(www.vknews. in) ; ಇತ್ತೀಚಿಗೆ ಹೆಚ್ಚು ಸುದ್ದಿ ಮಾಡಿದ ಉಡುಪಿ ಜಿಲ್ಲೆಯ ಬ್ರಹ್ಮಾವರದ ಮಹೇಶ್ ಹಾಸ್ಪಿಟಲ್ ನ ವೈದ್ಯ ಡಾ ಕೀರ್ತನ್ ಕುಮಾರ್ ಉಪಾಧ್ಯರ ಜನಾಂಗ ವಿರೋಧಿ ಹೇಳಿಕೆಯನ್ನು ಖಂಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯು ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರೆದಿದೆ. ವೇದಿಕೆ ಅಧ್ಯಕ್ಷರಾದ ಸೋಹೇಲ್ ಅಹಮದ್ ಮರೂರ್ ಮತ್ತು ಕಾರ್ಯದರ್ಶಿ ಡಾ. ಹಕೀಮ್ ತೀರ್ಥಹಳ್ಳಿ ದಾವಣಗೆರೆಯಲ್ಲಿ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.
ಪತ್ರದ ವಿವರ ಹೀಗಿದೆ..
ತಮ್ಮ ವೈದ್ಯಕೀಯ ಸಂಸ್ಥೆಯಲ್ಲಿ ನೊಂದಾವಣೆಗೊಂಡಿರುವ ಬ್ರಹ್ಮಾವರದ ಮಹೇಶ್ ಹಾಸ್ಪಿಟಲ್ ಇಲ್ಲಿನ ವೈದ್ಯರಾದ ಡಾ. ಕೀರ್ತನ್ ಕುಮಾರ್ ಉಪಾಧ್ಯಾರವರು ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವ ಮಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ವಿದ್ಯಮಾನ ತಮ್ಮ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇವೆ. ಕಾಲಾತೀತ, ಧರ್ಮಾತೀತ, ದೇಶಾತೀತವಾಗಿ ವೈದ್ಯ ವೃತ್ತಿಯು ಸ್ವಭಾವತ: ಜೀವಪರವಾದುದು. ಈ ವಿಚಾರದಲ್ಲಿ ವೈದ್ಯ ವೃತ್ತಿಯಲ್ಲಿರುವವರ ಮನಸ್ಥಿತಿಯನ್ನು ಜಗತ್ತಿಡೀ ಸಮ್ಮತಿಸುತ್ತದೆ ಮಾತ್ರವಲ್ಲ, ಮರುಮಾತಿಲ್ಲದೆ ಮಾನ್ಯತೆಯನ್ನು ನೀಡುತ್ತದೆ.
ವೃತ್ತಿವರ್ಗಗಳಲ್ಲಿಯೇ ವೈದ್ಯ ವೃತ್ತಿಯು ಸಂಯಮ, ಸಹನೆ, ಸಜ್ಜನಿಕೆ, ಸೌಹಾರ್ದಗಳ ಸಮ್ಮಿಲನಗಳಿಂದ ಕೂಡಿದ ವೃತ್ತಿಯಾಗಿದೆ. ಹೀಗಾಗಿಯೇ ಸಮಾಜ ವೈದ್ಯರ ಜಾತಿ, ಧರ್ಮ, ಬಣ್ಣ, ಭಾಷೆಗಳ ಸೀಮೆಗಳಿಲ್ಲದೆ ಸ್ವೀಕರಿಸುತ್ತದೆ. ಇತರ ವೃತ್ತಿ ವರ್ಗಗಳನ್ನು ಹೋಲಿಸಿದರೆ ವೈದ್ಯ ವೃತ್ತಿಯಲ್ಲಿ ಅಪರಾಧಿಕ ಮನಸ್ಥಿತಿ ಇರುವವರ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ಪ್ರಾಯೋಗಿಕವಾಗಿ ಮತ್ತು ಪ್ರತ್ಯಕ್ಷವಾಗಿ ಮನುಷ್ಯರೆಲ್ಲರ ರಕ್ತ, ರಚನೆ, ಸ್ವರೂಪ, ಸಜೀವತನದ ನೈಜತೆಯನ್ನು ಕಾಣುವ ಮನುಷ್ಯ ವರ್ಗದಲ್ಲಿ ವೈದ್ಯನೇ ಮೊದಲಿಗನು ಮತ್ತು ಏಕೈಕನು.
ಸೃಷ್ಟಿಯು ಸಮಾನವಾಗಿ ಜೀವವನ್ನು ಸೃಷ್ಟಿಸಿದೆ ಎನ್ನುವ ಸತ್ಯವು ಸದೃಢವಾಗಿ ಸಾಕಾರಗೊಳ್ಳುವುದು ವೈದ್ಯನ ಮುಂದೆಯೇ ಆಗಿದೆ,, ಮನುಷ್ಯನೂ ಸೇರಿದಂತೆ ಇರುವ ಜೀವರಾಶಿಯ ಹುಟ್ಟಿನ ಪೋಷಣೆಯಲ್ಲಿ ತಾಯಿಯ ನಂತರದ ಸ್ಥಾನ ವೈದ್ಯನದ್ದೇ ಆಗಿದೆ,, ಹೀಗಾಗಿ, ವೈದ್ಯವೃತ್ತಿಯ ಮನಸ್ಥಿತಿಯನ್ನು ಸೃಷ್ಟಿಕರ್ತನು, ಸೃಷ್ಟಿಯ ಲಿಖಿತ ನಿಯಮಗಳ ಬಾಧ್ಯತೆಗೆ ಒಳಪಡಿಸದೆ ಸಹಜ ಪ್ರೇರಣೆಯಾಗಿ ಆ ವೃತ್ತಿಯಲ್ಲಿ ಸುಪ್ತವಾಗಿ ಕಾಣಿಸಿದ್ದಾನೆ. ಇದು ಜೀವರಾಶಿ ಮತ್ತು ಮನುಕುಲದ ಪಾಲಿಗೆ ಸೃಷ್ಟಿಯ ಒಂದು ದೊಡ್ಡ ಅನುಗ್ರಹ.
ವೈದ್ಯ ವೃತ್ತಿಯ ಸುತ್ತ ಇಷ್ಟೆಲ್ಲ ಜೀವ-ಭಾವ ಪರಿಭ್ರಮಣಗಳಿರುವಾಗ, ಮೇಲೆ ಹೆಸರಿಸಿದ ವೈದ್ಯನೊಬ್ಬ ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳಲ್ಲಿ ಒಂದಾದ ಮುಸ್ಲಿಂ ಸಮುದಾಯವೇ ನಾಶವಾಗಬೇಕೆಂದು ಆಶಿಸುವುದು ಮತ್ತು ಅದನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಕಟಗೊಳಿಸುವುದು ಅತ್ಯಂತ ಹೇಯ ಮತ್ತು ಹೀನವಾದದು. ಇಂತಹ ಹೇಳಿಕೆಗಳ ನಂತರವೂ ಪ್ರತಿಕ್ರಿಯಿಸಬೇಕಾದವರೂ ಪ್ರತಿಕ್ರಿಯಿಸದೆ ಇದ್ದರೆ ಅಂತಹ ಮೌನವು ಸಮ್ಮತಿಯ ಲಕ್ಷಣವಾಗಿ ಸಾಮಾಜಿಕ ಪ್ರಕ್ಷುಬ್ಧತೆಯನ್ನು ಸೃಷ್ಟಿಸುವುದು ಮಾತ್ರವಲ್ಲ, ಸಮಾಜ ವೃತ್ತಿಯ ಮೇಲೆ ಇಟ್ಟಿರುವ ಗೌರವಕ್ಕೆ ಧಕ್ಕೆ ತರುತ್ತದೆ.
ಈ ವೈದ್ಯರ ಇಂತಹ ಮನಸ್ಥಿತಿಯ ಹೊರತಾಗಿಯೂ ಕೂಡ ವೈದ್ಯವೃತ್ತಿಯ ಮೇಲಿನ ಎಂದಿನ ವಿಶ್ವಾಸವನ್ನು ಮುಸ್ಲಿಂ ಸಮುದಾಯ ನಿಸ್ಸಂದೇಹವಾಗಿ ಪುಷ್ಠಿಕರಿಸುತ್ತದೆ. ಆದರೆ ಇಂಥ ಮನಸ್ಥಿತಿ ಇರುವ ವೈದ್ಯರ ಮೇಲೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಇಂಥ ಅಪರಾಧಗಳು ಸಾಮಾನ್ಯವಾಗಿ ಪರಿಗಣಿತವಾಗಿ ನಿರಂತರ ಸಂಭವಿಸುವ ಸಂಭಾವ್ಯತೆ ಹೆಚ್ಚಿರುತ್ತದೆ..
ಈ ಪತ್ರದ ಮೂಲಕ, ತಾವು ತಮ್ಮ ಅಧಿಕಾರ ವ್ಯಾಪ್ತಿಯ ಒಳಗೆ ಸಾಧ್ಯವಿರಬಹುದಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ತಪ್ಪಿತಸ್ಥ ವೈದ್ಯನಿಗೆ ವೈದ್ಯ ವೃತ್ತಿಯ ತತ್ವ-ಆದರ್ಶಗಳ ಬಗ್ಗೆ ಸೂಕ್ತ ಶಿಕ್ಷಣವನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.