ಆದೋನಿ ಶ್ರೀಗಳಿಂದ ತುಮಕೂರಿನಲ್ಲಿ ಚಾತುರ್ಮಾಸ್ಯ

ತುಮಕೂರು(ವಿಶ್ವಕನ್ನಡಿಗ ನ್ಯೂಸ್): ತುಮಕೂರು ಇಂಜಿನಿಯರಿಂಗ್ ಪದವಿಯ ಜೊತೆಗೆ ಹಲವು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ಶೈಕ್ಷಣಿಕ ಪದವಿಗಳನ್ನು ಪಡೆದುಕೊಂಡು ಬಹುಭಾಷಾ ವಿದ್ವಾಂಸರಾಗಿ ಹಾಗೂ ಶಾಸ್ತ್ರೀಯ ಸಂಗೀತದಲ್ಲೂ ವಿದ್ವಾಂಸರಾಗಿ ನಂತರದಲ್ಲಿ ಸಂನ್ಯಾಸಿಗಳಾಗಿ ದೇಶ, ವಿದೇಶಗಳಲ್ಲಿ ಸಂಚರಿಸಿ ಆಧ್ಯಾತ್ಮಿಕ ಬೋಧನೆ ಮಾಡಿರುವ ಆದೋನಿಯ ಶ್ರೀ ಶಾರದಾ ದತ್ತಪೀಠಂನ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮಿಗಳು ತುಮಕೂರು ನಗರಕ್ಕೆ ಆಗಮಿಸಿದ್ದಾರೆ.

ತುಮಕೂರು ನಗರದ ಬಿ.ಎಚ್.ರಸ್ತೆಯಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ವಾಸ್ತವ್ಯ ಹೂಡಿರುವ ಶ್ರೀಗಳು, ಜುಲೈ 5 ರಿಂದ ಸೆಪ್ಟೆಂಬರ್ 2 ರವರೆಗೆ ಇಲ್ಲೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದಾರೆ. ಇದು ಇವರ 47 ನೇ ವರ್ಷದ ಚಾತುರ್ಮಾಸ್ಯವಾಗಿದೆ. ಈ ಅವಧಿಯಲ್ಲಿ ಧಾರ್ಮಿಕ ಪೂಜಾದಿಗಳು ಹಾಗೂ ಪಾದಪೂಜೆ ಮೊದಲಾದ ಕಾರ್ಯಕ್ರಮಗಳು ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ನಡೆಯಲಿವೆ. ಭಕ್ತಾದಿಗಳು ಹೆಚ್ಚಿನ ಮಾಹಿತಿಗೆ ತಮ್ಮನ್ನು ಸಂಪರ್ಕಿಸಬಹುದು ಎಂದು ಮಠಮುದ್ರೆ ಟಿ.ವಿ.ಶ್ರೀನಿವಾಸ ಜೋಯಿಸ್ (ಮೊಬೈಲ್: 9901282209) ತಿಳಿಸಿದ್ದಾರೆ.

ಶ್ರೀಗಳು ಮೂಲತಃ ಇಂಜಿನಿಯರಿಂಗ್ ಪದವೀಧರರು. ಮೈಸೂರಿನಲ್ಲಿ ಬಿ.ಎ., ಬಿ.ಇಡಿ, ಹೈದರಾಬಾದ್ ಉಸ್ಮಾನಿಯಾ ವಿ.ವಿ.ಯಲ್ಲಿ ಸಮಾಜಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಸಂಸ್ಕøತದಲ್ಲಿ ಪ್ರತ್ಯೇಕ ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸಾ ವಿಧಾನಗಳ ಬಗ್ಗೆ ಆಸಕ್ತಿ ಹೊಂದಿ ಅದರಲ್ಲೂ ಶಿಕ್ಷಣ ಪಡೆದಿದ್ದಾರೆ. ತೀರಾ ಇತ್ತೀಚೆಗೆ ಹೈದರಾಬಾದ್‍ನಲ್ಲಿ ತತ್ತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಶ್ರೀಗಳು, ಇಂಗ್ಲೀಷ್ ಸಾಹಿತ್ಯದಲ್ಲೂ ಎಂ.ಎ. ಪದವಿಯನ್ನು ಪಡೆದುಕೊಂಡಿದ್ದು, ಶೈಕ್ಷಣಿಕವಾಗಿ ವಿದ್ವಾಂಸರೆನಿಸಿದ್ದಾರೆ. ಇಷ್ಟೆಲ್ಲ ಸಾಧನೆಗಳ ಜೊತೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಸಾಧನೆ ಮಾಡಿರುವ ಶ್ರೀಗಳು, ವೀಣೆ, ಕೊಳಲು, ಮೃದಂಗ ಮತ್ತು ಮೋರ್ಚಿಂಗ್ ವಾದನದಲ್ಲೂ ಪರಿಣತಿ ಹೊಂದಿರುವುದು ವಿಶೇಷವಾಗಿದೆ. ತಮ್ಮ 38 ನೇ ವಯಸ್ಸಿನಲ್ಲಿ ಸಂನ್ಯಾಸ ದೀಕ್ಷೆ ಪಡೆದು ಶಾರದಾ ದತ್ತಪೀಠಂನ ಪೀಠಾಧಿಪತಿಗಳಾದ ಶ್ರೀಗಳು, ಸಂನ್ಯಾಸಿಗಳಾದ ಬಳಿಕ ಇದೀಗ 47 ನೇ ವರ್ಷದ ಚಾತುರ್ಮಾಸ್ಯವನ್ನು ತುಮಕೂರು ನಗರದಲ್ಲಿ ಆಚರಿಸುತ್ತಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...