ಆತ್ಮೀಯ ಓದುಗರೇ,
ದೇಶ ವಿದೇಶಗಳಲ್ಲಿರುವ ಕನ್ನಡಿಗರ ಜನಪ್ರಿಯ ಅಂತರ್ಜಾಲ ಸುದ್ದಿ ತಾಣ ವಿಶ್ವ ಕನ್ನಡಿಗ ನ್ಯೂಸ್ ಲೋಕಾರ್ಪಣೆಯಾಗಿ ಇಂದಿಗೆ ಹನ್ನೆರಡು ವರ್ಷಗಳು ಕಳೆದಿವೆ. ಈ ಹನ್ನೆರಡು ವರ್ಷಗಳಲ್ಲಿ ನಾವು ವಿಶ್ವದ ಮೂಲೆ ಮೂಲೆಗಳಿಗೂ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಹನ್ನೆರಡು ವರ್ಷಗಳ ಹಿಂದೆ ಗಲ್ಫ್ ನಾಡಿನಲ್ಲಿರುವ ಕನ್ನಡಿಗರು ಬಹಳ ಉತ್ತಮ ರೀತಿಯಲ್ಲಿ ಸಂಘಟಿತರಾಗಿದ್ದರೂ ಅವರ ಅನೇಕ ಕಾರ್ಯಕ್ರಮಗಳು ಬೆಳಕಿಗೆ ತರುವಂತಹ ಮಾಧ್ಯಮದ ಕೊರತೆ ಎದ್ದು ಕಾಣುತ್ತಿತ್ತು, ಈ ಸಂದರ್ಭದಲ್ಲಿ ಕೆಲವು ಮಿತ್ರರು ಸೇರಿ ಹುಟ್ಟು ಹಾಕಿದ ಅಂತರ್ಜಾಲ ಪತ್ರಿಕೆಯೇ “ವಿಶ್ವ ಕನ್ನಡಿಗ ನ್ಯೂಸ್”.
ಅಂದು ಅಲ್ಪ ಓದುಗರ ಸಹಕಾರದೊಂದಿಗೆ ಆರಂಭವಾದ ಈ ತಾಣ ಇಂದು ದೇಶ ವಿದೇಶಗಳಲ್ಲಿ ಕನ್ನಡಿಗರ ನಡುವೆ ಬಹಳಷ್ಟು ಜನಪ್ರಿಯವಾಗಿವೆ. ನಮ್ಮ ಈ ಯಶಸ್ಸಿಗೆ ವಿಶ್ವ ಕನ್ನಡಿಗ ನ್ಯೂಸ್ ಪತ್ರಿಕೆಯನ್ನು ನಿರಂತರವಾಗಿ ಓದುತ್ತಿರುವ ದೇಶ ವಿದೇಶಗಳಲ್ಲಿರುವ ಕನ್ನಡಿಗರ ಸಹಕಾರ ಅಪಾರ. “ಇದು ದಮನಿತರ ಧ್ವನಿ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ನಮ್ಮ-ನಿಮ್ಮ ಅಂತರ್ಜಾಲ ಪತ್ರಿಕೆ ದೇಶ ವಿದೇಶಗಳ ಸುದ್ದಿಗಳ ಜೊತೆಗೆ ಲೇಖನ, ಕವನ, ಕಥೆ, ವಿಶೇಷ ವರದಿಗಳು, ಅಂಕಣಗಳು, ಉಪಯುಕ್ತ ಮಾಹಿತಿ, ಆರೋಗ್ಯ ಮಾಹಿತಿ, ತುಳು, ಮಲಾಮೆ, ಬ್ಯಾರಿ ಭಾಷೆಗಳ ಬರಹಗಳನ್ನು ನಿರಂತರವಾಗಿ ಪ್ರಕಟಿಸುತ್ತಾ ಬಂದಿದೆ. ಅನೇಕ ಬರಹಗಾರ ಪ್ರತಿಭೆಯನ್ನು ಒರೆಗೆ ಹಚ್ಚುವ ವೇದಿಕೆಯಾಗಿ ವಿಶ್ವ ಕನ್ನಡಿಗ ನ್ಯೂಸ್ ಕಾರ್ಯನಿರ್ವಹಿಸಿದೆ ಎನ್ನುವ ಹೆಮ್ಮೆಯಿದೆ.
ವಿಶ್ವ ಕನ್ನಡಿಗ ನ್ಯೂಸ್ ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಸಹ ಗುಂಪುಗಳನ್ನು ಹಾಗು ಪುಟಗಳನ್ನು ತೆರೆದು ಓದುಗರಿಗೆ ಸುಲಭವಾಗಿ ವರದಿಗಳು ತಲುಪುವಂತೆ ಮಾಡಿದ್ದು, ಫೇಸ್ ಬುಕ್ ನಲ್ಲಿ “ವಿಕೆ ನ್ಯೂಸ್ ಇದು ದಮನಿತರ ಧ್ವನಿ” ಎಂಬ ಗುಂಪು ಹಾಗು “ವಿಕೆ ನ್ಯೂಸ್” ಎಂಬ ಒಂದು ಪುಟ ಹಾಗು ವಾಟ್ಸ್ ಆಪ್ ನಲ್ಲಿ “ವಿಕೆ ನ್ಯೂಸ್ ಓಫೀಶಿಯಲ್” ಎಂಬ ಹಲವು ಗುಂಪುಗಳು ಕಾರ್ಯಾಚರಿಸುತ್ತಿದೆ, ಈ ಎಲ್ಲಾ ಗುಂಪುಗಳಲ್ಲೂ ದೇಶ ವಿದೇಶಗಳ ಹಲವು ಗಣ್ಯ ವ್ಯಕ್ತಿಗಳು, ಓದುಗರು ಹಾಗು ಬರಹಗಾರರು ಸದಸ್ಯರಾಗಿದ್ದಾರೆ.
ಅದೇ ರೀತಿ ಈ ಹನ್ನೆರಡು ವರ್ಷಗಳ ಮಧ್ಯೆ ವಿಶ್ವ ಕನ್ನಡಿಗ ನ್ಯೂಸ್ ವತಿಯಿಂದ ವಾಟ್ಸ್ ಆಪ್ ಗುಂಪಿನ ಮೂಲಕ ಹಾಗು ಅಭಿಮಾನಿಗಳ ಸಹಾಯದಿಂದಿಂದ ಸಂಕಷ್ಟದಲ್ಲಿರುವ ಕೆಲವು ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ಕೂಡ ಸಾಧ್ಯವಾಗಿದೆ. ಆ ಸಂದರ್ಭದಲ್ಲಿ ತನು-ಮನ-ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರನ್ನೂ ನಾನು ಈ ಸಂಭ್ರಮದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.
ವಿಶ್ವ ಕನ್ನಡಿಗ ನ್ಯೂಸ್ ಆರಂಭವಾದ ಸಂದರ್ಭದಲ್ಲಿ ಕನ್ನಡದಲ್ಲಿ ಅಂತರ್ಜಾಲ ತಾಣಗಳು ಬಹಳ ವಿರಳ ಸಂಖ್ಯೆಯಲ್ಲಿದ್ದವು, ಆದರೂ ಆ ಸಂದರ್ಭದಲ್ಲಿ ನಮ್ಮನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ, ಪ್ರೋತ್ಸಾಹಿಸಿದ ಓದುಗರು, ಜಾಹಿರಾತುದಾರರು, ಬರಹಗಾರರು ನಮ್ಮ ಏಳಿಗೆಯಲ್ಲಿ ಬಹಳಷ್ಟು ಪಾತ್ರವನ್ನು ವಹಿಸಿದ್ದಾರೆ. ಇಂದು ಅಂತರ್ಜಾಲ ತಾಣಗಳ ಸಂಖ್ಯೆ ಹೆಚ್ಚಾಗಿದ್ದರೂ ಕೂಡಾ ವಿಶ್ವ ಕನ್ನಡಿಗ ನ್ಯೂಸ್ ಅನ್ನು ನಮ್ಮ ತಾಣ ಎಂಬ ರೀತಿಯಲ್ಲಿ ಭಾವಿಸಿ ನಮ್ಮನ್ನು ಇಂದಿಗೂ ಪ್ರೋತ್ಸಾಹಿಸುತ್ತಾ, ನಮ್ಮ ವರದಿಗಳಲ್ಲಿ ತಪ್ಪು ಕಂಡಾಗ ನಮ್ಮನ್ನು ಅತ್ಯಂತ ಆತ್ಮೀಯವಾಗಿ ತಿದ್ದುತ್ತಾ, ನಮ್ಮನ್ನು ಬೆಂಬಲಿಸುತ್ತಾ ನಮ್ಮ ಉತ್ತಮ ಮಾಹಿತಿಗಳನ್ನು ಪ್ರೋತ್ಸಾಹಿಸುತ್ತಾ ನಮಗೆ ಎಲ್ಲಾ ರೀತಿಯಲ್ಲೂ ಸಹಕಾರವನ್ನು ನೀಡುವವರನ್ನು ನಾವು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸ್ಮರಿಸುತ್ತೇವೆ.
ವಿಕೆ ನ್ಯೂಸ್ ಹನ್ನೆರಡು ವಸಂತಗಳನ್ನು ಪೂರೈಸಿ ಹದಿಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಭ್ರಮದ ಸಮಯದಲ್ಲಿ ನಮ್ಮ ಎಲ್ಲಾ ಓದುಗರಿಗೂ ಹಾಗೂ ಜಾಹಿರಾತು ನೀಡಿ ಪ್ರೋತ್ಸಾಹಿಸುತ್ತಿರುವ ಜಾಹಿರಾತುದಾರರಿಗೂ, ಅಭಿಮಾನಿ ಹಿತೈಷಿಗಳಿಗೂ, ಲೇಖನ, ಸುದ್ದಿ, ಕವನಗಳನ್ನು ಕಳುಹಿಸುವ ಮೂಲಕ ಹಾಗು ಅಂಕಣಗಳನ್ನು ಬರೆಯುವ ಮೂಲಕ ನಮ್ಮ ಈ ಯಶಸ್ಸಿನಲ್ಲಿ ಭಾಗಿಯಾಗಿದ ಎಲ್ಲಾ ಮಿತ್ರರಿಗೂ, ನಾಡಿನ ಗಣ್ಯ ಬರಹಗಾರರಿಗೂ, ಈ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸಿದ ಸಂಪಾದಕೀಯ ಮಂಡಳಿಯ ಎಲ್ಲಾ ಮಿತ್ರರಿಗೂ ಅಲ್ಲದೇ ನಮ್ಮ ತಾಣದ ಯಶಸ್ವಿಗೆ ಸಹಕರಿಸಿದ ಎಲ್ಲಾ ಕನ್ನಡಪರ, ಸಾಮಾಜಿಕ ಹಾಗು ಧಾರ್ಮಿಕ ಸಂಘಟನೆಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿಯಲ್ಲಿರುವ ನನ್ನ ಆತ್ಮೀಯ ಮಿತ್ರರು ಯಾರೂ ಕೂಡ ಈ ಸಂಸ್ಥೆಯ ಪೂರ್ಣಾವಧಿ ಕೆಲಸಗಾರರಲ್ಲ, ಎಲ್ಲರೂ ಬೇರೆ ಬೇರೆ ಕೆಲಸದ ಜೊತೆ ತಮ್ಮ ಬಿಡುವಿನ ವೇಳೆಯಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಅಂತರ್ಜಾಲ ಪತ್ರಿಕೆಯನ್ನು ಕಟ್ಟಿ ಬೆಳೆಸಲು ಸಹಕರಿಸಿದ್ದಾರೆ ಹಾಗು ಸಹಕರಿಸುತ್ತಿದ್ದಾರೆ, ಇವರೆಲ್ಲರಿಗೂ ನಾನು ಚಿರಋಣಿಯಾಗಿದ್ದು, ಅವರಿಗೆ ಈ ಸಂದರ್ಭದಲ್ಲಿ ತುಂಬು ಹೃದಯದಿಂದ ಮತ್ತೊಮ್ಮೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ಅದೇ ರೀತಿ ಕಳೆದ ಹನ್ನೆರೆಡು ವರುಷಗಳ ಸಮಯದಲ್ಲಿ ವಿಕೆ ನ್ಯೂಸ್ ನೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸಿದ ಪ್ರೊ.ಅಬೂಬಕ್ಕರ್ ತುಂಬೆ, ಜಬ್ಬಾರ್ ಪೊನ್ನೋಡಿ, ಮಂಜುನಾಥ್ ಹೊಳೆನರಸೀಪುರ, ಲತೀಫ್ ಮಡಿಕೇರಿ ಕತಾರ್ ಮೊದಲಾದವರು ನಮ್ಮನ್ನು ಅಗಲಿದ್ದಾರೆ. ಅವರನ್ನು ಕೂಡ ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ.
ಇನ್ನು ಮುಂದೆಯೂ ನಿಷ್ಪಕ್ಷಪಾತ ಸುದ್ದಿಗಳನ್ನು ನೀಡುವ ಮೂಲಕ ಪತ್ರಿಕಾ ಧರ್ಮವನ್ನು ಪಾಲಿಸುತ್ತಾ, ನಿಮ್ಮ ವಿಶ್ವ ಕನ್ನಡಿಗ ನ್ಯೂಸ್ ದಮನಿತರ ಧ್ವನಿಯಾಗಿ ನಿಮ್ಮ ನಡುವೆ ಇರುತ್ತದೆ ಎಂಬ ಭರವಸೆಯನ್ನೂ ನೀಡುತ್ತಾ, ನಮ್ಮ ಒಂಬತ್ತು ವರ್ಷಗಳ ಯಶಸ್ಸಿಗೆ ಕಾರಣಕರ್ತರಾದ ನಮ್ಮ ಎಲ್ಲಾ ಓದುಗರಿಗೂ ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮ ಸಹಕಾರದ ನಿರೀಕ್ಷೆಯನ್ನು ಬಯಸುವ..
ಅಬ್ದುಲ್ ಹಮೀದ್ ಸಿ.ಹೆಚ್, ಕಾವು ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.