(www.vknews.in) : ಒಮ್ಮೆ ಕಣ್ಣೋಡಿಸಿ ಬಿಸಾಡುವ, ಮದುವೆ ಆಮಂತ್ರಣ ಪತ್ರಕ್ಕೆ ದುಬಾರಿ ವೆಚ್ಚವೇಕೆಂದು, ಆಕ್ಷೇಪಿಸಿದವನ ಮಗಳ ಮದುವೆಯ ಆಮಂತ್ರಣ ಪತ್ರಕ್ಕೆ ಚಿನ್ನದ ರಂಗು ಹಾಗೂ ಅತ್ಯಾಕರ್ಷಕ ಹೊದಿಕೆಯನ್ನೂ ಹೊದಿಸಿ, ಚಳಿ ಬಿಡಿಸಲಾಗಿತ್ತು. ಕೆಲವೆಡೆ ಎರಡು ತರಹದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗುತ್ತದೆ. ಒಂದು ಜನಸಾಮಾನ್ಯರಿಗೆ, ಮತ್ತೊಂದು ಗಣ್ಯರಿಗೆ, ಶ್ರೀಮಂತರಿಗೆ. ಇದು ಉಳ್ಳವರ ಕಾರುಬಾರಿನ ವ್ಯಥೆ. ಅಸರ್ ನಮಾಝ್ನೊಂದಿಗೆ ಮಸೀದಿಯಲ್ಲೇ ನಿಖಾಹ್ ಆದರೆ, ಬಂದವರಿಗೂ ಜಮಾಅತ್ ನಮಾಝ್ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಮತ್ತು ಯುವಕರು ಸರಳ ಸುಂದರ ಮಾದರಿ ವೈವಾಹಿಕ ಬದುಕಿಗೆ ಸಾಕ್ಷಿಗಳಾದರೆ, ಸಮಾಜದ ದಿಕ್ಕು ಬದಲಾಗುತ್ತದೆ ಎಂದು ಸದಾ ಸಮುದಾಯಕ್ಕೆ ಕರೆ ನೀಡಿದಾತನ ಮದುವೆಯ ಕಾರುಬಾರು ಹೇಳಿ ಪ್ರಯೋಜನವಿಲ್ಲ.
ನೋವಿನ ಸಂಗತಿಯೇನೆಂದರೆ, ಮದುವೆ ಮಾರುಕಟ್ಟೆಯಲ್ಲಿ ಅಲ್ಲಾಹನ ದೀನಿನ ಸೇವೆ ಮಾಡುವವರೂ ವ್ಯಾಪಾರಿಗಳಾಗಿ ಬಿಟ್ಟದ್ದು ಬಹು ದೊಡ್ಡ ದುರಂತ. ಅವರೂ ಹುಚ್ಚು ಪ್ರತಿಷ್ಠೆ, ಈಗೋ, ಸಂಪ್ರದಾಯದ ಬೆನ್ನೇರಿ, ಬೆನ್ನು ಬಗ್ಗಿಸಿಕೊಂಡಿದ್ದಾರೆ. ಯಾವುದಕ್ಕೂ ಮಾತು ಬಾರದ ಮೂಕರಾಗಿದ್ದಾರೆ. ಅವರ ಧ್ವನಿಯನ್ನೇ ಕಿತ್ತುಕೊಳ್ಳಲಾಗಿದೆ.
ನಿಜವಾಗಿ ನಾವು ವಿರುದ್ಧ ದಿಕ್ಕಿಗೆ ಓಡುತ್ತಲೇ, ಹಾದಿ ತಪ್ಪಿದೆಯೆಂದು ಹಪಹಪಿಸುವ ಮೂರ್ಖರು. ಪ್ರತಿಷ್ಠೆ ಮತ್ತು ಕಾರುಬಾರನ್ನು ತೋರ್ಪಡಿಸಲು, ದುರ್ವ್ಯಯಗಳಲ್ಲೇ ಜೋಕಾಲಿಯಾಡಿ ಸಮಜಾಯಿಷಿಕೊಳ್ಳುವ ಶತಮೂರ್ಖರು. ಹಾಗೆಯೇ ನಿಖಾಹ್ನೊಂದಿಗೆ ಭೂರಿಭೋಜನ ನೀಡಿಯೂ ವಲೀಮದ ಹೆಸರಲ್ಲಿ ಮತ್ತೆ ಪ್ರತ್ಯೇಕ ಡಿನ್ನರ್ ನೀಡಲಾಗುತ್ತದೆ. ಮತ್ತೊಂದು ದಿನ ರಿಷೆಪ್ಷನ್ನ ಹೆಸರಲ್ಲಿ “ಬಫೆ”ಯೂ ಇದೆ. ಜೊತೆಗೆ ಹತ್ತಾರು ಫಲಾಹಾರಗಳು, ತಂಪು ಪಾನೀಯಗಳು, ವಿವಿಧ ತಿಂಡಿ ತಿನಿಸುಗಳು… ಇನ್ನೂ ಏನಾದರೂ ಉಳಿದಿದೆಯೇ ಎಂದು ಮತ್ತೆ ಇಣುಕಿ ನೋಡಲಾಗುತ್ತದೆ. ನಮ್ಮ ಮದುವೆಗಳ ಊಟೋಪಚಾರಗಳ ಪಟ್ಟಿಯನ್ನು ತೀರ್ಮಾನಿಸುವುದು ಕ್ಯಾಟರಿಂಗ್ನವರಾಗಿರುವುದು ಬಹಳ ಸೋಜಿಗ. ಇದಂತೂ ಬಹಳ ಪರಿತಾಪಕರ. ನಮಗರಿವಿಲ್ಲದೆ, ಹಣ ನಮ್ಮನ್ನು ದುರಹಂಕಾರಿಯನ್ನಾಗಿ ಮಾರ್ಪಡಿಸಿದೆ.
ಮದುವೆ ಮತ್ತು ಮದುವೆಯ ಹಿಂದು-ಮುಂದು ಹತ್ತು ಹಲವು ಕಟ್ಟುಪಾಡುಗಳನ್ನು ಆಯೋಜಿಸಿ ಧಾರಾಳ ದುರ್ವ್ಯಯ ಮಾಡಲಾಗುತ್ತದೆ. ನಿಜವಾಗಿ ಆಡಂಭರ ಮತ್ತು ಬೂಟಾಟಿಕೆಗಳು ವರದಕ್ಷಿಣೆಗಿಂತಲೂ ಮಾರಕವಾದುದು. ಅದು ಇಡೀ ಸಮುದಾಯವನ್ನು ಬಾಧಿಸುತ್ತದೆ. ದುರ್ವ್ಯಯದ ಪೈಪೋಟಿಗಳಿಂದ ದೂರ ಸರಿದು, ಅದೇ ಹಣವನ್ನು ತಮ್ಮ ಮೂಲಭೂತ ಅಗತ್ಯಗಳಿಗೆ ವ್ಯಯಿಸಬಹುದಲ್ಲವೇ? ಮದುವೆಯ ಬಳಿಕ ಸ್ವಂತಕ್ಕಾಗಿ ಪುಟ್ಟ ಮನೆಯೊಂದರ ಅಗತ್ಯವೇನೆಂದು ವಿವರಿಸಬೇಕಾಗಿಲ್ಲ ತಾನೆ? ಯಾಕೆ ಬಾಡಿಗೆ ಮನೆಯಲ್ಲೇ ಕಾಲಕಾಲ ನರಳಬೇಕು?
ಹೌದು, ದಿನದಿಂದ ದಿನಕ್ಕೆ ಒಟ್ಟು ಸಮಾಜದ ಆರ್ಥಿಕ ಸ್ಥಿತಿಗತಿ, ವ್ಯವಹಾರಗಳು ಕುಸಿಯುತ್ತಿರುವಾಗ, ಜನಸಾಮಾನ್ಯರ ಬದುಕಿನ ಪಾಡೇನೆಂದು ಪ್ರತಿಯೊಬ್ಬರೂ ಅನುಭವಿಸುತ್ತಿದ್ದಾರೆ. ಅನಗತ್ಯಕ್ಕೆಲ್ಲ ಇದ್ದ ಹಣವನ್ನು ವ್ಯಯಿಸಿ, ಅಗತ್ಯಕ್ಕೆ ಮತ್ತೊಬ್ಬರ ಮುಂದೆ ಅಂಗಲಾಚುವ ಗತಿಗೇಡು ಬೇಕೇ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಕಟ್ಟಿ ಮತ್ತೆಮತ್ತೆ ಸಾಲಗಾರನಾಗಿ, ಯರ್ಯಾರಿಗೆ ಮೋಸ ಮಾಡುವುದರಿಂದ ನೆಮ್ಮದಿ ಸಿಗಲು ಸಾಧ್ಯವೇ?
ಒಟ್ಟಿನಲ್ಲಿ, ಉಣ್ಣುವ ಮತ್ತು ಉಣ್ಣಿಸುವ ಈ ಓಟದಲ್ಲಿ ನಮಗಂತೂ ಕಣ್ಣು ಕಾಣದಂತಾಗಿದೆ. ಮದುವೆ ಎಂಬ ಸರಳ ಸುಂದರ ಇಬಾದತ್ ಶಪಿಸಲ್ಪಡುವಷ್ಟು ಕೆಟ್ಟು ಹೋಗಿರುವುದು ಸಮುದಾಯದ ದುರಂತ. “ಯಾವುದೇ ಕಷ್ಟ, ತ್ರಾಸದ ಬೇಡಿಕೆಗಳಿಲ್ಲದ ಸರಳ ವಿವಾಹದಲ್ಲಿ ಸಮೃದ್ಧಿ ಇದೆ” ಎಂಬ ಪ್ರವಾದಿವರ್ಯ(ಸ)ರ ಪಾವನ ವಚನವನ್ನು ಅಳವಡಿಸಿದರೆ ಮತ್ತು ನಾಯಕರು ಅನುಯಾಯಿಗಳಿಗೆ, ಶ್ರೀಮಂತರು ಬಡವರಿಗೆ, ಉಳ್ಳವರು ಇಲ್ಲದವರಿಗೆ ಮಾದರಿಗಳಾದರೆ ಈ ಸಮುದಾಯದ ಬಹಳಷ್ಟು ಸಮಸ್ಯೆಗಳು ದೂರ ಸರಿದಂತೆ.
ಆದ್ದರಿಂದ ನಮ್ಮ ಯುವಕರು ಯಾರ ಮೂದಲಿಕೆ, ಅಣಕಗಳಿಗೆ ಹಿಂಜರಿಯದೆ ಸರಳ ಮದುವೆಯ ಗುರುತುಗಳಾಗಬೇಕು. ಆ ಮಾದರಿಯ ಸಾಕ್ಷಿಗಳಾಗಬೇಕು. ಈ ವಿಷಯದಲ್ಲಿ ಹಿರಿಯರು ಸಮುದಾಯದ ಯುವಕರನ್ನು ಪ್ರೋತ್ಸಾಹಿಸಬೇಕು. ಮದುವೆಗೆ ನಮ್ಮನ್ನು ಕರೆಯಲಿಲ್ಲ ಅಥವಾ ನಾವು ಕರೆದಿದ್ದೆವು ಅವರು ಬರಲಿಲ್ಲವೆಂದು ಮುನಿಸಿಕೊಳ್ಳುವ ಹುಚ್ಚು ಒಳ್ಳೆಯದಲ್ಲ. ಕೆಲವರಿಗೆ ಸಾಲ ತೀರಿಸಬೇಕಾದ ಬಾಧ್ಯತೆಯ ಕುರಿತು ಯಾವ ಆತಂಕ, ಗಮನವೂ ಇಲ್ಲ. ಆದರೆ ಮದುವೆಗೆ ಬಾರದವರೊಂದಿಗೆ ಯಾಕೆ ಬಂದಿಲ್ಲವೆಂದು ಸಿಡುಕುತ್ತಾರೆ. ಗೊಣಗುತ್ತಾರೆ.
ಮುಂದುವರಿಯುವುದು…… ✍️ ಮುಹಮ್ಮದ್ ಸಿದ್ದೀಕ್, ಜಕ್ರಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.