ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ) :ಯಕ್ಷಗಾನ ಕಲಾವಿದರೊಬ್ಬರು ರಂಗಸ್ಥಳದಲ್ಲೇ ಹೃದಯಾಘಾತದಿಂದ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟ ಘಟನೆ ಶಿರಿಯಾರದ ಕಾಜ್ರಲ್ಲಿ ಸಮೀಪದ ಕಲ್ಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ಘಟನೆ ನಡೆದಿದೆ.ಮಂದಾರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ಮೃತಪಟ್ಟವರು. ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಕಲ್ಬೆಟ್ಟುವಿನಲ್ಲಿ ‘ಮಹಾಕಲಿ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭ ಮುಂಜಾವ 3 ಗಂಟೆ ಸುಮಾರಿಗೆ ರಂಗಸ್ಥಳದಲ್ಲೇ ಹೃದಯ ನೋವಿನಿಂದ ಕುಸಿದುಬಿದ್ದು ಅಸ್ವಸ್ಥಗೊಂಡರೆನ್ನಲಾಗಿದೆ. ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಬಾರ್ಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ ಸಾಧು ಕೊಠಾರಿ ಅವರು ಬಡಗುತಿಟ್ಟಿನ ಹಿರಿಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. 40 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ತಿರುಗಾಟ ನಡೆಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.