(www.vknews.in) : ಕಬಕ ಕಲ್ಲಂದಡ್ಕದಲ್ಲಿ ನಾನು ಖತೀಬ್ ಆಗಿದ್ದಾಗ ವಿಷಯವೊಂದರ ಬಗ್ಗೆ ಮಾತನಾಡಲು ಸಯ್ಯಿದ್ ಕೂರತ್ ತಂಙಳ್ ನನ್ನನ್ನು ಕೂರಕ್ಕೆ ಕರೆದಿದ್ದರು. ಅದು ಕೂರತ್ ತಂಙಳ್ ಕೂರ ಎಂಬ ಗ್ರಾಮೀಣ ಪ್ರದೇಶಕ್ಕೆ ಬಂದ ಸಮಯ. ತಂಙಳ್ ರವರ ಬಳಿ ಬಂದು ತಮ್ಮ ಕಷ್ಟ ಕಾರ್ಪಣ್ಯ ಹೇಳುವವರು ಅಂದು ಬೆರಳೆಣಿಕೆಯ ಜನರು ಬರುತ್ತಿದ್ದರು. ನಂತರ ಕೂರತ್ ಜನಸಾಗರ ಸೇರುವ ಸಂದರ್ಶನ ಕೇಂದ್ರವಾಗಿ ಜಗದ್ವಿಖ್ಯಾತಿ ಪಡೆಯಿತು!
ನಾನು ಬೆಳಿಗ್ಗೆಯೇ ಕೂರಕ್ಕೆ ತಲುಪಿದ ಕಾರಣ ಕೂರತ್ ತಂಙಳ್ ಬೆಳಗ್ಗಿನ ಉಪಹಾರ ಸೇವಿಸಲು ಕುಳಿತಾಗ ನಾನು ಎಷ್ಟೇ ಬೇಡವೆಂದರೂ ಒತ್ತಾಯಪೂರ್ವಕವಾಗಿ ಹತ್ತಿರ ಕುಳ್ಳಿರಿಸಿದರು. ಕೂರ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಮುಸ್ಲಿಯಾರ್ ಮತ್ತು ನಾನು ಕೂರತ್ ತಂಙಳ್ ರೊಂದಿಗೆ ಉಪಹಾರ ಸೇವಿಸಿದೆವು. ಅಂದು ಹಲವಾರು ವಿಷಯಗಳ ಬಗ್ಗೆ ತಂಙಳ್ ಮಾತನಾಡಿದ್ದರು. ಅದು ಇಪ್ಪತ್ತಮೂರು ವರ್ಷಗಳ ಹಿಂದೆ ಆದ ಕಾರಣ ತಂಙಳ್ ರವರ ನುಡಿಮುತ್ತುಗಳು ಈಗ ನೆನಪಿಗೆ ಬರುತ್ತಿಲ್ಲ.
ಅತ್ಯಂತ ಹಿಂದುಳಿದ ಪ್ರದೇಶವಾದ ಕೂರ ಎಂಬ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಧಾರ್ಮಿಕ ಕ್ರಾಂತಿ ಮಾಡಿ ಇಸ್ಲಾಂ ಧರ್ಮದ ಶಾಂತಿ ಸಂದೇಶ ಸಾರುವುದು ತಂಙಳ್ ರವರ ಧ್ಯೇಯವಾಗಿತ್ತು. ಅಲ್ ಫಝಲ್ ಎಜುಕೇಷನ್ ಸೆಂಟರ್ ಸ್ಥಾಪಿಸಿ ಕೂರ ಎಂಬ ಪುಟ್ಟ ನಾಡಿನ ಕೀರ್ತಿಯನ್ನು ಕೂರತ್ ತಂಙಳ್ ಜಗದಗಲ ಹಬ್ಬಿಸಿದ್ದರು.
ತಾಜುಲ್ ಉಲಮಾ ಅಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ (ಖ.ಸಿ.) ರವರ ಸುಪತ್ರ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರು ತನ್ನ ತಂದೆಯ ನಿರ್ದೇಶ ಪ್ರಕಾರ ಎಲ್ಲವನ್ನೂ ಮಾಡುತ್ತಿದ್ದರು. “ಕೋಯಮ್ಮ ತಂಙಳ್ ರೊಂದಿಗೆ ಆಟ ಆಡಬೇಡಿ ” ಎಂದು ತಾಜುಲ್ ಉಲಮಾ ರವರು ತನ್ನ ಮಗನ ಬಗ್ಗೆ ಹೇಳಿದ್ದರು !!! ತಾಜುಲ್ ಉಲಮಾ ರವರ ವಫಾತ್ ನ ಮೊದಲೇ ಕೂರತ್ ತಂಙಳ್ ರನ್ನು ಸ್ವತಃ ತಾಜುಲ್ ಉಲಮಾ ಸಹಾಯಕ ಖಾಝಿಯಾಗಿ ನೇಮಕ ಮಾಡಿದ್ದರು. ತಾಜುಲ್ ಉಲಮಾ ವಫಾತ್ ಬಳಿಕ ಕೂರತ್ ತಂಙಳ್ ಉಳ್ಳಾಲ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಯಾಗಿ ನೇಮಕಗೊಂಡರು.
ತನ್ನ ಭಾಷಣದುದ್ದಕ್ಕೂ ದುನ್ಯಾದ ಬಗ್ಗೆ ಎಚ್ಚರಿಕೆಯ ಮಾತುಗಳನ್ನೇ ಬಳಸುತ್ತಿದ್ದ ಕೂರತ್ ತಂಙಳ್ ” ಈಮಾನ್ ಸಲಾಮತ್ ಮಾಡು” ಎಂದು ಪುನರುಚ್ಚರಿಸುತ್ತಿದ್ದರು.
ಧಾರ್ಮಿಕ ವಿಷಯಗಳಲ್ಲಿ ಅತ್ಯಂತ ಕಠಿಣ ನಿಲುವು ತಾಳುತ್ತಿದ್ದ ಕೂರತ್ ತಂಙಳ್ ರವರು ಎಲ್ಲಾ ರೀತಿಯ ನೂತನವಾದಿ ಗುಂಪುಗಳ ವಿರುದ್ಧ ಗುಡುಗುತ್ತಿದ್ದರು. ಮುಸ್ಲಿಂ ಸಮುದಾಯದ ಮಧ್ಯೆ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದು ನಾವು ಸುನ್ನಿಯೂ ಅಲ್ಲ ಸಲಫಿಯೂ ಅಲ್ಲ ಮುಸ್ಲಿಮರು ಎಂಬ ವಾದದೊಂದಿಗೆ ರಂಗಪ್ರವೇಶ ಮಾಡಿದಾಗ ಆ ಸಂಘಟನೆಯ ನಿಜ ಬಣ್ಣ ವನ್ನು ತನ್ನ ಅಧ್ಯಾತ್ಮಿಕ ಶಕ್ತಿ ಮೂಲಕ ಅರ್ಥ ಮಾಡಿಕೊಂಡ ಕೂರತ್ ತಂಙಳ್ ರವರು ” ಅದು ಇಬ್ಲೀಸನ ಪಾರ್ಟಿ,ಈಮಾನ್ ನಷ್ಟ ಹೊಂದುವ ನರಕದ ಪಾರ್ಟಿ ಎಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಸುನ್ನೀ ಮಹಾ ಸಮ್ಮೇಳನದಲ್ಲಿ ಬಹಿರಂಗವಾಗಿ ಹೇಳಿದ್ದರು !!! ನಂತರದ ದಿನಗಳಲ್ಲಿ ಆ ಸಂಘಟನೆಯೇ ವಿವಿಧ ರೂಪದಲ್ಲಿ ಮರೆಯಾಗಿ ಹೋದದ್ದನ್ನಷ್ಟೇ ಜನತೆ ನೋಡಿದ್ದು !!!
ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಒಬ್ಬ ವಲಿಯ್ಯ್ (ಅಲ್ಲಾಹನ ಇಷ್ಟದಾಸ) ಎಂಬುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಅದು ತಂಙಳ್ ರವರ ಮುಖಭಾವದಿಂದ ಸ್ಪಷ್ಟವಾಗುತ್ತಿತ್ತು.
ಲಕ್ಷಾಂತರ ಜನರ ಆಶಾಕಿರಣವಾಗಿ ಉಳ್ಳಾಲದ ಅಭಯಕೇಂದ್ರವಾಗಿ ಕೂರ ಎಂಬ ಊರಿನ ಬೆಳಕಾಗಿ ಪ್ರಜ್ವಲಿಸಿದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ನಮ್ಮನ್ನು ಬಿಟ್ಟಗಲಿದರು. ಯಾವ ಕಾರಣಕ್ಕೂ ತುಂಬಿಸಲಾರದ ನಷ್ಟ ಈ ಸಮಾಜಕ್ಕೆ ಉಂಟಾಗಿದೆ. ನಮ್ಮೆಲ್ಲರ ಆತ್ಮೀಯ ನಾಯಕರಾಗಿ ನಮ್ಮ ಹೃದಯ ಸಾಮ್ರಾಜ್ಯದಲ್ಲಿ ರಾಜಕುಮಾರ ನಾಗಿ ಮೆರೆದಿದ್ದ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರ ಪದವಿಯನ್ನು ಅಲ್ಲಾಹು ಸ್ವರ್ಗ ದಲ್ಲಿ ಹೆಚ್ಚಿಸಲಿ. ಕೂರತ್ ತಂಙಳ್ ರೊಂದಿಗೆ ನಮ್ಮ ಮಾತಾಪಿತರು,ಕುಟುಂಬದವರು ಹಾಗೂ ಸರ್ವ ಸತ್ಯವಿಶ್ವಾಸಿಗಳನ್ನು ಅಲ್ಲಾಹು ಸ್ವರ್ಗ ಬೃಂದಾವನದಲ್ಲಿ ಒಟ್ಟುಗೂಡಿಸಲಿ.
✍ ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.