ಬೆಳ್ತಂಗಡಿ (www.vknews.in) : ರಾಜ್ಯದ ಗಮನ ಸೆಳೆಯಲಿರುವ ಬೆಳ್ತಂಗಡಿ ವಿಧಾನಸಭಾ ಚುನಾವಣೆಗೆ (Assembly Election) ತಿಂಗಳುಗಳು ಬಾಕಿ ಇದೆ. ಈಗಾಗಲೇ ಟಿಕೆಟ್ ಫೈಟ್ ಜೋರಾಗಿ ನಡೆಯುತ್ತಿದೆ. ಮೂರು ರಾಷ್ಟ್ರೀಯ ಪಕ್ಷಗಳಲ್ಲಿ ಸ್ಪರ್ಧೆಯ ಆಕಾಂಕ್ಷೆಯನ್ನು ಹೊಂದಿರುವವರು ತಮ್ಮದೇ ಆದ ರೀತಿಯಲ್ಲಿ ಚುನಾವಣೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ಒಟ್ಟು 3 ಅರ್ಜಿಗಳು ಸಲ್ಲಿಕೆಯಾಗಿದ್ದು ಇಬ್ಬರು ಮಾಜಿ ಶಾಸಕರಾದ ವಸಂತ ಬಂಗೇರ, ಗಂಗಾಧರ ಗೌಡ ಹಾಗೂ ಯುವ ಮುಖ ರಕ್ಷಿತ್ ಶಿವರಾಂ ಆಕಾಂಕ್ಷಿಯಾಗಿ ಉಳಿದಿದ್ದಾರೆ.
ಕಾಂಗ್ರೆಸ್ನಲ್ಲಿ ಮೂರು ಬಣಗಳಿವೆ. ಕ್ಷೇತ್ರದಾದ್ಯಂತ ಬೇರುಬಿಟ್ಟಿರುವ ಮಾಜಿ ಶಾಸಕ ವಸಂತ ಬಂಗೇರರದು ಒಂದು ಗುಂಪಾದರೆ, ಮತ್ತೊಂದು ತಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ರದ್ದು. ಮೂರನೇ ಬಣ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್ ಅವರ ಸಹೋದರನ ಮಗ ಬಿ.ಕೆ.ಶಿವರಾಮ್ ಪುತ್ರ ರಕ್ಷಿತ್ ಶಿವರಾಮ್ರದು. ಕಾಂಗ್ರೆಸಿಗರು ಬಣ ಬಡಿದಾಟ ಬಿಟ್ಟು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಶಾಸಕರಾಗುವ ಆಸೆಯಲ್ಲಿ ರಾಜಕಾರಣ ಮಾಡುತ್ತಿರುವ ರಕ್ಷಿತ್ಗೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಬಣದ ಬೆಂಬಲವಿದೆಯೆನ್ನಲಾಗುತ್ತಿದೆ.
2018ರ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಗೆದ್ದಿದ್ದ ಹರೀಶ್ ಪೂಂಜಾ ಅವರು ಈ ಬಾರಿಯ ಬಿಜೆಪಿ ಪಕ್ಷದ ಟಿಕೆಟ್ ಪಕ್ಕ, ಆದರೆ ಹೊಸ ಮುಖ ಉದ್ಯಮಿ ಶಶಿಧರ್ ಶೆಟ್ಟಿ ಶಕ್ತಿನಗರ ಅವರ ಹೆಸರು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಆದ್ದರಿಂದ ಪಕ್ಷದ ಟಿಕೆಟ್ ಪಡೆಯಲು ದೆಹಲಿ ಹೈಕಮಾಂಡ್ ಮುಖಂಡರ ಮನೆಗಳ ಬಾಗಿಲು ತಟ್ಟಿದ್ದು ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರೂ ಪಕ್ಷದಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಲ ಪ್ರದರ್ಶಿಸಿದ್ದ ಎಸ್ಡಿಪಿಐ ಅಭ್ಯರ್ಥಿಯಾಗಿ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಅಥವಾ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಈ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಲಿದೆ ಎಂದು ಈಗಾಗಲೇ ಪಕ್ಷದ ನಾಯಕರ ನಿಲುವಾಗಿದೆ.
ಹಿಂದಿನ ಚುನಾವಣೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಮುನ್ನೆಲೆಗೆ ಬಂದಿದ್ದ ಜೆಡಿಎಸ್ ಈ ಬಾರಿ ಸ್ಪರ್ಧಿಸುತ್ತದೆಯೋ ಇಲ್ಲವೋ ಎಂಬುದು ಇನ್ನೂ ನಿರ್ಧಾರ ಆಗಲಿಲ್ಲ. ಹಿಂದೆ ಒಂದೆರಡು ಬಾರಿ ಸ್ಪರ್ಧಿಸಿದ್ದ ಸಿಪಿಎಂ ಈ ಬಾರಿ ಕಣದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದೆ.
ಬಿಜೆಪಿಗೆ ಪ್ರತಿಷ್ಠೆಯ ಕಣ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಪೂಂಜಾ ಅವರು 2018ರ ಚುನಾವಣೆಯಲ್ಲಿ ರಾಜಕೀಯ ದಿಗ್ಗಜ ವಸಂತ ಬಂಗೇರ ವಿರುದ್ಧ 22974 ವೋಟ್ ನಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. ಹೀಗಾಗಿ ಬೆಳ್ತಂಗಡಿ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯೆಂದೇ ಪರಿಗಣಿತವಾಗಿದೆ. ಆದರೆ ಈ ಬಾರಿ ಬಿಜೆಪಿಯಲ್ಲಿ ಹೊಸ ಮುಖ ಪರಿಚಯ ಮಾಡಲು ನಾಯಕರು ತೀರ್ಮಾನಿಸಿದ್ದಾರೆ ಎಂಬ ವರದಿ ಇದೆ. ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಒಂದೆಡೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ಜನರಿಗೆ ತೋರಿಸುತ್ತಿದ್ದರೆ, ಇತ್ತ ಆಡಳಿತ ಪಕ್ಷ ಕೊನೆಯ ಪ್ರಯತ್ನವೆಂಬಂತೆ ಅಭಿವೃದ್ಧಿ ಕಾರ್ಯಕ್ರಮಗಳತ್ತ ಚಿತ್ತ ನೆಟ್ಟಿದೆ. ಈ ಪೈಪೋಟಿಯಲ್ಲಿ ಯಾರು ಯಶಸ್ಸು ಪಡೆಯುತ್ತಾರೆಂಬುವುದೇ ಕುತೂಹಲದ ಪ್ರಶ್ನೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಮತದಾರರು 226000 ಮಂದಿ ಇದ್ದು. ಇದರಲ್ಲಿ ಬಿಲ್ಲವ 60000, ಒಕ್ಕಲಿಗ 60000, ಮುಸ್ಲಿಂ 48000, ಕ್ರಿಶ್ಚಿಯನ್ 18000, ಎಸ್ಸಿ/ಎಸ್ಟಿ 24000, ವಿಶ್ವಕರ್ಮ 4000, ಕುಲಾಲ್ 8000 ಬ್ರಾಹ್ಮಣ 4000 ಜಾತಿಯ ಮತಗಳು ಇದೆ.
ಕ್ಷೇತ್ರದಲ್ಲಿ ತಮ್ಮ ಕಾರ್ಯ ಸಾಧನೆಗಳ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಲು ಮುಂದಾಗುತ್ತಿದ್ದಾರೆ. ಇತ್ತ ಮುಖಂಡರು ಆಕಾಂಕ್ಷಿಗಳಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟು ಕಳಿಸುವ ಕೆಲಸ ಮಾಡುತ್ತಿದ್ದು, ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.