(www.vknews.in) : ಸೃಷ್ಟಿಕರ್ತನ ನೈಜ ಪರೀಕ್ಷೆಗೆ ಕೊರಳೊಡ್ಡಿ ಜಯಿಸಿದ ಹಝ್ರತ್ ಇಬ್ರಾಹಿಂ ನೆಬಿ (ಅ) ಹಾಗೂ ಕುಟುಂಬದ ತ್ಯಾಗ, ಆಖಿರುಝ್ಝಮಾನಿನ ಸಂದರ್ಭದಲ್ಲಿ ಸದಾ ಸಂಧಿಗ್ದ ಪರಿಸ್ಥಿತಿ, ಜೀವನ ಜಂಜಾಟ ಹಾಗೂ ಅಲ್ಲಾಹನ ಕಠಿಣ ಪರೀಕ್ಷಾ ಸಮಯ ಎದುರಿಸುತ್ತಿರುವ ನಮಗೆ ಅಲ್ಲಾಹನ ಸಾಮೀಪ್ಯ ಪಡೆಯಲು ಪ್ರೇರಣೆಯಾಗಲಿ
ಅಲ್ಲಾಹು ಅಕ್ಬರುಲ್ಲಾಹು ಅಕ್ಬರುಲ್ಲಾಹು ಅಕ್ಬರ್ …. ಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ….. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಂದ್…..
ಅಲ್ಲಾಹು ಅಕ್ಬರ್ ಕಬೀರಾ.. ವಲ್ ಹಂದುಲಿಲ್ಲಾಹಿ ಕಸ್ವೀರಾ… ವ ಸ್ವುಬ್ ಹಾನಲ್ಲಾಹಿ ಬುಕ್ ರತನ್ ವ ಅಸ್ವೀಲಾ… ಲಾ ಇಲಾಹ ಇಲ್ಲಲ್ಲಾಹು ವಲಾ ನ ಅಬುದ ಇಲ್ಲಾ ಇಯ್ಯಾಹು ಮುಖ್ಲಿಸೀನ ಲಹುದ್ದೀನ ವಲವ್ ಕರಿಹಲ್ ಕಾಫಿರೂನ…. ಲಾಇಲಾಹ ಇಲ್ಲಲ್ಲಾಹು ವಹ್ದಹೂ… ನಸ್ವರ ಅಬ್ ದಹೂ.. ವ ಹಝಮಲ್ ಅಹ್ಝಾಬ ವಹ್ದಹೂ.. ಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್.. ಅಲ್ಲಾಹು ಅಕ್ಬರ್ ವಲಿಲ್ಲಾಹಿಲ್ ಹಂದ್….
اَللَّهُ اَكْبَرُ اَللََّهُ اَكْبَرُ اَللَّهُ اَكْبَرُ لَااِلَهَ اِلَّا الَّلهُ وَالَّلهُ اَكْبَرُ ،اَللَّهُ اَكْبَرُ وَلِلَّهِ الْحَمْدُ،
اَللَّهُ اَكْبَرُ كَبِيرََا، وَالْحَمْدُ لِلَّهِ كَثِيرََا، وَسُبْحَانَ اللَّهِ بُكْرَةََ وَاَصِيلاََ ،لَااِلَهَ اِلَّا الَّلهُ وَلاَ نَعْبُدُ اِلَّااِيَّاهُ مُخْلِصِينَ لَهُ الدِّينَ، وَلَوْ كَرِهَ الْكَافِرُونَ. لَااِلَهَ ِالَّا الَّلهُ وَحْدَهُ ،نَصَرَ عَبْدَهُ، وَاَعَزَّ جُنْدَهُ، وَهَزَمَ الْاَحْزَابَ وَحْدَهُ، لَااِلَهَ اِلَّا الَّلهُ وَالَّلهُ اَكْبَرُ
ಪವಿತ್ರ ಇಸ್ಲಾಂ ಮುಸ್ಲಿಮರಿಗೆ ಅನುಗ್ರಹಿಸಿದ ವರ್ಷದ ಎರಡು ಮಹತ್ವಪೂರ್ಣ ಸಂತೋಷದ ದಿನಗಳಲ್ಲಿ ಒಂದಾಗಿದೆ ಈದ್-ಉಲ್-ಅಳ್ ಹಾ ಆರ್ಥಾತ್ ಬೆಲಿಯ ಪೆರ್ನಾಳ್ ಅಥವಾ ಬಕ್ರೀದ್ ಹಬ್ಬ. ಪವಿತ್ರ ದುಲ್ಹಜ್ ತಿಂಗಳಲ್ಲಿ ಹಜ್ಜಾಜ್ ಗಳು ಪವಿತ್ರ ಮಕ್ಕಾ ಮಣ್ಣಿನಲ್ಲಿ ಅಲ್ಲಾಹನಿಗಾಗಿ ಕಡ್ಡಾಯ ಕರ್ಮ ಪೂರೈಸಲು ಕೂಟು-ಕುಟುಂಬ, ತಂದೆ-ತಾಯಿ, ಪತ್ನಿ-ಮಕ್ಕಳು, ಆಸ್ತಿ-ಅಂತಸ್ತು, ವ್ಯಾಪಾರ-ವಹಿವಾಟು ಒಟ್ಟಿನಲ್ಲಿ ಐಹಿಕವಾದ ಎಲ್ಲ ಆಸೆ, ಆಕಾಂಕ್ಷೆ, ಆಡಂಬರ, ಸಕಲ ದುನ್ಯಾದ ಉದ್ದೇಶಗಳನ್ನು ಪಕ್ಕಕ್ಕೆ ಎಸೆದು ಸಂಪೂರ್ಣವಾಗಿ ಅಲ್ಲಾಹನ ಮುಂದೆ ದೈನ್ಯತಾ ಭಾವದಿಂದ ಎಲ್ಲವನ್ನೂ ಸೃಷ್ಟಿಕರ್ತನಿಗೆ ಅರ್ಪಿಸಿ ಹಜ್ ಕರ್ಮ ನಿರ್ವಹಿಸುತ್ತಿರುವಾಗ ಊರಿನಲ್ಲಿ ಮುಸ್ಲಿಂ ಉಮ್ಮತ್ ತ್ಯಾಗ-ಬಲಿದಾನ, ಅಲ್ಲಾಹನಿಗಾಗಿ ಸಮರ್ಪಿಸುವ ಪ್ರತೀಕವಾದ ಈದುಲ್ ಅಳ್ ಹಾ ಹಬ್ಬವನ್ನು ದುಲ್ ಹಜ್ 10 ರಂದು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಿದ್ದಾರೆ.
ಜೀವನ ಪೂರ್ತಿ ಲೋಕಾಡಂಬರದ ಹಿಂದೆ ನಾಗಾಲೋಟದಲ್ಲಿರುವ ಮುಸ್ಲಿಂ ಉಮ್ಮತ್ ಬೆಲಿಯ ಪೆರ್ನಾಳ್ ದಿನ ಅಲ್ಲಾಹನ ಸ್ಮರಣೆಯನ್ನು ಮಾಡುತ್ತಾ, ಅಲ್ಲಾಹು ತನಗೆ ನೀಡಿದ ಸಕಲ ಅನುಗ್ರಹಗಳಿಗೆ ಸ್ತುತಿ ಅರ್ಪಿಸುತ್ತಾ, ಕುಟುಂಬಿಕರನ್ನು, ಸ್ನೇಹಿತರನ್ನು ಪರಸ್ಪರ ಕಂಡು ಸಂತೋಷ ಆಚರಿಸುವುದಾಗಿರುತ್ತದೆ ಪ್ರಮುಖ ಉದ್ದೇಶ.
ಈದುಲ್ ಅಳ್ ಹಾ ದಿನಕ್ಕೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಆ ದಿನದ ಪ್ರಾರ್ಥನೆಗೆ ವಿಶೇಷ ಮನ್ನಣೆಯನ್ನು ಅಲ್ಲಾಹು ನೀಡುತ್ತಾನೆ. ದೈವಭಕ್ತಿಯಿಂದ ಆ ದಿವಸ ಅಲ್ಲಾಹನೊಂದಿಗೆ ಯಾಚಿಸಿದರೆ ನಿಸ್ಸಂಶಯ ಅದನ್ನು ಭಗವಂತ ಕರುಣಿಸದೆ ಇರಲಾರನು. ಆ ದಿವಸದಲ್ಲಿ ಉಪವಾಸ ಆಚರಣೆ ನಿಷಿದ್ದಗೊಳಿಸಲಾಗಿದೆ. ಅನ್ನಾಹಾರ ಪಾನೀಯ ಸೇವಿಸಿ ಪರಸ್ಪರ ಧಾರ್ಮಿಕ ಚೌಕಟ್ಟಿನಲ್ಲಿ ಸಂತೋಷ ಆಚರಣೆಗೆ ಇಸ್ಲಾಂ ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಹಬ್ಬಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಹಬ್ಬಗಳ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸಾಧ್ಯತೆಗಳಿರುವುದನ್ನು ಇಸ್ಲಾಂ ಗಂಭೀರವಾಗಿ ಎಚ್ಚರಿಸುತ್ತದೆ.
ಈದ್ ಎಂದರೆ ಬೇಕಾಬಿಟ್ಟಿ ತಿಂದುಂಡು ಅನಿಸ್ಲಾಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಮೋಜು-ಮಸ್ತಿ ನಡೆಸುವುದಲ್ಲ. ಕಳೆದ ದುಲ್ ಹಜ್ ತಿಂಗಳಲ್ಲಿ ನಮ್ಮೊಂದಿಗೆ ಸಂತೋಷದಿಂದ ಇದ್ದ ಅದೆಷ್ಟೋ ನಮ್ಮ ಬಂಧು-ಮಿತ್ರಾದಿಗಳು ಇಂದು ನಮ್ಮೊಂದಿಗಿಲ್ಲ..ಅವರಿಗೆ ಈ ಪರಮ ಪವಿತ್ರ ದಿನವನ್ನು ಈ ಬಾರಿ ಜೀವನದಲ್ಲಿ ಪಡೆಯಲು ಸಾಧ್ಯವಾಗಿಲ್ಲ…. ಅದೇ ರೀತಿ ಕಳೆದೆರಡು ವರ್ಷಗಳ ಕೋವಿಡ್ ವೈರಸ್ ಆರ್ಥಾತ್ ಅಲ್ಲಾಹನ ಕಠಿಣ ಪರೀಕ್ಷೆಯ ದಿನಗಳ ಆರಂಭದಲ್ಲಿ ಆರೋಗ್ಯವಾಗಿದ್ದ ನಮ್ಮ ಅದೆಷ್ಟು ಆತ್ಮೀಯರು, ಕುಟುಂಬಸ್ಥರು, ಬಂಧು-ಬಳಗ ಈ ಒಂದು ಪೆರ್ನಾಳ್ ದಿವಸವನ್ನು ಜೀವನದಲ್ಲಿ ಪಡೆದುಕೊಳ್ಳು ಸಾಧ್ಯವಾಗದೆ ಕೊರೋನಾ ವೈರಸ್ ಸಹಿತ ವಿವಿಧ ರೋಗ ಕಾರಣಗಳಿಂದಲೂ ಹಠಾತ್ ಆಗಿಯೂ ತಮ್ಮ ಜೀವ ಕಳೆದುಕೊಂಡು ಈ ಐಹಿಕ ಲೋಕಕ್ಕೆ ಶಾಶ್ವತ ವಿದಾಯ ಕೋರಿ ಪಾರತ್ರಿಕ ಜೀವನಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ.
ಕಳೆದ ರಮಳಾನ್ ಹಾಗೂ ಈದುಲ್ ಫಿತ್ರ್ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದ ಅದೆಷ್ಟು ಮಂದಿ, ಅದೇ ರೀತಿ ದುಲ್ ಹಜ್ ಚಂದ್ರದರ್ಶನ ಆಗುವ ವೇಳೆ ಈ ಭೂಮಿಯಲ್ಲಿ ಸಂತೋಷದಿಂದ ಇದ್ದು, ಪೆರ್ನಾಳ್ ನಿರೀಕ್ಷೆಯಲ್ಲಿದ್ದ ಇನ್ನೆಷ್ಟೋ ಮಂದಿ ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿಧೇಯರಾಗಿ ಈ ಲೋಕಕ್ಕೆ ವಿದಾಯ ಹೇಳಿ ಶಾಶ್ವತ ಬರ್ಝಖೀ ಜೀವನಕ್ಕೆ ತೆರಳಿದ್ದಾರೆ… ಆದರೆ ಸರ್ವಶಕ್ತನಾದ ಅಲ್ಲಾಹನು ನಮ್ಮ ಪಾಲಿಗೆ ಪವಿತ್ರ ಅರಫಾ ದಿವಸ ಹಾಗೂ ಈದ್-ಉಲ್-ಅಳ್ ಹಾ ದಿವಸವನ್ನು ಜೀವನದಲ್ಲಿ ಸ್ವಾಗತಿಸಲು ಸೌಭಾಗ್ಯವನ್ನು ನೀಡಿದ್ದಾನೆ. ಅಲ್ಲಾಹನು ನೀಡಿದ ಈ ಮಹತ್ತರ ಸೌಭಾಗ್ಯವನ್ನು ಸ್ಮರಿಸಿ ಅಲ್ಲಾಹನಿಗೆ ಸ್ತುತಿ ಅರ್ಪಿಸುವ ದಿನವಾಗಿದೆ ಈದ್…
ಕಳೆದೆರಡು ವರ್ಷಗಳಿಂದ ಪೆರ್ನಾಳ್ ನಿಜಕ್ಕೂ ಮುಸಲ್ಮಾನ ಅಲ್ಲಾಹನ ಕಠಿಣ-ಕಠೋರ ಪರೀಕ್ಷೆಗೆ ಕೊರಳೊಡ್ಡಿ ಕಳೆಯಬೇಕಾಗಿ ಬಂದಿದೆ. ಕಠಿನ ಪರೀಕ್ಷೆಯಲ್ಲೂ ಅಲ್ಲಾಹನು ಅನುಗ್ರಹದ ನೋಟವನ್ನು ನಮ್ಮೆಡೆಗೆ ಬೀರಿದ್ದಾನೆ. ಈದ್ ಹೆಸರಿನಲ್ಲಿ ಮೋಜು-ಮಸ್ತಿ, ತಮಾಷೆ, ಆಡಂಬರ, ಫ್ಯಾಶನ್ಗಳಲ್ಲಿ, ಅದರಲ್ಲೂ ಮುಖ್ಯವಾಗಿ ಸಾಮಾಜಿಕ ಜಾಲತಾಣದ ಮೋಸದ ಮೋಜಿನಲ್ಲಿ ಮುಳುಗೆದ್ದು ಬೀಳುವ ನಾವುಗಳು ನಮ್ಮ ಜೀವನದ ಮುಂದಿನ ಘಟ್ಟಗಳಾದ ಈ ಲೋಕಕ್ಕೆ ಶಾಶ್ವತ ವಿದಾಯ ಹೇಳುವ ಆರಂಭಿಕ ಹಂತವಾಗಿರುವ ಮರಣದ ರುಚಿ ನಾವೆಲ್ಲ ನೋಡಲಿಕ್ಕಿದ್ದೇವೆ… ಪ್ರತೀ ದಿನ ವಿವಿಧ ಕಾರಣಗಳಿಗೆ ಸಂಭವಿಸುವ ಮರಣ ಸನ್ನಿವೇಶಗಳನ್ನು ನಾವು ಕಣ್ಣಾರೆ ಕಂಡು ಅನುಭವಿಸುತ್ತಿದ್ದೇವೆ. ಅವುಗಳು ನಮ್ಮ ಕಣ್ಣು ತೆರೆಸುವಂತಾಗಬೇಕು.
ಬಳಿಕ ಪಾರತ್ರಿಕ ಜೀವನದ ಪ್ರಥಮ ಮೆಟ್ಟಿಲು ಭಯಾನಕ ಖಬ್ರ್ ಜೀವನವನ್ನು ನಾವೆಲ್ಲ ಒಬ್ಬಂಟಿಯಾಗಿ ಕಳೆಯಲಿಕ್ಕಿದ್ದೇವೆ…. ಆ ಬಳಿಕ ಸವಾಲ್-ಜವಾಬ್, ಹಿಸಾಬ್, ಒಳಿತು-ಕೆಡುಕುಗಳ ಹೊತ್ತಗೆ ಸ್ವತಃ ಕೈಯಲ್ಲಿ ಪಡೆದುಕೊಂಡು ಓದುವ ಸನ್ನಿವೇಶ… ಸ್ವಿರಾತ್, ಮಹ್ಶರಾ, ಸ್ವರ್ಗ-ನರಕ ಮೊದಲಾದ ಹಲವು ಘಟ್ಟಗಳನ್ನು ನಾವೆಲ್ಲರೂ ಅನುಭವಿಸಲಿಕ್ಕಿದ್ದೇವೆ ಎಂಬುದನ್ನು ಆತ್ಮಾರ್ಥವಾಗಿ ನೆನಪಿಸಿಕೊಂಡು ಅಲ್ಲಾಹನೆಡೆಗೆ ಇಬಾದತ್ ಹೆಚ್ಚಿಸುವ ದಿನವಾಗಿದೆ ಈದ್…..
ನಮ್ಮ ಹೆತ್ತವರು, ಪೋಷಕರು, ಕುಟುಂಬಿಕರು, ಉಸ್ತಾದರು, ಸ್ನೇಹಿತರು, ನಮ್ಮೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿದ್ದ ಹಲವು ಮಂದಿ ಇಂದು ನಮ್ಮೊಂದಿಗಿಲ್ಲ. ಅವರು ಕಬ್ರ್ ಎಂಬ ಮಣ್ಣಿನ ಕತ್ತಲ ಲೋಕದಲ್ಲಿ ಒಂಟಿ ಜೀವನವನ್ನು ನಡೆಸುವುದು ನಮ್ಮನ್ನು ಚಿಂತೆಗೀಡುಮಾಡಬೇಕಾದ ದಿನವಾಗಿದೆ ಇಂದಿನ ಈದ್ ದಿನ… ಇವರೆಲ್ಲರನ್ನು ಒಂದು ಕ್ಷಣ ಸ್ಮರಿಸಿಕೊಂಡು ಅವರಿಗಾಗಿ ಏನಾದರೊಂದು ತುಣುಕು ಕುರಾನ್ ಪಠಣ ಮಾಡಿ ಅವರ ಒಳಿತಿಗಾಗಿ ಅಲ್ಲಾಹನಲ್ಲಿ ನಿಷ್ಕಳಂಕ ಮನಸ್ಸಿನಿಂದ ದುಆ ನೆರವೇರಿಸಬೇಕಾದ ವಿಶೇಷ ದಿನವಾಗಿದೆ ಈದ್…
ಕುಟುಂಬಿಕರನ್ನು, ಸ್ನೇಹಿತರನ್ನು, ಹತ್ತಿರ ಇರುವವರನ್ನು, ದೂರದಲ್ಲಿರುವವರನ್ನು ಖುದ್ದಾಗಿ ಕಂಡು ಮಾತನಾಡಿಸುವ ಹಾಗೂ ಅವರೆಲ್ಲರಿಗಾಗಿ ಪ್ರಾರ್ಥಿಸುವ ಮೂಲಕ ಸೌಹಾರ್ದ ಬಾಂಧವ್ಯದ ಋಣ ತೀರಿಸುವ ದಿನವಾಗಿದೆ ಇಂದಿನ ಈದ್ ದಿನ…
ಈದುಲ್ ಅಳ್ ಹಾ ಹಬ್ಬದ ಸಂಭ್ರಮ-ಸಡಗರದಿಂದ ಬಡ-ಬಗ್ಗರೂ ವಂಚಿತರಾಗಬಾರದು ಎಂಬ ಮಹತ್ತರ ಸದುದ್ದೇಶದಿಂದ ಪವಿತ್ರ ಇಸ್ಲಾಂ ಕಲ್ಪಿಸಿದ ದಾನ-ಧರ್ಮಗಳನ್ನು ಅಲ್ಲಾಹು ಸಂಪತ್ತು ಕರುಣಿಸಿದ ಸ್ಥಿತಿವಂತರು ಯಥೇಚ್ಛವಾಗಿ ನೀಡುವ ಮೂಲಕ ಅಲ್ಲಾಹು ನೀಡಿದ್ದನ್ನು ಬಡವರ ಮೂಲಕ ಅವನಿಗಾಗಿ ಅರ್ಪಿಸಬೇಕಾದ ದಿನವಾಗಿದೆ ಈದ್…
ಈ ರೀತಿಯಾಗಿ ಇಸ್ಲಾಮಿ ಚೌಕಟ್ಟಿನಲ್ಲಿ ಸಂಭ್ರಮದಿಂದ ಈದ್ ಆಚರಿಸಿದ ಸಜ್ಜನ ವಿಶ್ವಾಸಿಗಳ ಸಾಲಿನಲ್ಲಿ ಅಲ್ಲಾಹನು ನಮ್ಮೆಲ್ಲರನ್ನು ಒಳಪಡಿಸಲಿ… ಆಮೀನ್ ಯಾ ರಬ್ಬಲ್ ಆಲಮೀನ್ ಎಂಬ ಅಂತರಾಳದ ಪ್ರಾರ್ಥನೆಯೊಂದಿಗೆ ಸರ್ವರಿಗೂ ಈದ್-ಉಲ್-ಅಳ್ ಹಾ ಹಬ್ಬದ ಮನತುಂಬಿದ ಶುಭಾಶಯಗಳು …..
–ನಝೀರ್ ಹೊಸಮೋಗ್ರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.