ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ನಗುವಿನಿಂದಾಗುವ ಪ್ರಯೋಜನಗಳು ಹಾಗೂ ಅದರ ಚಿಕಿತ್ಸಕ ಗುಣಗಳು, ಜಾಗತಿಕವಾಗಿ ಜನರಲ್ಲಿ ಸಹೋದರತೆ, ಪ್ರೀತಿ, ಸ್ನೇಹ ಭಾವನೆ ಬೆಳೆಸಲು ನಗುವೆಂಬುದು ತುಂಬಾ ಮಹತ್ವವಾದ ಸಾಧನವೆಂದು ಮನಗಂಡ ಡಾ. ಮದನ್ ಕಟಾರಿಯಾ ಎಂಬುವರು ಮೊದಲ ಬಾರಿಗೆ ವಿಶ್ವ ನಗು ದಿನವನ್ನು ಮುಂಬೈನಲ್ಲಿ ಆಚರಿಸುವ ಮೂಲಕ ಚಾಲನೆ ನೀಡಿದರು.
ಮುಂದೆ ಆರೋಗ್ಯಕರ ಜೀವನಕ್ಕೆ ನಗುವೆಂಬುದು ಅತೀ ಅಗತ್ಯವೆಂದು ಪರಿಗಣಿಸಿ ಜಗತ್ತಿನಾದ್ಯಂತ ಪ್ರತಿ ವರ್ಷ ಮೇ ತಿಂಗಳ ಪ್ರಥಮ ರವಿವಾರದಂದು ವಿಶ್ವ ನಗುವಿನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ದಿನ ಸಾಕಷ್ಟು ಬೇಜಾರಾಗಿದೆ ಎಂದು ನಾವೇನಾದರೂ ಭಾವಿಸಿಕೊಂಡಾಗ , ಒಂದು ಸುಂದರವಾದ ನಗುವಿನ ಮೂಲಕ ಆ ಬೇಜಾರನ್ನು ಹೋಗಲಾಡಿಸಬಹುದಾಗಿದೆ. ನಗುವಿನಲ್ಲಿ ಅಂತಹ ಒಂದು ಅದ್ಭುತ ಶಕ್ತಿ ಇದೆ. ಅದಕ್ಕೆ ಹೇಳುವುದು ನಗು ನಗುತಾ ನಲೀ ನಲೀ ಏನೇ ಆಗಲಿ ಎಂಬ ಹಾಡು ನಗುವಿನ ಮಹತ್ವವನ್ನು ಸಾರುತ್ತದೆ. ಯಾವಾಗಲೂ ನಗುತ್ತಿರುವವನಿಗೆ ಉತ್ತಮ ಆರೋಗ್ಯ ಹಾಗೂ ಆಯಸ್ಸು ಕೂಡ ಹೆಚ್ಚಾಗಿರುತ್ತದೆ.
ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆಯಾಗಿದೆ. ನಗುತ್ತಾ, ಇನ್ನೊಬ್ಬರನ್ನು ನಗಿಸುತ್ತಾ ಜೀವನದ ನೌಕೆಯನ್ನು ಸಾಗಿಸಿದಾಗ ಮಾತ್ರ ಬೆಟ್ಟದಂತಹ ಕಷ್ಟಗಳು ಕೂಡ ಮಂಜುಗಡ್ಡೆಯಂತೆ ಕರಗಿ ಹೋಗುತ್ತವೆ. ಇತ್ತೀಚಿನ ದಿನಗಳಲ್ಲಿ ಕೇವಲ ಹಣವನ್ನು ಗಳಿಸುವುದೇ ಜೀವನದ ಮುಖ್ಯ ಉದ್ದೇಶವೆಂದು ತಿಳಿದುಕೊಂಡ ಮನುಷ್ಯ ಪ್ರತಿ ಕ್ಷಣ ಹಣ ಗಳಿಸುವ ವಿಚಾರದಲ್ಲಿಯೇ ದಿನವನ್ನು ದೂಡುವಂತಾಗಿದೆ ಬದುಕು. ಇವೆಲ್ಲದರ ಮಧ್ಯ ಮನುಷ್ಯನಿಗೆ ಹಣವೇನೋ ಸಿಗುತ್ತಿದೆ, ಆದರೆ ನಗಲು ಸಮಯವಿಲ್ಲದಂತಾಗಿದೆ. ಅಂದರೆ ಕುಟುಂಬದ ಜೊತೆಗೆ ಸಮಯ ಕಳೆಯಲು, ಸದಸ್ಯರೊಂದಿಗೆ ಬೆರೆತು ಮಾತನಾಡುವುದಾಗಲಿ , ಅವರ ಕಷ್ಟ ಸುಖಗಳನ್ನು ಆಲಿಸುವುದಾಗಲಿ, ಇದ್ಯಾವುದೂ ಸಾಧ್ಯವಾಗುತ್ತಿಲ್ಲ. ಕೇವಲ ಯಂತ್ರಗಳಂತೆ ಬದುಕು ಸಾಗಿಸುತ್ತಿರುವ ಮನುಷ್ಯ , ಹಣದ ಹಿಂದೆ ಓಡತೊಡಗಿದ. ಆದರೆ ನಗುವೆಂಬುದು ಮಾರ್ಕೆಟ್ ನಲ್ಲಿ ಖರೀದಿಸುವ ವಸ್ತುವಲ್ಲ. ಈ ಎಲ್ಲ ಕಾರಣಗಳಿಂದ ನಗುವೆಂಬುದು ಇಂದಿನ ಪರಿಸ್ಥಿತಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿತೆಂದು ಹೇಳಬಹುದಾಗಿದೆ. ಯಾವಾಗ ಕುಟುಂಬ ಸದಸ್ಯರ ನಡುವೆ ಸಂತೋಷ, ಆತ್ಮೀಯತೆ ಮಾಯವಾಗ ತೊಡಗಿತೋ ಆಗ ಕುಟುಂಬಗಳ ಮಧ್ಯ ಬಿರುಕು ಉಂಟಾಗಲು ಪ್ರಾರಂಭವಾಯಿತು.
ಒಂದು ಫೋಟೋ ತೆಗೆಸಿಕೊಳ್ಳುವಾಗ ನಗುವಿಲ್ಲದ ಗಾಂಭೀರ್ಯದಿಂದ ಕೂಡಿದ ಫೋಟೋ ಆಗಿದ್ದರೆ ಅದನ್ನು ನೋಡಿದವರು ಯಾರೂ ಇಷ್ಟ ಪಡುವುದಿಲ್ಲ. ಏನು ಇಷ್ಟೊಂದು ಗಾಂಭೀರ್ಯ? ಸ್ವಲ್ಪ ನಗಬಾರದಿತ್ತೇ? ಎಂದು ಪ್ರತಿಯೊಬ್ಬರೂ ಪ್ರಶ್ನಿಸುತ್ತಾರೆ. ಅದೇ ಒಂದು ಮುಗಳ್ನಗೆಯಿಂದ ಕೂಡಿದ ಫೋಟೋ ಆಗಿದ್ದರೆ ಅದನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಅಂದರೆ ಕೇವಲ ಒಂದು ನಿಮಿಷ ನಗು ಮುಖದ ಒಂದು ಫೋಟೋ ಅಷ್ಟೊಂದು ಜನರನ್ನು ಆಕರ್ಷಿಸುತ್ತದೆ ಎಂದರೆ ನಾವು ವಿಚಾರ ಮಾಡಿಕೊಳ್ಳಬೇಕು ವರ್ಷ ಪೂರ್ತಿ ನಗು ನಗುತ್ತಾ ಇದ್ದರೆ ಅದೆಷ್ಟು ಜನರನ್ನು ಆಕರ್ಷಿಸಬಹದು? ಅದೆಷ್ಟು ಜನರು ನಮ್ಮನ್ನು ಇಷ್ಟಪಡಬಹುದು? ಅಲ್ವಾ. ಅದಕ್ಕೆ ಹೇಳುವುದು ನಗುವಿನ ಪ್ರಭಾವವೇ ಅಷ್ಟೊಂದು ಪ್ರಭಲವಾದುದು. ಕಛೇರಿಯೇ ಇರಲಿ, ಮನೆಯೇ ಇರಲಿ, ಸದಾಕಾಲ ಎಲ್ಲರೊಂದಿಗೆ ನಗು ನಗುತ್ತಾ ಮಾತನಾಡುವುದರಿಂದ ಎಲ್ಲರೂ ನಮ್ಮನ್ನು ಇಷ್ಟ ಪಡುತ್ತಾರೆ. ಹಣ, ಆಸ್ತಿ, ಅಧಿಕಾರ, ಅಂತಸ್ತಿನಿಂದ ಗೆಲ್ಲದ್ದನ್ನು ಕೇವಲ ಒಂದೇ ಒಂದು ನಗುವಿನಿಂದ ಎಲ್ಲರ ಹೃದಯವನ್ನು ಗೆಲ್ಲಬಹುದು. ನಗುವಿನ ಹಿಂದೆ ಒಳ್ಳೆತನ, ದಯೆ ಮತ್ತು ಕರುಣೆ, ಪ್ರೀತಿ, ವಿಶ್ವಾಸ ಎಲ್ಲವನ್ನೂ ಒಳಗೊಂಡಿರುತ್ತದೆ.
ನಗುವಿನಿಂದಾಗುವ ಲಾಭಗಳು: ನಗುವೆಂಬುದು ಒತ್ತಡಗಳಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ. ಒಡೆದು ಹೋದ ಕುಟುಂಬಗಳನ್ನು ಜೋಡಿಸುವುದರ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಬಹುದು. ತಂಡವಾಗಿ ಕಾರ್ಯ ನಿರ್ವಹಿಸುವಾಗ ತಂಡದ ನಾಯಕ ಇತರ ಸದಸ್ಯರ ಪ್ರೀತಿ, ವಿಶ್ವಾಸವನ್ನು ಗಳಿಸಿ ಯಶಸ್ಸು ಸಾಧಿಸಲು ಸಾಧ್ಯವಾಗುವುದು ನಗುವಿನಿಂದ ಮಾತ್ರ.
ಸಂಘರ್ಷವನ್ನು ಹೋಗಲಾಡಿಸಲು, ಆತಂಕ, ಭಯ, ಒತ್ತಡವನ್ನು ನಿಯಂತ್ರಿಸಲು, ಹಾರ್ಮೋನ್ ಸಮತೋಲನವನ್ನು ಕಾಪಾಡಲು, ಸ್ನಾಯು ಸಡಿಲಿಕೆಗೆ ಕೂಡ ಸಹಾಯಕ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ಒಟ್ಟಾರೆಯಾಗಿ ಕಾಯಿಲೆಗಳಿಂದ ಮುಕ್ತವಾದ ಸಂತೋಷದ ಜೀವನವನ್ನು ನಡೆಸಲು ನಗುವೆಂಬುದು ಇರಲೇಬೇಕು. ಇಂತಹ ಯಾವುದೇ ಖರ್ಚಿಲ್ಲದ ನಗುವನ್ನು ದುಬಾರಿಯಾಗಿಸಿಕೊಳ್ಳುವುದು ಬೇಡ.
ರಾಜು. ಭೂಶೆಟ್ಟಿ. ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ ಡಯಟ್, ಧಾರವಾಡ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.