(www.vknews.com) : “ಶ್ರೀ ಗುರುಗಣಾಧಿಪತೆಯೇ ನಮ: ದಕ್ಷಿಣಾ ಮೂರ್ತಿ ದೇವನಾನಾಂ ಸಕಲ ಕಾರ್ಯ ದಿಗ್ವಿಜಯಿ ಭವ:” ಎಂದು ಯಕ್ಷಗಾನದಲ್ಲಿ ಮೊದಲು ಗುರು ಎಂದರೆ ಗಣಪತಿಯನ್ನು ನಮಿಸೋಣ ಎಂಬ ತಾತ್ಪರ್ಯ. ನಂತರ ಗಣಪತಿಯ ತಂದೆ ದಕ್ಷಿಣ ದಿಕ್ಕಿನ ಒಡೆಯ ಈಶ್ವರನ ಮಗನಾದ ಗಣಪತಿಯ ಅಪ್ಪಣೆಯನ್ನು ಪಡೆಯುತ್ತ ಇವತ್ತಿನ ಯಕ್ಷಗಾನದ ಸೇವೆಯ ದಿಗ್ವಿಜಯವನ್ನು ಮುದಗೊಳಿಸು ಎಂದು ಪದ ಯಕ್ಷಗಾನ ಪ್ರಾರಂಭವಾಗುತ್ತದೆ. ಚೌಕಿಯಲ್ಲಿ ಮೊದಲು ವಿಘ್ನನಿವಾರಕ ಗಣಪತಿಯನ್ನು ಪ್ರತಿಷ್ಠೆ ಮಾಡಿ ದೇವರನ್ನು ಪೂಜಿಸಿ ನಂತರ ಚೌಕಿ ಗಣಪತಿಯ ಅಪ್ಪಣೆಯನ್ನು ಪಡೆದು ಬ್ರಾಹ್ಮಣರು ಗಣಪತಿಯ ಪ್ರಸಾದ ರೂಪದಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಕೊಟ್ಟಾಗ ಭಾಗವತರು “ರಂಗಸ್ಥಳಕ್ಕೆ ಅಪ್ಪಣೆ” ಎಂದಾಗ ಕಲಾವಿದರು “ದೇವರಪ್ಪಣೆ ” ಎಂದು ಹೇಳಿದಾಗ ಭಾಗವತರು ಮತ್ತು ಸಹ ಹಿಮ್ಮೇಳ ಕಲಾವಿದರು ರಂಗಸ್ಥಳಕ್ಕೆ ಹೋಗಲು ಅಣಿಯಾಗುತ್ತಾರೆ. ಹಾಗೆ ಗಣಪತಿಯ ಮೂರ್ತಿಯ ಹತ್ತಿರವಿದ್ದ ಒಂದು ದೀವಟಿಯಿಂದ ದೀಪವನ್ನು ಹಚ್ಚಿ ರಂಗಸ್ಥಳದ ಬಲಭಾಗದಲ್ಲಿ ಇಡುತ್ತಾರೆ. ಇದಕ್ಕೆ ಬೆಳಕಿನ ಸೇವೆ ಎಂದು ಹೇಳುತ್ತಾರೆ. ಇಷ್ಟೆಲ್ಲ ಸಂಪ್ರದಾಯವನ್ನು ನಾವು ಚೌಕಿಯಲ್ಲಿ ಗಣಪತಿಯ ಮೂರ್ತಿಯನ್ನು ಇಟ್ಟು ಪೂಜಿಸಿದಾಗ ಆಟ ಮಾಡಿಸುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಗಣಪತಿಯ ಶಿರದ ಮೇಲಿನ ಹೂವುಗಳನ್ನು ಬೀಳಿಸಿ ಪ್ರಸಾದ ರೂಪದಲ್ಲಿ ಗಣಪತಿಯು ಸೇವೆಯು ತೃಪ್ತಿಯಾಗಿದೆ ಎಂದು ಸೇವಾಕರ್ತಕರ ಭಕ್ತರಿಗೆ ಕೊಡುತ್ತಾನೆ ಎಂದು ನಂಬಿಕೆಯಿದೆ.
” ವಾರಣವದನ ತ್ರೈಲೋಕ್ಯ ಸುಮೋಹನ ವಾರಣವದನ” ಎಂದು ಶಂಕರಾಭರಣ ರಾಗದ ಮಟ್ಟಿನಲ್ಲಿ ಆದಿತಾಳದಲ್ಲಿ ಭಾಗವತರು ಕೆಲವೊಮ್ಮೆ ದೇಗುಲದ ವಠಾರದಲ್ಲಿ ಆಟ ಮಾಡಿದರೆ ಮತ್ತೆ ಕೆಲವೊಮ್ಮೆ ನಮ್ಮ ಮನೆಯ ಒಳಗೆ ಆಟ ಮಾಡಿಸುವ ಸೇವಾಕರ್ತರು ಭಾಗವತರೇ ಮನೆ ದೇವರೆದುರು ಒಂದು ಪದ ಹೇಳಿ ಬನ್ನಿ ಎಂದಾಗ ಗಣಪತಿ ಸ್ತುತಿಯನು ಭಾಗವತರು ಹೇಳುತ್ತಾರೆ. ಅಲ್ಲದೆ ಹೂವಿನ ಕೋಲು ಅಥವಾ ಮನೆಯಲ್ಲಿ ಇತ್ತೀಚಿನ ದಿನದಲ್ಲಿ ಚಿಕ್ಕಮೇಳದಲ್ಲಿ ಸಹ ವಿಷ್ಣು ಸ್ತುತಿ, ಗಣಪತಿ ಸ್ತುತಿ, ದುರ್ಗಾಸ್ತುತಿ, ಮುಂತಾದ ದೇವರ ಸ್ತುತಿಯನ್ನು ಹೇಳುತ್ತಾರೆ. ಹೀಗೆ ಚೌಕಿ ಗಣಪತಿಯ ಪೂಜೆಯಾಗಿ ರಂಗಸ್ಥಳಕ್ಕೆ ಅಪ್ಪಣೆಯನ್ನು ಪಡೆದು ಬಂದ ಭಾಗವತರು ಮತ್ತು ಹಿಮ್ಮೇಳನ ವಾದನದವರು ಒಂದು ಹದಿನೈದು ನಿಮಿಷ ಅಬ್ರತಾಳ ಅಂತ ಹಾಕುತ್ತಿತ್ತರು. ಅಂದರೆ ಆಟ ಶುರುವಾಗುತ್ತಿದೆ ಎಂದು ಊರ ಪರವೂರ ಪ್ರೇಕ್ಷಕರಿಗೆ ತಿಳಿಯಲಿ ಎಂದು ಅಬ್ರಬಿಡ್ತಿಗೆಯನ್ನು ಹಾಕುತ್ತಿದ್ದರು.
” ಗಣಮುಖದವಗೆ ಗಣಪಗೆ ಚೆಲ್ವ ತ್ರಿಜಗವಂದಿತನಿಗಾರತಿಯೆತ್ತಿರೆ” ಎಂದು ಸೌರಾಷ್ಟ್ರ ರಾಗದ ಮಟ್ಟಿನಲ್ಲಿ ತ್ರಿವುಡೆತಾಳದಲ್ಲಿ ಭಾಗವತರು ಪದ ಹಾಡುತ್ತಾರೆ. ಅದೇ ತಾಳದಲ್ಲಿ ಮುಂದೆ “ಕರದೊಳು ಪರಶು ಪಾಶಾಂಕುಶಧಾರೆಗೆ ಹರಷದಿ ಭಕ್ತರ ಪೊರೆವವಗೆ” ಎಂದು ಗಣಪತಿ ಪೂಜೆಯನ್ನು ಆರತಿ ಮಾಡಿ ಪೂಜಿಸುತ್ತಾರೆ. ನಂತರ ಗಜಮುಖನ ಗುಣಗಾನವಾಗಿ “ಮುದದಿಂದ ನಿನ್ನ ಕೊಂಡಾಡುವೆನು ಅನವರತ ಮದವೂರ ವಿಘ್ನೇಶ ದೇವಾ ಜಗದೀಶ” ಎಂಬ ಪದವನ್ನು ನಾಟಿ ರಾಗದಲ್ಲಿ ಜಂಪೆತಾಳದಲ್ಲಿ ಭಾಗವತರು ಹಾಡುತ್ತಾರೆ. ಅಂದರೆ ಪೂರ್ವದಲ್ಲಿ ಯಕ್ಷಗಾನಕ್ಕೂ ಮತ್ತು ಕಾಸರಗೋಡಿನ ಹತ್ತಿರ ಮದವೂರು ಗಣಪತಿಗೆ ಸಂಬಂಧವಿರಬಹುದು, ಅಥವಾ ಯಕ್ಷಗಾನ ಪೂರ್ವ ಕವಿ ಪಾರ್ತಿಸುಬ್ಬರು ಮದವೂರಿನ ಸಮೀಪ ಜೀವಿತವನ್ನು ಮಾಡಿದ್ದರಿಂದ ಹೀಗೆ ಪಾರ್ತಿಸುಬ್ಬ ರಚಿಸಿದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ಮದವೂರ ಗಣಪತಿಯನ್ನು ನೆನೆಸಿದ್ದಾರೆ. ಆಮೇಲೆ ಶ್ರೀಹರಿಯನ್ನು ವಿಷ್ಣು ಸ್ತುತಿಯಿಂದ ಈ ಪದವನ್ನು ಭಾಗವತರು ಹಾಡುತ್ತಾರೆ. “ಆದೌ ದೇವಕಿದೇವಿಗರ್ಭಜನನಂ ಗೋಪೀಗೃಹೇ ವರ್ಧನಂ” ಎಂದು ಭಾಗವತರು ಶಾರ್ದೂಲವಿಕ್ರೀಡಿತ ರಾಗದಲ್ಲಿ ಶ್ರಿರಂಗನನ್ನು ಸ್ತುತಿಸುತ್ತಾರೆ.
ಬಾಲಗೋಪಾಲ ಅಥವಾ ಕೋಡಂಗಿವೇಷದಲ್ಲಿ ರಂಗಸ್ಥಳಕ್ಕೆ ಮೊದಲ ವೇಷ ಪ್ರಾರಂಭವಾಗುತ್ತದೆ, ಆಗ “ಹರೇ ರಮಣ ಗೋವಿಂದಾನ” ಎಂಬ ಬಾಲಗೋಪಾಲರ ಪ್ರವೇಶ ಪದವನ್ನು ಮಾರವಿ ಏಕತಾಳದಲ್ಲಿ ಭಾಗವತರು ಹೇಳುತ್ತಾರೆ. ಮತ್ತೆ “ಹೇ ಗೋಪಾಲಕ ಹೇ ಕೃಪಾಜಲನಿಧೇ” ಎಂಬ ಶಾರ್ಧುಲವಿಕ್ರೀಡಿತಂ ರಾಗದಲ್ಲಿ ಸ್ತುತಿಸಿ ಮುಂದೆ ಕೇದಾರಗೌಳ ಏಕತಾಳದಲ್ಲಿ “ಹರಿ ನಾರಾಯಣ ಗೋವಿಂದಾ” ನಂತರ ಕಾಂಬೋಜಿ ರಾಗ ಆದಿತಾಳದಲ್ಲಿ ” ಕೇಶವ ಮಾಧವ ಮದುಸೂಧನಾ ರಾಮಾ ಧಶರಥನಂದನ ದನುಜಾರಿ” ಎಂಬ ಪದವನ್ನು ಭಾಗವತರು ಹಾಡುತ್ತಾರೆ. ನಂತರ ಚೌಕಿಯಿಂದ ಗಣಪತಿಯನ್ನು ರಂಗಸ್ಥಳಕ್ಕೆ ತಂದು ಬಾಲಗೋಪಾಲರು ಶಾರ್ದೂಲವಿಕ್ರೀಡಿತಂ ವಚನದ ಮೂಲಕ “ವಿಘ್ನಧ್ವಂತನಿವಾರನೈ ಕತರಣಿರ್ವಿಘ್ನಟವೀಹವ್ಯವಾಟ್” ನಂತರ ಬಾಲಗೋಪಾಲರನ್ನು ಸಭಿಕರಿಗೆ ಗುಣಗಾನ ಮಾಡುತ್ತಾರೆ ಭಾಗವತರು ಈ ಸೌರಾಷ್ಟ್ರ ರಾಗದ ಮಟ್ಟಿನಲ್ಲಿ ಏಕತಾಳದ “ನೆನೆಯಿರೋ ಜನರೆಲ್ಲ ಗುಣಯುತನ ಘನಮೂರ್ತಿ ಮದವೂರ ಗಣನಾಥನ” ಆಮೇಲೆ ರಂಗದಲ್ಲಿ ಬಾಲಗೋಪಾಲರು ಗಣಪತಿಯನ್ನು ಬೇಡುವ ಪರಿಯನ್ನು ಘಂಟಾರಾವ ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಈ ಪದವನ್ನು ಭಾಗವತರು ” ಗಜಮುಖ ನಾ ನಿನ್ನ ಪಾದವ ನೆನೆವೆ” ಮುಂದೆ ಖಮಾಚು ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಭಾಗವತರು ” ಓ ದೇವಾ ದೇವಾ ದೇವನಲ್ಲವೇ” ಎಂದು ಹಾಡಿದಾಗ ಅಲ್ಲಿಗೆ ಸಭಾಸದರ ಮುಂದೆ ಗಣಪತಿಯ ಪೂಜೆಯನ್ನು ಬಾಲಗೋಪಾಲರು ಬಂದು ಮಾಡುತ್ತಾರೆ. ಹೀಗೆ ಯಕ್ಷಗಾನದಲ್ಲಿ ಗಣಪತಿಯನ್ನು ರಂಗಸ್ಥಳಕ್ಕೆ ತಂದು ಪೂಜಿಸುವ ಸಂಪ್ರದಾಯ ಹಾಗು ಪರಂಪರೆಯನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.
ಗಣಪತಿಯ ಪೂಜೆಯ ನಂತರ ಮುಂದೆ ಭಾಗವತರು ಭಾಮಿನಿಯ ಮಟ್ಟಿನ ರಾಗದಲ್ಲಿ “ತಾರಕನ ಕೊಲಲೆಂದು ಶಿವನ ಕುಮಾರ ಪರ್ವತದಲ್ಲಿ ನೆಲೆಸಿಹ” ಎಂದು ಗಣಪತಿಯ ಸಹೋದರ ಸುಬ್ರಮಣ್ಯನನ್ನು ಸ್ತುತಿಸುತ್ತಾರೆ. ತದನಂತರ ಭಾಗವತರು “ಗಂಗಾತರಂಗ ಕಮನೀಯಜಟಾಕಲಾಪಂ” ಎಂಬ ಶ್ಲೋಕದೊಂದಿಗೆ ನಟರಾಜರನ್ನು ಸ್ತುತಿಸುತ್ತಾರೆ.
ಮುಂದೆ ಪೀಠಿಕೆ ಸ್ತ್ರೀವೇಷ ನಂತರ ಪ್ರಸಂಗದ ಓಲಗ ಪದ ಹೀಗೆ ಯಕ್ಷಗಾನದ ಪರಂಪರೆಯನ್ನು ಉಳಿಸಿ ಬೆಳೆಸಲು ಇಂದು ಕೆಲವೊಂದು ಹರಿಕೆ ಬಯಲಾಟ ಮೇಳವು ಉದಾಹರಣೆಯಾಗಿದೆ. ಅಲ್ಲದೆ ತೆಂಕು ತಿಟ್ಟಿನಲ್ಲಿ ಸಹ ಬಾಲಗೋಪಾಲ ಬದಲಿಗೆ ಕೋಡಂಗಿ ವೇಷವೆಂದು ಹಾಸ್ಯ ಪದಗಳ ಮೂಲಕ ಸಭಾಲಕ್ಷಣಗಳು ಪ್ರಾರಂಭವಾಗುತ್ತದೆ. ತೆಂಕುತ್ತಿಟ್ಟಿನಲ್ಲಿ ಕೊಂಡಂಗಿಯರ ಹಾಸ್ಯ ಪದವನ್ನು “ಬದನೇಕಾಯಿ ಗೋವಿಂದ ಅವರೆಕೋಡು ಗೋವಿಂದ” ಅಲ್ಲದೆ “ಗಜಿಬಿಜಿ ಮಾಡಯ್ಯ ಗಣರಾಯ ಒನ್ಕೆ ಕೋಡಯ್ಯ ಭತ್ತ ಕುಟ್ಟೋಕೆ” ಎಂದು ಹಾಸ್ಯಪದವನು ಹಳ್ಳಿ ಸೊಗಡಿನ ಸಂಪ್ರದಾಯವನ್ನು ಹಾಡಿನ ಮೂಲಕ ತೆಂಕಿನ ಭಾಗವತರು ಸೊಗಸಾಗಿ ಹಾಡುತ್ತಾರೆ. ಮುಂದೆ ವೃಂದಾವನ ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಭಾಗವತರು “ಕುಂಡಲಮಣಿಭೂಷಣ ಸ್ವಾಮಿ ಸುಬ್ಬರಾಯ” ಎಂದು ಹಾಸ್ಯ ಪದವನ್ನು ಸೊಗಸಾಗಿ ಹಾಡುತ್ತಾರೆ. ತೆಂಕಿನಲ್ಲೂ ರಂಗಸ್ಥಳದಲ್ಲಿ ಗಣಪತಿ ಪೂಜೆಯು ನಡೆಯುತ್ತದೆ. ಪ್ರಸಂಗ ಶುರುಮಾಡುವಾಗ ತೆಂಕುತಿಟ್ಟಿನಲ್ಲಿ ” ಅಂಬುಜದಳನಯನೇ ಅಮರವಂತ ಪಾದ ತುಂಬುರ ನರವಂದ್ಯೆ” ಎಂದು ಅಷ್ಟತಾಳದಲ್ಲಿ ಭಾಗವತರು ಪದ ಹಾಡುತ್ತಾರೆ. ಬಡಗುತ್ತಿಟ್ಟಿನಲ್ಲಿ “ಇಂದಿರೆಗೆ ತಲೆ ಬಾಗಿ ಪರಮಾನಂದ ಭಕ್ತಿಯೊಳು” ಎಂದು ಪ್ರಸಂಗ ಪ್ರಾರಂಭದ ಪದವನ್ನು ಭಾಗವತರು ಸೊಗಸಿನಿಂದ ಹಾಡುತ್ತಾರೆ.
ಹೀಗೆ ಯಕ್ಷಗಾನ ಪರಂಪರೆಯಲ್ಲಿ ಗಣಪತಿ ದೇವರಿಗೆ ಆಗ್ರಾ ಸ್ಥಾನವನ್ನು ಕೊಟ್ಟಿದ್ದಾರೆ. ಆಟ ಆಡುವ ಮೊದಲು ಚೌಕಿ ಗಣಪತಿಯ ಪೂಜೆ ಹಾಗು ರಂಗದಲ್ಲಿ ಗಣಪತಿಯ ಪೂಜೆ ಮತ್ತೆ ಕೊನೆಗೆ ಬೆಳಗಿನ ಸೇವೆ ಆಟ ಮುಗಿದ ನಂತರ ರಂಗಸ್ಥಳದಲ್ಲಿ ಮಂಗಲ ಪದವಾದ “ರಂಗನಾಯಕ ರಾಜೀವ ಲೋಚನ ರಮಣನೇ ಬೆಳಗಾಯಿತು ಏಳೆನ್ನುತ್ತಾ” ಅಥವಾ ಮಾರನಯ್ಯನ ಮಾತ ಗೋಕುಲ ಭುವರೇಣ್ಯಾನುದರದಲಿ ಪುಟ್ಟಿ” ಮೋಹನ ರಾಗದ ಮಟ್ಟಿನಲ್ಲಿ ಅಷ್ಟತಾಳದಲ್ಲಿ, ಮುಂದೆ “ಕುಮುದದಳಲೋಚನೆಗೆ ಕಾಮಾರಿನಾಯಕಿಗೆ”ಎಂಬ ಕಾಂಬೋಜಿ ರಾಗದ ಮಟ್ಟಿನಲ್ಲಿ ಜಂಪೆತಾಳದಲ್ಲಿ ಪದದೊಂದಿಗೆ ರಂಗನಾಯಕನಿಗೆ ಮಂಗಲಪದ ಹಾಡಿ, ಹಾಗು ಚೌಕಿಯಲ್ಲಿ ಗಣಪತಿಯ ಪೂಜೆ ಮೊದಲು ಆಟ ಆಡುವಾಗ ಹೇಳಿದ ಪದವನ್ನು “ಕರದೊಳು ಪರಶು ಪಾಶಾಂಕುಶಧಾರೆಗೆ ಹರುಷದಿ ಭಕ್ತರ ಪೊರೆವವಗೆ” ಎಂದು ಸೌರಾಷ್ಟ್ರ ರಾಗದ ಮಟ್ಟಿನಲ್ಲಿ ತ್ರಿವುಡೆತಾಳದ ಪದವನ್ನು ಹಾಡುತ್ತಾರೆ. ನಂತರ “ಆದಿದೇವ ಸಕಲಾಗಮ ವಂದಿತ ಯಾದವ ಕುಲಮೋಹನರೂಪ” ಎಂದು ಗಣಪತಿ ಮತ್ತು ವಿಷ್ಣುಸ್ತುತಿಯೊಂದಿಗೆ ಅವತ್ತಿನ ಆಟದ ಸೇವೆಯಾಗುತ್ತದೆ. ಹೀಗೆ ಯಕ್ಷಗಾನ ಪರಂಪರೆಯಲ್ಲಿ ಗಣಪತಿ ಪೂಜೆಯು ಹಾಗು ಗಣಪತಿ ದೇವರು ಪ್ರಧಾನವಾಗಿ ಭಕ್ತರ ಅಭೀಷ್ಟವನ್ನು ಇರೇಡಿಸುತ್ತಾನೆ. ಪ್ರಧಾನದೇವತೆಯಾಗಿ ಮೂಡಿ ಬರುತ್ತಾನೆ. ಅಗ್ರಪೂಜೆ ಗಣಪತಿಯು ನಾಡಿಗೆ ಬಂದ ಕರೋನ ಎಂಬ ರೋಗ ಮಹಾಮಾರಿ ರೋಗ ಹೊಡೆದು ಓಡಿಸಿ ಪುನಃ ಯಕ್ಷಗಾನ ಪ್ರಾರಂಭವಾಗಲಿ ಎಂದು ಗಣಪತಿಯಲ್ಲಿ ಪ್ರಾರ್ಥಿಸೋಣ. ಹೀಗೆ ನಾಡಿನ ಸಮಸ್ತ ಜನರಿಗೂ ಗೌರಿ ಗಣೇಶ ಹಬ್ಬದ ಶುಭಾಶಯವನ್ನು ಸಂಪಾದಕರು ಹಾಗು ಲೇಖಕರು ಲೇಖನಿಯಾದ ಮೂಲಕ ಹಾರೈಸೋಣ.
✍️ ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.