(www.vknews.in) ಧಾರವಾಡ: ಜೈನ್ ಧರ್ಮದ ಅತೀ ಮಹತ್ವದ ಆಚರಣೆಯಾಗಿರುವ, ಜೊತೆಗೆ ಅಲೌಕಿಕ ಜ್ಞಾನ ಸಾಧನೆಯ ಶಾಶ್ವತ ಪರ್ವವಾಗಿರುವ ದಶಲಕ್ಷಣ ಮಹಾಪರ್ವವು ಸಮಸ್ತ ಶ್ರಾವಕ-ಶ್ರಾವಕಿಯರಿಗೆ ಮೋಕ್ಷ ಮಾರ್ಗದ ಬೆಳಗು ತುಂಬುವಲ್ಲಿ ಸಹಾಯಕವಾಗಿದೆ ಎಂದು ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಜಿನಾಲಯದಲ್ಲಿ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ ಹಾಗೂ ತ್ರಿಶಲಾಮಾತಾ ಮಹಿಳಾ ಮಂಡಳಗಳು ಜಂಟಿಯಾಗಿ ಹಮ್ಮಿಕೊಂಡಿರುವ 10 ದಿನಗಳ ದಶಲಕ್ಷಣ ಮಹಾಪರ್ವವನ್ನು ಗುರುವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಕಲ್ಯಾಣದ ಆಶಯಗಳಿಗೆ ಮಾರಕವಾದ ದ್ವಂದ್ವ, ವೈರುಧ್ಯ, ಕ್ರೋಧ, ಸೇಡು ಮತ್ತಿತರ ಭಾವಗಳಿಂದಾಗಿ ಮನುಷ್ಯ ತನ್ನಂತರಂಗದಲ್ಲಿ ವಿಭಿನ್ನ ನೆಲೆಗಳಲ್ಲಿ ಹಿಂಸೆಯನ್ನು ಅನುಭವಿಸುತ್ತಾನೆ. ಇದಕ್ಕೆಲ್ಲ ವ್ಯಷ್ಟಿಯ ಅತಿರೇಕವೇ ಮೂಲ ಕಾರಣವಾದದ್ದು. ಈ ವ್ಯಷ್ಟಿಯ ಅತಿರೇಕವನ್ನು ಅಳಿದು ಸಮಷ್ಟಿಯ ವ್ಯಾಪಕ ಬಯಕೆಯನ್ನು ಹೊಂದುವಲ್ಲಿ ದಶಲಕ್ಷಣ ಮಹಾಪರ್ವದ 10 ದಿನಗಳ ಮೌಲಿಕ ಚಿಂತನೆ ಮಾರ್ಗದರ್ಶಿ ಆಗುತ್ತದೆ ಎಂದರು.
‘ನೀನು ಬದುಕು; ಇತರರನ್ನೂ ಬದುಕಲು ಬಿಡು’ ಎಂಬ ಮಹಾವೀರರ ತಪೋವಾಣಿಯಂತೆ ಸಾತ್ವಿಕ ಸತ್ಯ-ಶುದ್ಧ ಸಂಸ್ಕಾರಪೂರ್ಣ ವ್ಯಕ್ತಿತ್ವ, ಮನಃಶಾಂತಿ, ಸ್ನೇಹ ಸೌಹಾರ್ದತೆಯ ಸಾಮಾಜಿಕ ಹೊಂದಾಣಿಕೆ ಅರಿತು ಮನುಕುಲದ ಜೀವನ ವಿಧಾನ ಯಶಸ್ಸಿನ ಪಥದಲ್ಲಿ ಸಾಗಲು ದಶಲಕ್ಷಣ ಮಹಾಪರ್ವದ ಆಚರಣೆ ಬೆಳಕು ಚೆಲ್ಲುತ್ತದೆ ಎಂದೂ ಡಾ.ಯರಗಂಬಳಿಮಠ ಹೇಳಿದರು.
ಮೊದಲ ದಿನದ ‘ಉತ್ತಮ ಕ್ಷಮಾ ಧರ್ಮ’ ಕುರಿತು ಮಾತನಾಡಿದ ಅಧ್ಯಾಪಕಿ ಸುರೇಖಾ ಭಾವಿ ಲೋಕೂರ, ಯಾರು ಕ್ರೋಧದ ಉತ್ತರವನ್ನು ಕ್ರೋಧದಿಂದಲೇ ಕೊಡುತ್ತಾರೋ ಅವರು ಸ್ವತಃ ಶಾಂತಿ-ಸಮಾಧಾನಗಳಿಂದ ವಂಚಿತರಾಗುತ್ತಾರೆ. ಕ್ಷಮೆ ಮಾಡುವುದು ಆತ್ಮನ ಮೂಲ ಸ್ವಭಾವವಾಗಿದೆ. ಕ್ರೋಧವನ್ನು ಕಳೆದುಕೊಳ್ಳುವುದೇ ಕ್ಷಮಾ ಧರ್ಮವಾಗಿದೆ ಎಂದರು.
ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ಗ್ರಾ.ಪಂ. ಸದಸ್ಯರುಗಳಾದ ಮಹಾವೀರ ಧಾರವಾಡ ಮತ್ತು ಪದ್ಮಾವತಿ ದೇಸಾಯಿ, ಶ್ರಾವಕಿಯರಾದ ಜಯಮ್ಮ ಕಿತ್ತೂರ, ವಿಮಲಾ ನವಲೂರ, ಜಯಶ್ರೀ ದೇಸಾಯಿ, ಶಿಲ್ಪಾ ದೇಸಾಯಿ, ಸರಸ್ವತಿ ಧಾರವಾಡ, ಸುಜಾತಾ ದೇಸಾಯಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ ಅಧ್ಯಕ್ಷ ಟಿ.ಎಂ. ದೇಸಾಯಿ ಇದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಸ್ವಾಗತಿಸಿದರು. ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ ವಂದಿಸಿದರು. ಮಹಾವೀರ ಅಣ್ಣಿಗೇರಿ ನಿರೂಪಿಸಿದರು.
ವಿಶೇಷ ಪ್ರಾರ್ಥನೆ : ಧರೆಪ್ಪ ಧಾರವಾಡ, ಶ್ರೇಯಾಂಶ ದೇಸಾಯಿ, ತವನರಾಜ ದೇಸಾಯಿ, ಈಶ್ವರ ಗಡೇಕಾರ, ಶಾಂತಿನಾಥ ಲೋಕೂರ, ಪದ್ಮರಾಜ ಪತ್ರಾವಳಿ, ನೇಮಚಂದ್ರ ನವಲೂರ, ಮಹಾವೀರ ದೇಸಾಯಿ, ಲಕ್ಷ್ಮಿಸೇನ ನವಲೂರ, ಪಮ್ಮಣ್ಣ ಧಾರವಾಡ, ಚಂದು ನವಲೂರ ಹಾಗೂ ಶ್ರಾವಕಿಯರು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.