(www.vknews.com) : ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ನಿಮ್ಮ ಹಿರಿಯರು ಯಾವತ್ತೂ ಹೇಳುವ ಹಿತನುಡಿ. ಆದರೆ ಇದನ್ನು ಅನುಕರಣೆ ಮಾಡುವವರ ಸಂಖ್ಯೆ ಮಾತ್ರ ಬಹಳ ಕಡಿಮೆ ಎನ್ನುವುದೇ ಈ ಶತಮಾನದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ. ನಮ್ಮ ದೇಹಕ್ಕೆ ಬರುವ ಹೆಚ್ಚಿನ ರೋಗಗಳು ತಡೆಗಟ್ಟಬಹುದಾದ ರೋಗಗಳೇ. ನಾವು ಏನ್ನನ್ನು ತಿನ್ನುತ್ತೇವೆ ಎನ್ನುವ ಪರಿಜ್ಞಾನ ಇಲ್ಲದೆ, ಕೇವಲ ಬಾಯಿ ಚಪಲಕ್ಕಾಗಿ, ನಾಲಗೆಯ ದಾಸನಾಗಿ ಸಿಕ್ಕಿ ಸಿಕ್ಕಿದ್ದನ್ನೇಲ್ಲಾ ತಿನ್ನುವ ಕಾರಣದಿಂದಲೇ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಉದ್ಭವಿಸುತ್ತದೆ. “ಬದುಕುದಕ್ಕಾಗಿ ತಿನ್ನಿ, ತಿನ್ನುವುದಕ್ಕಾಗಿ ಬದುಕಬೇಡಿ” ಎಂದು ಹಿರಿಯರು ಸಾರಿ ಹೇಳಿದರೂ, ಕೇವಲ ಜಿಹ್ನಾ ಚಾಪಲ್ಯಕ್ಕೆ ಬಲಿಯಾಗಿ ಏನು ತಿನ್ನಬಾರದೊ ಅದನ್ನೇ ತಿಂದು ರೋಗರುಜಿನಗಳಿಗೆ ದಾಸರಾಗುತ್ತೀರುವುದೇ ಬಹುದೊಡ್ಡ ವಿಪರ್ಯಾಸ. ಇತ್ತೀಚಿನ ದಿನಗಳಲ್ಲಿ ಈ ದಿಡೀರ್ ತಿಂಡಿಗಳು, ಸಿದ್ಧ ಆಹಾರಗಳು ಮತ್ತು ಚೈನೀಸ್ ತಿಂಡಿಗಳ ಹಾವಳಿ ತಾರಕ್ಕೇರಿದೆ.
ಅತೀ ಹೆಚ್ಚು ಕೊಬ್ಬು, ಕ್ಯಾಲರಿ ಮತ್ತು ಲವಣಗಳಿಂದ ಕೂಡಿದ, ಕನಿಷ್ಠ ಪೋಷಕಾಂಶ ಮತ್ತು ಪೌಷ್ಠಿಕಾಂಶ ಹೊಂದಿರುವ ಈ ಆಹಾರವನ್ನು ಜಂಕ್ ಪುಡ್ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಆಹಾರಗಳನ್ನು ರುಚಿಕರವಾಗಿರಿಸಲು ಬಳಸುವ ರಾಸಾಯನಿಕವೇ ನಮ್ಮ ಈೀಗಿನ ಮಕ್ಕಳ ಮತ್ತು ಯುವ ಜನರ ಆರೋಗ್ಯಕ್ಕೆ ಮಾರಕವಾದ “ಅಜಿನಾಮೋಟೊ” ಎನ್ನುವ ಸೈಲೆಂಟ್ ಕಿಲ್ಲರ್.
ಏನಿದು ಅಜಿನಾಮೋಟೊ? : ದಿನವೊಂದರಲ್ಲಿ ಬೀದಿಗೆರಡರಂತೆ ನಾಯಿ ಕೊಡೆಗಳ ರೀತಿಯಲ್ಲಿ ಹುಟ್ಟಿಕೊಳ್ಳುವ ಪಾಸ್ಟ್ಪುಡ್ ಅಥವಾ ಚೈನೀಸ್ ಪುಡ್ ಜಾಯಿಂಟ್ಗಳಲ್ಲಿ ರುಚಿಗಾಗಿ ಬಳಸುವ ‘ಮೋನೋ ಸೋಡಿಯಂ ಗ್ಲುಟಾಮೇಟ್’ ಎಂಬ ರಾಸಾಯನಿಕವೇ ನಮ್ಮ ಕತೆಯ ಖಳನಾಯಕ. ಇದೊಂದು ಆಹಾರವನ್ನು ರುಚಿಯಾಗಿರಿಸುವ ಪದಾರ್ಥ. ಚೈನೀಸ್ ಪಾಸ್ಟ್ ಪುಡ್ಗಂತೂ ಇದನ್ನು ಬೆರೆಸಿಲ್ಲದಿದ್ದರೆ, ನಮ್ಮ ನಾಲಗೆಗೆ ಆ ಫ್ರೈಡ್ ರೈಸ್ನ ರುಚಿ, ನೂಡಲ್ಸ್ನ ರುಚಿ ಖಂಡಿತ ಬರುವುದೇ ಇಲ್ಲ. MSG ಎಂದು ಕರೆಸಿಕೊಳ್ಳುವ ಈ ಸೈಲೆಂಟ್ ಕಿಲ್ಲರ್, ಎಲ್ಲ ಸಿದ್ಧ ಮತ್ತು ದಿಢೀರ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮಾಲ್ಗಳಲ್ಲಿ, ಬೇಕರಿಗಳಲ್ಲಿ, ಪಾಸ್ಟ್ ಪುಡ್ಗಳಲ್ಲಿ ದೊರೆಯುವ, ಮುಚ್ಚಿದ ತಗಡಿನ ಡಬ್ಬಗಳಲ್ಲಿ ಮಾರಾಟವಾಗುವ ಎಲ್ಲಾ ಪದಾರ್ಥಗಳಲ್ಲಿ ಅಧಿಕವಾಗಿ MSG ಬಳಸುತ್ತಾರೆ.
1908ರಲ್ಲಿ ಜಪಾನಿ ಸಂಶೋಧಕ ‘ಕಿಕುನೆ ಇಕೆಡಾ’ ಎಂಬಾತ ಈ ರಾಸಾಯನಿಕವನ್ನು ಕಂಡು ಹಿಡಿದ. ‘ಆ್ಯಂಕ್ಸೆಂಟ್’ ಎಂದು ಕರೆಯಲಾದ ಕಡಲೊಳಗಿನ ಸಸ್ಯ ಬಳ್ಳಿಗಳ ರಸದಿಂದ ತಯಾರಿಸಿದ ಈ ರಾಸಾಯನಿಕ, ನೈಸರ್ಗಿಕ ರುಚಿ ತರಿಸುವ ಪದಾರ್ಥವಾಗಿರುತ್ತದೆ. ಇದನ್ನು ಅವಿಷ್ಕರಿಸಿ ಹೊಸದಾದ ರುಚಿ ತರುವ ಪದಾರ್ಥವನ್ನು ಸೃಷ್ಟಿಸಿ ಅದಕ್ಕೆ ‘ಅಜಿನಾಮೋಟೊ’ ಎಂದು ನಾಮಕರಣ ಮಾಡಿದ. ಇದರಲ್ಲಿ 78% ಗ್ಲುಟಾಮಿಕ್ ಆ್ಯಸಿಡ್ ಮುಕ್ತ ರೂಪದಲ್ಲಿ ಇದೆ. 21% ಸೋಡಿಯಂ ಮತ್ತು 1% ಕಲ್ಮಷಗಳಿದೆ. ಇವುಗಳ ಒಟ್ಟು ರುಚಿಗೆ ‘ಉಮಾಮಿ’ ಎನ್ನುತ್ತಾರೆ. ಒಟ್ಟಿನಲ್ಲಿ MSG ಎಂಬ ಗುಪ್ತ ನಾಮದಿಂದ ಕರೆಯಲ್ಪಡುವ ಈ ರಾಸಾಯನಿಕ, ರುಚಿ ಹೆಚ್ಚಿಸುವುದರ ಜೊತೆಗೆ ನಮ್ಮ ದೇಹದ ಒಂದೊಂದೇ ಅಂಗಗಳನ್ನು ನುಂಗಿ ನೀರು ಕುಡಿದು ಆಪೋಷನ ತೆಗೆದುಕೊಳ್ಳುತ್ತದೆ.
ಹೆಸರೇ ಸೂಚಿಸಿದಂತೆ MSG ಒಂದು ‘ಎಕ್ಸೆಟೋ ಟಾಕ್ಸಿನ್’. ಖ್ಯಾತ ನರತಜ್ಞ ಡಾ|| ‘ರಸ್ಸೆಲ್ ಬ್ಲೆಲಾಕ್’ ಅವರ ಪ್ರಕಾರ ಈ MSG ಮೊದಲಾಗಿ ನರಮಂಡಲವನ್ನೇ ದಾಳಿ ಮಾಡುತ್ತದೆ. ಈ MSG ಸೇವಿಸಿದ ಬಳಿಕ ಕೊಬ್ಬು ಶೇಖರಣೆಗೊಂಡು ದಪ್ಪಗಾಗುತ್ತಾರೆ. ಆ ಬಳಿಕ ಕಣ್ಣು ನೋವು, ತಲೆನೋವು, ಸುಸ್ತು, ಆಯಾಸ, ನಿರಾಶಕ್ತಿ, ಊಟ ಸೇರದಿರುವುದು, ಅಜೀರ್ಣ, ಖಿನ್ನತೆಯಿಂದ ಬಳಲುತ್ತಾನೆ. ಗರ್ಭಿಣಿ ಹೆಂಗಸರಂತೂ ಈ ತೆರವಾದ ಅಜಿನಾಮೋಟೊ ಪದಾರ್ಥದಿಂದ ಮಾರು ದೂರವಿದ್ದರೆ ಆಕೆಗೂ ಮತ್ತು ಆಕೆಗೆ ಹುಟ್ಟುವ ಮಗುವಿಗೂ ಒಳಿತಾಗಬಹುದು. ಹೆಸರು ಸೂಚಿಸಿದಂತೆ MSGಯಲ್ಲಿ ಇರುವ ಸೋಡಿಯಂ ಅಥವಾ ಉಪ್ಪು, ಅಧಿಕ ಪ್ರಮಾಣದಲ್ಲಿ ಇರುತ್ತದೆ. ಅಧಿಕ MSG ಬಳಸುವುದರಿಂದ ಮೆದುಳು ಶಕ್ತಿಹೀನವಾಗುತ್ತದೆ. ಸದಾ MSG ಬಳಕೆಯಿಂದ ದೇಹದೊಳಗಿನ ಸಹಜ ನೀರಿನ ಅಂಶ ಕಡಿಮೆಯಾಗಿ ಸದಾ ತಲೆನೋವು, ಅತಿಯಾಗಿ ಬೆವರುವಿಕೆ, ತಲೆ ಸುತ್ತುವಿಕೆಯಿಂದ ಬಳಲಿ ಬೆಂಡಾಗುತ್ತಾನೆ. ಮುಖ ಊದುವುದು, ಕಣ್ಣು ಸೆಳೆತ, ಚರ್ಮ ಬಿಗಿಯಾಗುವುದು, ಅತಿಯಾದ ಹೊಟ್ಟೆ ಹುರಿ, ಮೂತ್ರಭಾದೆ, ಕಿಬ್ಬೊಟ್ಟೆನೋವು, ವಾಂತಿ ಭೇಂದಿ, ವಾಕರಿಕೆ, ಹಸಿವಿಲ್ಲದಿರಿವುದು, ಮೂಳೆ ಮತ್ತು ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ಕ್ಯಾಲ್ಸಿಯಂ ಕೊರತೆ, ರಕ್ತಹೀನತೆ, ರಕ್ತದೊತ್ತಡ, ಎದೆ ಬಡಿತ ಜಾಸ್ತಿಯಾಗುವುದು ಹೀಗೆ ಒಂದೊಂದಾಗಿ ಎಲ್ಲಾ ಅಂಗಾಂಗಳನ್ನು ನುಂಗಿ ನೀರು ಕುಡಿಯುತ್ತದೆ.
ಕೊನೆ ಮಾತು : ನಾವು ತಿನ್ನುವ ಆಹಾರ ಎನ್ನುವುದು ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಕ್ಯಾಲ್ಸಿಯಂ, ಪ್ರೋಟೀನ್, ಶರ್ಕರಪಿಷ್ಠ, ಲವಣಾಂಶ, ಕೊಬ್ಬು ಹೇಗೆ ಎಲ್ಲವನ್ನು ಹಿತಮಿತವಾಗಿ ಹೊಂದಿರುವ ಸಮತೋಲನವಿರುವ ಆಹಾರವನ್ನು ನಾವು ಸೇವಿಸಬೇಕು. ಇದನ್ನು ಬಿಟ್ಟು ಬರೀ ರುಚಿಗೆ ಮಾತ್ರ ಆಧ್ಯತೆ ನೀಡುವ, ಅತಿಯಾದ ಕೊಬ್ಬು ಕ್ಯಾಲರಿಯಿರುವ ಸಿದ್ಧ ಆಹಾರವನ್ನು ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆದಲ್ಲ. ಹಸಿ ತರಕಾರಿ, ತಾಜಾ ಹಣ್ಣು ಹಂಪಲುಗಳು, ನೈಸರ್ಗಿಕ ಪೇಯಗಳಾದ ಹಣ್ಣಿನ ರಸ, ಎಳನೀರು, ಕಬ್ಬಿನ ರಸ, ಯಥೇಚ್ಛವಾದ ನೀರಿನ ಬಳಕೆ ಇವೆಲ್ಲವನ್ನು ನಾವು ಬಳಸಬೇಕು. ಮತ್ತು ನಮ್ಮ ಮಕ್ಕಳಿಗೂ ಹೆಚ್ಚು ಬಳಸುವಂತೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು.
ಅದನ್ನು ಬಿಟ್ಟು ಸಿದ್ಧ ಪೇಯಗಳಾದ ಇಂಗಾಲಯುಕ್ತ ಕೋಕ್, ಪೆಪ್ಸಿ, ಮಿರಿಂಡಾ ದಂತಹ ಸಿದ್ಧ ಪೇಯಗಳು ಮತ್ತು ಲೆಸ್, ಕುರುಕುರೆ ಮುಂತಾದ ಸಿದ್ಧ ಆಹಾರಗಳನ್ನು ತಿಂದಲ್ಲಿ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇಲ್ಲವಾದಲ್ಲಿ ಮುಂದಿನ ಜನಾಂಗ ಆಹಾರವನ್ನು ಔಷಧಿಯಂತೆ ಮತ್ತು ಔಷಧಿಯನ್ನು ಆಹಾರದಂತೆ ತಿನ್ನಬೇಕಾದ ದಿನವೂ ಬರಬಹುದು, ಆ ನಿಟ್ಟಿನಲ್ಲಿ ನಾವೆಲ್ಲ ಸೇರಿ ಯುವ ಜನರಿಗೆ ತಿಳಿಹೇಳಿ MSGಯಿಂದ ಕೂಡಿರುವ ವಿಷಪೂರಿತ ಆಹಾರಗಳನ್ನು ನಿರ್ಭಂಧಿಸಿ, ನೈಸರ್ಗಿಕವಾದ ಸಮತೋಲಿತ ಆಹಾರವನ್ನು ತಿನ್ನುವಂತೆ ಮಾಡುವ ಗುರುತರ ಜವ್ದಾಬಾರಿ ನಮ್ಮೆಲ್ಲರ ಮೇಲೆ ಇದೆ, ಅದರಲ್ಲಿಯೇ ನಮ್ಮೆಲ್ಲರ ಮತ್ತು ನಮ್ಮ ಸಮಾಜದ ಹಿತ ಅಡಗಿದೆ. ಇಲ್ಲವಾದಲ್ಲಿ ನಮ್ಮ ತಟ್ಟೆಯಲ್ಲಿ ಸೇರಿಕೊಂಡ ‘ಅಜಿನಾಮೋಟೊ’ ಎಂಬ ರಕ್ಕಸ ನಮ್ಮ ಹೊಟ್ಟೆಯಲ್ಲಿ, ನಮ್ಮ ಮೆದುಳಲ್ಲಿ, ಯಕೃತ್ತಿನಲ್ಲಿ ರಕ್ತದಲ್ಲಿ ಎಲ್ಲೆಂದರಲ್ಲಿ ಸೇರಿಕೊಂಡು ನಮ್ಮನ್ನು ಜೀವಂತ ಶವವಾಗಿ ಮಾಡುವ ಎಲ್ಲಾ ಸಾಧ್ಯತೆಗಳು ಇದೆ.
ಡಾ|| ಮುರಲೀ ಮೋಹನ್ ಚೂಂತಾರುಸುರಕ್ಷಾದಂತ ಚಿಕಿತ್ಸಾಲಯ, ಹೊಸಂಗಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.