(ವಿಶ್ವ ಕನ್ನಡಿಗ ನ್ಯೂಸ್) : ಇವರು ರೇಸ್ ನಲ್ಲಿ ಓಡುವುದಿಲ್ಲ, ಓಡಿಸಿ ಗೆಲ್ಲುತ್ತಾರೆ..! ಇವರು ಸ್ಪರ್ಧಿ ಅಲ್ಲ ಆದರೆ, ಗೆದ್ದು ಟ್ರೋಫಿ ಗಳಿಸುತ್ತಾರೆ..! ಅದಕ್ಕಾಗಿಯೇ ಇವರಿಗೆ ಕಂಬಳ ಇಷ್ಟ. ಅತ್ತೂರು ಗುಂಡ್ಯಡ್ಕ ಕಂಬಳ ಕೋಣಗಳ ಒಡೆಯನಾಗಿ ಬೋಳ ಪ್ರಸಾದ್ ಪ್ರಶಾಂತ್ ಕಾಮತರು ಟ್ರೋಫಿ ಗೆದ್ದುಕೊಳ್ಳುತ್ತಾರೆ. ಅದಕ್ಕಾಗಿಯೇ ಅವರು ಕೋಣಗಳನ್ನು ಚೆನ್ನಾಗಿ ಸಾಕಿ ಅವುಗಳನ್ನು ದಷ್ಟಪುಷ್ಟವಾಗಿ ಬೆಳೆಸುತ್ತಾರೆ.
Happy Birthday ಕಾಮತರೇ… ಇವರ ಇನ್ನೊಂದು ವೈಶಿಷ್ಟ್ಯ.. ಸ್ಪರ್ಧೆಯಲ್ಲಿ ಓಡದೇ ಇದ್ದರೂ ಕಾರನ್ನು ಓಡಿಸಿ ರೇಸ್ ಗೆಲ್ಲುವ ಈ ಕಾಮತರು ಯಾವಾಗಲೂ ಮುನ್ನೆಲೆಯಲ್ಲಿ ಇರಲು ಇಷ್ಟಪಡುವುದೇ ಇಲ್ಲ ! ಅದು ಕಂಬಳವೇ ಆಗಲಿ ಮುಂದೆ ರಾಜಕಾರಣವೇ ಆಗಲಿ…!! ರಾಜಕಾರಣ ಕಲ ಕಂಬುಲ ಆದಾಗ, ಎತ್ತು ಏರಿಗೆ ಕೋಣ ನೀರಿಗೆ ಇಳಿದಾಗಲೂ ಮಾಯಕದಲ್ಲಿ ಸರಿ ಮಾಡುವ ಕಲೆ ಇವರಲ್ಲಿದೆ.
ಬೋಳ ಪ್ರಭಾಕರ ಕಾಮತರು ತೆರೆಯ ಹಿಂದೆ, ತೆರೆಯ ಮುಂದೆ ಎರಡರಲ್ಲೂ ಬಿಜೆಪಿಯನ್ನು ಸಂಘಟಿಸುವ ಮೂಲಕ ಶಕ್ತಿ ಧಾರೆ ಎರೆದವರು. ಇವರ ಹಿರಿಯ ಮಗ ಸಿನ್ನಿ ( ಬೋಳ ಶ್ರೀನಿವಾಸ್ ಕಾಮತ್) ರಾಜಕಾರಣದಲ್ಲಿ ಸಕ್ರಿಯರಾಗಿದ್ದುಕೊಂಡು ಮುನ್ನೆಲೆಯಲ್ಲಿ ತಂದೆ ಪ್ರಭಾಕರ ಕಾಮತರ ಒಂದು ಅಂಶವಾಗಿ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಪ್ರಶಾಂತ ಕಾಮತ್ ಈಗ ಉದ್ಯಮದಲ್ಲಿ ಸಕ್ರಿಯರಾಗಿದ್ದುಕೊಂಡೇ ಪಕ್ಷ ಸಂಘಟನೆಯಲ್ಲಿ ಹಿನ್ನೆಲೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ, ಬೇಕಾದಾಗ ರಸಗೊಬ್ಬರ ಹಾಕುತ್ತಾ ಬಿಸಿಲು ಹೆಚ್ಚಾದಾಗ ನೆರಳು ನೀಡುತ್ತಾ ಕರ್ತವ್ಯ ಪಾಲಿಸುವ ಇವರು, ಬೋಳ ಪಬ್ಬರ ಇನ್ನೊಂದು ಅಂಶ ಮೈಗೂಡಿಸಿಕೊಂಡಿದ್ದಾರೆ. !
ನಾಯಕರಲ್ಲಿ ಎರಡು ವಿಧ ವೇದಿಕೆಯಲ್ಲಿ ಮಿಂಚುವವರು, ಪ್ಲೆಕ್ಸ್- ಬ್ಯಾನರ್ಗಳಲ್ಲಿ ದೊಡ್ಡ ದೊಡ್ಡ ಫೋಟೊಗಳಲ್ಲಿ ವದನಗಳನ್ನು ಪ್ರದರ್ಶಿಸುತ್ತಾ ಸೆಲೆಬ್ರಿಟಿ ನಾಯಕರಾಗುವವರು ಒಂದು ವರ್ಗವಾದರೆ ಒಳ್ಳೆಯ ವ್ಯವಸ್ಥೆಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಜನರನ್ನು ಸಂಘಟಿಸಿ ತೆರೆಯ ಮರೆಯಲ್ಲಿದ್ದುಕೊಂಡೇ ಕೆಲಸ ಮಾಡುವ ನಾಯಕರದು ಇನ್ನೊಂದು ವರ್ಗ. ನೋಡಲು ಪ್ರಶಾಂತ ಸಾಗರ, ಹೃದಯದ ಒಳಗೆ ಹಿಂದುತ್ವ, ತಲೆಯ ಒಳಗೆ ರಾಷ್ಟ್ರೀಯ ಚಿಂತನೆ, ಸಂಘಟನೆಗಳು ಅಲೆ ಅಲೆಯಾಗಿ ದಡ ಸೇರುತ್ತಿರುತ್ತವೆ. ಅತ್ತೂರು ಪರ್ಪಲೆ ಗಿರಿ ಯಲ್ಲಿ ದೈವಿ ಶಕ್ತಿಗಳ ಕಾರ್ನಿಕ ಎಲ್ಲರಿಗೂ ಗೊತ್ತಿದೆ, ಅದಕ್ಕೊಂದು ತಾರ್ಕಿಕ ಹಂತ ತಲುಪಿಸಲು ತೆರೆಯ ಮರೆಯಲ್ಲಿಯೇ ಕೆಲಸ ಮಾಡಿದ ಶಕ್ತಿ ಯೊಂದು ಇದ್ದರೆ ಪ್ರಶಾಂತ್ ಬೋಳ ಎಂಬ ವ್ಯಕ್ತಿ…
ಪರ್ಪಲೆಗಿರಿ ಸಾನ್ನಿಧ್ಯ ಪುನರುಜ್ಜೀವನದ ದೈವೀ ಕಾರ್ಯಕ್ರಮದಲ್ಲಿ ಹತ್ತಾರು ಮುಖಂಡರ ತಲೆಗಳು, ನೂರಾರು ಕಾರ್ಯಕರ್ತರ ಸ್ವಯಂ ಸೇವೆಗಳು, ಸಾವಿರಾರು ಭಕ್ತರ ಭಕ್ತಿ ಸೇವೆಗಳು ಕೆಲಸ ಮಾಡಿದೆ. ಇದರ ಹಿಂದೆ ಶಕ್ತಿಯಾಗಿ ಒಬ್ಬ ವ್ಯಕ್ತಿ ಕೆಲಸ ಮಾಡಿದ್ದಾರೆ.. ಆದರೆ ಈ ವ್ಯಕ್ತಿ ಎಲ್ಲೂ ಕೂಡಾ ಹೇಳಿಕೊಳ್ಳುವುದೇ ಇಲ್ಲ. ಇದನ್ನು ತಿಳಿಯಬೇಕಾದರೆ ತನಿಖಾ ವರದಿಯೇ ಮಾಡಬೇಕು. #ಮುಂದೆಯೂ ಅವರು ಎಲ್ಲೂ ಕೂಡಾ ಇದರ ಹಿಂದೆ ನಾನೇ ಎಂದು ಒಪ್ಪುವುದೂ ಇಲ್ಲ, ಹೇಳಿಕೊಳ್ಳುವುದೂ ಇಲ್ಲ. ಇದೆಲ್ಲದರ ಶ್ರೇಯಸ್ಸನ್ನು ಇನ್ನೊಂದು ವರ್ಗದ ನಾಯಕರ ಕಿರೀಟಕ್ಕೆ ಸೇರಿಸಿಬಿಡುತ್ತಾರೆ.
ಕಾರ್ಕಳ ಬಿಜೆಪಿಯಲ್ಲಿ ಬೋಳ ಕಾಮತರ ಕುಟುಂಬದ್ದು ದೊಡ್ಡ ಪಾಲು ಇದೆ. ಸಂಘಟನಾ ಶಕ್ತಿಯಾಗಿ ಕೆಲಸ ಮಾಡಿದವರು. ಬೋಳ ಪಬ್ಬರು ಬಿಜೆಪಿಯ ಪುನರುಜ್ಜೀವನದಲ್ಲಿ ದೊಡ್ಡ ಶಕ್ತಿ. ತೆರೆಯ ಮರೆಯಲ್ಲಿದ್ದುಕೊಂಡೇ ಬಿಜೆಪಿಯನ್ನು ಬೆಳೆಸಿದವರು ಇವರು. ಇದರ ಫಲವಾಗಿ ಕೆಲವು ನಾಯಕರು ಬೆಳೆದು ಈಗ ತೆರೆಯಲ್ಲಿ ವಿಜೃಂಬಿಸುತ್ತಿದ್ದಾರೆ. ತೆರೆಯ ಮುಂದೆ ನಾಯಕರನ್ನು ಬೆಳೆಸಿದ ತೆರೆಯ ಹಿಂಬದಿ ಇರುವ ಪಬ್ಬರ ಕುಟುಂಬದ ಕುಡಿ ಪ್ರಶಾಂತ್ ಕಾಮತ್.
ಲೀಡರ್ ಎಡವಿದಾಗ ಮೇಲೆತ್ತುವ, ಹಾರಾಡುವಾಗ ಮತ್ತೆ ತಗ್ಗಿ ಬಗ್ಗಿ ನೆಲದಲ್ಲಿಯೇ ನಡೆಯುವಂತೆ ಮಾಡಿಸುವ ವಿಶೇಷ ಗುಣವೂ ತೆರೆಯ ಮರೆಯಲ್ಲಿ ಕೆಲಸ ಮಾಡುವ ಈ ಯುವನಾಯಕರಿಗಿದೆ. ಕಾರ್ಕಳ ಉತ್ಸವ, ಪರಶುರಾಮ ಪ್ರತಿಮೆ…ಹೀಗೆ ಉತ್ಸವಗಳಲ್ಲಿ ಯಾವುದಾದರೂ ಒಂದು ವಿಭಾಗದ ಉಸ್ತುವಾರಿ ವಹಿಸಿಕೊಂಡು ತಣ್ಣಗೆಕೆಲಸ ಮಾಡುವ ನಿಮ್ಮ ಬದುಕಲ್ಲೂ ನೆಮ್ಮದಿಯ ತಂಪು, ಉತ್ಸಾಹದ ಕಂಪು ಹೀಗೆಯೇ ಇರಲಿ
ಕರೋನಾ ಕಾಲದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡಿಸುವುದು, ಸಂಕಷ್ಟದಲ್ಲಿದ್ದವರಿಗೆ ನೆರವಾಗುವುದು ಮಾಡುತ್ತಲೇ ಇರುತ್ತಾರೆ ಆದರೆ ಅವರ ಹೆಸರು ಎಲ್ಲಿಯೂ ಕಾಣುವುದಿಲ್ಲ. ಬೇರೆಯವರ ಹೆಸರಲ್ಲಿ ದಾನ ಧರ್ಮ ಮಾಡಿಸುವ ಪ್ರಶಾಂತರಿಗೆ ದಾನ, ಧರ್ಮದಲ್ಲಿ ಪುಣ್ಯ ಖಂಡಿತಾ ಇಮ್ಮಡಿಯಾಗಲಿ. ಶುಭವಾಗಲಿ
ಮತ್ತೊಂದು ಈ ಪ್ರಶಾಂತರು ನನ್ನ ಫೇಸ್ ಬುಕ್ ಫ್ರೆಂಡ್.. ಒಬ್ಬ ಪತ್ರಕರ್ತನಾಗಿ ಊರಿನವನಾಗಿ ನನಗೆ ಅವರ ಕುರಿತ ಇಂಟಲ್ಜೆನ್ಸ್ ವರದಿಗಳು ಆಗಾಗ ಬರುತ್ತಿರುತ್ತವೆ. ಬಳಿಕ ಕುತೂಹಲದಿಂದ ಫಾಲೋ ಮಾಡಿದಾಗ ಅವರ ಕುರಿತ ಸಿಕ್ಕ ಅಲ್ಪಸ್ವಲ್ಪ ಮಾಹಿತಿಗಳು ಇವೆಲ್ಲ. ಅವರ ಬಳಿ ಇದುವರೆಗೆ ಮುಖತಃ ಮತ್ತು ಫೋನ್ ಮೂಲಕವೂ ಮಾತನಾಡುವ ಅವಕಾಶವೂ ಸಿಕ್ಕಿಲ್ಲ.
– ಜಿತೇಂದ್ರ ಕುಂದೇಶ್ವರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.