(www.vknews.in) : ವಯ್ನಾಡಿನಲ್ಲಿ ಭೂಕುಸಿತ ನಡೆದ ಜುಲೈ 30 ರ ಬೆಳಗ್ಗೆ 11 ಗಂಟೆಗೆ, ತಮಿಳುನಾಡಿನ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಎ ಸಬೀನಾರಿಗೆ ಅವರ ಸಹೋದ್ಯೋಗಿಗಳಿಂದ ಕೇರಳ ಸರ್ಕಾರಕ್ಕೆ ನರ್ಸ್ ಗಳ ಅಗತ್ಯವಿದೆ ಎಂಬ ಕರೆ ಬಂತು. ಸಬೀನಾ ತಮ್ಮ ಬ್ಯಾಗುಗಳನ್ನು ಹಿಡಿದುಕೊಂಡು, ಜಡಿ ಮಳೆ, ಬಿರುಸು ಗಾಳಿ ಮತ್ತು ಮೊಣ ಕಾಲೆತ್ತರದ ಕೆಸರಲ್ಲಿ 70 ಕಿಮಿ ಪ್ರಯಾಣ ಮಾಡಿ ವಯ್ನಾಡ್ ಸೇರಿದರು. ದಾರಿಯುದ್ದಕ್ಕೂ ಎಂತಹವರ ಎದೆಯನ್ನೂ ಕುಂದಿಸುವಂತೆ ಮನುಷ್ಯರು ಪ್ರಾಣಿಗಳ ಹೆಣಗಳು, ಜರಿದು ಹೋದ ಮನೆಗಳ ಸಾಲು ಬಿದ್ದಿದ್ದವು.
ವಯ್ನಾಡಿನ ಮುಂಡಕ್ಕೈ ಚೂರಾಲ್ಮಳ ನದಿಯ ದ್ವೀಪವೊಂದರಲ್ಲಿ ಸಿಕ್ಕಿ ಹಾಕಿಕೊಂಡ ಜನರಿಗೆ ಸಹಾಯ ತಲುಪಿಸಬೇಕಿತ್ತು. ನದಿಗೆ ಕಟ್ಟಿದ್ದ ಸೇತುವೆ ಮುರಿದು ನೀರು ಪಾಲಾಗಿತ್ತು. ಹುಚ್ಚೆದ್ದು ಹರಿಯುವ ನೀರಲ್ಲಿ ಯಾರೂ ಈಜಿ ಆಚೆ ದಡ ಸೇರುವಂತಿಲ್ಲ. ಎನ್ ಡಿ ಆರ್ ಎಫ್ ತಂಡ ನದಿಗೆ ಅಡ್ಡವಾಗಿ ಒಂದು ಝಿಪ್ ಲೈನ್ ಸಂಪರ್ಕವನ್ನು ಕಟ್ಟಿತ್ತು. ಅದಕ್ಕೆ ನೇತು ಬಿದ್ದು ಆಚೆ ಹೋಗಬೇಕಿತ್ತು. ಅಲ್ಲಿ ಅದಾಗಲೇ ನೂರಾರು ನರ್ಸ್ ಗಳು ಜಮಾಯಿಸಿ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿದ್ದರು. ಎನ್ ಡಿ ಆರ್ ಎಫ್ ತಂಡ ಪುರುಷ ನರ್ಸ್ ಗಳನ್ನು ಮಾತ್ರ ಆಚೆಗೆ ಕಳಿಸಲು ಯೋಜನೆ ಹಾಕಿತ್ತು. ಆದರೆ, ನದಿ ನೀರಿನ ರಭಸ ನೋಡಿ ಜೀವ ಭಯದಿಂದ ಒಬ್ಬನೇ ಒಬ್ಬ ಪುರುಷ ನರ್ಸ್ ಮುಂದೆ ಬರಲಿಲ್ಲ. ಮಹಿಳಾ ನರ್ಸ್ ಗಳು ಹೋಗುವ ಮಾತೇ ಇರಲಿಲ್ಲ. ಆಗ 40 ವರ್ಷ ಪ್ರಾಯದ ಸಬೀನಾ ತಾನು ಆಚೆ ಹೋಗಲು ತಯಾರಿದ್ದೇನೆ ಅಂದಾಗ ಎನ್ ಡಿ ಆರ್ ಎಫ್ ತಂಡ ಬೇರೆ ದಾರಿಯಿಲ್ಲದೆ ಅದಕ್ಕೊಪ್ಪಬೇಕಾಯಿತು.
ಸಬೀನಾ ರೈನ್ ಕೋಟ್ ಧರಿಸಿ, ಝಿಪ್ ಲೈನಿಗೆ ತಮ್ಮನ್ನು ಸಿಕ್ಕಿಸಿಕೊಂಡರು. ದ್ವೀಪ ತಲುಪಲು ಎರಡು ನಿಮಿಷಗಳು ಬೇಕು. ಅವರ ಕಾಲಡಿಯೇ ಹೊಳೆ ನೀರಲ್ಲಿ ಮನುಷ್ಯರ ನಿರ್ಜೀವ ದೇಹಗಳು ತೇಲಿ ಹೋಗುತ್ತಿದ್ದವು. ದ್ವೀಪ ತಲುಪಿ, ಅಲ್ಲಿ ಅವರು ಜ್ವರದಿಂದ ಬಳಲುತಿದ್ದವರು, ಗಾಯಗೊಂಡವರು, ವಿಷದ ಹಾವುಗಳ ಕಡಿತಕ್ಕೊಳಗಾದವರು ಮೊದಲಾದ ಸಂತೃಸ್ತರ ಆರೈಕೆ ಮಾಡಿದರು. ಬೆಳಗ್ಗೆ ಹನ್ನೊಂದು ಗಂಟೆಗೆ ಆಚೆ ಹೋದ ಸಬೀನಾ ಸಂಜೆ ಐದಕ್ಕೆ ವಾಪಾಸಾಗುತ್ತಿದ್ದರು. ಹೀಗೆ ದಿನಕ್ಕೆರಡು ಬಾರಿ, ಐದು ದಿನಗಳ ಕಾಲ ಅವರು ಝಿಪ್ ಲೈನಲ್ಲಿ ಹೋಗಿ ಬಂದು, ಸುಮಾರು 35 ಜೀವಗಳನ್ನು ಉಳಿಸಿದರು. ಆಗಸ್ಟ್ 15 ರಂದು ತಮಿಳುನಾಡಿನ ಸರ್ಕಾರ ಸಬೀನಾರಿಗೆ ‘ಕಲ್ಪನಾ ಚಾವ್ಲಾ ಪ್ರಶಸ್ತಿ’ ಕೊಟ್ಟು ಕೃತಜ್ಞತೆ ಹೇಳಿತು. ಸಬೀನಾ ಈಗ ತಮ್ಮ ಮಗಳಿಗೆ ಮಾತ್ರವಲ್ಲ ಆನೇಕರಿಗೆ ಹೀರೋ ಆಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.