ಮಂಜೇಶ್ವರಂ (ವಿಶ್ವ ಕನ್ನಡಿಗ ನ್ಯೂಸ್) : ಅಬೂಬಕ್ಕರ್ ಸಿದ್ದೀಕ್ ಎಂಬವರನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೈವಳಿಗೆ ಶಿಹಾಬ್ (33) ಎಂಬಾತನನ್ನು ಮಂಜೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರಂ ಠಾಣಾಧಿಕಾರಿ ಎ. ಸಂತೋಷ್ ಕುಮಾರ್ ನೀಡಿದ ಸುಳಿವಿನ ಮೇರೆಗೆ ಬೇಕಲದಲ್ಲಿ ಶಿಹಾಬ್ ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಶಿಹಾಬ್ ಏಳನೇ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಕೊಲೆಯಲ್ಲಿ ನೇರವಾಗಿ ಭಾಗವಹಿಸಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಹಂತಕರಿಗೆ ಸಹಾಯ ಮಾಡಿದ ಎಂಟು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಹಂತಕರನ್ನು ಬಚ್ಚಿಟ್ಟು ಆರೋಪಿಗಳಿಗೆ ಪರಾರಿಯಾಗಲು ವಾಹನ ವ್ಯವಸ್ಥೆ ಮಾಡಿ ಬರಲು ಸಹಕರಿಸಿದವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 16 ಆರೋಪಿಗಳಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಆರೋಪಿಗಳು ಮನೆಗೆ ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಉಪ್ಪಳ ಬಾಯಾರ್ ನ ಅಫ್ಸಾನ್ (26) ಎಂಬಾತನನ್ನು ಮೂರು ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಏತನ್ಮಧ್ಯೆ, ಬಂಧನದಲ್ಲಿರುವ ಐವರು ಆರೋಪಿಗಳಿಗೆ ಹೈಕೋರ್ಟ್ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ.
ಮಂಜೇಶ್ವರಂ ಉದಯರ್ ನ ರಿಯಾಝ್ ಹಸನ್, ಉಪ್ಪಳ ಭಗವತಿ ದೇವಸ್ಥಾನ ರಸ್ತೆಯ ಅಬ್ದುಲ್ ರಝಾಕ್, ಕುಂಚತ್ತೂರಿನ ಅಬೂಬಕರ್ ಸಿದ್ದೀಕ್, ಅಬ್ದುಲ್ ಅಝೀಝ್ ಮತ್ತು ಉದಯರ ಅಬ್ದುಲ್ ರಹೀಮ್ ಜಾಮೀನಿನ ಮೇಲೆ ಹೊರಗಿದ್ದಾರೆ. ಜೂನ್ 26, 2022 ರಂದು ರಾತ್ರಿ, ಅಬೂಬಕರ್ ಸಿದ್ದೀಕ್ ಅವರನ್ನು ಅಪಹರಿಸಿ ಪೈವಳಿಗೆ ಎರಡು ಅಂತಸ್ತಿನ ಮನೆಯಲ್ಲಿ ಬಂಧಿಸಿ ನಂತರ ಬೊಳಮಕಲ ಬೆಟ್ಟಕ್ಕೆ ಕರೆದೊಯ್ದು ಬರ್ಬರವಾಗಿ ಹೊಡೆದು ಕೊಂದಿದ್ದರು. ನಂತರ ಶವವನ್ನು ವಾಹನದಲ್ಲಿ ತಂದು ಆಸ್ಪತ್ರೆಯ ವರಾಂಡಾದಲ್ಲಿ ಬಿಟ್ಟು, ಪರಾರಿಯಾಗಿದ್ದರು. ಹಣ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆ ಕೊಲೆಗೆ ಕಾರಣವಾಗಿದೆ. ಎಲ್ಲಾ ಆರೋಪಿಗಳನ್ನು ಬಂಧಿಸದ ಕಾರಣ, ಈ ಪ್ರಕರಣದಲ್ಲಿ ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.