; ಮಾಹಿತಿ ಇಲ್ಲದ ಕೆಲವರಿಗೆ ಆಶ್ಚರ್ಯವಾಗಬಹುದು, ಇಲ್ಲಿಯವರೆಗೂ ಪಕ್ಕಾ ರೈತ ಹೋರಾಟದ ನೇತೃತ್ವ ವಹಿಸಿದ್ದ ಕೇವಲ ಮೂರು ಜನ ಮಾತ್ರ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆ. ಎಂ.ಡಿ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲ್, ಕೆ.ಎಸ್. ಪುಟ್ಟಣ್ಣಯ್ಯ….
ಪಕ್ಕಾ ಕನ್ನಡ ಹೋರಾಟಗಾರರಲ್ಲಿ ವಾಟಾಳ್ ನಾಗರಾಜ್, ಜಿ. ನಾರಾಯಣ ಕುಮಾರ್….
ದಲಿತ ಹೋರಾಟದಲ್ಲಿ ಮೀಸಲಾತಿ ಕ್ಷೇತ್ರ ಹೊರತುಪಡಿಸಿ ಮತ್ತು ಯಾವುದೇ ಪಕ್ಷದ ಬೆಂಬಲವಿಲ್ಲದೆ ಸಾಮಾನ್ಯ ಕ್ಷೇತ್ರದಲ್ಲಿ ಒಬ್ಬರೂ ಆಯ್ಕೆಯಾಗಿಲ್ಲ.
(ನನ್ನ ನೆನಪಿನಲ್ಲಿ ದಾಖಲಾಗಿರುವುದು ಇಷ್ಟು ಮಾತ್ರ. ಇನ್ನೂ ಒಂದೆರಡು ಇದ್ದರೆ ದಯವಿಟ್ಟು ನೆನಪು ಮಾಡಿ )
ಇಷ್ಟು ಬಿಟ್ಟರೆ ಇನ್ನೇನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕೆಲವು ರೈತ ನಾಯಕರು, ಕನ್ನಡ ಹೋರಾಟಗಾರರು, ದಲಿತ ನಾಯಕರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಕೆಲವರು ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಕೇವಲ ಹೋರಾಟ ಮಾತ್ರ ಎಂದು ಸಮರ್ಥಿಸಬಹುದು. ಆದರೆ ಈ ಚುನಾವಣಾ ರಾಜಕೀಯದ ಪ್ರಯೋಗಗಳು ನಡೆದು ಸೋಲು ಅನುಭವಿಸಿರುವುದು ನಿಜ. ತೀರಾ ಇತ್ತೀಚೆಗೆ ಮಹದಾಯಿ ನದಿ ನೀರಿನ ಹೋರಾಟಗಾರರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು.
ರಾಜ್ಯದಲ್ಲಿ ರೈತರೇ ಬಹುಸಂಖ್ಯಾತರು, ಕನ್ನಡಿಗರದೇ ಸಾರ್ವಭೌಮತ್ವ, ದಲಿತ ಬಂಡಾಯ ಚಳವಳಿಗಳೇ ಶೋಷಿತರ ಧ್ವನಿ, ಆದರೂ ಚುನಾವಣಾ ರಾಜಕೀಯದಲ್ಲಿ ಇವು ಹೀನಾಯ ವಿಫಲತೆಯನ್ನು ಕಾಣುತ್ತಿವೆ.
ಈ ಸಂಘಟನೆಗಳ ಹೋರಾಟದ ವಿಷಯಗಳೇ ಅತ್ಯಂತ ರೋಮಾಂಚನಕಾರಿ, ನಿಸ್ವಾರ್ಥ ಮತ್ತು ಬಹುಸಂಖ್ಯಾತ ಜನರ ನಿಜವಾದ ಬೇಡಿಕೆಗಳೇ ಆಗಿರುತ್ತವೆ. ಸಾಮಾನ್ಯ ಜನರ ಹಿತಾಸಕ್ತಿಗೆ ಪೂರಕವಾಗಿರುತ್ತದೆ. ಬಹುತೇಕ ಜಾತಿ ಧರ್ಮ ವರ್ಗ ರಹಿತವಾಗಿರುತ್ತದೆ. ಆದರೂ ಮತ ಚಲಾವಣೆ ಸಂದರ್ಭದಲ್ಲಿ ಮಾತ್ರ ಬೆರಳುಗಳು ಪಕ್ಷ ರಾಜಕಾರಣಿಗಳಿಗೆ ಒತ್ತುತ್ತವೆ.
ಹಾಗಾದರೆ ಕೊರತೆ ಇರುವುದು ನಾಯಕರಲ್ಲಿಯೇ, ಸಂಘಟನೆಯಲ್ಲಿಯೇ, ಹೋರಾಟದ ವಿಷಯಗಳ ಆಯ್ಕೆಯಲ್ಲಿಯೇ, ಅದನ್ನು ತಲುಪಿಸುವಲ್ಲಿಯೇ, ಜನರ ಮನೋಭಾವದಲ್ಲಿಯೇ, ಒಟ್ಟು ವ್ಯವಸ್ಥೆಯಲ್ಲಿಯೇ……?
ಚುನಾವಣಾ ರಾಜಕೀಯದಲ್ಲಿ ಹಣ ಹೆಂಡ ಜಾತಿ ಧರ್ಮ ತಂತ್ರ ಕುತಂತ್ರಗಳು ಮತ್ತು ಸುಳ್ಳು ಭರವಸೆಗಳದು ಮುಖ್ಯ ಪಾತ್ರ ಎಂಬುದು ಸ್ವಲ್ಪ ಮಟ್ಟಿಗೆ ನಿಜ. ಆದರೆ ಈ ಚಳವಳಿಗಳು ಅಧಿಕಾರದ ಹಂತಕ್ಕೆ ತಲುಪಬಹುದು ಸಾಧ್ಯವೇ ಆಗುತ್ತಿಲ್ಲ ಎಂಬುದಕ್ಕೆ ಇದು ಒಂದು ನೆಪವಷ್ಟೆ.
ನಮ್ಮ ಜನರ ಮಾನಸಿಕ ಸ್ಥಿತಿ ಇದಕ್ಕೆ ಬಹುಮುಖ್ಯ ಕಾರಣ. ಮಾತುಗಳಲ್ಲಿ ಏನೇ ಹೇಳಿದರು ಅಂತಿಮವಾಗಿ ತಮಗೆ ವೈಯಕ್ತಿಕವಾಗಿ ಆಗುವ ಲಾಭಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ತಾವು ಮತ್ತು ತಮ್ಮವರು ಮಾತ್ರ ಇತರರಿಗಿಂತ ಒಳ್ಳೆಯವರು ಎಂಬ ಸ್ವಾರ್ಥ ಮನೋಭಾವ ಹೆಚ್ಚಾಗಿದೆ. ವಿಷಯಗಳನ್ನು ದೇಶ ಅಥವಾ ರಾಜ್ಯದ ಒಟ್ಟು ಹಿತಾಸಕ್ತಿಯಿಂದ ನೋಡದೆ ತಮ್ಮ ಒಳಿತನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದರಿಂದ ಭ್ರಷ್ಟರಾದರು ರಾಜ್ಯದ ಹಿತಕ್ಕೆ ಮಾರಕವಾದರೂ ತಮ್ಮವರನ್ನೇ ಬೆಂಬಲಿಸುತ್ತಾರೆ.
ಅಸೂಯೆ ಅಥವಾ ಹೊಟ್ಟೆ ಉರಿ ನಮ್ಮ ಜನರ ಭಾವನೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಬಡತನ ಅಜ್ಞಾನ ಮೂಢನಂಬಿಕೆಗಳ ಕಾರಣದಿಂದಾಗಿ ಇದು ನಮ್ಮ ಸಮಾಜದ ಸಾಮೂಹಿಕ ಭಾವವಾಗಿ ಅಂತರ್ಗತವಾಗಿದೆ. ಇದರಿಂದಾಗಿ ಚೇಲಾಗಳು, ಚಮಚಾಗಳು, ಹಿಂಬಾಲಕರು, ಪುಡಾರಿಗಳು, ಬಾಲಂಗೋಚಿಗಳು, ಅಭಿಮಾನಿಗಳು ಎಂಬ ಕರೆಯಲ್ಪಡುವ ಹೊಟ್ಟೆ ಪಾಡಿನ ಒಂದು ವರ್ಗವೇ ಸೃಷ್ಟಿಯಾಗಿದೆ. ಇವರಿಗೆ ಹೋರಾಟ ಚಳವಳಿ ಸಮಾಜದ ಪ್ರಗತಿ ಮುಂತಾದ ವಿಷಯಗಳಿಗಿಂತ ವೈಯಕ್ತಿಕ ಲಾಭವೇ ಮುಖ್ಯ. ಚುನಾವಣೆಯಲ್ಲಿ ಇವರದೇ ಬಹುಮುಖ್ಯ ಪಾತ್ರ. ಇದನ್ನು ರಾಜಕೀಯ ಪಕ್ಷಗಳು ತುಂಬಾ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತವೆ.
ಇನ್ನು ಸಂಘಟನೆಗಳ ನಾಯಕರಲ್ಲಿ ಅಧ್ಯಯನ, ದಕ್ಷತೆ, ಆಡಳಿತಾತ್ಮಕ ವಿಷಯಗಳ ಕೊರತೆ ಸ್ವಲ್ಪ ಮಟ್ಟಿಗೆ ಕಾರಣವಾದರೆ ಒಡೆದು ಆಳುವ ನೀತಿಯ ರಾಜಕಾರಣಿಗಳ ಕುತಂತ್ರದಿಂದ ಈ ಸಂಘಟನೆಗಳು ಕವಲುಗಳಾಗಿ ಬೇರ್ಪಡುತ್ತವೆ. ಹಣ ಜಾತಿ ಮತ್ತು ಅಧಿಕಾರದ ಆಸೆಗೆ ಸಂಘಟನೆಗಳ ಎರಡನೆಯ ದರ್ಜೆಯ ನಾಯಕರು ಸುಲಭವಾಗಿ ಬಲಿಯಾಗುತ್ತಾರೆ. ಅದಕ್ಕೆ ನೆಪ ಮಾತ್ರದ ಕಾರಣಗಳನ್ನು ನೀಡಿ ಲೆಟರ್ ಹೆಡ್ ಸಂಸ್ಥೆಗಳನ್ನು ಸ್ಥಾಪಿಸಿ ಕೇವಲ ಮಾಧ್ಯಮಗಳ ಪೇಪರ್ ಟೈಗರ್ ಗಳಂತಾಗುತ್ತಾರೆ. ಇದು ಜನರಲ್ಲಿ ಭ್ರಮನಿರಸನ ಉಂಟು ಮಾಡಿ ಎಲ್ಲರೂ ಕಳ್ಳರೆ ಎಂಬ ಸಿನಿಕತನ ಮನೆ ಮಾಡಿದೆ. ಇದರಿಂದಾಗಿ ಅನೇಕ ಹೋರಾಟಗಾರರದು ಹೊಟ್ಟೆ ಪಾಡಿನ ಕಾಯಕ ಎಂದೇ ಜನ ಭಾವಿಸುವಂತಾಗಿದೆ.
ಹುಡುಕುತ್ತಾ ಹೋದರೆ ಇನ್ನೂ ಅನೇಕ ಕಾರಣಗಳು ನಮಗೆ ಸಿಗುತ್ತದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಮೂಡಿಬಂದ ಅರವಿಂದ್ ಕೇಜ್ರಿವಾಲ್ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿ ಎರಡನೆಯ ಬಾರಿ ಆಯ್ಕೆಯಾದ ಒಂದು ಮಾದರಿ ಉದಾಹರಣೆ ಸಹ ನಮ್ಮ ಮುಂದಿದೆ.
ರೈತರು, ಕಾರ್ಮಿಕರು, ಶೋಷಿತರು, ಕನ್ನಡ ಪರ ಹೋರಾಟಗಾರರು, ಮಹಿಳಾ ಪರ ಚಿಂತಕರು ಕೇವಲ ಹೋರಾಟ, ಪ್ರದರ್ಶನ ಮತ್ತು ನಾಯಕತ್ವಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ತಮ್ಮ ನಿಜವಾದ ಬೇಡಿಕೆಗಳು ಈಡೇರಬೇಕಾದರೆ ಅಧಿಕಾರ ಕೇಂದ್ರದ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಜನರ ಬಹುಮತವೇ ಮುಖ್ಯ ಮತ್ತು ಅದು ಚುನಾವಣೆಯಲ್ಲಿ ಸಾಬೀತಾಗಬೇಕು. ಇಲ್ಲದಿದ್ದರೆ ಕೇವಲ ದೀರ್ಘ ಅವಧಿಯಲ್ಲಿ ಹೋರಾಟಗಳು ಕೇವಲ ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿ ಉಳಿಯುತ್ತದೆ.
ಹಾಗೆಂದು ಹೋರಾಟಗಳನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ಈ ಚಳವಳಿಗಳೇ ಸಮಾಜ ಸುಧಾರಣೆಯ ಮೊದಲ ಹೆಜ್ಜೆಗಳು. ಕಾಗೋಡು ಸತ್ಯಾಗ್ರಹ, ನರಗುಂದ ರೈತ ಬಂಡಾಯ, ಗೋಕಾಕ್ ಚಳವಳಿ, ಸಮಾಜವಾದಿ ಒಕ್ಕೂಟ, ಶೋಷಿತರ ಬಂಡಾಯ ಸಾಹಿತ್ಯ ಸಮ್ಮೇಳನ ಮುಂತಾದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬದಲಾದ ಕಾಲಘಟ್ಟದಲ್ಲಿ ಹೋರಾಟಗಳು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಜನರ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಬದಲಾವಣೆ ಉಂಟುಮಾಡಿ ಅಧಿಕಾರ ಕೇಂದ್ರಕ್ಕೆ ಹತ್ತಿರವಾದರೆ ಹೋರಾಟಗಳ ಸಾರ್ಥಕತೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಚಳವಳಿಗಳು ರೂಪಗೊಳ್ಳಲಿ, ಪ್ರಜಾಪ್ರಭುತ್ವದ ನಿಜವಾದ ಆಶಯ ಸಾಕಾರಗೊಳ್ಳುವ ದಿನಗಳು ಬರಲಿ, ನಮ್ಮ ಕಣ್ಣ ಮುಂದಿನ ಅನೇಕ ಬಡತನದ ಬವಣೆಳಿಗೆ ಪರಿಹಾರ ಸಿಗಲಿ ಎಂದು ಆಶಿಸುತ್ತಾ……..
— ವಿವೇಕಾನಂದ. ಎಚ್.ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.