(www.vknews.in) : ಮುಸ್ಲಿಮರು ತಮ್ಮ ಹಲವು ಕಾರ್ಯಗಳಿಗೆ ಬಾಂಗ್ ಕೊಡುವುದು ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ದಿನನಿತ್ಯದ ಐದು ಸಮಯಗಳ ನಮಾಜುಗಳು ಅವುಗಳಲ್ಲಿ ಅತ್ಯಂತ ಪ್ರಮುಖವಾಗಿವೆ. ನಮಾಜಿನ ಸಿಂಧುತ್ವಕ್ಕೆ ಸಮಯ ಆಗಿರುವುದನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಅಝಾನ್ ಕರೆಯು ಸಮಯದ ಖಚಿತತೆಯನ್ನು ತಿಳಿಸುವ ಮಾರ್ಗೋಪಾಯವಾಗಿದೆ.
ಪ್ರವಾದಿವರ್ಯ ﷺ ರ ಕಾಲದಲ್ಲಿಯೇ ಜನರಿಗೆ ನಮಾಜಿನ ಬಾಂಗ್ ಕರೆಯು ಜಾರಿಗೆ ಬಂದಿದೆ. ಅಂದಿನಿಂದ ಮೊದಲ್ಗೊಂಡು ಅಝಾನ್ ಈಗಲೂ ಮುಸ್ಲಿಮರು ನಮಾಜ್ ಸಮಯವನ್ನು ತಿಳಿಸುವುದಕ್ಕಾಗಿ ಧ್ವನಿವರ್ಧಕ ಬಳಸುವುದನ್ನು ಕಾಣಬಹುದು. ಆದುದರಿಂದ ನಮ್ಮಲ್ಲಿನ ಮಹಿಳೆಯರು ಸೇರಿದಂತೆ ಎಲ್ಲರೂ ನಮಾಜ್ ನಿರ್ವಹಿಸಲು ಬಾಂಗ್ ಕೇಳುವುದನ್ನು ಕಾಯುತ್ತಿರುತ್ತಾರೆ. ಅಝಾನ್ ಕೇಳದೇ ನಮಾಜ್ ಮಾಡಲು ಎಲ್ಲರೂ ಹಿಂಜರಿಯುವುದುಂಟು.
ಪವಿತ್ರ ಉಪವಾಸದ ದಿನಗಳಲ್ಲೂ ಇದೇ ಸ್ಥಿತಿಯನ್ನು ಕಾಣಬಹುದು. ಸಮಯವಾಗಿಯೂ ಬಾಂಗ್ ಕೇಳದಿದ್ದರೆ ‘ಟೈಂ ಆಗಿದೆ, ಯಾಕೆ ಬಾಂಗ್ ಕೊಟ್ಟಿಲ್ಲ”? “ಕರೆಂಟು ಇಲ್ಲವಾ.?” ಮುಂತಾದ ಪ್ರಶ್ನೆಗಳೊಂದಿಗೆ ಜನರು ತಮ್ಮ ಅಸಹನೆಯನ್ನು ತೋರಿಸುವುದಾದರೂ ಬಾಂಗ್ ಕೇಳದ ಹೊರತು ಉಪವಾಸ ತೊರೆಯಲು ಯಾರೂ ಮುಂದಾಗುವುದಿಲ್ಲ.
ಮಸೀದಿಯಿಂದ ಮೈಕ್ ಮೂಲಕ ಕೇಳುವ ಬಾಂಗಿನ ಶಬ್ದವು ಮುಸ್ಲಿಮರ ಮನಸ್ಸಿನಲ್ಲಿ ಅತ್ಯಂತ ಸಂತೋಷವನ್ನುಂಟು ಮಾಡುತ್ತದೆ. ಚಿಕ್ಕಮಕ್ಕಳು ಕೂಡ ಬಾಂಗ್ ಕರೆಯನ್ನು ಮೌನವಾಗಿ ಆಲಿಸುವುದನ್ನು ಕಾಣಬಹುದು. ಹಿರಿಯರಲ್ಲಿ “ಬಾಂಗ್ ಆಗುತ್ತಿದೆ, ಮೌನವಾಗಿರಿ” ಎಂದು ಕೆಲವು ಮಕ್ಕಳು ಹೇಳುವುದರ ಕಾರಣವೂ ಗೌರವವೇ ಆಗಿರುತ್ತದೆ.
ಮುಸ್ಲಿಂ ಮನೆಯವರು ಸುಬುಹಿ ಬಾಂಗಿನ ಸಮಯ ಹತ್ತಿರವಾಗುವಾಗ ನಿದ್ದೆಯಿಂದ ಎದ್ದು ನಮಾಜಿಗೆ ರೆಡಿಯಾಗುತ್ತಾರೆ. ಬಹುತೇಕ ಮಹಿಳೆಯರು ಮನೆಯ ತಮ್ಮ ಕೋಣೆಯಲ್ಲಿ ತಹಜ್ಜುದ್ ನಮಾಜ್ ನಿರ್ವಹಿಸಿ ಅಝಾನ್ ಕೇಳುವ ತನಕ ದುಆದಲ್ಲಿ ಮಗ್ನರಾಗಿರುತ್ತಾರೆ. ಬಹಳಷ್ಟು ಮುಸ್ಲಿಮೇತರು ಸಹ ಸುಬುಹ್, ಳುಹರ್ ಮತ್ತು ಅಸರ್ ವೇಳೆಗಳಲ್ಲಿ ಕೊಡುವ ಅಝಾನ್ ಕರೆಯನ್ನು ಅವರ ದಿನಚರಿಗಾಗಿ ಆಶ್ರಯಿಸುವುದನ್ನು ಅಲ್ಲಗಳೆಯುವಂತಿಲ್ಲ. ಸುಬುಹಿಯ ಸಮಯದಲ್ಲಿ ಪರಿಸರವು ಶಾಂತವಾಗಿರುವುರಿಂದ ಎಲ್ಲಾ ಮನೆಯವರಿಗೂ ಸುತ್ತಮುತ್ತಲಿನ 4-5 ಮಸೀದಿಗಳ ಬಾಂಗ್’ಗಳು ಕೇಳಲು ಸಾಧ್ಯವಾಗುತ್ತದೆ. ನಮಾಜಿಗೆ ಎದ್ದೇಳಲು ಬಾಂಗ್ ಬಹಳಷ್ಟು ಪ್ರೇರಣೆಯಾಗುವುದರಲ್ಲಿ ಸಂದೇಹವಿಲ್ಲ.
ಇದೀಗ ಸುಪ್ರೀಂಕೋರ್ಟ್ ಆದೇಶದನ್ವಯ ರಾತ್ರಿ 10ರಿಂದ ಬೆಳಿಗ್ಗೆ 6ರ ತನಕ ಧ್ವನಿವರ್ಧಕ ಬಳಕೆಯನ್ನು ನಿರ್ಬಂಧ ಮಾಡಿರುವುದರಿಂದ ಬೆಳಗ್ಗಿನ ಬಾಂಗ್ ಮೈಕ್ ಮೂಲಕ ಕೇಳಲು ಸಾಧ್ಯವಾಗುವುದಿಲ್ಲ. ಈ ವಾರ್ತೆಯು ಮುಸ್ಲಿಮರು ಸೇರಿದಂತೆ ಕೆಲವೊಂದು ಅಮುಸ್ಲಿಮರಲ್ಲೂ ಬಹಳಷ್ಟು ದುಃಖವನ್ನು ಮಾಡಿದೆ. ಅಝಾನ್ ಕರೆಗೆ ಉತ್ತರಿಸುವ ಸುನ್ನತ್ ಹಾಗೂ ನಂತರದ ದುಆಗಳು ಎಲ್ಲಾ ದಿನವೂ ನಷ್ಟವಾಗುವುದನ್ನು ನೆನೆಸಿ ಸತ್ಯ ವಿಶ್ವಾಸಿಗಳು ಕಣ್ಣೀರು ಸುರಿಸುತ್ತಿದ್ದಾರೆ.
ಆರಾಧನಾಲಯಗಳಲ್ಲಿ ಬೆಳಗಿನ ಅಝಾನ್ ಸಹಿತ ಪ್ರಾರ್ಥನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ನಿಷೇಧ ಮಾಡಿದ ಸುದ್ದಿಯು ಇನ್ನೂ ಹಲವು ಜನರಿಗೆ ತಿಳಿಯಲಿಲ್ಲ. ಅವರು ಈಗಲೂ ತಮ್ಮ ನಮಾಜ್ ಗಾಗಿ ಬಾಂಗಿನ ಕರೆಯನ್ನು ಕಾಯುತ್ತಿದ್ದಾರೆ. ಮಳೆಗಾಲದ ಪ್ರತ್ಯೇಕ ಸನ್ನಿವೇಶದಲ್ಲಿ ವಿದ್ಯುತ್ ಅಡಚಣೆಯಿಂದ ಕಳೆದ ಕೆಲವು ದಿನಗಳಿಂದ ಬೆಳಿಗ್ಗಿನ ಬಾಂಗ್ ಕೇಳಿಸಿಲ್ಲವೆಂದು ಭಾವಿಸಿರಬಹುದು. ಆದುದರಿಂದ ನಮ್ಮೆಲ್ಲರಿಗೂ ಈ ಸಂದೇಶವನ್ನು ಕೂಡಲೇ ತಿಳಿಸಬೇಕು. ಪವಿತ್ರ ಇಸ್ಲಾಂ ಶಾಂತಿಯ ಧರ್ಮವಾಗಿದೆ. ಮುಸ್ಲಿಮರಾದ ನಾವು ಶಾಂತಿ ಕಾಪಾಡುವವರಾಗೋಣ.!
– ಎಂಕೆಎಂ ಕಾಮಿಲ್ ಸಖಾಫಿ, ಕೊಡಂಗಾಯಿ ತೌಬಃ ಜುಮಾ ಮಸ್ಜಿದ್ ಮೋಂತಿಮಾರ್, ದ.ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.