(www.vknews.in) : ಇಂದು ಮುಸ್ಲಿಮ್ ಸಮುದಾಯದಲ್ಲೂ ಮದುವೆ ಎಂಬ ಸರಳ ಸುಂದರ ಇಬಾದತ್ನ ಮೆರುಗನ್ನೇ ಕೆಡಿಸಲಾಗಿದೆ. ಅದರ ಅಂದವನ್ನು ಹಾಳು ಮಾಡಲಾಗಿದೆ. ಮದುವೆ ಹೆಸರಲ್ಲಿ ಪರಸ್ಪರ ರಂಗು ಸಿಂಪಡಿಸಿ ಹೋಲಿಯಲ್ಲಿ ಮಿಂದೇಳುವುದು, ಪಟಾಕಿ ಸಿಡಿಸಿ, ಡೋಲು ಬಾರಿಸಿ ಮೈಮರೆತು, ಮತ್ತೇರಿದವರಂತೆ ಕುಣಿದಾಡುವ ಹುಚ್ಚು ಪುಂಡಾಟಿಕೆಗಳನ್ನು ಕಾಣುವಾಗ, ಮುಸ್ಲಿಮ್ ಸಮುದಾಯಕ್ಕೆ ಏನಾಗಿದೆ ಎಂದು ಮರುಕವಾಗುತ್ತದೆ. ನಮ್ಮಲ್ಲಿಗೆ ಹೆಚ್ಚಿನ ಅನಾಚಾರಗಳು, ಹುಚ್ಚು ಪುಂಡಾಟಿಕೆಗಳು ಪಕ್ಕದ ಗಡಿ ಪ್ರದೇಶದಿಂದ ದಾಟಿ ಬರುತ್ತವೆ ಎಂಬುದು ಸತ್ಯ. ಹಾಗಂತ, ಅನಾಚಾರಗಳನ್ನು ಹುಟ್ಟು ಹಾಕುವುದರಲ್ಲಿ, ನಮ್ಮವರೂ ಏನೂ ಕಮ್ಮಿಯಿಲ್ಲ.
ಇಲ್ಲಸಲ್ಲದ ಕಟ್ಟುಪಾಡು, ಸಂಪ್ರದಾಯಗಳನ್ನು ನೆನಪಿಸಿ, ಮದುವೆಯನ್ನು ದೊಡ್ಡ ಹೊರೆಯನ್ನಾಗಿ ಮಾಡುವ ಮಹಿಳಾ ಸುಕುಮಾರಿಯರೇ ಬಹುದೊಡ್ಡ ತರಲೆಗಳು. ಕೆಲವೊಮ್ಮೆ ವಧುವಿನ ಕಡೆಯವರು ಅಸಹಾಯಕರಾಗುತ್ತಾರೆ ನಿಜ. ಆದರೆ, ಹೆಚ್ಚಿನೆಡೆ ವಧುವಿನ ಕಡೆಯವರು ಮತ್ತು ಮಹಿಳೆಯರೇ ಹುಚ್ಚು ಪುಂಡಾಟಿಕೆಗಳನ್ನು ಪ್ರೋತ್ಸಾಹಿಸುತ್ತಾರೆ. ಮನೆಯಲ್ಲೂ ಕುಟುಂಬದಲ್ಲೂ ಯಾರೂ ಆಕ್ಷೇಪಿಸುವವರಿಲ್ಲ. ಮಸೀದಿ ಖತೀಬರೂ ಅವರ ಪಾಡಿನ ಪರಂಪರಾಗತ ನಿಕಾಹ್ ನೆರವೇರಿಸಿ, ದೂರ ಸರಿಯುತ್ತಾರೆ.
ವಿಶೇಷತಃ ವರನ ಕಡೆಯವರು ಮನಸ್ಸು ಮಾಡಿದರೆ, ವೈವಾಹಿಕ ರಂಗದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಎಲ್ಲ ಅನಾಚಾರಗಳನ್ನು ಮಟ್ಟ ಹಾಕಬಹುದು. ನಿಜವಾಗಿ ನಾವು ದೇವಭಯ ಮತ್ತು ಕೃತಜ್ಞತೆಯಿಲ್ಲದ ಅಹಂಕಾರಿಗಳು. ಮದುವೆಗೆ ಕರೆಯಲಿಲ್ಲ ಅಥವಾ ಕರೆದದ್ದು ಸರಿಯಾಗಲಿಲ್ಲ ಅಥವಾ ಕರೆದಿದ್ದೆ ಅವರು ಬರಲಿಲ್ಲ ಎಂಬ ಏಕ ಕಾರಣಕ್ಕೆ ಕುಟುಂಬದೊಂದಿಗೆ, ವರ್ಷಗಟ್ಟಲೆ ಮುನಿಸಿಕೊಂಡವರೂ ನಮ್ಮ ಮಧ್ಯೆ ಧಾರಾಳವಿದ್ದಾರೆ. ಸಂದರ್ಭಾನುಸಾರ ಅವರದನ್ನು ಪದೇಪದೇ ನೆನಪಿಸುತ್ತಾರೆ ಕೂಡಾ. ಕೊರೋನಾದಿಂದ ಸಮುದಾಯದ ಮದುವೆಗಳು ಬಹಳಷ್ಟು ಪಾಠ ಕಲಿತಿವೆಯೆಂದು ಹೇಳಲಾಗುತ್ತಿದೆಯಾದರೂ, ಅದು ಸುಳ್ಳೆಂದು ಅಲ್ಲಲ್ಲಿ ನಡೆಯುವ ಆಡಂಬರದ ಮದುವೆಗಳು ಸಾಕ್ಷ್ಯವಹಿಸುತ್ತಿವೆ. ಅನೇಕರು ಲಾಕ್ಡೌನ್ ತೆರೆಯುವುದನ್ನೇ ಕಾದು ಕುಳಿತು ಆಡಂಬರ, ಬೂಟಾಟಿಕೆಯಲ್ಲಿ ಹೊರಳಾಡಿದರು.
ನಾವು ಅಬ್ದರ್ರಹ್ಮಾನ್ ಬಿನ್ ಔಫ್(ರ)ರ ಬಗ್ಗೆ ಬಹಳಷ್ಟು ಮಾತಾಡುತ್ತೇವೆ. ಸ್ವತಃ ಪ್ರವಾದಿವರ್ಯ(ಸ)ರನ್ನೂ ಆಮಂತ್ರಿಸದ ಅವರ ಸರಳ ಮದುವೆಯನ್ನು ಕೊಂಡಾಡುತ್ತೇವೆ. ಆದರೆ ನಮ್ಮ ಹತ್ತಿರದ ಮಿತ್ರರು ಅಥವಾ ಬಂಧುಗಳು ನಮ್ಮನ್ನು ಆಮಂತ್ರಿಸದಿದ್ದರೆ ಮುನಿಸಿಕೊಳ್ಳುತ್ತೇವೆ. ಕೆಲವರಿಗೆ ಕುಟುಂಬ ಸಂಬಂಧ ನೆನಪಾಗುವುದು ಬರೀ ಮದುವೆ ಊಟ ಮುಕ್ಕುವಾಗ ಮಾತ್ರ. ಅದರ ಹಿಂದೆ-ಮುಂದೆ ಕುಟುಂಬದ ಯಾವುದೇ ವಿಚಾರದಲ್ಲೂ ಭಾಗಿಯಾಗಲು ಅವರಿಗೆ ಪುರುಸೊತ್ತಿಲ್ಲ.
ಸೌಹಾರ್ದ ಭೇಟಿಯೂ ಇಲ್ಲ. ರೋಗ ಅಥವಾ ಸಮಸ್ಯೆಗಳಲ್ಲಿ ಸಿಲುಕಿದರೆ ಅತ್ತ ಇಣುಕಿ ನೋಡುವುದಿಲ್ಲ. ಬರೀ ಮದುವೆ ಊಟದಲ್ಲಿ ಸಂಬಂಧವನ್ನು ಜೋಡಿಸುತ್ತಾರೆ. ಎಲ್ಲರನ್ನೂ ಆಮಂತ್ರಿಸಿ ಭೂರಿಭೋಜನ ಕೊಟ್ಟರೇನು, ಮೆಹಂದಿ ಮಾಡಿದರೇನು, ತಾಳ ಮಾಡಿದರೇನು, ಸ್ವಲ್ಪ ಸಾಲ ಮಾಡಿದರೇನು, ಲೈಫಲ್ಲಿ ಮದುವೆ ಒಮ್ಮೆ ಮಾತ್ರವಲ್ಲವೇ… ಎಂದೆಲ್ಲಾ ತರ್ಕಗಳನ್ನು ಹರಡುತ್ತಾರೆ. ಮದುವೆ ಆಮಂತ್ರಣ ನೀಡದಿದ್ದರೆ ಸಿಟ್ಟಾಗುತ್ತಾರೆ. ಪ್ರಾಯಶಃ ಮರಣ ಕೂಡಾ ಒಮ್ಮೆ ಮಾತ್ರ ಎಂಬುದನ್ನು ಮರೆತಿರಬೇಕು… ಮುಂದುವರಿಯುವುದು……
✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.