ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ): ಸಾಸ್ತಾನ ಟೋಲ್ ಹೆದ್ದಾರಿ ಜಾಗ್ರತಿ ಸಮಿತಿ ವತಿಯಿಂದ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಬೇಕೆಂದು ಉಡುಪಿ ಜಿಲ್ಲಾ ಪಂಚಾಯತ್ ಡಾll ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಇಂದು ಸಭೆ ನಡೆಯಿತು.ಶಾಸಕ ಶ್ರೀ. ಕೆ ರಘುಪತಿ ಭಟ್ ರವರು ಭಾಗವಹಿಸಿ ಮಾತನಾಡಿ ಸುಂಕ ವಸೂಲಾತಿ (Toll Gate) ಕೇಂದ್ರಗಳಲ್ಲಿ 5 ಕಿ.ಮೀ ವ್ಯಾಪ್ತಿ ಒಳಗಿನ ಸ್ಥಳೀಯರಿಗೆ ಸುಂಕ ವಸೂಲಾತಿಯಿಂದ ವಿನಾಯಿತಿ ನೀಡಬೇಕು. ಅಲ್ಲದೆ ಸುಂಕ ವಸೂಲಾತಿ ಕೇಂದ್ರದಲ್ಲಿ ಸ್ಥಳೀಯರನ್ನು ಸುಂಕ ವಸೂಲಿದಾರರನ್ನಾಗಿ ನೇಮಿಸಬೇಕು ಎಂದು ಸಲಹೆ ನೀಡಿದರು.ಉಡುಪಿ ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ, ಪೋಲಿಸ್ ವರಿಷ್ಠಾಧಿಕಾರಿಗಳಾದ ಎನ್ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ):ಕೇರಳದ ಕಾಸರಗೋಡಿಗೆ ವಿಜಯ ಯಾತ್ರೆ ಉದ್ಘಾಟನೆ ನಿಮಿತ್ತ ಆಗಮಿಸಿದ್ದ ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ, ಉತ್ತರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಮಂದಿರಕ್ಕೆ ಭವಿಷ್ಯದಲ್ಲಿ ಭೇಟಿ ನೀಡುವ ಕರ್ನಾಟಕದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ಯಾತ್ರಿನಿವಾಸ ಒಂದನ್ನು ನಿರ್ಮಾಣ ಮಾಡಲು ಐದು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ, ಈ ಹಿಂದೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸುವಂತೆ ಮನವಿ ಮಾಡಲಾಯಿತು. ಉತ್ತರ ಪ್ರದೇಶ ಸರ್ಕಾರ ಕರ್ನಾಟಕದ ಯಾತ್ರೆ ನಿವಾಸಕ್ಕಾಗಿ ಶೀಘ್ರದಲ್ಲಿ ಭೂಮಿ ಮಂಜೂರು ಮಾಡಿದರೆ, ಯಾತ್ರಿನಿವಾಸ ನಿರ್ಮಾಣಕ್ಕೆ ಅನುಕೂಲ ಆಗುವುದಾಗಿ ಯೋಗಿ ಆದಿತ್ಯನಾಥರಲ್ಲಿ ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಆದಿತ್ಯನಾಥರು, ಕೂಡಲೇ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿ, ಕರ್ನಾಟಕದಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ಬೆಂಗಳೂರಿನಿಂದ ಕುಂದಾಪುರಕ್ಕೆ ಬರುತ್ತಿದ್ದ ಕಾರಿನ ಟಯರ್ ಸ್ಪೋಟವಾಗಿ ನಡೆದ ಅಪಘಾತದಲ್ಲಿ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.ಕುಂದಾಪುರದ ಉಳ್ತೂರಿನ ಪ್ರಕಾಶ್ ಶೆಟ್ಟಿ (43) ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಪ್ರಕಾಶ್ ಶೆಟ್ಟಿಯವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಮಕ್ಕಳಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.ಕುಂದಾಪುದದಲ್ಲಿ ನಡೆಯಲಿರುವ ಸೊಸೆಯ ಮದುವೆ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಆಗಮಿಸುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.
ಉಡುಪಿ ,(ವಿಶ್ವ ಕನ್ನಡಿಗ ನ್ಯೂಸ್ ):ಗ್ರಾಮಸ್ಥರೇ ಅಲ್ಲದ, ದೂರದ ಊರಲ್ಲಿನ ದಂಪತಿಗಳು ದೇವಳಕ್ಕೆ ಭೇಟಿಕೊಟ್ಟು ಭಗವಂತನಿಗೆ ತುಲಾಭಾರ ಸೇವೆ ಸಲ್ಲಿಸಿದ್ದು ಈಬಾರಿಯ ಹಬ್ಬದ ವಿಶೇಷ.ಹಿಂದಿ ಸಿನೆಮಾದ ಕಾಸ್ಟಿಂಗ್ ಡೈರೆಕ್ಟರ್ ಕರಣ್ ಮಲ್ಲಿ ಹಾಗೂ ಕಮರ್ಷಿಯಲ್ ಮ್ಯೂಸಿಕ್ ವಿಡಿಯೋ ಹಿಂದಿ ಫಿಲ್ಮ್ ಇಂಡಸ್ಟ್ರಿ ಯ ಶಾರ್ಟ್ ಫಿಲಂ ನಿರ್ದೇಶಕಿ ಮಾನವಿ ಬೇಡಿ ದಂಪತಿಗಳು ಬ್ರಹ್ಮಾವರ ಸಮೀಪದ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು. ಕಷ್ಟಕಾಲದಲ್ಲಿ ತಮ್ಮ ಕೈಹಿಡಿದು, ಅನುಗ್ರಹಿಸಿದ ಭಗವಂತನಿಗೆ ತಮ್ಮನ್ನೇ ಸಮರ್ಪಣೆ ಮಾಡುವ ತುಲಾಭಾರ ಸೇವೆಯನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರುಶ್ರೀ ಮಹಾಲಿಂಗೇಶ್ವರ ದೇವರು ದೂರದ ಊರುಗಳಲ್ಲಿ ನೆಲೆಸಿರುವ ಭಕ್ತರ ಪಾಲಿನ ಕಾರಣಿಕ ದೈವವೂ ಆಗಿದ್ದು , ನಂಬಿದವರ ಕೈ ಬಿಡುವುದಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.ಕರಣ್ ಹಾಗೂ ಮಾನವಿ ದಂಪತಿಗಳು ಉಳ್ತೂರಿನ ಶ್ರೀಮತಿ ಜಯಂತಿ ಹಾಗೂ H ದೇವಪ್ಪ ಮಲ್ಲಿ ದಂಪತಿಗಳ ಕುಟುಂಬಸ್ಥರೂ ಆಗಿದ್ದು, ದೇವರ ಮೇಲಿನಾವರ ಭಕ್ತಿ ಹಾಗೂ ದೂರದ ಊರಿಂದ ಆಗಮಿಸಿ ಹಬ್ಬದ ಸಂದರ್ಭದಲ್ಲಿ ಬಾಗಿಯಾಗಿದ್ದಾರೆ .
ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ):ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಉಡುಪ ರತ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಯುದ್ಧ ಸ್ಮಾರಕದಲ್ಲಿ ಭಾನುವಾರ ಸಂಜೆ ಯೋಧ ನಮನ ಕಾರ್ಯಕ್ರಮ ನಡೆಯಿತು. ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಗಣೇಶ್ ರಾವ್ ಮಾತನಾಡುತ್ತಾ, ಯುವಜನರಿಗೆ ಸೇನೆಗೆ ಸೇರಲು ಇದೊಂದು ಸೂಕ್ತವಾದ ಸಂದರ್ಭ. ಸೇನೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವುದರಲ್ಲಿಯೂ ಸಿಗಲು ಅಸಾಧ್ಯ. ಅರ್ಪಣಾ ಮನೋಭಾವದಿಂದ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿ ಬದುಕನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಹೆಮ್ಮೆಯ ಯೋಧರೇ ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶ ಎಂದಿಗೂ ಮರೆಯಲು ಅಸಾಧ್ಯ ಎಂದರು.ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ವಾದಿರಾಜ ಹೆಗ್ಡೆ ಮಾತನಾಡುತ್ತಾ ಜೀವದ ಹಂಗು ತೊರೆದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಂದ ಕಲಿಯುವುದು ಸಾಕಷ್ಟಿದೆ. ದೇಶದ ವಿಚಾರ ಬಂದಾಗ ಒಗ್ಗಟ್ಟಿನ ಧ್ವನಿ ಇರಬೇಕು ಎಂದರು.ನೆರೆದ ಎಲ್ಲರೂ ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿಸಿ ಪುಷ್ಪ ನಮನ ಸಮರ್ಪಿಸಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮಾಜಿ ಸೈನಿಕರುಗಳಾದ ಸೈಮನ್ ಡಿಸೋಜ, ಭೀಮಯ್ಯ, ವಕೀಲ ರಫೀಕ್ ಖಾನ್, ಉದಯ ನಾಯ್ಕ್, ನಾಗರಾಜ್ ಭಂಡಾರ್ಕರ್, ಲಕ್ಷ್ಮಣ ಬಿ ಕೋಲ್ಕಾರ, ಸವಿತಾ ನೋಟಗಾರ್, ಈರಪ್ಪ ಗೌಂಡಿ, ರಮೇಶ್ ಎಲಿಬಳ್ಳಿ, ಪಾಂಪೇಶ್, ಹನುಮಂತರಾಯ ಪೂಜಾರಿ, ಶರಣಪ್ಪ, ರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಜನಾರ್ದನ್ ಕೊಡವೂರು ವಂದಿಸಿದರು. ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನಿಷ್ಠ 1 ರಿಂದ 2 ಗೋಶಾಲೆಗಳನ್ನು ನಿರ್ಮಿಸಲು ಅಗತ್ಯವಿರುವ ಜಾಗವನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣೆ ನಿಯಮ 2020 ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ರೈತರು ಮತ್ತು ಸಾರ್ವಜನಿಕರು ತಮ್ಮಲ್ಲಿನ ಅನುತ್ಪಾದಕ ಜಾನುವಾರುಗಳು, ಅಪಘಾತಗೊಂಡ ಜಾನುವಾರು, ಮತ್ತಿತರ ಜಾನುವಾರುಗಳನ್ನು ಸಂಬ೦ಧಪಟ್ಟ ಅಧಿಕಾರಿಗಳಿಗೆ ನೀಡಿದಾಗ, ಅವುಗಳನ್ನು ಪೋಷಿಸಲು ಅನುಕೂಲವಾಗುವಂತೆ ಪ್ರತಿಯೊಂದು ತಾಲೂಕಿನಲ್ಲಿ ಗೋಶಾಲೆಗಳನ್ನು ಸ್ಥಾಪಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ಸೂಕ್ತ ಸ್ಥಳಾವಕಾಶವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು.ಗೋಶಾಲೆಗಳನ್ನು ಆರಂಭಿಸುವ ಸಂದರ್ಭದಲ್ಲಿ, ಅದೇ ಸ್ಥಳದಲ್ಲಿ ಮೇವು ಬೆಳೆಯಲು ಸಾಧ್ಯವಿರುವಂತಹ ಜಾಗವನ್ನು ಗುರುತಿಸುವಂತೆ ನೀಲಾವರ ಗೋಶಾಲೆಯ ಟ್ರಸ್ಟಿ ಡಾ.ಸರ್ವೋತ್ತಮ ಉಡುಪ ಹೇಳಿದರು. ಜಾನುವಾರುಗಳನ್ನು ಸಾಗಾಟ ಮಾಡುವಾಗ ಸಂಬ೦ಧಪಟ್ಟ ಎಲ್ಲಾ ಪ್ರಾಧಿಕಾರಗಳಿಂದ ಅನುಮತಿ ಪಡೆದ ಅಗತ್ಯ ದಾಖಲಾತಿಗಳನ್ನು ಜೊತೆಯಲ್ಲಿಯೇ ಇಟ್ಟುಕೊಂಡಿರಬೇಕು. ಇಲ್ಲವಾದಲ್ಲಿ ಜಾನುವಾರು ಮಾಲೀಕ, ವಾಹನ ಮಾಲೀಕ, ಚಾಲಕ, ಸಹಾಯಕ, ಜಾನುವಾರ ಸಾಗಾಟದ ಸಹಾಯಕ ಈ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ನಿಯಮದಲ್ಲಿ ಅವಕಾಶವಿದೆ. ಸಾಗಾಟ ಸಮಯದಲ್ಲಿ ಜಾನುವಾರುಗಳಿಗೆ ಯಾವುದೇ ಗಾಯಗಳಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಗಾಟದ ಮೊದಲು ಯಥೇಚ್ಛ ನೀರು/ ಆಹಾರ/ ಹಸಿ ಹುಲ್ಲು, ವಾಹನದಲ್ಲಿ ಸರಿಯಾದ ಗಾಳಿ ಬೆಳಕು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಜಾನುವಾರುಗಳ ಸಾಗಾಟಕ್ಕಾಗಿಯೇ ರೂಪಿಸಿರುವ ನಿಯಮಗಳನ್ವಯ, ಸೂಕ್ತ ವಾಹನದಲ್ಲಿ ಸಾಗಾಟ ಮಾಡಬೇಕು, ಸಾಗಾಟದ ವೇಗ ಗಂಟೆಗೆ 25 ಕಿ.ಮೀ ಮೀರುವಂತಿಲ್ಲ. ವಾಹನದಲ್ಲಿ ಪ್ರತೀ ಜಾನುವಾರುಗಳಿಗೆ ಪ್ರತ್ಯೇಕ ಕಂಪಾರ್ಟ್ಮೆ೦ಟ್ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಖಾಸಗಿ ವಾಹನಗಳಲ್ಲಿ ಈ ರೀತಿಯ ಮಾರ್ಪಾಡು ಮಾಡಿಕೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಗತ್ಯ ಪರವಾನಗಿಯನ್ನು ನೀಡಬೇಕು. ವಾಹನಗಳಲ್ಲಿ ಜಾನುವಾರುಗಳ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿ ಇರಬೇಕು. ರಾತ್ರಿ 8 ರಿಂದ ಬೆಳಗ್ಗೆ 6 ರ ವರಗೆ ಸಾಗಾಟ ನಿಷಿದ್ಧವಾಗಿದ್ದು, ಬೇಸಿಗೆ ಕಾಲದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಸಾಗಾಟ ಮಾಡುವಂತಿಲ್ಲ ಎಂದು ಡಿಸಿ ಜಿ.ಜಗದೀಶ್ ಹೇಳಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ನಿಯಮ 2020 ರಲ್ಲಿ, ಜಿಲ್ಲೆಗೆ ಸಂಬ0ಧಪಟ್ಟ ಆಕ್ಷೇಪಣೆ/ ಸಲಹೆಗಳನ್ನು ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸುವಂತೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಹರೀಶ್ ತಮನಕರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಜಿಲ್ಲೆಗೆ ಹೊರ ರಾಜ್ಯದಿಂದ ಕೃಷಿ/ಹೈನುಗಾರಿಕೆ ಉದ್ದೇಶಗಳಿಗೆ ಜಾನುವಾರುಗಳನ್ನು ತರುವಾಗ ನಿಯಮಗಳಲ್ಲಿ ಸೂಕ್ತ ಅವಕಾಶ ನೀಡಬೇಕು. ಗೋಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ, ಗೋಶಾಲೆಗಳ ಕಡ್ಡಾಯ ನೊಂದಣಿ, ಗೋಮಾಳ ಜಾಗದ ಅತಿಕ್ರಮಣ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೇ ಜಾನುವಾರು ಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಸೀಲ್ದಾರ್ ಮತ್ತು ಉಪ ವಿಬಾಗಾಧಿಕಾರಿಗಳಿಗೆ ಅಧಿಕಾರ ನೀಡುವುದು, ಗೋಶಾಲೆಗಳಲ್ಲಿನ ಪಾಲನಾ ದರ ಹೆಚ್ಚಳ ಮತ್ತಿತರ ಸಲಹೆಗಳನ್ನು ಸದಸ್ಯರು ತಿಳಿಸಿದರು.ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆ ಮತ್ತಿತರ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೈಲಟ್ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಶನಿವಾರ ನಾಲ್ಕೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು 147 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದರು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.ರಾಜ್ಯದಲ್ಲೇ ಫೆಬ್ರವರಿಯಿಂದ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಪೈಲಟ್ ಕಾರ್ಯಕ್ರಮವನ್ನು ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮ ಪಂಚಾಯತ್ನಲ್ಲಿ ಆಯೋಜಿಸಲಾಗಿತ್ತು.ನಿಗಧಿತ ಸಮಯಕ್ಕೆ ಮುಂಚಿತವಾಗಿಯೇ ಗ್ರಾಮಕ್ಕೆ ಅಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಥಮದಲ್ಲಿ ನಾಲ್ಕೂರು ಶಾಲೆಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೂಕ್ತ ಸೌಲಭ್ಯಗಳನ್ನು ಒದಗಿಸಿರುವ ಕುರಿತು ಪರಿಶೀಲಿಸಿದರು. ಶಾಲಾ ಆವರಣದಲ್ಲಿ ಹಣ್ಣು ಬಿಡುವ ಗಿಡಗಳನ್ನು ನೆಟ್ಟ ಅವರು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮ ವಿಶ್ವಾಸ ಮೂಡಿಸಿದರು. ನಂತರ ನಾಲ್ಕೂರಿನ ಸಭಾಭವನದಲ್ಲಿನ ಆಯೋಜಿಸಿದ್ದ ಸಾರ್ವಜನಿಕರ ಅರ್ಜಿ ಸ್ವೀಕಾರ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪೂರ್ಣಕುಂಭ ಮತ್ತು ಚಂಡೆ ವಾದನದ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಹಿಂದಿನ ದಿನಕ್ಕೆ ಒಟ್ಟು 53 ಸಾರ್ವಜನಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತು ಸ್ಥಳದಲ್ಲೇ 94 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಾರ್ವಜನಿಕರ ಎಲ್ಲಾ ಅರ್ಜಿಗಳನ್ನು ವೀಕ್ಷಿಸಿ, ಅವರೆಲ್ಲರ ಅಹವಾಲುಗಳನ್ನು ಸಮಾಧಾನದಿಂದ ಆಲಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಸ್ಥಳದಲ್ಲೇ ಇತ್ಯರ್ಥಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಮಾಡಿದರು. ಡೀಮ್ಡ್ ಫಾರೆಸ್ಟ್, ರಿಸರ್ವ್ ಫಾರೆಸ್ಟ್, ಜಾಗ ಮಂಜೂರಾತಿ ಮುಂತಾದ ಅರ್ಜಿಗಳನ್ನು ಕಾಲಮಿತಿಯಲ್ಲಿ ಬಗೆಹರಿಸುವಂತೆ ಸಂಬ0ದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನದಲ್ಲಿ ಸ್ಥಳದಲ್ಲೇ ಆಧಾರ್ ಕಾರ್ಡ್ ತಿದ್ದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪೌತಿ ಖಾತೆ ಬದಲಾವಣೆ ಕುರಿತ ಅರ್ಜಿಗೆ, ವಂಶವೃಕ್ಷ ನೀಡುವ ಮೂಲಕ ಖಾತೆ ಬದಲಾವಣೆಗೆ ಸ್ಥಳದಲ್ಲಿಯೇ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 94 ಸಿ ಮತ್ತು ಫಾರ್ಮ್ ನಂ. 57 ರಲ್ಲಿನ ಅರ್ಜಿಗಳು ಬಾಕಿ ಉಳಿದಿದ್ದು, ಹೊಸದಾಗಿ ಕಡತಗಳನ್ನು ತಯಾರಿಸಿ ಕಮಿಟಿ ಮುಂದೆ ಮಂಡಿಸಲು ಕ್ರಮ ವಹಿಸಲಾಗುವುದು. ರೇಷನ್ ಕಾರ್ಡ್ಗಳಿಗೆ ಸಂಬo ಧಿಸಿದoತೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮವನ್ನು ಸರಕಾರದ ಸೂಚನೆಯಂತೆ ಆಯೋಜಿಸಿದ್ದು, ಇಂದಿನ ಕಾರ್ಯಕ್ರಮದ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಪ್ರತೀ ತಿಂಗಳ 3 ನೇ ಶನಿವಾರ ರಾಜ್ಯಾದ್ಯಂತ ನಡೆಯುವ ಕಾರ್ಯಕ್ರಮದ ರೂಪು ರೇಷೆಗಳನ್ನು ಉತ್ತಮ ಪಡಿಸಲು ಸಾಧ್ಯವಾಗಲಿದೆ. ಸಾರ್ವಜನಿಕರು ವಾಸ್ತವ್ಯ ದಿನದಂದು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಎಷ್ಟೇ ಸಮಯವಾದರೂ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅದೇ ದಿನ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು. ಸಾರ್ವಜನಿಕ ಅಹವಾಲು ಸ್ವೀಕಾರದ ನಂತರ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅಲ್ಲಿ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆಯುವುದರ ಜೊತೆಗೆ ಆಸ್ಪತ್ರೆಯ ಪರಿಶೀಲನೆ ಮತ್ತು ಅಗತ್ಯ ಕಡತಗಳನ್ನು ಪರಿಶೀಲಿಸಿದರುಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸಾಮಾನ್ಯ ಭೋಜನವನ್ನು ಯಾವುದೇ ಆಡಂಬರಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕವಾಗಿಯೇ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರ ಕಜ್ಕೆಯಲ್ಲಿನ ಕುಡುಬಿ ಜನಾಂಗದ ಸಿದ್ದನಾಯ್ಕ ಅವರ ಮನೆಗೆ ಭೇಟಿ ನೀಡಿ, ಅಲ್ಲಿ ನೆರೆದಿದ್ದ ಕುಡುಬಿ ಜನಾಂಗದವರ ವಿವಿಧ ಸಮಸ್ಯೆಗಳನ್ನು ಆಲಿಸಿ, ಅವರ ಯೋಗಕ್ಷೇಮ ಮತ್ತು ಮಕ್ಕಳ ವಿದ್ಯಾಭ್ಯಾಸ, ನಿವೇಶನದ ಅಗತ್ಯತೆ ಕುರಿತು ಮಾಹಿತಿ ಪಡೆದರು. ಕುಡುಬಿ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ವೀಕ್ಷಿಸಿ, ಸ್ಥಳೀಯರು ಪ್ರೀತಿಯಿಂದ ನೀಡಿದ, ತಾವು ಬೆಳೆದ ತರಕಾರಿಯನ್ನು ಡಿಸಿ ಸ್ವೀಕರಿಸಿದರು.ನಂತರ ಮಾರಾಳಿಯ ದಲಿತ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳ ಕುರಿತು ಅಹವಾಲು ಆಲಿಸಿದರು. ನಂತರ ನಂಚಾರಿನ ಸ್ಮಶಾನ ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ರವೀಂದ್ರ, ಬ್ರಹ್ಮಾವರ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಬ್ರಾಹಿಂ, ತಹಸೀಲ್ದಾರ್ ಕಿರಣ ಗೌರಯ್ಯ ಮತ್ತಿತರರು ಉಪಸ್ಥಿತರಿದ್ದರು. ಇಡೀ ರಾಜ್ಯದಲ್ಲಿ ಪೈಲಟ್ ಕಾರ್ಯಕ್ರಮವಾಗಿ ನಾಲ್ಕೂರು ನಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಾವುದೇ ಅಡಚಣೆಗಳಿಗೆ ಆಸ್ಪದ ನೀಡದೇ ಅತ್ಯಂತ ಮುತುವರ್ಜಿಯಿಂದ ಆಯೋಜಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗುವ ಮೂಲಕ ರಾಜ್ಯಾದ್ಯಂತ ಇದೇ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಪ್ರೇರಣೆ ನೀಡಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಕ್ರಮದ ಯಶಸ್ಸಿಗೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿತು.
ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ):ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.ಸಾಮಾನ್ಯ ಜನರ ಹಿತದೃಷ್ಟಿಯಿಂದ ಈ ರೈಲನ್ನು ಅತಿ ಶೀಘ್ರದಲ್ಲಿ ಪುನರಾರಂಭಗೊಳಿಸಲು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ತಾಲೂಕು ಸಂಯೋಜಕರುಗಳಾದ ಜಗದೀಶ್ ಶೆಟ್ಟಿ, ಉದಯ ನಾಯ್ಕ್ ಉಪಸ್ಥಿತರಿದ್ದರು.
ಬೈಂದೂರು,(ವಿಶ್ವ ಕನ್ನಡಿಗ ನ್ಯೂಸ್ ): ಮತ್ಸ್ಯ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಮೀನುಗಾರಿಕೆಗೆ ಸಹಕಾರಿಯಾಗುವ ಉದ್ಯಮ ಈ ಭಾಗಕ್ಕೆ ಅಗತ್ಯವಾಗಿದೆ. ಬಲಿತ ಮೀನುಗಳನ್ನು ಬಳಸಿಕೊಂಡು, ಮೀನುಗಾರಿಕೆಗೆ ಆಶ್ರಯವಾಗುವ ಈ ಉದ್ಯಮ ಯಶಸ್ವಿಯಾಗಿ ಬೆಳೆಯಲಿ. ಗೋವಿಂದ ಬಾಬು ಪೂಜಾರಿಯವರಲ್ಲಿ ಪರಿಶ್ರಮ, ಶೃದ್ದೆ ಇದೆ. ಅದು ಅವರನ್ನು ಯಶಸ್ಸಿನೆಡೆಗೆ ಕೊಂಡೋಯ್ಯುತ್ತದೆ ಎಂದು ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಾಣವಾಗುವ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಇವತ್ತು ರಾಜ್ಯದ ಮೂರು ಜಿಲ್ಲೆಗಳಲ್ಲಿ ಕಡಲ ಮೀನುಗಾರಿಕೆ ನಡೆಯುತ್ತದೆ. 27 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆ ನಡೆಯುತ್ತದೆ. 4.5ಲಕ್ಷ ಟನ್ ಮೀನು ಕಡಲ ಮೀನುಗಾರಿಕೆಯಿಂದ ದೊರೆತರೆ, 2.5ಲಕ್ಷ ಟನ್ ಮೀನು ಒಳನಾಡು ಕೆರೆಗಳಲ್ಲಿ ದೊರೆಯುತ್ತದೆ. ದೇಶದಲ್ಲಿಯೇ ಕಡಲ ಮೀನುಗಾರಿಕೆಯಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ. ಇನ್ನೆರಡು ವರ್ಷದಲ್ಲಿ ಅದು ಮೊದಲ ಸ್ಥಾನಕ್ಕೆ ಬರುವುದು ನಮ್ಮ ಗುರಿ ಎಂದು ಸಚಿವರು ಹೇಳಿದರು.ರಾಜ್ಯದಲ್ಲಿ ಮೀನುಗಾರಿಕಾ ಬೋಟ್ಗಳಿಗೆ ಈಗ ಚೈನಾ ಮೇಡ್ ಯಂತ್ರಗಳ ಬಳಸಲಾಗುತ್ತದೆ. ಪ್ರಧಾನಿಯವರ ಚಿಂತನೆಯ ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಂತೆ ದೇಶಿ ನಿರ್ಮಿತ ಯಂತ್ರಗಳನ್ನು ಬೋಟ್ಗಳಿಗೆ ಬಳಸುವಂತಾದರೆ ಮೀನುಗಾರರು ಸ್ವಾಗತಿಸುತ್ತಾರೆ. ಮೀನುಗಾರರು ದೇಶಿ ಯಂತ್ರಗಳ ಬಗ್ಗೆ ಒಲವು ಹೊಂದಿದ್ದಾರೆ. ದೇಶಿ ಕಂಪೆನಿಗಳ ಯಂತ್ರಗಳನ್ನು ಚೀನಿ ಯಂತ್ರಗಳ ಗುಣಮಟ್ಟಕ್ಕೆ ಕಡಿಮೆಯಾಗದ ರೀತಿಯಲ್ಲಿ, ಸ್ಪರ್ಧಾತ್ಮಕ ಬೆಲೆಯ ಯಂತ್ರಗಳನ್ನು ಸಿದ್ಧವಾದರೆ ಮೀನುಗಾರರ ಸ್ವಾಭಿಮಾನಕ್ಕೂ ಕಾರಣವಾಗುತ್ತದೆ. ಈ ಬಗ್ಗೆ ಸಂಸದರು ವಿಶೇಷ ಒತ್ತು ನೀಡಬೇಕು ಎಂದರು.ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಜನರು ಬುದ್ಧಿವಂತರು, ಸ್ವಾಭಿಮಾನಿಗಳು. ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ಮತ್ಸ್ಯ ಸಂಪತ್ತನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನವಾಗಿಸುವ ನಿಟ್ಟಿನಲ್ಲಿ ಗೋವಿಂದ ಬಾಬು ಪೂಜಾರಿಯವರು ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮುಂದಾಗಿರುವುದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ಸಂಸದರು ಬಾಬು ಗೋವಿಂದ ಪೂಜಾರಿ ಅವರನ್ನು ಅಭಿನಂದಿಸಿದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈದರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಎಂ.ಡಿ ಎಂ.ಎಲ್ ದೊಡ್ಮನಿ, ಬೈಂದೂರು ತಾ.ಪಂ.ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿ.ಪಂ.ಸದಸ್ಯ ಶಂಕರ ಪೂಜಾರಿ, ದ.ಕ-ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕುಂದಾಪುರ ತಾ.ಪಂ.ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಉಡುಪಿ ಜಿ.ಪಂ.ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾ.ಪಂ.ಸದಸ್ಯ ವಿಜಯ ಶೆಟ್ಟಿ, ರಾಜ್ಯ ಯೋಜನಾ ಆಯೋಗದ ಅಧಿಕಾರೇತರ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರು, ಜ್ಯೋತಿಷಿ ರಘುನಾಥ ಜೋಯಿಸ್, ಉದ್ಯಮಿ ವೆಂಕಟೇಶ್ ಕಿಣಿ, ಗೋಳಿಹೊಳೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ದಿವಾಕರ ಶಾನುಭಾಗ್, ಉದ್ಯಮಿ ಗುರುರಾಜ ಪಂಜು ಪೂಜಾರಿ, ಗ್ರಾ.ಪಂ.ಸದಸ್ಯ ವಸಂತ ಹೆಗ್ಡೆ, ಸಾಯಿದತ್ತಿ ಗುತ್ತೆದಾರ್ ಮೊದಲಾದವರು ಉಪಸ್ಥಿತರಿದ್ದರು.ಮತ್ಸ್ಯಬಂಧನ ಪ್ರೈ.ಲಿನ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಿಮಿಕ್ರಿ ಕಲಾವಿದ ಮಂಜುನಾಥ್ ಕುಂದೇಶ್ವರ ಅವರಿಂದ ಹಾಸ್ಯ ಕಾರ್ಯಕ್ರಮ, ಗಾಯಕಿ ಗೀತ ಪೂಜಾರಿ ಬೈಂದೂರು ಇವರಿಂದ ಸುಗಮ ಸಂಗೀತ ನಡೆಯಿತು.
ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ):ಖ್ಯಾತ ಕೊಳಲುವಾದಕ ಪ್ರವೀಣ್ ಗೋಲ್ಕಿಂಡಿ ಯವರು ಕುಟುಂಬ ಸಮೇತರಾಗಿ ಕಮಲಶಿಲೆ ಶ್ರೀ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು . ದೇವಳದ ಆಡಳಿತ ಮಂಡಳಿ ಆದರ ದಿಂದ ಬರಮಾಡಿ ಕೊಂಡರು ವಿಶೇಷ ಪೂಜೆ ಸಲ್ಲಿಸದ ಬಳಿಕ ಕೊಳಲು ವಾದನ ನಡೆಸಿದರು .
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.