“ಜೋಗಿರಂಗದಾಸಯ್ಯನೆಂಬ ಮತದಾರನ ಜಾಗೃತ ಮತದಾನ ಕಾಳಜಿ, ೯೦ ರ ವೃದ್ಧ ಪ್ರಜಾಪ್ರಭುತ್ವಕ್ಕೆ ತೋರಿದ ನಿಷ್ಠೆ, ಮತಚಲಾಯಿಸಿದ ಅನನ್ಯ ಬಗೆ ಈ ಕಥೆಯ ಮುಖ್ಯಭೂಮಿಕೆ”..
(www.vknews.in) : ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರಾಜಪ್ರಭುತ್ವ ತೊರೆದು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಮೇಲೆ ಪ್ರಜಾಪ್ರಭುತ್ವದಲ್ಲಿ ‘ಪ್ರಜೆಯೇ ಪ್ರಭು’, ‘ಮತದಾರ ಪ್ರಭು’ ಎಂಬ ಮೌಲ್ಯಯುತ ಧೋರಣೆಯನ್ನು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾಣಬಹುದು, ಯಾವುದಾದರು ಒಂದು ವಿಷಯ ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಪ್ರಕ್ರಿಯೆಯೇ ಮತದಾನ. ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು ಕರ್ತವ್ಯ ನಮ್ಮನ್ನು ಆಳುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಮಾಡಿಕೊಳ್ಳುವ ಆಯ್ಕೆಯ ಅಸ್ತ್ರವೇ ಮತದಾನ.
ಪ್ರಬುದ್ಧವಾದ ದೇಶ ಕಟ್ಟುವಲ್ಲಿ ಗುಪ್ತಮತದಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೂ ಕೂಡ ನಮ್ಮ ನಾಗರೀಕರಿಗೆ ಈ ಮತದಾನದ ಮಹತ್ವ ಇನ್ನೂ ಅರ್ಥವಾಗುತ್ತಿಲ್ಲ ಎಂದೆನಿಸುತ್ತದೆ ಒಮ್ಮೊಮ್ಮೆ ಈ ರಾಜಕೀಯ ಕೆಸರೆರಚಾಟದಲ್ಲಿ ಹಣ,ಹೆಂಡ ಇತ್ಯಾದಿ ಆಮಿಷಗಳಿಗೆ ತಮ್ಮ ಅತ್ಯಮೂಲ್ಯ ಮತವನ್ನು ಮಾರಿಕೊಳ್ಳುತ್ತಿರುವುದು ಮತ್ತು ಮತದಾನವನ್ನು ಆಮಿಷಕ್ಕೊಳಪಡಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಚುನಾವಣಾ ಆಯೋಗವು ಅರ್ಹ ಮತದಾರರೆಲ್ಲರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದೆಂಬ ಆಶಾಭಾವನೆಯಿಂದ ಏನೆಲ್ಲ ಜಾಗೃತಿ ಕಾರ್ಯಕ್ರಮಗಳನ್ನು ವಿನೂತನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೆಲವರು ಮತದಾನವನ್ನು ಮಾಡಲು ಬಾರದಿರುವುದು ವಿಪರ್ಯಾಸದ ಸಂಗತಿ ಇಂತಹ ನಿರ್ಲಕ್ಷ್ಯ ಮನೋಧೋರಣೆಯುಳ್ಳ ಮತದಾರ ನಮ್ಮ ಈ ಜೋಗಿರಂಗದಾಸಯ್ಯನೆಂಬ ಜಾಗೃತ ಮತದಾರನ ಕಥೆಗೆ ಕಣ್ಣು ಮತ್ತು ಕಿವಿಗಳಾಗಬೇಕಿದೆ.
ಈ ತಂತ್ರಜ್ಞಾನಗಳೆಲ್ಲಾ ಇಲ್ಲದ ಕಾಲದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಗುಪ್ತಮತದಾನ ಚಲಾವಣೆಯಲ್ಲಿತ್ತು ಬೀದಿ ನಾಟಕಗಳ ಮೂಲಕ, ಭಿತ್ತಿಪತ್ರಗಳ ಮೂಲಕ ಚುನಾವಣೆ ಮತ್ತು ಮತದಾನದ ಅರಿವನ್ನು ಚುನಾವಣಾ ಆಯೋಗ ಮೂಡಿಸುತ್ತಿತ್ತು. ‘ನಮ್ಮ ಹಿರಿಯರು ಮತದಾನ ಮಾಡದಿದ್ದರೆ ಬದುಕಿದ್ದು ಸತ್ತಂತೆ’, ‘ಮತದಾನ ಮಾಡದೆ ಇದ್ದರೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತೀರಿ’ ಎಂಬಿತ್ಯಾದಿ ಕಥೆಗಳನ್ನು ಹೇಳಿ ಬೆದರಿಸಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದರು ಆದರೀಗ ಕಾಲ ಬದಲಾಗಿದೆ ತಂತ್ರಜ್ಞಾನ ಮುಂದುವರೆದಿವೆ ಮೊಬೈಲುಗಳಲ್ಲಿಯೇ ಎಲ್ಲಾ ಮಾಹಿತಿಗಳು ಜಾಗೃತಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಹಿಂದಿನ ಕಾಲದಲ್ಲಿ ಯಾರನ್ನಾದರೂ ಯಾರಿಗೆ ಮತಚಲಾಯಿಸಿದಿರಿ ಎಂದು ಕೇಳಿದರೆ ಜಪ್ಪಯ್ಯ ಎಂದರು ಹೇಳುತ್ತಿರಲಿಲ್ಲ ಇದೇ ಗುಪ್ತಮತದಾನದ ಮಹತ್ವ ಆದರೆ ಇತ್ತೀಚಿನ ದಿನಗಳಲ್ಲಿ ಈ ಗುಪ್ತಮತದಾನದ ಮಹತ್ವನ್ನು ನಾವು ಹಾಳುಗೆಡವಿದ್ದೇವೆ ನನ್ನದೊಂದು ಪಕ್ಷ ನಿನ್ನದೊಂದು ಪಕ್ಷ ಎಂದು ಕಿತ್ತಾಡಿಕೊಂಡು ಮತದಾನದ ಮೌಲ್ಯವನ್ನೇ ಮರೆತಿದ್ದೇವೆ.
ಈ ಬಾರಿಯ ಚುನಾವಣೆಯಲ್ಲಿ ವಯೋವೃದ್ದರಿಗೆ, ಅಂಗವಿಕಲರಿಗೆ ಮತ್ತು ಹಾಸಿಗೆಯನಿಡಿದು ಮಲಗಿದವರು ಮತದಾನದಿಂದ ಹೊರಗುಳಿಯಬಾರದೆಂದು ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಕಲ್ಪಿಸಿತ್ತು ಇದೊಂದು ಅತ್ಯದ್ಭುತ ಪರಿಕಲ್ಪನೆ ಎಂತಲೇ ಹೇಳಬಹುದು. ತೀರಾ ಅಶಕ್ತರಿದ್ದರೆ ಅಂದರೆ ಮತಚಲಾವಣೆ ಮಾಡಲು ಸಾಧ್ಯವೇ ಆಗದಿದ್ದರೆ ಆ ಕುಟುಂಬ ಸದಸ್ಯರ ಸಹಾಯದಿಂದ ಮತಚಲಾಯಿಸಬಹುದು ಸಶಕ್ತರಿದ್ದರೆ ಮತಪತ್ರದ ಮೂಲಕ ಅವರೇ ಮತಚಲಾಯಿಸಿ ಮತಪೆಟ್ಟಿಗೆಗೆ ಹಾಕಬಹುದು ಮತದಾನ ಚಲಾಯಿಸಿಕೊಳ್ಳಲು ಮೊದಲ ದಿನ ಮತಪೆಟ್ಟಿಗೆ, ವೋಟ್ ಕಂಪಾರ್ಟ್ಮೆಂಟ್ ಇತ್ಯಾದಿ ಸಲಕರಣೆಗಳು ಒಂದೆರಡು ಜೀಪು ಪೊಲೀಸ್ ಸಿಬ್ಬಂದಿಗಳೊಂದಿಗೆ ಬಂದಾಗ ಜನ ಅಲ್ಲಲ್ಲಿ ಸಂದಿಗೊಂದಿಗಳಲ್ಲಿ ನಿಂತು ಯಾನ?, ಯಾಕ? ಎಂದು ಗುಸು, ಗುಸು, ಪಿಸು,ಪಿಸು ಮಾತನಾಡುತ್ತಾ ದೂರದಿಂದಲೇ ನೆರೆದರು ಆರಂಭದಲ್ಲಿಯೇ ಒಬ್ಬ ಅಜ್ಜಿ ಶ್ಯಾನೆ ಕಿರಿ-ಕಿರಿ ಇಟ್ಟಳು ಅಧಿಕಾರಿಗಳಾಗಿ ಬಂದ ನಮ್ಮನ್ನೇ ರಾಜಕೀಯ ವ್ಯಕ್ತಿಗಳೆಂದು ತಿಳಿದು ‘ನಮ್ಗೇನ್ ಮಾಡಿದರೀ ನೀವ್ಗಳು, ಏನ್ ಮಟ್ಟಿದ್ದೀರಿ ನಮ್ಗ ಯಾನ್ ಮಾಡಿದ್ದರೀ ಹ್ವೇಳಿ ಇಂಕ್ರ’ ಎಂದು ತಗಾದೆ ತೆಗೆದರು ಅಜ್ಜಿಯನ್ನು ಕನ್ವಿನ್ಸ್ ಮಾಡಲು ಅರ್ಧಗಂಟೆಯೇ ಆಯ್ತು ಹೈರಾಣಾಗಿ ಹಂಗೋ ಹಿಂಗೋ ಅಜ್ಜಿಗೆ ನಾವು ಅಧಿಕಾರಿ ವರ್ಗ ಎಂಬುದು ಅವರ ಪತಿಯ ಮೂಲಕ ತಿಳಿದು ಮತದಾನ ಚಲಾಯಿಸಿಕೊಂಡು ಮುಂದಕ್ಕೆ ನಡೆದೆವು.
ಇಡೀ ದಿನ ಸುಸ್ತಾಗಿ ಕೊನೆಗೊಂದು ಊರಲ್ಲಿ ಅಂತಿಮ ಮತದಾನವಿತ್ತು ಉಸ್ಸಪ್ಪಾ ! ಎಂದು ಕಾರು ತಿರುಗಿಸಿ ಊರಕಡೆ ನಡೆದವು ಹೆದ್ದಾರಿಗೆ ಅಂಟಿಕೊಂಡಿರುವ ದೊಡ್ಡ ಗ್ರಾಮದ ದೊಡ್ಡ ಬೀದಿ ಪಕ್ಕದಲ್ಲಿಯೇ ಗ್ರಾಮದ ಕಟ್ಟೆ, ದೊಡ್ಡ ಅರಳೀಮರ, ಸಂಜೆಯಾದುದರಿಂದ ಮೇಯಲು ಹೋಗಿದ್ದ ದನ,ಕುರಿ ಮರಿಗಳು ಹಟ್ಟಿಯೆಡೆಗೆ ಧಾವಿಸುತ್ತಿದ್ದವು ಜಗುಲಿಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದ ಹೆಂಗಸರು ಜೀಪು ಮತ್ತು ಪೊಲೀಸರನ್ನು ನೋಡಿ ಚದುರಿದರು ನಮ್ಮಲ್ಲಿಯೇ ಒಬ್ಬರು “ಜೋಗಿರಂಗದಾಸಯ್ಯನ ಮನೆ ಯಾವತಪ ಬಂದಾದು”? ಎಂದಾಗ ಆ ಮನೆಯ ಹೆಂಗಸೊಬ್ಬರು ಅಲ್ಲಿಯೇ ಮನೆಯೊಂದರ ಜಗುಲಿ ಕಟ್ಟೆಯ ಮೇಲೆ ಕುಳಿತ ಹಣ್ಣು ಹಣ್ಣು ಮುದುಕರಾದ ವೃದ್ದರನ್ನು ತೋರಿದರು ಅಂದಾಜು ವಯಸ್ಸು ೯೦ ದಾಟಿರಬಹುದು, ಗೂನು ಬೆನ್ನು, ಸುಕ್ಕುಗಟ್ಟಿದ ಚರ್ಮ, ಒಂದು ಕಾಕಿ ಚಡ್ಡಿ, ಒಂದು ಅರಕಲು ಅಂಗಿ, ಬಿಳಿಕೂದಲು ಗುಬ್ಬಿಯ ರೀತಿ ಮುದುಡಿಕೊಂಡು ಕೂತಿದ್ದ ಭಂಗಿ ಒಂದು ರೀತಿಯ ಬದ್ಧತೆ ಹಾಗೂ ಜೀವನಾನುಭವದ ಭವ ಭೂತಿ ಗೋಚರಿಸಿತು.
ಇಳಿಸಂಜೆ ಹೊತ್ತು ದೌಡಾಯಿಸಿ ನಿಂತಿದ್ದ ಹೆಣ್ಣಾಳು ಗಂಡಾಳುಗಳು, ಮೂಗಿನ ಹೊಳ್ಳೆಗೆ ಬೆರಳು ಪೋಣಿಸಿಕೊಂಡು ನಿಂತಿದ್ದ ಹೈಕ್ಳು ಒಂಥರಾ ಕುತೂಹಲಗಟ್ಟಿದ ರಣರೋಚಕ ಸನ್ನಿವೇಶವೆಂದು ನನಗನಿಸಿತು, ವಯೋಸಹಜ ಕಾರಣ ಕಿವಿ ಕೇಳುವುದು ಸ್ವಲ್ಪ ಮಂದವೇ ಆದ್ದರಿಂದ ಮತಪೆಟ್ಟಿಗೆ ಟ್ರಂಕ್, ವೋಟ್ ಕಂಪಾರ್ಟ್ಮೆಂಟ್ ಇಟ್ಟು, ವಿವಿಧ ನಮೂನೆಗಳನ್ನು ಭರ್ತಿ ಮಾಡಿ ರುಜು ಮಾಡಿಸಿಕೊಂಡು ಬ್ಯಾಲೆಟ್ ಪೇಪರ್ ನೀಡಿ ಜೋರಾಗಿ ಕೂಗಿ “ನೀವೆ ವೋಟ್ ಹಾಕ್ಕಿರೋ ಯಾರದಾದ್ರೂ ಸಹಾಯ ತಗೋತಿರೋ” ಎಂದಾಗ ಮುದುಡಿ ಮಲಗಿದ್ದ ತಾತ ಮೆಲ್ಲಗೆ ಎದ್ದು ಕೂತು ಮತಪೆಟ್ಟಿಗೆಯ ಮೇಲೆ ಕೈಯಾಡಿಸಿದರು ನಾವು ಸಹಿ ಮಾಡಲೆಂದು ಇಂಕ್ ಪ್ಯಾಡ್ ಇಟ್ಟಾಗ ಇಂಕ್ ಪ್ಯಾಡ್ ಬದಲಿಸಿ ಪೆನ್ನನ್ನು ತೆಗೆದುಕೊಂಡು ನಡು ನಡುಗುತ್ತಲೇ ರುಜು ಮಾಡಿ ಬ್ಯಾಲೆಟ್ ಪೇಪರ್ ತೆಗೆದು ಮತ ಚಲಾಯಿಸಿ ನಡುಗುತ್ತಲೇ ಮತಪತ್ರ ಮಡಚಿ ಎರಡು ಕೈಗಳಿಂದ ಮುಗಿದು ಮನದಲ್ಲಿ ಏನನ್ನೋ ನೆನೆದು ‘ಒಳ್ಳೆಯ ಸರ್ಕಾರ ಬರಲಿ’ ಎಂದು ಉದ್ಗರಿಸಿ ಮತಪೆಟ್ಟಿಗೆ ಟ್ರಂಕ್ ಒಳಗಡೆ ಮತಪತ್ರ ಹಾಕಿ ಮತ್ತೆ ತಮ್ಮ ಜಾಗದಲ್ಲಿ ಮುದುಡಿ ಮಲಗಿದರು. ಗಾಂಧೀಜಿಯವರ ಕಾಲದ ತಾತ ರಾತ್ರಿಶಾಲೆಯಲ್ಲಿ ಅಕ್ಷರ ಕಲಿತವರು ಮತದಾನದ ಮೇಲೆ ಇವರಿಗಿದ್ದ ಬದ್ಧತೆ ಆಳುವ ವರ್ಗ ಸ್ವಾಸ್ಥ್ಯವಾಗಿರಬೇಕೆಂದು ಕೈಮುಗಿದು ಮತಚಲಾಯಿಸಿ ಹಕ್ಕು ಮತ್ತು ಕರ್ತವ್ಯವನ್ನು ಮೆರೆದ ಜೋಗಿರಂಗದಾಸಯ್ಯನ ಮತದಾನದ ಜಾಗೃತಿಗೆ ಇಡೀ ಸಮಾಜವೇ ಅನುಸರಿಸಬೇಕಾದ ವ್ಯಕ್ತಿತ್ವ ಎಂದು ನನಗನಿಸಿತು……!
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.