(www.vknews.in) ಮುಸ್ಲಿಮರು ಯಾಕೆ ಹಂದಿ ಮಾಂಸ ತಿನ್ನುವುದಿಲ್ಲ? ಮುಷ್ತಾಕ್ ಹೆನ್ನಾಬೈಲ್
ಹಂದಿ ಮೂಲತಃ ಮನುಷ್ಯನೂ ಸೇರಿದಂತೆ ಇತರ ಜೀವಿಗಳ ಮಲವನ್ನೇ ಪ್ರಧಾನ ಆಹಾರವಾಗಿಸಿಕೊಂಡಿರುವ ಒಂದು ಪ್ರಾಣಿ. ಮನುಷ್ಯನ ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಿಸುವಂತೆ ಮಾಡುವ ಮಾಂಸವೂ ಕೂಡ ಹಂದಿಯ ಮಾಂಸವೇ ಆಗಿದೆ. ಪ್ರಾಣಿ ವರ್ಗಗಳಲ್ಲೇ, ಹಂದಿ ಮಾಂಸವು ಮನುಷ್ಯನ ಆರೋಗ್ಯಕ್ಕೆ ಅತೀ ಮಾರಕವಾದುದು. ಆರೋಗ್ಯ ವಿಜ್ಞಾನದಲ್ಲಿ ಪ್ರಗತಿ ಸಾಧಿಸಿದ ಹೊರತಾಗಿಯೂ ಅಮೆರಿಕ, ಯುರೋಪ್, ರಷ್ಯಾ, ಆಸ್ಟ್ರೇಲಿಯ ಮುಂತಾದ ದೇಶ -ಖಂಡಗಳಲ್ಲಿ ಹಂದಿಮಾಂಸದ ಸೇವನೆ ವ್ಯಾಪಕವಾಗಿರುವುದರಿಂದ ಇಲ್ಲಿ ಹೃದ್ರೋಗ, ಕ್ಯಾನ್ಸರ್ ಮತ್ತು ಲಿವರ್ ಸಂಬಂಧಿತ ರೋಗಗಳು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅತಿಹೆಚ್ಚು ಕಂಡುಬರುತ್ತದೆ. ಇಂದಿಗೂ ಜಗತ್ತಿನ ಟಾಪ್ ಟೆನ್ ರೋಗಗ್ರಸ್ತ ದೇಶಗಳ ಯಾದಿಯಲ್ಲಿ ಹಂದಿಮಾಂಸ ವ್ಯಾಪಕವಾಗಿ ಸೇವಿಸುವ ಮುಂದುವರಿದ ರಾಷ್ಟ್ರಗಳೇ ಕಾಣಿಸುತ್ತವೆ..
ಮುಸ್ಲಿಮರ ಪವಿತ್ರ ಕುರ್ ಆನಿನ 2 ನೇ ಅಧ್ಯಾಯ “ಅಲ್ ಬಕರ:”ದ 173 ನೇ ಸೂಕ್ತದಲ್ಲಿ” ಶವ, ರಕ್ತ ಹಾಗೂ ಹಂದಿಯ ಮಾಂಸವನ್ನು ಮತ್ತು ಅಲ್ಲಾಹನ ಹೊರತು ಇತರರ ಹೆಸರಿನಲ್ಲಿ ಕಡಿಯಲಾದವುಗಳನ್ನು ನಿಮ್ಮ ಪಾಲಿಗೆ ನಿಷೇಧಿಸಲಾಗಿದೆ” ಎಂದು ಹಂದಿ ಮಾಂಸವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ ಸೂಕ್ತವಿದೆ. ಯಹೂದಿಗಳಲ್ಲಿ ಮತ್ತು ಮುಸ್ಲಿಮರಲ್ಲಿ ಇಂದಿಗೂ ಹಂದಿಮಾಂಸ ಸೇವನೆ ಬಹುತೇಕ ಪೂರ್ಣಪ್ರಮಾಣದಲ್ಲಿ ಇಲ್ಲ. ಆದರೆ ಗ್ರಾಂಥಿಕ ಉಲ್ಲೇಖಗಳ ಹೊರತಾಗಿಯೂ ಕ್ರೈಸ್ತರಲ್ಲಿ ಮಾತ್ರ ಹಂದಿಮಾಂಸ ಸೇವನೆ ವ್ಯಾಪಕವಾಗಿದೆ..
ವೈಜ್ಞಾನಿಕವಾಗಿಯೂ ಕೂಡ ಹಂದಿ ಮಾಂಸವು ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಮನುಷ್ಯ ಮಾನಸಿಕತೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಹಲವು ಪಾಶ್ಚಾತ್ಯ ಸಂಶೋಧನೆಗಳಿಂದ ಧೃಡಪಟ್ಟಿದೆ. ಪ್ರಾಣಿಗಳಲ್ಲೇ, ಹಂದಿಯು ಗುಂಪಲ್ಲಿ ದ್ರೋಹಗೈಯುವ ಮತ್ತು ಲೈಂಗಿಕವಾಗಿ ಸ್ವಲ್ಪಮಟ್ಟಿಗೆ ಇತರ ಪ್ರಾಣಿಗಳಿಗಿಂತ ಹೆಚ್ಚು ಪೈಶಾಚಿಕ ಪ್ರವೃತ್ತಿ ಇರುವ ಪ್ರಾಣಿಯಾಗಿದೆ ಎಂಬುದು ಕೆಲವು ಪ್ರಾಣಿತಜ್ಞರ ಅಭಿಪ್ರಾಯ. ಗ್ರಾಂಥಿಕವಾಗಿ ಇವುಗಳ ಕುರಿತ ಸ್ಪಷ್ಟ ಉಲ್ಲೇಖಗಳಿಲ್ಲದಿದ್ದರೂ ಪ್ರಾಣಿ ತಜ್ಞರ ಈ ವಾದ ದೇವನ ಉದ್ದೇಶವನ್ನು ಹೆಚ್ಚುವರಿಯಾಗಿ ಸಮರ್ಥಿಸುತ್ತದೆ..
ಇವುಗಳೆಲ್ಲದರ ಜೊತೆಗೆ, ಹಂದಿ ಮಾಂಸ ನಿಷೇಧಕ್ಕೆ ಮತ್ತೊಂದು ಪ್ರಮುಖ ಕಾರಣವಿದೆ. ಇಸ್ಲಾಮಿಕ್ ಆಶಯಗಳ ಪ್ರಕಾರ, ಪ್ರತಿಯೊಂದು ಪ್ರಾಣಿಯನ್ನು ಆಹಾರಕ್ಕಾಗಿ ವಧಿಸುವಾಗ, ಪ್ರಾಣಿಯ ಯಾತನೆಯನ್ನು ಕಡಿಮೆ ಮಾಡುವ ಉದ್ದೇಶ ಮತ್ತು ದೇಹದಿಂದ ರಕ್ತವು ಸರಾಗವಾಗಿ ಹೊರಚೆಲ್ಲಿ ಮಾಂಸವು ಸೇವಿಸುವವನ ದೇಹಾರೋಗ್ಯಕ್ಕೆ ಸುರಕ್ಷಿತವಾಗಲಿ ಎನ್ನುವ ಕಾರಣಕ್ಕೆ “ಹಲಾಲ್” ಮಾಡುವ ನಿಯಮವಿದೆ. ಆದರೆ ಇತರ ಪ್ರಾಣಿಗಳನ್ನು ಹೋಲಿಸಿದರೆ ಹಲಾಲ್ ಮಾಡಬಹುದಾದ ಹಂದಿಯ ಕತ್ತಿನ ಭಾಗ ಬಹಳ ಗಡುಸಾಗಿರುವುದರಿಂದ,ಕತ್ತಿನ ಮೂಲಕ ಹಲಾಲ್ ಮಾಡಿದರೆ ಹಂದಿಯ ಪ್ರಾಣ ಹೋಗಲು ಇತರ ಪ್ರಾಣಿಗಳಿಗಿಂತ ಬಹಳ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು, ಆಹಾರಕ್ಕಾಗಿ ವಧಿಸುವ ಪ್ರಾಣಿಯ ಯಾತನೆಯ ಸಮಯ ಸಂಕ್ಷಿಪ್ತವಾಗಿರಬೇಕು ಎಂಬ ಹಲಾಲ್ ನಿಯಮಕ್ಕೆ ವಿರುದ್ಧವಾದುದು. ಈ ಕಾರಣವೂ ಕೂಡ ಹಂದಿಯನ್ನು ಕೊಲ್ಲುವುದು ಮತ್ತು ಅದರ ಮಾಂಸವನ್ನು ಸೇವಿಸುವ ನಿರ್ಬಂಧಕ್ಕೆ ಇರುವ ಕಾರಣವಾಗಿದೆ..
ಆದರೆ ಬಹುತೇಕ ಮುಸ್ಲಿಮರು ತಿಳಿದಿರುವಂತೆ, ಆಹಾರ ಸೇವಿಸುವಾಗ ಮತ್ತು ಮಸೀದಿಗಳಲ್ಲಿ ಹಂದಿಯ ಹೆಸರನ್ನು ಉಲ್ಲೇಖಿಸುವುದು ಧರ್ಮವಿರೋಧಿ ಎಂಬ ಭಾವನೆ ತಪ್ಪು ಗ್ರಹಿಕೆಯಾಗಿದೆ. ಹಂದಿಯು 18 ಲಕ್ಷ ಜೀವರಾಶಿಗಳಲ್ಲಿ ಬರುವ ದೇವನ ಸೃಷ್ಟಿಯಾಗಿದೆ. ಪವಿತ್ರ ಕುರ್ ಆನಿನಲ್ಲೇ ಹಂದಿಯ ಉಲ್ಲೇಖವಿದೆ. ಕುರ್ ಆನ್ ಜಗತ್ತಿನಲ್ಲಿ ಅತಿಹೆಚ್ಚು ಓದಲ್ಪಡುವ ಗ್ರಂಥ. ಜಗತ್ತಿನ ಎಲ್ಲ ಮಸೀದಿಗಳಲ್ಲೂ ಕುರ್ ಆನ್ ಪಾರಾಯಣ ಮಾಡುತ್ತಾರೆ. ಹೀಗೆ ಪಠಿಸುವಾಗ ಹಂದಿಯ ಹೆಸರನ್ನು ಹೇಳದೆ ಇರಲಾಗದು. ಇದು ಕೆಲವು ಅಜ್ಞಾನಿ ಕರ್ಮಠರು ಬೆಳೆಸಿಕೊಂಡ ಮಾನಸಿಕತೆಯೇ ಹೊರತು ಧರ್ಮ ಇದನ್ನು ಹೇಳಿಲ್ಲ..
ಇಷ್ಟಾಗಿಯೂ ಕೂಡ, ಬಹಳ ರೋಚಕವಾದ ವಿಚಾರವೇನೆಂದರೆ, ಒಂದೊಮ್ಮೆ ಯಾವುದೇ ಮುಸ್ಲಿಂ, ಯಾವುದೇ ಆಹಾರ ಸಿಗದೆ ನಿರ್ಜನ ಪ್ರದೇಶದಲ್ಲಿ ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಾಣ ಬಿಡುವ ಸಂದರ್ಭ ಬಂದಾಗ, ತನ್ನ ಪ್ರಾಣ ಉಳಿಸಿಕೊಳ್ಳಲು ಸತ್ತ ಹಂದಿಯ ಮಾಂಸವನ್ನು ತಿನ್ನಲು ಗ್ರಂಥ ಅನುಮತಿ ನೀಡುತ್ತದೆ. ಶವ, ರಕ್ತ ಮತ್ತು ಹಂದಿಯ ಮಾಂಸವನ್ನು ತಿನ್ನಬಾರದು ಎಂದು ನಿಷೇಧಿಸಿದ ಈ ಮೇಲೆ ಉಲ್ಲೇಖಿಸಿದ ಕುರ್ ಆನಿನ 2 ನೇ ಅಧ್ಯಾಯ “ಅಲ್ ಬಕರ:” ದಲ್ಲಿನ ಅದೇ 173 ನೇ ಸೂಕ್ತದ ಮುಂದುವರಿದ ಭಾಗದಲ್ಲಿ” ಇನ್ನು, ಒಬ್ಬ ವ್ಯಕ್ತಿ ತೀರಾ ಅಸಹಾಯಕ ಸ್ಥಿತಿಯಲ್ಲಿ, ವಿದ್ರೋಹದ ಇರಾದೆಯಿಲ್ಲದೆ, ಹಾಗೂ ಮಿತಿಮೀರದೆ( ಅದರಿಂದ ಏನಾದರೂ ತಿಂದು ಬಿಟ್ಟರೆ ) ಅವನ ಮೇಲೆ ಪಾಪವೇನಿಲ್ಲ. ಅಲ್ಲಾಹನು ಖಂಡಿತ ಕ್ಷಮಿಸುವವನು ಮತ್ತು ಕರುಣಾಳುವಾಗಿದ್ದಾನೆ” ಎಂದೂ ಇದೆ. ಇದಿಷ್ಟು ತಿಳಿದರೆ, ಹಂದಿ ಮಾಂಸ, ಅದರ ಸೇವನೆ, ಸಮಸ್ಯೆ, ಸಿದ್ಧಾಂತ, ಎಲ್ಲವೂ ಸುಲಭದಲ್ಲಿ ಮನವರಿಕೆಯಾಗುತ್ತದೆ…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.