ಲೇಖನ (www.vknews.com) : ಆದಿವಾಸಿ ಕುಟುಂಬದಲ್ಲಿ ನನ್ನ ಜನನವಾಯಿತು. ಎಲ್ಲಿ ಹುಟ್ಟಬೇಕು ಎಂಬುವುದು ನಮ್ಮ ಹತೋಟಿಯಲ್ಲಿಲ್ಲ. ನಾನು ೫ ವರ್ಷದ ಮಗುವಿದ್ದಾಗ ನನ್ನ ತಂದೆಯವರು ಹೇಳಿದರು: ಪ್ರತಿಯೊಬ್ಬರಿಗೂ ದೇವರು ಎಲ್ಲಿ ಹುಟ್ಟಿಸಬೇಕೋ ಅಲ್ಲಿಯೇ ಹುಟ್ಟಿಸುತ್ತಾನೆ. ವಿಶೇಷ ಕಾರಣದಿಂದಲೇ ದೇವರು ನಿನಗೆ ಈ ಸಮಾಜದಲ್ಲಿ ಹುಟ್ಟಿಸಿರಬಹುದು. ಪ್ರತಿಯೊಬ್ಬರಿಗೂ ದೇವರು ಸಮಾನವಾದ ಬುದ್ಧಿಕೊಟ್ಟಿರುತ್ತಾನೆ. ಎಲ್ಲರೂ ಸರಿಸಮಾನರು. ನಾವು ಬೇರೆಯವರಿಗಿಂತ ಕಡಿಮೆ ವಿಶೇಷತೆ ಉಳ್ಳವರು ಎಂದು ಭಾವಿಸಬಾರದು. ಪ್ರತಿ ಸಮಾಜದ ಒಂದು ವಿಶೇಷತೆ ಇರುತ್ತದೆ. ನಮ್ಮ ಸಮಾಜದ ಆ ವಿಶೇಷತೆ ಬಗ್ಗೆ ನಮಗೆ ಗರ್ವ ಇರಬೇಕು.
ನನ್ನ ತಂದೆ ನನಗೆ ರಾಂಚಿಯ ಒಂದು ಪ್ರಸಿದ್ಧ ಆಂಗ್ಲ ಶಾಲೆಗೆ ಸೇರಿಸಲು ಕರೆದುಕೊಂಡು ಹೋದರು. ಆದರೆ ಅಲ್ಲಿ ನಡೆದದ್ದೇ ಬೇರೆ. ನಾನು ಆದಿವಾಸಿ ಸಮಾಜದವಳು ಎಂದು ಗೊತ್ತಾಗಿ ನನಗೆ ಆ ಶಾಲೆಯಲ್ಲಿ ದಾಖಲಾತಿ ಸಿಗಲಿಲ್ಲ. ನನ್ನ ತಂದೆಯ ಮಾತುಗಳು ಇನ್ನೂ ನನಗೆ ನೆನಪಿದೆ. ಅವರು ಹೇಳಿದರು: ಬಾ ಮಗಳೇ ನಿನಗೆ ಹಿಂದಿ ಮಾಧ್ಯಮದ ಶಾಲೆಯಲ್ಲಿ ದಾಖಲಾತಿ ಕೊಡಿಸುತ್ತೇನೆ. ನಂತರ ನನ್ನ ತಾಯಿಯವರು ಹಿಂದಿ ಮಾಧ್ಯಮದ ಶಾಲೆಗೆ ಸೇರಿಸಿದರು. ನನಗೆ ಆಂಗ್ಲ ಭಾಷೆ ಬಹಳ ಚೆನ್ನಾಗಿ ಬರುತ್ತಿತ್ತು. ಹಿಂದಿ ಭಾಷೆಯಲ್ಲಿ ಕಲಿಕೆ ಬಹಳ ಕಷ್ಟವಾಯಿತು. ನನ್ನಂತಹ ಎಷ್ಟೋ ವಿದ್ಯಾರ್ಥಿಗಳು ಈ ಮಾಧ್ಯಮಗಳ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಬಹಳ ಹಿಂಸೆ ಪಡುತ್ತಿದ್ದರು. ಈಗಲೂ ಪಡುತ್ತಿದ್ದಾರೆ. ಆ ಕಷ್ಟ ನನಗೆ ಗೊತ್ತು. ಗಣಿತದಲ್ಲಿ ಭಾಷೆಯ ನಿಬಂಧನೆಗಳು ಇರಲಿಲ್ಲ. ನನಗೆ ಕಲಿಯಲು ಕಷ್ಟ ಅನ್ನಿಸುತ್ತಿರಲಿಲ್ಲ. ಅದಕ್ಕೆ ಗಣಿತದಲ್ಲಿ ನನಗೆ ಅಭಿರುಚಿ ಹೆಚ್ಚಾಯಿತು. ಆದರೆ ಮೇಲ್ಜಾಯಿಯ ಕೆಲ ಉಪಾಧ್ಯಾಯರು ನನಗೆ ಪ್ರೋತ್ಸಾಹ ಕೊಡುತ್ತಿರಲಿಲ್ಲ. ನನ್ನ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅದನ್ನೇ ನಾನು ಸವಾಲಾಗಿ ತೆಗೆದುಕೊಂಡು ಗಣಿತದಲ್ಲಿ ಮುಂದುವರೆದೆ. ಗಣಿತದಲ್ಲಿ ಸಾಧನೆ ಮಾಡಿ ನಾನು ಏನು ಎಂಬುವುದನ್ನು ತೋರಿಸುತ್ತೇನೆ ಎಂದು ಸಂಕಲ್ಪ ಮಾಡಿದೆ.
ಸಂಸ್ಕೃತದಲ್ಲಿ ನನಗೆ ಬಹಳ ಒಳ್ಳೆಯ ಅಂಕಗಳು ಬರುತ್ತಿದ್ದವು. ಆದರೆ ಮೇಲ್ಜಾತಿಯ ಶಿಕ್ಷಕರು ನನಗೆ ಹಿಯ್ಯಾಳಿಸುತ್ತಿದ್ದರು – ನೀನು ಆದಿವಾಸಿ ಜಾತಿಗೆ ಸೇರಿದವಳು, ನಿನಗೇಕೆ ಸಂಸ್ಕೃತದಲ್ಲಿ ಅತಿ ಹೆಚ್ಚು ಅಂಕ ಗಳಿಸಲು ಆಸೆ ? ಚುಚ್ಚು ಮಾತುಗಳಿಂದ ನನ್ನ ಮನಸ್ಸನ್ನು ನೋಯಿಸುತ್ತಿದ್ದರು. ಆದರೆ ನಾನು ಜಗ್ಗಲಿಲ್ಲ. ಬಗ್ಗಲಿಲ್ಲ.
ಕೇರಳದ ನನ್ನ ಸ್ನೇಹಿತರೊಬ್ಬರು ಹೇಳಿದರು: ವಾಯ್ನಾಡಿನ ಕೆಲ ಶಾಲೆಗಳಲ್ಲಿ ಆದಿವಾಸಿ ಮಕ್ಕಳಿಗಳಿಗಂತಲೇ ಪ್ರತ್ಯೇಕ ಶಾಲೆಗಳಿವೆ. ಆದರೆ ಅಲ್ಲಿ ಸರಿಯಾದ ಶಿಕ್ಷಣ ಇಲ್ಲ. ಆದಿವಾಸಿ ಮಕ್ಕಳು ಶಾಲೆ ಎಂದರೆ ಬೇಡ ಎನ್ನಬೇಕು ಆ ರೀತಿಯಲ್ಲಿ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಾರೆ. ಆದಿವಾಸಿ ಮಕ್ಕಳನ್ನು ಶಿಕ್ಷಣದಿಂದ ದೂರ ಇಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ.
ನಾನು ರಾಂಚಿಯಲ್ಲಿ ಶಿಕ್ಷಣ ಮುಗಿಸಿದ ನಂತರ ನಮ್ಮ ತಂದೆ ಮದರಾಸಿಗೆ ಕರೆದುಕೊಂಡು ಬಂದರು. ಏಕೆಂದರೆ ಉತ್ತರ ಭಾರತದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರೂರಿಬಿಟ್ಟಿದೆ. ದಕ್ಷಿಣ ಭಾರತದ ತಮಿಳುನಾಡಿನಲ್ಲಿ ನನ್ನ ಬಣ್ಣ ನೋಡಿ ಜಾತಿಯ ಹೆಸರಿನಲ್ಲಿ ಮಾನಸಿಕ ಚಿತ್ರಹಿಂಸೆ ಕೊಡುವುದಿಲ್ಲ ಎಂದು ಗೊತ್ತಿತ್ತು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿಎಸ್ಸಿ (ಗಣಿತ) ಮಾಡಲು ಸೇರಿಕೊಂಡೆ. ನಂತರ ತಾಂಬರಂನಲ್ಲಿ ಎಂಎಸ್ಸಿ (ಗಣಿತ) ಮಾಡಿದೆ.
ದೆಹಲಿಯ ಜವಾಹರಲಾಲ ನೆಹರು ಯೂನಿವರ್ಸಿಟಿ ಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಪ್ರೊಫೆಸರ್ ಹುದ್ದೆಗೆ ಸೇರಿಕೊಂಡೆ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಕಾನೂನು “ಆರಕ್ಷಣೆ” ನನಗೆ ಇಲ್ಲಿಗೆ ತಲುಪಿಸಿತು. ಹಿಂದುಳಿದ ವರ್ಗದವರು ಮುಂದುವರೆಯಲು “ಅರಕ್ಷಣೆ” ಬಹಳ ಮುಖ್ಯ. ೨೦೧೮-೧೯ನೇ ಸಾಲಿನ ಆಲ್ ಇಂಡಿಯಾ ಹೈಯೆರ್ ಎಜುಕೇಶನ್ ಸರ್ವೇ ಪ್ರಕಾರ ಭಾರತದಲ್ಲಿ ೩೩೪೦೩ ಪರಿಶಿಷ್ಟ ಪಂಗಡದವರು ಶಿಕ್ಷಕರಾಗಿದ್ದಾರೆ. ಅವರಲ್ಲಿ ಮಹಿಳೆಯರ ಪ್ರಮಾಣ ೧೩೫೭೪ ಆಗಿದೆ. ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ, ದಲಿತರಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಎಷ್ಟೋ ಇಷ್ಟೋ ಶಿಕ್ಷಣ ಸಿಕ್ಕಿದರೂ ಅದರ ಗುಣಮಟ್ಟ ಸರಿಯಾಗಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೋಷಣೆ ಮತ್ತು ದಬ್ಬಾಳಿಕೆ ನಡೆಯುತ್ತಲೇ ಇದೆ.
ನಿಮ್ಮ ಜೀವನದಲ್ಲಿ ಯಾವುದಾದರು ಒಂದು ಘಟನೆಯಿಂದಾಗಲಿ, ಸಂಸ್ಕೃತಿಂದಾಗಲಿ ಪ್ರೇರಣೆ ಪಡೆದು ಮುನ್ನುಗ್ಗಿ. ನನ್ನ ಪ್ರೇರಣೆ ಎಂದರೆ ಸಿಂಘಿದಯಿ ರಾಜಕುಮಾರಿ. ಆಕೆ ಮೂರು ಬಾರಿ ತನ್ನ ಮಹಿಳಾ ಪಡೆಗಳಿಂದ ಶತ್ರುಗಳನ್ನು ಸಂಹಾರಿಸಿದಳು. ನಿಮಗೂ ಯಾರಾದರೂ ಪ್ರೇರಣೆಯಾಗಬಹುದು. ಪ್ರೇರಿತರಾಗಿ ಜೀವನದಲ್ಲಿ ಮುಂದುವರೆದು ಸಾಮಾಜಿಕ ನ್ಯಾಯದ ಬಗ್ಗೆ ಹೋರಾಡಿ. ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತಲು ನಾವು ಪುನಃ ಮುಂದೆ ಬರಬೇಕು. ಬೀದಿಗಿಳಿಯಬೇಕು. ಮಕ್ಕಳನ್ನು ಸಶಕ್ತರನ್ನಾಗಿ ಮಾಡಬೇಕು. ಯಾರ ಶ್ರಮವೂ ವ್ಯರ್ಥವಾಗುವುದಿಲ್ಲ.
ನನಗೆ ಸೀಡೋ ಕುನ್ಹೂ ಮುರ್ಮು ವಿಶ್ವವಿದ್ಯಾನಿಲಯದ ಉಪಕುಲಪತಿಯ ಹುದ್ದೆಗೆ ಆರಿಸಲಾಗಿರುವುದನ್ನು ಕೇಳಿ ದಿಗ್ಭ್ರಮೆಗೊಂಡೆ. ಪ್ರಾಮಾಣಿಕತೆಯಿಂದ ನನ್ನಿಂದ ಆದಷ್ಟೂ ಸೇವೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿ ಡಾ||ಸೋನಾಝಾರಿಯ ಮಿನ್ಜ್ ತನ್ನ ಮಾತುಕತೆಯನ್ನು ಮುಗಿಸಿದರು.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.