ನೀವು ಹತ್ತಾರು ಪುಸ್ತಕಗಳನ್ನು ಓದಿರಬಹುದು ಆದರೆ ಪ್ರವಾದಿವರ್ಯರ ಜೀವನ ಚರಿತ್ರೆ ಓದಿದ್ದೀರಾ ….?
ಪ್ರಭಾವಿತ ವ್ಯಕ್ತಿ (www.vknews.in) : 1978ರಲ್ಲಿ ನ್ಯೂಯಾರ್ಕ್ನ ಹಾರ್ಟ್ ಪಬ್ಲಿಷಿಂಗ್ ಕಂಪನಿ ಒಂದು ಪುಸ್ತಕವನ್ನು ಬಿಡುಗಡೆ ಮಾಡಿತು. ಅದರ ಹೆಸರು ‘ದ ಹಂಡ್ರೆಡ್’ (The 100) ಬರೆದವರು ಮೈಕೇಲ್ ಎಚ್ ಹಾರ್ಟ್ . ಅದರಲ್ಲಿ ಪ್ರಪಂಚದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಬಗ್ಗೆ ವ್ಯಾಖ್ಯಾನ ಮಾಡಲಾಗಿತ್ತು. ಪ್ರಂಚದ ಪ್ರಮುಖ ನೂರು ವ್ಯಕ್ತಿಗಳಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಮೈಕೇಲ್ ಹಾರ್ಟ್ ಗುರುತಿಸಿದ್ದು ಬೇರೆ ಯಾರೂ ಅಲ್ಲ ಪ್ರವಾದಿ ಮುಹಮ್ಮದ್(ಸ)ರವರು ಆಗಿದ್ದರು. “13 ಶತಮಾನ ಕಳೆದರೂ ಇಂದಿಗೂ ಪ್ರವಾದಿ ಮುಹಮ್ಮದ್ರವರು(ಸ) ಪ್ರಭಾವಶಾಲಿಯಾಗಿಯೇ ಉಳಿದಿದ್ದಾರೆ” (Page 33). ಬಹಳ ಸಂಶೋಧನೆಗಳ ನಂತರ ಆ ಪುಸ್ತಕ ಬಿಡುಗಡೆಯಾಯಿತು. ನನ್ನ ಈ ಪುಸ್ತಕ ಓದಿ ಕೆಲವರಿಗೆ ಆಶ್ಚರ್ಯವಾಗಬಹುದು ಮತ್ತು ಕೆಲವರು ಪ್ರಶ್ನಿಸಬಹುದು. ಆದರೆ ಚರಿತ್ರೆಯಲ್ಲಿ ಆ ಒಬ್ಬ ವ್ಯಕ್ತಿಯೇ ಪ್ರಭಾವಶಾಲಿ ಮತ್ತು ಜಯಶಾಲಿ (Page 33)
ಜನಸಾಮಾನ್ಯರ ದಾರಿದೀಪ ಪ್ರವಾದಿ ಮುಹಮ್ಮದ್(ಸ)..
ನಮ್ಮಂಥ ಸಾಮಾನ್ಯ ಜನರಲ್ಲಿ ನಡೆ ಮತ್ತು ನುಡಿಯಲ್ಲಿ ವಿಭಿನ್ನತೆ ಇರುವುದುಂಟು. ಕೆಲವೊಮ್ಮೆ ನಾವು ನುಡಿದ ಹಾಗೆ ನಡೆಯುವುದಿಲ್ಲ. ನುಡಿಯುವುದು ಬಹಳ ಸುಲಭ ಆದರೆ ನಡೆಯುವುದು ಕಷ್ಟ ಸಾಧ್ಯದ ಕೆಲಸ. ಪ್ರತಿದಿನ ನಾವು ಮಾಧ್ಯಮಗಳಲ್ಲಿ ನೋಡುತ್ತೇವೆ, ಕೇಳುತ್ತೇವೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಭಾಷೆ ತಪ್ಪುತ್ತಾರೆ. ಮನಸ್ಸಿನಲ್ಲಿರುವುದೊಂದು ಜನರ ಮುಂದೆ ಹೇಳುವುದೇ ಒಂದು. ಕೆಲವೊಮ್ಮೆ ಬಾಯಿಯಿಂದ ಹೇಳುವುದೇ ಒಂದು, ಆದರೆ ನಡೆಯುವುದೇ ಒಂದು
ಒಂದು ದಿನ ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಪ್ರವಾದಿವರ್ಯರ ಸನ್ನಿಧಿಗೆ ಬರುತ್ತಾಳೆ. ನನ್ನ ಮಗು ತುಂಬಾ ಸಿಹಿ ತಿನ್ನುತ್ತೆ, ಮಗುವಿಗೆ ಸ್ವಲ್ಪ ಬುದ್ಧಿವಾದ ಹೇಳಿ ಎನ್ನುತ್ತಾಳೆ. ಆಗ ಪ್ರವಾದಿವರ್ಯರು ಮೂರು ದಿನದ ನಂತರ ಬನ್ನಿ ಎಂದು ಕಳಿಸುತ್ತಾರೆ. ಮೂರು ದಿನ ಕಳೆದ ಬಳಿಕ ಆಕೆ ಪುನಃ ಮಗುವಿನೊಂದಿಗೆ ಬರುತ್ತಾಳೆ. ಆಗ ಪ್ರವಾದಿವರ್ಯರು ಮಗುವಿಗೆ ಸಿಹಿ ತಿನ್ನಬೇಡ ಎಂದು ಹೇಳಿದರು. ಆಗ ಮಹಿಳೆ ಕೇವಲ ಇಷ್ಟನ್ನು ಹೇಳುವುದಕ್ಕೆ ಮೂರು ದಿನ ತೆಗೆದುಕೊಂಡಿದ್ದೇಕೆ? ಅಂದೇ ಈ ಮಾತನ್ನು ಹೇಳಬಹುದಾಗಿತ್ತಲ್ಲ ಎನ್ನುತ್ತಾಳೆ. ಆಗ ಪ್ರವಾದಿವರ್ಯರು ನನಗೂ ಸಿಹಿ ಇಷ್ಟ. ನೀನು ಕೇಳಿದಾಗ ನಾನು ಸಿಹಿ ತಿನ್ನುವುದನ್ನು ಬಿಟ್ಟಿರಲಿಲ್ಲ. ಮೂರು ದಿನ ಸಿಹಿ ಬಿಡುವುದನ್ನು ಅಭ್ಯಾಸ ಮಾಡಿ ನಂತರ ಮಗುವಿಗೆ ತಿಳಿಹೇಳಿದ್ದೇನೆ ಎಂದು ನುಡಿಯುತ್ತಾರೆ. ಪ್ರವಾದಿವರ್ಯರ ಹದೀಸಿನ ಈ ಸಾರಾಂಶ ನಮಗೆ ಎಷ್ಟು ಸೂಕ್ಷ್ಮವಾದ ಪಾಠ ಹೇಳಿಕೊಡುತ್ತದೆ ಸ್ವಲ್ಪ ಯೋಚಿಸಿ.
ಪ್ರವಾದಿವರ್ಯರ ನಡೆ ಮತ್ತು ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಿರಲಿಲ್ಲ. ತಾನು ಮಾಡದ ಯಾವುದನ್ನೂ ಪರರಿಗೆ ಮಾಡಲು ಪ್ರೇರೇಪಿಸುತ್ತಿರಲಿಲ್ಲ.
ಓದುಗರಿಗೆ ದಾರಿದೀಪವಾಗುವಂತೆ ಹಲವಾರು ಹದೀಸ್(ಪ್ರವಾದಿವರ್ಯರ ವಚನಗಳು)ಗಳನ್ನು ಶಮ್ಸ್ ಪೀರ್ಜಾದ ಬರೆದಿರುವ ‘ವಚನಗಳು‘ ಎಂಬ ಪುಸ್ತಕದಿಂದ ಆರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ವಾಸ್ತವದಲ್ಲಿ ಹದೀಸ್ಗಳು ಪವಿತ್ರ ಕುರ್ಆನ್ನ ವಾಕ್ಯಗಳ ಹಾಗೂ ಆದೇಶಗಳ ವ್ಯಾಖ್ಯಾನಗಳಾಗಿವೆ. ಈ ಹದೀಸ್ಗಳನ್ನು ಪ್ರವಾದಿವರ್ಯರ(ಸ) ನಿಷ್ಠಾವಂತ ಸಂಗಡಿಗರು ಅತ್ಯಂತ ಜವಾಬ್ದಾರಿಯುತವಾಗಿ ವಿಶ್ವಸನೀಯ ಹದೀಸ್ ಸಂಗ್ರಹಕಾರರಿಗೆ ತಲುಪಿಸಿದರು. ತರುವಾಯ ಅವು ಬುಖಾರಿ, ಮುಸ್ಲಿಂ, ತಿರ್ಮದಿ, ಅಬೂದಾವೂದ್, ನಸಾಈ, ಇಬ್ನುಮಾಜಃ, ಅಹ್ಮದ್ ಮುಂತಾದ ಹದೀಸ್ ಸಂಗ್ರಹ ಗ್ರಂಥಗಳಲ್ಲಿ ದಾಖಲಿಸಲ್ಪಟ್ಟವು.
ನಾನು ಹತ್ತು ವರ್ಷ ಪ್ರವಾದಿ ಮುಹಮ್ಮದ್ರ(ಸ) ಸೇವಕನಾಗಿದ್ದೆ. ಅವರೆಂದೂ ನನಗೆ ‘ಉಫ್‘ ಎಂದು ಹೇಳಿದ್ದಿಲ್ಲ. ಯಾವುದೇ ಕಾರ್ಯದ ಕುರಿತು ಅದನ್ನೇಕೆ ಮಾಡಿದೆ ಎಂದಾಗಲಿ ಯಾವುದೇ ಕಾರ್ಯ ಮಾಡದಿದ್ದರೆ ಅದನ್ನೇಕೆ ಮಾಡಿಲ್ಲ ಎಂದಾಗಲಿ ಅವರು ಕೇಳಿದ್ದಿಲ್ಲ. –ಹ. ಅನಸ್(ರ) – ತಿರ್ಮದಿ
ಇದು ಪ್ರವಾದಿವರ್ಯರ(ಸ) ಉನ್ನತ ಚಾರಿತ್ರ್ಯದ ಕುರಿತು, ಹತ್ತು ವರ್ಷ ಅವರ ಸೇವೆಯಲ್ಲಿದ್ದ ಓರ್ವ ತರುಣನ ಸಾಕ್ಷ್ಯ. ಪ್ರವಾದಿವರ್ಯರು(ಸ) ತಮ್ಮ ವೈಯಕ್ತಿಕ ವಿಷಯಗಳಲ್ಲಿ ಅತ್ಯಂತ ಗಂಭೀರರೂ ಸೌಜನ್ಯಶೀಲರಾಗಿದ್ದರು. ಸಣ್ಣ ಪುಟ್ಟ ವಿಷಯಗಳ ಕುರಿತು ಅವರೆಂದೂ ವಿಚಾರಿಸುತ್ತಿರಲಿಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ.
ಓದುಗರಲ್ಲಿ ಕೆಲವರು ಯಜಮಾನರಾಗಿರಬಹುದು. ಅಥವಾ ಆಳಾಗಿ ಕೆಲಸ ನಿರ್ವಹಿಸುತ್ತಿರಬಹುದು. ಒಂದು ಸ್ವಲ್ಪವೂ ಹೆಚ್ಚು ಕಡಿಮೆಯಾದರೆ ಯಜಮಾನರ ವರ್ತನೆ ಅಥವಾ ಆಳಿನ ವರ್ತನೆ ಹೇಗಿರಬಹುದೆಂದು ನೀವು ಕಣ್ಣಾರೆ ನೋಡಿದ್ದೀರಿ. ಯಜಮಾನ ಆಳುಗಳೊಂದಿಗೆ ಎಷ್ಟು ಸಹನೆಯಿಂದಿರಬೇಕು, ಎಷ್ಟು ಪ್ರೀತಿ ತೋರಿಸಬೇಕು ಎಂಬುದು ಈ ಹದೀಸ್ನಿಂದ ಕಲಿತುಕೊಳ್ಳ ಬೇಕಾಗುತ್ತದೆ. ಎಲ್ಲರೂ ಸಮಾಜದಲ್ಲಿ ಸರಿಸಮಾನರು, ಯಾರ ಮೇಲೆ ದೌರ್ಜನ್ಯವೆಸಗಬಾರದು ಎಂಬ ಪಾಠ ತಿಳಿದುಕೊಳ್ಳಬೇಕಾಗುತ್ತದೆ.
ಪ್ರವಾದಿ ಮುಹಮ್ಮದರೊಡನೆ(ಸ) ಯಾವುದೇ ವಸ್ತು ಕೇಳಿದಾಗ ಅವರು ಎಂದೂ ಕೊಡಲು ನಿರಾಕರಿಸಿದ್ದಿಲ್ಲ. –ಹ. ಜಾಬಿರ್(ರ) ಬುಖಾರಿ
ಇದು ಪ್ರವಾದಿವರ್ಯರು(ಸ) ಎಷ್ಟು ವಿಶಾಲ ಹೃದಯಿ, ಕೊಡುಗೈ ದಾನಿ ಮತ್ತು ಉನ್ನತ ಚಾರಿತ್ರ್ಯದವರಾಗಿದ್ದರು ಎಂಬುದನ್ನುಸೂಚಿಸುತ್ತದೆ ಎಂದೂ ಯಾರಿಗೂ ‘ಇಲ್ಲ’ ಎಂದು ಹೇಳದೆ ಇರಲು ಅಸಾಮಾನ್ಯ ಔನ್ನತ್ಯವಿರುವ ಅತ್ಯಂತ ಶ್ರೇಷ್ಠ ವ್ಯಕ್ತಿಗೆ ಮಾತ್ರ ಸಾಧ್ಯ.
ಕಷ್ಟ ಎನ್ನುವುದು ಬಡವರಿಗೆ, ಶ್ರೀಮಂತರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಬರುತ್ತದೆ. ನಮಗೆ ಸಹಾಯ ಮಾಡುವ ಅರ್ಹತೆಯಿದ್ದರೂ ಸಹಾಯ ಮಾಡದೆ ಇರುವುದು ಬಹಳ ನಾಚಿಕೆ ಪಡುವಂಥದ್ದು. ಎರಡು ರೂಪಾಯಿಯ ವಸ್ತುವನ್ನು ಸಹ ಕೊಡಲು ಜನರು ಹಿಂದೆಮುಂದೆ ನೋಡುತ್ತಾರೆ. ಸಾಯುವಾಗ 200 ಕೋಟಿ ಬಂಗಲೆ ಇದ್ದರೂ ಅದನ್ನು ಬಿಟ್ಟು ಹೋಗಬೇಕು ಎನ್ನುವುದನ್ನು ಮರೆತು ಬದುಕುತ್ತಿದ್ದೇವೆ. ಪರರಿಗೆ ಆದಷ್ಟು ಸಹಾಯ ಮಾಡಿ ಎನ್ನುವುದೇ ಮೇಲಿನ ಹದೀಸ್ ತಾತ್ಪರ್ಯವಾಗಿದೆ.
ಪ್ರವಾದಿ ಮುಹಮ್ಮದ್(ಸ) ನಿರಂತರ ಹಲವು ಇರುಳುಗಳನ್ನು ಹಸಿವಿನ ಸ್ಥಿತಿಯಲ್ಲೇ ಕಳೆಯುತ್ತಿದ್ದರು. ಅವರು ಸಾಮಾನ್ಯವಾಗಿ ತಿನ್ನುವ ರೊಟ್ಟಿಯು ಜೋಳದ್ದಾಗಿರುತ್ತಿತ್ತು. ಆದರೂ ಪ್ರವಾದಿ(ಸ) ಮತ್ತವರ ಮನೆಯವರಿಗೆ ರಾತ್ರಿಯ ಭೋಜನ ಲಭ್ಯವಾಗುತ್ತಿರಲಿಲ್ಲ. – ಹ. ಇಬ್ನು ಅಬ್ಬಾಸ್ (ರ) – ತಿರ್ಮದಿ
ಪ್ರವಾದಿ(ಸ) ಮಲಗಲು ಬಳಸುತ್ತಿದ್ದ ಹಾಸಿಗೆಯು ಚರ್ಮದ್ದಾಗಿತ್ತು. ಅದರೊಳಗೆ ಖರ್ಜೂರದ ಎಲೆಗಳನ್ನು ತುಂಬಲಾಗಿತ್ತು. –ಹ. ಆಯಿಶಾ(ರ) ತಿರ್ಮದಿ
ರಾಜನಂತೆ ಬದುಕುವ ಎಲ್ಲಾ ಅವಕಾಶಗಳಿದ್ದರು ಒಬ್ಬ ಫಕೀರನಂತೆ ಬದುಕಿದ ಇತಿಹಾಸದ ಅತ್ಯಂತ ಮಹಾನ್ ವ್ಯಕ್ತಿಯ ಬದುಕಿನ ಒಂದು ಪುಟ್ಟ ದೃಶ್ಯವಿದು. ಆಹಾರ, ವಸ್ತ್ರ, ವಸತಿ ಹೀಗೆ ಎಲ್ಲ ವಿಷಯಗಳಲ್ಲೂ ಪ್ರವಾದಿವರ್ಯರು ಸರಳತೆ ಮತ್ತು ಅನೌಪಚಾರಿಕತೆಯನ್ನು ಇಷ್ಟ ಪಡುತ್ತಿದ್ದರು. ತಮಗೆ ಸಿಕ್ಕಿದುದರಲ್ಲೇ ತೃಪ್ತಿ ಪಡುತ್ತಿದ್ದರು. ಸಿಕ್ಕಿದುದರಲ್ಲೂ ಬಹಳಷ್ಟನ್ನು ಉದಾರವಾಗಿ ಇತರರಿಗೆ ಕೊಟ್ಟು ಬಿಡುತ್ತಿದ್ದರು. ಆದ್ದರಿಂದಲೇ ಅವರ ಬಳಿ ಎಂದೂ ಸಂಪತ್ತು ಸಂಗ್ರಹವಾಗಲಿಲ್ಲ. ಅವರ ನಿತ್ಯದ ಆಹಾರದಲ್ಲಿ ಜೋಳದ ರೊಟ್ಟಿ ಮತ್ತು ಖರ್ಜೂರದಂತಹ ತೀರಾ ಸಾಮಾನ್ಯ ವಸ್ತುಗಳು ಮಾತ್ರ ಇರುತ್ತಿದ್ದವು. ಆದರೆ ಕೆಲವೊಮ್ಮೆ ಇವು ಕೂಡಾ ಲಭ್ಯವಾಗುತ್ತಿರಲಿಲ್ಲ. ರಾತ್ರಿ ಹಸಿದ ಹೊಟ್ಟೆಯಲ್ಲೇ ಮಲಗಬೇಕಾಗುತ್ತಿತ್ತು. ಅವರ ಉಡುಗೆ-ತೊಡುಗೆಗಳು ಕೂಡಾ ತೀರಾ ಸರಳವಾಗಿದ್ದವು. ಆ ಕಾಲದ ಪದ್ಧತಿಯಂತೆ ಸಾಮಾನ್ಯವಾಗಿ ಒಂದು ಲುಂಗಿ ಮತ್ತು ಒಂದು ಹೊದಿಕೆಯನ್ನು ಮಾತ್ರ ಧರಿಸುತ್ತಿದ್ದರು. ಹಾಗೆಯೇ ಅವರ ಹಾಸಿಗೆ ಕೂಡ ಖರ್ಜೂರದ ಎಲೆಗಳಿಂದ ನಿರ್ಮಿತವಾಗಿತ್ತು. ಪ್ರವಾದಿವರ್ಯರು(ಸ) ಈ ಲೋಕದಿಂದ ತೆರಳುವಾಗ ಯಾವುದೇ ಧನವನ್ನು ಸಂಗ್ರಹಿಸಿ ಬಿಟ್ಟುಹೋಗಲಿಲ್ಲ. ಅವರ ರಕ್ಷಾ ಕವಚ ಕೂಡಾ ಒಬ್ಬ ಯಹೂದಿಯ ಬಳಿ ಒತ್ತೆ ಇಡಲ್ಪಟ್ಟಿತ್ತು. ಸರಳತೆ, ಅನೌಪಚಾರಿಕತೆ ಮತ್ತು ನಿರಪೇಕ್ಷತೆಗೆ ಎಷ್ಟೊಂದು ಉತ್ತಮ ಆದರ್ಶವಾಗಿದ್ದರು!
ಪ್ರವಾದಿವರ್ಯರು(ಸ) ಎಂತಹ ಸ್ಥಿತಿಯಲ್ಲಿ ಈ ಲೋಕದಿಂದ ತೆರಳಿದರೆಂದರೆ ಅವರೆಂದೂ ಒಂದು ದಿನದಲ್ಲಿ ಎರಡು ಬಾರಿ ಹೊಟ್ಟೆ ತುಂಬುವಷ್ಟು ರೊಟ್ಟಿಯನ್ನಾಗಲೀ ಕೊಬ್ಬಿನ ಆಹಾರ ಪದಾರ್ಥಗಳನ್ನಾಗಲೀ ತಿಂದಿರಲಿಲ್ಲ. –ಹ. ಆಯಿಶಾ(ರ)-ಮುಸ್ಲಿಂ
ಪ್ರವಾದಿ ಮುಹಮ್ಮದ್ರವರ(ಸ) ಮನೆಯವರಾದ ನಾವು ಕೆಲವೊಮ್ಮೆ ತಿಂಗಳುಗಟ್ಟಲೆ ಮನೆಯಲ್ಲಿ ಒಲೆ ಉರಿಯದಂತಹ ಸ್ಥಿತಿಯಲ್ಲಿ ಕಳೆಯಬೇಕಾಗುತ್ತಿತ್ತು. ನಾವು ಕೇವಲ ಖರ್ಜೂರ ಮತ್ತು ನೀರನ್ನು ಸೇವಿಸಿ ಬದುಕುತ್ತಿದ್ದೆವು. –ಹ. ಆಯಿಶಾ(ರ)-ಮುಸ್ಲಿಂ
ನಮ್ಮ ಜೀವನವನ್ನು ಸ್ವಲ್ಪ ಕಲಕಿ ನೋಡೋಣ. ಮದುವೆ ಮುಂಜಿ ಅಥವಾ ನಮ್ಮ ಸಮಾರಂಭಗಳಲ್ಲಿ ವಿಧವಿಧವಾದ ಭೋಜನಗಳನ್ನು ಅವಶ್ಯಕತೆಗಿಂತ ಹೆಚ್ಚಾಗಿ ತಯಾರಿಸಿ ಕೊನೆಗೆ ಅದನ್ನು ಕಸದ ತೊಟ್ಟಿಯಲ್ಲಿ ಬಿಸಾಡುತ್ತೇವೆ. ಸಮಾರಂಭಗಳಲ್ಲಿ ಬಡವರಿಗೆ ಆಹ್ವಾನವಿಲ್ಲ. ಮರ್ಯಾದೆ ಕಳೆದುಹೋಗುತ್ತದೆ ಎನ್ನುವ ಭಯ. ನಾಲ್ಕು ದಿನಗಳ ಬಾಳಿನಲ್ಲಿ ಸಾವನ್ನೇ ಮರೆತಿರುವಂತಿದೆ. ಸಮಾರಂಭಗಳ ವಿಷಯ ಹಾಗಿರಲಿ, ಮನೆಗಳಲ್ಲಂತೂ ಇನ್ನೂ ಕೆಟ್ಟ ವಾತಾವರಣ. ಪಕ್ಕದ ಮನೆಯವರು ಸಹಾಯ ಕೇಳಿದರೂ ಸಹಾಯ ಮಾಡುವ ಮನಸ್ಸಿಲ್ಲ. ತಮ್ಮ ಪ್ರಿಡ್ಜ್ಗಳಲ್ಲಿ ಆಹಾರ ಕೊಳೆಯುತ್ತಿದ್ದರೂ ಬಡವರಿಗೆ ಸಹಾಯಹಸ್ತ ಚಾಚದ ಕೈಗಳು. ದೇವರು ಸಾಕಷ್ಟು ಕೊಡುತ್ತಿದ್ದರು ಇನ್ನೂ ಬೇಕೆನ್ನುವ, ಮುಗಿಯಲಾರದ ಆಸೆಗಳು. ಇದೇ ಜೀವನವಾಗಿಬಿಟ್ಟಿದೆ.ನಮ್ಮ ದೇಶದಲ್ಲಿ ಬಡತನ ರೇಖೆಯ ಕೆಳಗೆ ಲಕ್ಷಾಂತರ ಜನರು ಬದುಕುತ್ತಿದ್ದಾರೆ. ಎಲ್ಲಾ ತೊಂದರೆಗಳನ್ನು ಸರ್ಕಾರವೇ ನಿವಾರಿಸಲು ಸಾಧ್ಯವಿಲ್ಲ. ಬಡತನ ನಿವಾರಿಸಲು ಪ್ರಜೆಗಳು ಸಹ ಆದಷ್ಟು ಮುಂದೆ ಬರಬೇಕಾಗಿದೆ.
ಒಮ್ಮೆ ಪ್ರವಾದಿ ಮುಹಮ್ಮದ್(ಸ) ಒಂದು ಚಾಪೆಯಲ್ಲಿ ಮಲಗಿದ್ದರು. ಎದ್ದಾಗ ಅವರ ಶರೀರದಲ್ಲಿ ಚಾಪೆಯ ಗುರುತುಗಳಿದ್ದವು. ಇದನ್ನು ಕಂಡು ನಾವು, ದೇವರ ಸಂದೇಶ ವಾಹಕರೇ, ನಾವು ತಮಗಾಗಿ ಮೃದುವಾದ ಹಾಸಿಗೆಯನ್ನು ತಂದೊದಗಿಸಿದರೆ ತೊಂದರೆ ಏನಿದೆ? ಎಂದು ಕೇಳಿದೆವು. ಆಗ ಅವರು ಹೇಳಿದರು– “ಈ ಲೋಕದೊಂದಿಗೆ ನನಗೇನು ಸಂಬಂಧ? ನನಗೆ ಲೋಕದ ಜೊತೆಗೆ ಇರುವ ಸಂಬಂಧ ಒಬ್ಬ ಪ್ರಯಾಣಿಕನು ಯಾವುದಾದರೂ ಮರದ ನೆರಳಲ್ಲಿ ಸ್ವಲ್ಪ ಹೊತ್ತು ತಂಗಿ ಆ ಬಳಿಕ ಅದನ್ನು ಬಿಟ್ಟು ಹೊರಟು ಹೋಗುವಷ್ಟು ಮಾತ್ರ” –ಹ. ಅಬ್ದುಲ್ಲಾ ಖಾನ್ ಮಸ್ಊದ್ – ತಿರ್ಮದಿ
ಮನುಷ್ಯನು ಆರಾಮಪ್ರಿಯನಾಗಿ ಬಿಟ್ಟಾಗ ಲೋಕವು ಅವನ ಮೇಲೆ ಸವಾರಿ ಮಾಡತೊಡಗುತ್ತದೆ. ಆ ಬಳಿಕ ಅವನು ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುವ ವಿಷಯದಲ್ಲಿ ಕರ್ತವ್ಯ ಪ್ರಜ್ಞೆಯನ್ನು ತೋರಿಸುವ ಬದಲು ಸೋಮಾರಿತನವನ್ನು ಪ್ರದರ್ಶಿಸಲಾರಂಭಿಸುತ್ತಾನೆ. ಪ್ರವಾದಿವರ್ಯರು(ಸ) ಸ್ವಾಭಾವಿಕವಾಗಿಯೇ ಶ್ರಮಜೀವಿಯಾಗಿದ್ದರು. ಕಠಿಣ ದುಡಿಮೆಯನ್ನು ಇಷ್ಟ ಪಡುವವರಾಗಿದ್ದರು. ಅವರ ಜೀವನ ಒಬ್ಬ ಯೋಧನ ಜೀವನವಾಗಿತ್ತು. ಬದುಕಿನ ಸೌಲಭ್ಯಗಳ ವಿಷಯದಲ್ಲಿ ಅವರು ಸಿಕ್ಕಿದುದರಲ್ಲಿ ತೃಪ್ತಿ ಪಡುವ ನಿಲುವಿನವರಾಗಿದ್ದರು. ಯಾವುದೇ ಬಗೆಯ ಔಪಚಾರಿಕತೆಯನ್ನು ಅವರು ಮೆಚ್ಚುತ್ತಿರಲಿಲ್ಲ. ಈ ಲೋಕದಲ್ಲಿ ಮನುಷ್ಯನ ಜೀವನ ಹೇಗಿರಬೇಕೆಂಬ ಬಗ್ಗೆ ಅವರು ನೀಡಿರುವ ಉದಾಹರಣೆಯು ಒಂದು ದೊಡ್ಡ ವಾಸ್ತವಿಕತೆಯನ್ನು ವಿವರಿಸುತ್ತದೆ. ಈ ವಾಸ್ತವಿಕತೆಯು ಒಬ್ಬ ಮನುಷ್ಯನಿಗೆ ಸರಿಯಾಗಿ ಮನವರಿಕೆಯಾಗಿ ಬಿಟ್ಟರೆ ಅವನೆಂದೂ ಈ ಲೋಕದ ಸುಖಭೋಗ ಮತ್ತು ಸೌಲಭ್ಯಗಳ ಹಿಂದೆ ಅಲೆಯಲಾರನು. ಸಿಕ್ಕಿದುದರಲ್ಲಿ ಸಂತೃಪ್ತಿಯಾಗಿ ತನ್ನ ಕರ್ತವ್ಯಗಳಿಗೆ ನಿಷ್ಠನಾಗಿ ಬಾಳುವನು.
ನಾನು ಹ. ಆಯಿಶಾರೊಡನೆ(ರ) “ಪ್ರವಾದಿವರ್ಯರು(ಸ) ಮನೆಯಲ್ಲಿರುವಾಗ ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದೆ, ಅವರು ಹೇಳಿದರು– “ಅವರು ಮನೆಯವರ ಸೇವೆಯಲ್ಲಿ ನಿರತರಾಗಿರುತ್ತಿದ್ದರು ಮತ್ತು ನಮಾಜ್ನ ಸಮಯವಾದಾಗ ನಮಾಜ್ಗಾಗಿ ಎದ್ದು ಹೊರಡುತ್ತಿದ್ದರು.” –ಹ. ಅಸ್ವದ್ – ಬುಖಾರಿ
ಲೋಕದಲ್ಲಿ ಪ್ರವಾದಿವರ್ಯರಿಗಿಂತ(ಸ) ಉನ್ನತ ಸ್ಥಾನಮಾನದ ವ್ಯಕ್ತಿ ಬೇರೆ ಯಾರಿದ್ದಾರೆ? ಇಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಕೂಡಾ ತಮ್ಮ ಮನೆಯವರ ಕೆಲಸ ಕಾರ್ಯಗಳಲ್ಲಿ ನೆರವಾಗುವುದನ್ನು ಮತ್ತು ತಮ್ಮ ಮನೆಯವರಿಗೆ ಸೇವೆ ಸಲ್ಲಿಸುವುದನ್ನು ಕೀಳಾದ ಕೆಲಸವೆಂದು ಪರಿಗಣಿಸಲಿಲ್ಲ. ನಿಜವಾಗಿ ಸೇವೆಯು ಮನುಷ್ಯನ ಸ್ಥಾನಮಾನ ಹೆಚ್ಚಿಸುತ್ತದೆಯೇ ಹೊರತು ಕಡಿಮೆಗೊಳಿಸುವುದಿಲ್ಲ. ಅಹಂಕಾರಿಗಳು ಮಾತ್ರ ಸೇವೆಯನ್ನು ತಮಗೆ ಕುಂದೆಂದು ಪರಿಗಣಿಸುತ್ತಾರೆ. ವಿನಯಶೀಲ ಮನುಷ್ಯನು ತನ್ನ ಜೊತೆಗಾರರಿಗೆ ಸೇವೆ ಸಲ್ಲಿಸುವ ಮೂಲಕ ಅವರ ಮನಸ್ಸನ್ನು ಗೆಲ್ಲುತ್ತಾನೆ. ಅವರ ಪ್ರೀತಿ ಗೌರವಗಳಿಗೆ ಪಾತ್ರನಾಗುತ್ತಾನೆ.
ಪ್ರವಾದಿ ಮುಹಮ್ಮದ್ರವರ(ಸ) ರಕ್ಷಾ ಕವಚವು 60 ಬೊಗಸೆ ಜೋಳಕ್ಕಾಗಿ ಒಬ್ಬ ಯಹೂದಿಯ ಬಳಿ ಒತ್ತೆ ಇಡಲ್ಪಟ್ಟ ಸ್ಥಿತಿಯಲ್ಲಿ ಅವರು ನಿಧನರಾದರು.
–ಹ. ಆಯಿಶಾ – ಬುಖಾರಿ
ಪ್ರವಾದಿವರ್ಯರು ನಿಧನರಾಗುವ ವೇಳೆಗೆ ಸಂಪೂರ್ಣವಾಗಿ ಅರಬ್ ದೇಶಗಳು ಇಸ್ಲಾಮೀ ಆಧಿಪತ್ಯಕ್ಕೆ ಅಧೀನವಾಗಿತ್ತು. ಪ್ರವಾದಿವರ್ಯರ(ಸ) ಅಸಂಖ್ಯಾತ ಸಂಗಡಿಗರು ಅವರಿಗಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿ ಬಿಡಲು ಉತ್ಸುಕರಾಗಿದ್ದರು. ಆದರೂ ಪ್ರವಾದಿವರ್ಯರು(ಸ) ಎಷ್ಟೊಂದು ಸ್ವಾಭಿಮಾನಿ, ಎಷ್ಟೊಂದು ಉದಾರಿ ಹಾಗೂ ಎಷ್ಟು ಸರಳರಾಗಿದ್ದರೆಂದರೆ ಅವರು ತಮ್ಮ ವೈಯಕ್ತಿಕ ಬಳಕೆಗಾಗಿ ಚಿಕ್ಕಾಸನ್ನೂ ಸಂಗ್ರಹಿಸಿಡಲಿಲ್ಲ.
ಪ್ರವಾದಿವರ್ಯರು(ಸ) ಹೀಗೆ ಹೇಳಿರುವರು– “ನಿಮ್ಮ ಪೈಕಿ ಯಾರ ಚಾರಿತ್ರ್ಯವು ಅತ್ಯುತ್ತಮವಾಗಿದೆಯೋ ಅವರೇ ನಿಮ್ಮ ಪೈಕಿ ಅತ್ಯುತ್ತಮರು.”
–ಹ. ಅಬ್ದುಲ್ಲಾ ಬಿನ್ ಅಮ್ರ್(ರ)-ಮುಸ್ಲಿಂ
ಒಬ್ಬ ಮನುಷ್ಯನ ಸ್ಥಾನಮಾನವು ಅವನ ಚಾರಿತ್ರ್ಯದ ಆಧಾರದಲ್ಲೇ ನಿರ್ಧರಿಸಲ್ಪಡಬೇಕು ಮತ್ತು ಚಾರಿತ್ರ್ಯವೇ ಒಬ್ಬ ಮನುಷ್ಯನನ್ನು ಪರೀಕ್ಷಿಸುವ, ಅಳೆಯುವ ಮಾನದಂಡವಾಗಿರಬೇಕು. ಈ ಯುಗದಲ್ಲಿ ಚಾರಿತ್ರ್ಯ ಮತ್ತು ನೈತಿಕತೆಗಳ ಬೆಲೆ ಅರಿತಿರುವವರ ಸಂಖ್ಯೆ ಕಡಿಮೆ. ದೇವ ಭಯದ ವಿಶೇಷತೆಯೇನೆಂದರೆ ಅದು ಮನುಷ್ಯನನ್ನು ದೇವನು ಮೆಚ್ಚದಂತಹ ದುಷ್ಕøತ್ಯಗಳಿಂದ ದೂರವಿಡುತ್ತದೆ. ಸದಾ ಒಳಿತಿನ ಮಾರ್ಗದಲ್ಲೇ ನಡೆಯುವಂತೆ ಅವನನ್ನು ಪ್ರೇರೇಪಿಸುತ್ತದೆ. ಸಚ್ಚಾರಿತ್ರ್ಯವು ಮನುಷ್ಯನನ್ನು ತನ್ನ ಸಹಜೀವಿಗಳೊಂದಿಗೆ ಅತ್ಯುತ್ತಮವಾಗಿ ವರ್ತಿಸಲು ಹಾಗೂ ಅವರಿಗೆ ಸಂಬಂಧಿಸಿದ ತನ್ನ ಬಾಧ್ಯತೆಗಳನ್ನು ಈಡೇರಿಸಲು ಪ್ರೇರೇಪಿಸುತ್ತದೆ. ಒಬ್ಬ ವ್ಯಕ್ತಿ ತನ್ನ ಬಾಯಿ ಮತ್ತು ತನ್ನ ಗುಪ್ತಾಂಗವನ್ನು ನಿಯಂತ್ರಣದಲ್ಲಿಡದಿದ್ದರೆ ಮತ್ತು ಅವುಗಳನ್ನು ಧರ್ಮಬಾಹಿರವಾದ ಕಾರ್ಯಗಳಿಗಾಗಿ ಬಳಸಿದರೆ ಈ ಅಂಗಗಳೇ ಅವನನ್ನು ನರಕಕ್ಕೆ ಕಳುಹಿಸಲು ಪರ್ಯಾಪ್ತವಾಗುತ್ತದೆ. ಅಂತಹ ವ್ಯಕ್ತಿ ಚಾರಿತ್ರ್ಯಹೀನವಾಗಿ ಅನೈತಿಕ ಚಟುವಟಿಕೆಗಳಲ್ಲಿ ನಿರತನಾಗಿ ಬಿಡುತ್ತಾನೆ. ಆದುದರಿಂದ ತಮ್ಮ ಬಾಯಿ ಮತ್ತು ಗುಪ್ತಾಂಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬಯಸುವವರು ತಮ್ಮಲ್ಲಿ ದೇವ ಭಯ ಮತ್ತು ಸಚ್ಚಾರಿತ್ರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು– “ಖಂಡಿತವಾಗಿಯೂ ದೇವರು ನಿಮ್ಮ ರೂಪಗಳನ್ನೂ ಸಂಪತ್ತನ್ನೂ ನೋಡುವುದಿಲ್ಲ. ಅವನು ನಿಮ್ಮ ಮನಸ್ಸುಗಳನ್ನು ನಿಮ್ಮ ಕರ್ಮಗಳನ್ನು ನೋಡುತ್ತಾನೆ.” –ಹ. ಅಬೂಹುರೈರ🙁ರ) –ಮುಸ್ಲಿಂ
ಒಬ್ಬ ವ್ಯಕ್ತಿ ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬುದು ಅವನು ನೋಡಲು ಎಷ್ಟು ಸುಂದರವಾಗಿದ್ದಾನೆ ಅಥವಾ ಅವನ ಬಳಿ ಸಂಪತ್ತು ಎಷ್ಟಿದೆ ಎಂಬುದನ್ನು ಅವಲಂಬಿಸಿಲ್ಲ. ನಿಜವಾಗಿ ಇದು ಮನಸ್ಸಿನ ಸ್ಥಿತಿ ಮತ್ತು ಅವನ ಕರ್ಮಗಳ ಗುಣಮಟ್ಟದ ಆಧಾರದಲ್ಲಿ ಮಾತ್ರ ನಿರ್ಣಯಿಸಲ್ಪಡುತ್ತದೆ. ಯಾರಾದರೂ ತಮ್ಮ ವರ್ಣ, ಸೌಂದರ್ಯ ಅಥವಾ ಶ್ರೀಮಂತಿಕೆಯ ಬಗ್ಗೆ ಅಭಿಮಾನ ಪಡುತ್ತಾರೆಂದರೆ ಅದೊಂದು ಅರ್ಥಹೀನ ಅಭಿಮಾನವೆನಿಸುವುದು. ಏಕೆಂದರೆ, ಚಾರಿತ್ರ್ಯದ ಸೌಂದರ್ಯವೇ ನಿಜವಾದ ಸೌಂದರ್ಯವೂ ಸದ್ಗುಣಗಳ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯೂ ಆಗಿದೆ. ದೇವರ ದೃಷ್ಟಿಯಲ್ಲಿ ಮನುಷ್ಯನ ಶ್ರೇಷ್ಠತೆಯು ಅವನ ಮನ:ಸ್ಥಿತಿ ಹಾಗೂ ಕರ್ಮಗಳನ್ನು ಅವಲಂಬಿಸಿದೆ. ನಿಷ್ಕಳಂಕ ಮನಸ್ಸು ಹಾಗೂ ಸದ್ಗುಣ ಸಂಪನ್ನ ಚಾರಿತ್ರ್ಯ ಉಳ್ಳವನೇ ದೇವರ ದೃಷ್ಟಿಯಲ್ಲಿ ಪುರಸ್ಕಾರ ಯೋಗ್ಯನಾಗಿರುತ್ತಾನೆ. ಈ ವೈಶಿಷ್ಟ್ಯಗಳಿಲ್ಲದ ಒಬ್ಬ ವ್ಯಕ್ತಿ ಎಷ್ಟೇ ಸುಂದರನಾಗಿದ್ದರೂ ಆರ್ಥಿಕವಾಗಿ ಎಷ್ಟೇ ಶ್ರೀಮಂತನಾಗಿದ್ದರೂ ದೇವರ ದೃಷ್ಟಿಯಲ್ಲಿ ಅವನಿಗೆ ಯಾವ ಬೆಲೆಯೂ ಇಲ್ಲ.
ಪ್ರವಾದಿವರ್ಯರು(ಸ) ಹೀಗೆ ಹೇಳಿರುವರು – “ಸತ್ಯವನ್ನು ಅನುಸರಿಸಿರಿ,ಸತ್ಯವು ಒಳಿತಿನೆಡೆಗೆ ಒಯ್ಯುತ್ತದೆ, ಒಳಿತು ಸ್ವರ್ಗದೆಡೆಗೆ ಒಯ್ಯುತ್ತದೆ. ಮನುಷ್ಯನು ಸತ್ಯವನ್ನೇ ಹೇಳುತ್ತಾ, ಸತ್ಯವನ್ನೇ ಅನುಸರಿಸುತ್ತಾ ಇದ್ದರೆ ಕೊನೆಗೊಮ್ಮೆ ಅಲ್ಲಾಹನ(ದೇವರ) ಬಳಿ ಅವನನ್ನು ಪರಮ ಸತ್ಯವಂತ ಎಂದು ಬರೆದಿಡಲಾಗುತ್ತದೆ. ಸುಳ್ಳಿನಿಂದ ದೂರವಿರಿ. ಸುಳ್ಳು ಕೆಡುಕಿನೆಡೆಗೆ ಕೊಂಡೊಯ್ಯುತ್ತದೆ ಮತ್ತು ಕೆಡುಕು ನರಕದೆಡೆಗೆ ಕೊಂಡೊಯ್ಯುತ್ತದೆ. ಮನುಷ್ಯನು ಸುಳ್ಳನ್ನೇ ಹೇಳುತ್ತಿದ್ದರೆ ಮತ್ತು ಸುಳ್ಳನ್ನೇ ಅನುಸರಿಸುತ್ತಿದ್ದರೆ ಕೊನೆಗೊಮ್ಮೆ ದೇವರ ಬಳಿ ಅವನನ್ನು ಪರಮ ಸುಳ್ಳುಗಾರ ಎಂದು ಬರೆದಿಡಲಾಗುತ್ತದೆ.” –ಹ. ಅಬ್ದುಲ್ಲಾ ಬಿನ್ ಮಸ್ಊದ್(ರ) – ಮುಸ್ಲಿಂ
ಇಸ್ಲಾಮೀ ನೀತಿಶಾಸ್ತ್ರದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಮೂಲಭೂತ ಮಹತ್ವವಿದೆ. ಸತ್ಯವು ಸಚ್ಚಾರಿತ್ರ್ಯದ ತಳಹದಿಯಾಗಿದೆ. ಸದಾ ಸತ್ಯವನ್ನೇ ಹೇಳುವವನು ಮತ್ತು ಸತ್ಯವನ್ನು ಅಂಗೀಕರಿಸಲು ಸದಾ ಸಿದ್ಧನಾಗಿರುವವನು ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಇರುತ್ತಾನೆ. ನಮ್ಮ ಕೋರ್ಟ್ಗಳಲ್ಲಿ ಗ್ರಂಥದ ಮೇಲೆ ಕೈಯಿಟ್ಟು ಆಣೆ ಮಾಡುತ್ತಾರೆ, ಆದರೆ ನುಡಿಯುವುದೆಲ್ಲಾ ಶುದ್ಧ ಸುಳ್ಳು. ಇನ್ನೂ ಕೆಲವರು ಸುಳ್ಳು ಹೇಳುವುದನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಸುಳ್ಳು ಹೇಳಿ ಪರರಿಗೆ ಟೋಪಿ ಹಾಕುತ್ತಾರೆ. ತಾನು ಮಹಾ ಬುದ್ಧಿವಂತ ಎಂಬ ಭ್ರಮೆಯಲ್ಲಿ ಮುಳುಗಿರುತ್ತಾರೆ. ಸುಳ್ಳು ಮನಷ್ಯನಲ್ಲಿ ದುಷ್ಟ ಭಾವನೆಗಳನ್ನು ಬೆಳೆಸುತ್ತದೆ. ಅವು ಅವನನ್ನು ಅತ್ಯಂತ ಹೀನಚಾರಿತ್ರ್ಯದವನನ್ನಾಗಿ ಮಾರ್ಪಡಿಸುತ್ತದೆ.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು: “ಮನುಷ್ಯರ ಮೇಲೆ ಕರುಣೆ ತೋರದ ವ್ಯಕ್ತಿಯ ಮೇಲೆ ಅಲ್ಲಾಹನು (ದೇವರು) ಕರುಣೆ ತೋರಿಸುವುದಿಲ್ಲ.”
–ಹ. ಜಾಬಿರ್ ಬಿನ್ ಅಬ್ದುಲ್ಲಾ (ರ) –ಬುಖಾರಿ.
ಈ ಸಂಕ್ಷಿಪ್ತ ಹಾಗೂ ಪ್ರಭಾವಶಾಲಿ ವಚನಗಳಲ್ಲಿ ಜನರಿಗೆ, ಅವರು ತಮ್ಮ ಸಹಜೀವಿ ಮನುಷ್ಯರ ಜೊತೆ ಕರುಣೆ ಹಾಗೂ ವಾತ್ಸಲ್ಯದೊಂದಿಗೆ ವರ್ತಿಸಬೇಕೆಂದು ಪ್ರೇರಣೆ ಕೊಡಲಾಗಿದೆ. ವಿಶ್ವಾನುಗ್ರಹಿ ಎಂಬ ಬಿರುದಾಂಕಿತ ಪ್ರವಾದಿವರ್ಯರು(ಸ) ಮಾನವ ಕುಲಕ್ಕೆ ಸಾರ್ವತ್ರಿಕ ಕರುಣೆಯ ಧೋರಣೆಯನ್ನು ಬೋಧಿಸಿದರು. ಅವರ ಬೋಧನೆಯಂತೆ ಒಬ್ಬ ಮನುಷ್ಯನು ಯಾವ ಮತ-ಧರ್ಮಕ್ಕೆ ಸೇರಿದವನಾಗಿದ್ದರೂ ಮನುಷ್ಯನೆಂಬ ನೆಲೆಯಲ್ಲಿ ಕರುಣೆ ಮತ್ತು ವಾತ್ಸಲ್ಯಕ್ಕೆ ಅರ್ಹನಾಗಿರುತ್ತಾನೆ. ಜನರೊಂದಿಗೆ ಕ್ರೂರವಾಗಿ ವರ್ತಿಸಿ, ಅನ್ಯಾಯವೆಸಗಿ, ಮಾನವೀಯ ಸಂಬಂಧಗಳನ್ನು ಮುರಿದುಕೊಳ್ಳುವುದರಿಂದ ದೇವರು ತನ್ನ ಕರುಣೆಯ ಸಂಬಂಧವನ್ನು ಮುರಿದುಕೊಳ್ಳುತ್ತಾನೆ. ಮನುಷ್ಯನ ಕರ್ಮ ಮತ್ತು ವರ್ತನೆ ಯಾವ ರೀತಿ ಇರುವುದೋ ಅದೇ ರೀತಿ ಫಲಿತಾಂಶವನ್ನು ಅವನು ಪಡೆದುಕೊಳ್ಳುವನು. ಕರುಣೆಯಿಂದ ವಂಚಿತನಾಗಿರುವ ವ್ಯಕ್ತಿ ಒಳಿತಿನಿಂದಲೇ ವಂಚಿತನಾಗಿದ್ದಾನೆಂದು ಅರ್ಥ. ಇಂತಹ ಕರುಣೆಯಿಲ್ಲದ ವ್ಯಕ್ತಿ ಮಾನವಕುಲದ ಪಾಲಿಗೆ ಹಾನಿಕಾರಕನಾಗುತ್ತಾನೆ.
ಒಮ್ಮೆ ದಾರಿಯಲ್ಲಿ ಪ್ರವಾದಿವರ್ಯರ(ಸ) ಸಹಚರರು ಹಕ್ಕಿಯ ಗೂಡಿನಿಂದ ಎರಡು ಮರಿಗಳನ್ನು ಹಿಡಿದು ತಮ್ಮ ಜೊತೆಯಲ್ಲಿ ತಂದರು. ತಾಯಿ ಹಕ್ಕಿ ಗೂಡಲ್ಲಿ ತನ್ನ ಮರಿಗಳನ್ನು ಕಾಣದೆ ಹುಡುಕಾಡತೊಡಗಿತು. ಆ ಹಕ್ಕಿ ಹಾರುತ್ತ ಬಂದು ಪ್ರವಾದಿವರ್ಯರ (ಸ) ತಲೆ ಮೇಲೆ ಕಿರುಚಾಡುತ್ತ ಹಾರತೊಡಗಿತು. ಆಗ ಪ್ರವಾದಿವರ್ಯರು(ಸ) ಯಾರು ಈ ಹಕ್ಕಿಯ ಮರಿಗಳನ್ನು ಎತ್ತ್ತಿಕೊಂಡು ಬಂದಿದ್ದು ಎಂದು ಕೇಳಿ, ತಕ್ಷಣ ಹಿಂತಿರುಗಿಸುವಂತೆ ಆದೇಶಿಸಿದರು. ಸಹಚರರು ಹಾಗೆಯೇ ಮಾಡಿದರು. ಪ್ರವಾದಿವರ್ಯರು(ಸ) ಕೇವಲ ಮನುಷ್ಯ ಸಮಾಜಕ್ಕೆ ಮಾತ್ರ ಕರುಣೆ ತೋರಿಸುವುದಷ್ಟೇ ಅಲ್ಲ, ಪ್ರಾಣಿ ಸಮಾಜದ ಮೇಲೂ ಕರುಣೆ ತೋರಿಸಬೇಕು ಎಂದು ಹೇಳಿಕೊಟ್ಟರು.
ಪ್ರವಾದಿವರ್ಯರು(ಸ) ಹೇಳಿದ್ದಾರೆ : “ಅಲ್ಲಾಹನು (ದೇವರು) ಪುನರುತ್ಥಾನದ ದಿನದಂದು, ‘ಆದಮನ ಪುತ್ರನೇ! ನಾನು ರೋಗಿಯಾಗಿದ್ದೆ. ನೀನು ನನ್ನ ಸಂದರ್ಶನ ಮಾಡಲಿಲ್ಲ‘ ಎನ್ನುವನು. ಆಗ ಮನುಷ್ಯನು ‘ನನ್ನ ಪ್ರಭೂ! ನಾನದೆಂತು ನಿನ್ನ ಸಂದರ್ಶನ ಮಾಡಬಲ್ಲೆ? ನೀನಾದರೋ ಸಕಲ ವಿಶ್ವದ ಒಡೆಯನಾಗಿರುವೆ‘ ಎಂದು ಹೇಳುವನು. ಆಗ ದೇವರು ‘ನನ್ನ ಇಂತಿಂತಹ ದಾಸನು ರೋಗಪೀಡಿತನಾಗಿದ್ದನು. ಆದರೆ ನೀನು ಅವನ ಸಂದರ್ಶನ ಮಾಡಲಿಲ್ಲ. ನೀನು ಅವನ ಸಂದರ್ಶನಕ್ಕೆ ಹೋಗಿರುತ್ತಿದ್ದರೆ ಅಲ್ಲಿ ನನ್ನನ್ನು ಕಾಣುತ್ತಿದ್ದೆ ಎಂಬುದು ನಿನಗೆ ತಿಳಿದಿರಲಿಲ್ಲವೇ?’ ‘ಆದಮನ ಪುತ್ರನೇ! ನಾನು ನಿನ್ನಿಂದ ಆಹಾರ ಬೇಡಿದ್ದೆ. ಆದರೆ ನೀನು ನನಗೆ ಉಣಬಡಿಸಲಿಲ್ಲ‘ ಎಂದು ಹೇಳಿದನು. ಆಗ ಮನುಷ್ಯನು ‘ನನ್ನ ಪ್ರಭೂ ನಿನಗೆ ನಾನು ಹೇಗೆ ಉಣಿಸಲಿ. ನೀನಂತೂ ಸಕಲ ವಿಶ್ವದ ಒಡೆಯನಾಗಿರುವೆ‘ ಎನ್ನುವನು. ಆಗ ದೇವರು, ‘ನಿನಗೆ ತಿಳಿದಿಲ್ಲವೇ, ನನ್ನ ಇಂತಿತಹ ದಾಸನು ನಿನ್ನಿಂದ ಆಹಾರ ಕೇಳಿದ್ದನು. ಆದರೆ ನೀನು ಅವನಿಗೆ ಆಹಾರ ನೀಡಲಿಲ್ಲ. ನೀನು ಅವನಿಗೆ ಉಣಬಡಿಸಿದ್ದರೆ ಅದನ್ನು (ಅದರ ಫಲವನ್ನು) ಇಂದು ನನ್ನ ಬಳಿ ಕಾಣುತ್ತಿದ್ದೆ. ‘ಆದಮನ ಪುತ್ರನೇ! ನಾನು ನಿನ್ನಿಂದ ನೀರು ಕೇಳಿದ್ದೆ, ಆದರೆ ನೀನು ನನಗೆ ನೀರು ಕುಡಿಸಲಿಲ್ಲ‘- ಎಂದು ಹೇಳುವನು. ಆಗ ಮನುಷ್ಯನು ‘ನನ್ನ ಪ್ರಭೂ, ನಾನು ಅದಾವ ರೀತಿಯಲ್ಲಿ ನಿನಗೆ ನೀರು ಕುಡಿಸಬಲ್ಲೆ? ನೀನಾದರೋ ಸಕಲ ವಿಶ್ವದ ಒಡೆಯನಾಗಿರುವೆ‘ ಎನ್ನುವನು. ಆಗ ದೇವರು ಹೇಳುವನು ‘ನನ್ನ ಇಂತಿಂತಹ ದಾಸನು ನಿನ್ನಿಂದ ನೀರು ಕೇಳಿದ್ದನು. ಆದರೆ ನೀನು ಅವನಿಗೆ ನೀರು ಕುಡಿಸಲಿಲ್ಲ. ನೀನು ಅವನಿಗೆ ನೀರು ಕುಡಿಸಿದ್ದಿದ್ದರೆ ಇಂದು ಅದನ್ನು (ಅದರ ಫಲವನ್ನು) ನನ್ನ ಬಳಿ ಕಾಣುತ್ತಿದ್ದೆ.’
–ಹ. ಅಬೂಹುರೈರಃ(ರ) – ಮುಸ್ಲಿಂ
ಇದೊಂದು ಕುದ್ಸಿ ಹದೀಸ್ (ದೇವ ವಚನವನ್ನು ತಿಳಿಸುವ ಪ್ರವಾದಿ ವಚನ) ಆಗಿದೆ. ದೇವರು ಸಕಲ ಅಗತ್ಯಗಳಿಂದಲೂ, ದೌರ್ಬಲ್ಯಗಳಿಂದಲೂ ಸಂಪೂರ್ಣ ಮುಕ್ತನಾಗಿದ್ದು ಪರಮ ಪಾವನನಾಗಿರುವನು. ರೋಗವಾಗಲೀ, ಹಸಿವಾಗಲೀ ಅವನನ್ನು ಬಾಧಿಸುತ್ತಿರಲಿಲ್ಲ. ಪ್ರಸ್ತುತ ಹದೀಸ್ನಲ್ಲಿ ದೇವರು ಅನುಸರಿಸಿರುವ ವಿಶಿಷ್ಟ ಧಾಟಿಯು ಇದರಲ್ಲಿ ಪ್ರಸ್ತಾಪಿಸಲಾಗಿರುವಂತಹ ಸತ್ಕಾರ್ಯಗಳಿಗೆ ಅವನ ದೃಷ್ಟಿಯಲ್ಲಿ ಎಷ್ಟು ಮಹತ್ವವಿದೆ ಎಂಬುದನ್ನು ಸೂಚಿಸುತ್ತದೆ. ರೋಗಿಯ ಸಂದರ್ಶನ, ಬಡವನಿಗೆ ಉಣಬಡಿಸುವುದು, ಬಾಯಾರಿದವನಿಗೆ ನೀರು ಕುಡಿಸುವುದು ಇವೆಲ್ಲಾ ದೇವರು ಮೆಚ್ಚುವ ಮತ್ತು ಗೌರವಿಸುವ ಸತ್ಕರ್ಮಗಳಾಗಿವೆ. ದಾಸರಾದ ನಾವು ಕೂಡಾ ಈ ಕಾರ್ಯಗಳ ಮಹತ್ವವನ್ನು ಅರಿಯುವವರಾಗಿರಬೇಕು ಮತ್ತು ಕೇವಲ ದೇವರ ಸಂಪ್ರೀತಿಗಾಗಿ ಈ ಕಾರ್ಯಗಳನ್ನು ಮಾಡಬೇಕು. ಇವುಗಳ ಮೂಲಕ ನಾವು ಅವನ ಸಂಪ್ರೀತಿಯನ್ನೂ, ಸಾಮೀಪ್ಯವನ್ನೂ ಸಂಪಾದಿಸಬಹುದು.
ರೋಗಿಯ ಸಂದರ್ಶನ ಮತ್ತು ಆರೈಕೆಯು ಮಾನವೀಯ ಅನುಕಂಪದ ಕಾರ್ಯವಾಗಿದೆ. ಹಾಗೆಯೇ ಹಸಿದವರಿಗೆ ಉಣಬಡಿಸುವುದು ಮತ್ತು ಬಾಯಾರಿದವರಿಗೆ ನೀರು ಕುಡಿಸುವುದು ಮಾನವೀಯ ಹಾಗೂ ಸಮಾಜ ಸೇವೆಯ ಕಾರ್ಯಗಳಾಗಿವೆ. ಆದರೆ ಇವೆಲ್ಲಾ ಆಡಂಬರಕ್ಕಾಗಿ ಅಥವಾ ಔಪಚಾರಿಕವಾಗಿ ಮಾಡಬೇಕಾದ ಕೆಲಸಗಳಲ್ಲ. ಕೆಲ ರಾಜಕೀಯ ವ್ಯಕ್ತಿಗಳು ರೋಗಿಗಳ ಬಳಿ ಹೋಗಿ, ಎರಡು ಕಿತ್ತಲೆ, ಎರಡು ಸೇಬು ಕೊಟ್ಟು ತನ್ನ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ಹಾಕಿಸಿ, ನಾನು ಮಹಾ ಸಮಾಜಸೇವಕ ಎಂದು ಪ್ರಚಾರ ಮಾಡಿಕೊಳ್ಳುತ್ತಾರೆ.
ರೋಗಗಳಿಂದ ಬಳಲುತ್ತಿರುವ ಜನರು ಪಟ್ಟಣಗಳ ಆಸ್ಪತ್ರೆಗಳಿಗೆ ಸೇರುವುದು ಸಹಜ. ರೋಗಿಗಳು ನಮ್ಮ ನೆಂಟಸ್ಥರೂ ಆಗಿರಬಹುದು. ರೋಗಿಯ ಉಸ್ತುವಾರಿ ಪಟ್ಟಣದ ಆಸ್ಪತ್ರೆಗಳಲ್ಲಿ ಅಷ್ಟು ಸುಲಭವಲ್ಲ. ಅಸಹಾಯಕತೆ ಅವರಿಗೆ ಕಾಡುತ್ತಿರುತ್ತದೆ. ಹೊಸ ವಾತಾವರಣ ಬೇರೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಸಹಾಯಹಸ್ತ ಚಾಚುವುದು ಕೇವಲ ಪುಣ್ಯದ ಕೆಲಸವಲ್ಲ, ಮಾನವೀಯತೆಯ ಹಕ್ಕೂ ಸಹ ಆಗುತ್ತದೆ. ರೋಗಿಗೆ ರಕ್ತ ಬೇಕೋ, ಆಹಾರ ಬೇಕೋ, ಹಣ ಬೇಕೋ ಅಥವಾ ಕೇವಲ ನನ್ನವರು ಎಂಬ ಸಹಾಯ ಬೇಕೋ – ಎಂಬುದನ್ನು ಅರಿತುಕೊಳ್ಳ ಬೇಕು. ಅರಿತುಕೊಳ್ಳಲು ಸಂದರ್ಶನ ಮುಖ್ಯ. ಅಲ್ಲಿ ಹೋದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಭಯ ಬೇರೆ. ನಿಮಗೆ ನಾಳೆ ಅದೇ ರೋಗ ಬರಬಹುದು. ಆಗ ನಿಮಗೆ ಸ್ವಲ್ಪ ಬುದ್ಧಿ ಬರಬಹುದು. ಹೋದ ಕಾಲ ಮತ್ತೆ ಬರುವುದಿಲ್ಲ. ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ.
ಹಳೇ ಕಾಲದಲ್ಲಿ ಊರಿನ ಶ್ರೀಮಂತರು ಬಡಬಗ್ಗರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಊರಲ್ಲಿ ಬಾವಿಯನ್ನು ತೋಡಿಸುತ್ತಿದ್ದರಂತೆ. ಈಗ ಏನಾಗುತ್ತಿದೆ ನಿಮಗೇ ಗೊತ್ತು. ಎಲ್ಲಿ ಹೋಯಿತು ಆ ಸಮಾಜಸೇವೆಯ ಭಾವನೆ! ಈಗ ಕಲ್ಪನೆಗೆ ಕೂಡ ಬರುತ್ತಿಲ್ಲ. ಬೀದಿ ನಲ್ಲಿಗಳ ಹತ್ತಿರ ನೂರಾರು ಬಿಂದಿಗೆಗಳು, ನೀರಿಗಾಗಿ ಕಿತ್ತಾಟ, ಇದೇ ಪ್ರತಿದಿನದ ಗೋಳಾಗಿಹೋಗಿದೆ. ಕೆಲವು ಕಡೆ ಒಂದು ಬಿಂದಿಗೆ ನೀರು 20 ರೂಪಾಯಿಗೆ ಮಾರಾಟವಾಗುತ್ತಿದೆ. ಸಮಾಜಸೇವೆ ಮಾಯವಾಗಿದೆ. ಒಂದು ದಿನ ನಾವೂ ಮಾಯವಾಗಬೇಕು ಎಂಬುದನ್ನು ಮರೆತರೆ ಸರಿಯೇ?
ನಾಲ್ಕನೇ ಕಲೀಫರಾದ ಹ. ಅಲಿ(ರ)ರವರ ಮನೆಗೆ ಏಳು ದಿನಗಳು ಕಳೆದರೂ ಯಾರೂ ಬರಲಿಲ್ಲವಂತೆ. ಆಗ ಹ. ಅಲಿರವರು(ರ) ಕಣ್ಣೀರು ಸುರಿಸಿ, ಏಕೆ ಯಾರೂ ಅತಿಥಿ ಬರುತ್ತಿಲ್ಲ? ಅತಿಥಿ ಸತ್ಕಾರದ ಭಾಗ್ಯ ಏಕೆ ಸಿಗುತ್ತಿಲ್ಲ? ಎಂದು ಕೊರಗಿದರಂತೆ. ಪ್ರತಿದಿನ ಒಬ್ಬ ಅತಿಥಿಯನ್ನು ಕರೆದು, ಅವರ ಮನೆಯಲ್ಲಿ ಊಟ ಉಣಬಡಿಸುತ್ತಿದ್ದರಂತೆ.
ಮನೆಗಳ ಮುಂದೆ ಹಿಂದಿನ ಕಾಲದಲ್ಲಿ ‘ಅತಿಥಿ ದೇವೋಭವ’ ಎಂದು ಬರೆಯಲಾಗುತ್ತಿತ್ತು. ಈಗ ‘ನಾಯಿ ಇದೆ ಎಚ್ಚರಿಕೆ’ ಎಂದು ಬರೆಯಲಾಗುತ್ತಿದೆ. ಅಂದು ಕಡು ಬಡತನದಲ್ಲೂ ಜನ ಅತಿಥಿ ಸತ್ಕಾರ ಬಿಡುತ್ತಿರಲಿಲ್ಲ. ಇಂದು ನಮ್ಮ ಬಳಿ ದೇವರು ಕೊಟ್ಟಿರುವ ಎಲ್ಲಾ ಸೌಕರ್ಯಗಳಿವೆ. ಆದರೆ ಅನ್ನದಾನ ಮಾಡುವ ಮನಸ್ಸು ಕಲ್ಲಾಗಿಹೋಗಿದೆ.
ಮೇಲಿನ ಹದೀಸ್ನಲ್ಲಿ ಜನಸೇವೆಯ ಮಹತ್ವವನ್ನು ಎತ್ತಿ ತೋರಿಸಲಾಗಿದೆ. ಆತ್ಮವಿಮರ್ಶೆ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
ಪ್ರವಾದಿವರ್ಯರು(ಸ) ತಮ್ಮ ತೋರು ಬೆರಳು ಮತ್ತು ನಡು ಬೆರಳನ್ನು ಎತ್ತಿ ತೋರಿಸುತ್ತಾ, “ಅನಾಥರನ್ನು ಪೋಷಿಸುವವನು ಮತ್ತು ನಾನು ಸ್ವರ್ಗದಲ್ಲಿ ಈ ರೀತಿ ಇರುವೆವು ಎಂದು ಹೇಳಿದರು. – ಸಹಲ್ ಬಿನ್ ಸಅದ್
ಈ ಹದೀಸ್ನಲ್ಲಿ ಪ್ರವಾದಿವರ್ಯರು(ಸ) ಅನಾಥ ರಕ್ಷಕರಿಗೆ ಸ್ವರ್ಗದ ಸುವಾರ್ತೆ ನೀಡಿದರು. ತೋರು ಬೆರಳು ಮತ್ತು ನಡು ಬೆರಳುಗಳು ಪರಸ್ಪರ ಬಹಳ ನಿಕಟವಾಗಿರುವಂತೆ, ತಾವು ಮತ್ತು ಅನಾಥ ಸಂರಕ್ಷಕರು ಸ್ವರ್ಗದಲ್ಲಿ ಪರಸ್ಪರ ಬಹಳ ನಿಕಟರಾಗಿರುವೆವೆಂದು ಅವರು ಹೇಳಿರುವರು.
ಅನಾಥ ಮಕ್ಕಳು ದುರ್ಬಲರಾಗಿದ್ದು ಸಾಮಾನ್ಯವಾಗಿ ಅವರಿಗೆ ಸಂರಕ್ಷಣೆಯ ತೀವ್ರ ಅವಶ್ಯಕತೆ ಇರುತ್ತದೆ. ಅವರ ರಕ್ಷಣೆ ಮತ್ತು ಪೋಷಣೆ ಬಹಳ ಪುಣ್ಯದ ಕಾರ್ಯವಾಗಿದೆ. ಪವಿತ್ರ ಕುರ್ಆನ್ನಲ್ಲಿ ಅಲ್ಲಲ್ಲಿ ಅತ್ಯಂತ ಪರಿಣಾಮಕಾರಿ ಮಾತುಗಳಲ್ಲಿ ಅನಾಥರಿಗೆ ಅವರ ಹಕ್ಕುಗಳನ್ನು ನೀಡಬೇಕೆಂದು ಮತ್ತು ಅವರಿಗೆ ನೆರವಾಗಬೇಕೆಂದು ಬೋಧಿಸಲಾಗಿದೆ. ಸ್ವತ: ಪ್ರವಾದಿವರ್ಯರು(ಸ) ಅನಾಥರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದರು. ‘ಅನಾಥ ರಕ್ಷಕ’ ಎಂಬುದು ಅವರಿಗಿರುವ ಪ್ರಮುಖ ಬಿರುದುಗಳಲ್ಲಿ ಒಂದಾಗಿದೆ.
ನನ್ನೊಡನೆ ಪ್ರವಾದಿವರ್ಯರು(ಸ) ಹೀಗೆ ಹೇಳಿದರು : ‘ನೀವೆಲ್ಲಿದ್ದರೂ ದೇವರನ್ನು ಭಯಪಡಿರಿ. ಕೆಡುಕಿನ ಬಳಿಕ ಒಳಿತನ್ನು ಮಾಡಿ ಆ ಮೂಲಕ ಕೆಡುಕನ್ನು ಅಳಿಸಿರಿ. ಜನರೊಂದಿಗೆ ಸೌಜನ್ಯದಿಂದ ವರ್ತಿಸಿರಿ‘ –ಹ. ಅಬೂದರ್(ರ) – ತಿರ್ಮದಿ
ಇದು ಪ್ರವಾದಿವರ್ಯರ(ಸ) ಒಂದು ಪ್ರಾಮುಖ್ಯ ಹಾಗೂ ಅತ್ಯಂತ ವಿಶಾಲಾರ್ಥವುಳ್ಳ ಬೋಧನೆಯಾಗಿದೆ. ನೀವೆಲ್ಲಿದ್ದರೂ ದೇವನಿಗೆ ಭಯಪಡಿರಿ, ಎಂದರೆ ನೀವು ಭೂಮಿಯ ಯಾವ ಭಾಗದಲ್ಲಿದ್ದರೂ, ಬಾನಲ್ಲಿ ಹಾರುತ್ತಿರುವಾಗಲೂ, ಜಲದಲ್ಲಿ ಪ್ರಯಾಣಿಸುತ್ತಿರುವಾಗಲೂ, ಏಕಾಂತದಲ್ಲಿ ಇರುವಾಗಲೂ, ಜನರ ಜೊತೆಗಿರುವಾಗಲೂ, ಮನೆಯಲ್ಲೂ, ಪೇಟೆಯಲ್ಲೂ, ಅಂಗಡಿಯಲ್ಲೂ, ಕಛೇರಿಯಲ್ಲೂ, ರಾಜಕೀಯ ಕ್ಷೇತ್ರದಲ್ಲೂ, ಶ್ರೀಮಂತಿಕೆಯಲ್ಲಿ ಇರುವಾಗಲೂ, ದಾರಿದ್ರ್ಯದಲ್ಲಿರುವಾಗಲೂ, ಯೌವನದಲ್ಲೂ, ವೃದ್ಧಾಪ್ಯದಲ್ಲೂ ಎಲ್ಲೆಲ್ಲೂ ಅನುಕ್ಷಣವೂ ದೇವರಿಗೆ ಅಂಜುತ್ತಿರಬೇಕು. ಅವನ ಕ್ರೋಧಕ್ಕೆ ಪಾತ್ರರಾಗುವ ಯಾವ ಪಾಪಕರ್ಮಗಳನ್ನೂ ಮಾಡಬಾರದು.
ಈ ರೀತಿ ದೇವನಿಗೆ ಅಂಜುತ್ತಾ, ಅವನು ಮೆಚ್ಚದ ಕಾರ್ಯಗಳಿಂದೆಲ್ಲಾ ದೂರವಿರುತ್ತಾ ಎಚ್ಚರಿಕೆಯ, ದೇವಭಕ್ತಿಯ ಜೀವನ ಸಾಗಿಸುವಾಗಲೂ ಮನುಷ್ಯನಿಂದ ಏನಾದರೂ ತಪ್ಪುಗಳು ಸಂಭವಿಸಬಹುದಾದ ಸಾಧ್ಯತೆಗಳಿವೆ. ಒಂದುವೇಳೆ ಅಂತಹ ತಪ್ಪೇನಾದರೂ ಸಂಭವಿಸಿಬಿಟ್ಟರೆ ಮನುಷ್ಯನು ಆ ತಪ್ಪಿನ ಪ್ರಭಾವವನ್ನು ಅಳಿಸಲಿಕ್ಕಾಗಿ ಅದರ ಬೆನ್ನಿಗೇ ಸತ್ಕರ್ಮಗಳನ್ನು ಮಾಡಬೇಕು. “ವಾಸ್ತವದಲ್ಲಿ ಪುಣ್ಯಕಾರ್ಯಗಳು ಪಾಪಕರ್ಯಗಳನ್ನು ದೂರೀಕರಿಸುತ್ತವೆ” ಎಂದು ಪವಿತ್ರ ಕರ್ಆನ್ನಲ್ಲೂ ಹೇಳಲಾಗಿದೆ (11 : 114)
ಆನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ತನ್ನ ಬಂಧು ಬಳಗ ಆಗಿರಬಹುದು, ಸ್ನೇಹಿತರಾಗಿರಬಹುದು, ಅಕ್ಕ ಪಕ್ಕದ ಮನೆಯವರಾಗಿರಬಹುದು, ಹಿರಿಯರು-ಕಿರಿಯರಾಗಿರಬಹುದು, ದೇಶದ, ಪರದೇಶದ ಪ್ರಜೆಗಳಾಗಿರಬಹುದು ಒಟ್ಟನಲ್ಲಿ ಎಲ್ಲರೊಂದಿಗೂ ಸೌಜನ್ಯದಿಂದ ನಡೆದುಕೊಳ್ಳಿ ಎಂದು ಹೇಳಲಾಗಿದೆ.
ಪ್ರವಾದಿವರ್ಯರು(ಸ) ಹೀಗೆಂದಿರುವರು : “ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ದೇವರು ಅವನ ಕೃತ್ಯವನ್ನು ಗೌರವಿಸುವನು ಮತ್ತು ಅವನನ್ನು ಕ್ಷಮಿಸಿಬಿಡುವನು.” –ಹ. ಅಬೂಹುರೈರಃ (ರ) – ಮುಸ್ಲಿಂ
ದಾರಿಯಲ್ಲಿ ಬಿದ್ದಿರುವ ಮುಳ್ಳು, ಮೊಳೆ, ಗಾಜು ಅಥವಾ ಇನ್ನೇನಾದರೂ ಆ ದಾರಿಯಲ್ಲಿ ನಡೆಯುವ ಜನರಿಗೆ ಯಾರಿಗಾದರೂ ಚುಚ್ಚಿ ಅವರಿಗೆ ನೋವಾಗಬಹುದು, ರಕ್ತ ಬರಬಹುದು ಅಥವಾ ಬೇರಾವುದೋ ರೀತಿಯಲ್ಲಿ ಅಪಾಯಕಾರಿಯಾಗಬಹುದು. ಇಂತಹ ಸಂಭವನೀಯ ಕಷ್ಟದಿಂದ ಜನರನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಒಬ್ಬ ವ್ಯಕ್ತಿ ಆ ಅಪಾಯಕಾರಿ ವಸ್ತುವನ್ನು ದಾರಿಯಿಂದ ಸರಿಸಿದರೆ ಅದೊಂದು ಮನುಷ್ಯತ್ವದ ಗೌರವಾರ್ಹ ಪುಣ್ಯಕಾರ್ಯ ಎನಿಸಿಕೊಳ್ಳುತ್ತದೆ. ಅದು ಆ ಒಬ್ಬ ವ್ಯಕ್ತಿಯ ಪಾರಲೌಕಿಕ ಮೋಕ್ಷಕ್ಕೂ ಕಾರಣವಾಗಿಬಿಡುತ್ತದೆ.
ದೇವನಿಷ್ಠೆ ಮತ್ತು ಜನಸೇವಾ ಭಾವನೆ ಇಲ್ಲದ ವ್ಯಕ್ತಿಗಳ ವರ್ತನೆಯು ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಇಂದು ಅಂತಹ ವರ್ತನೆಗಳನ್ನು ಪ್ರತಿದಿನ ನಾವು ಎಲ್ಲೆಲ್ಲೂ ಕಾಣುತ್ತಿದ್ದೇವೆ. ಬಾಳೆಯಹಣ್ಣು ತಿಂದು ಸಿಪ್ಪೆ ಬೀದಿಗೆಸೆಯುತ್ತಾರೆ. ಅದರಿಂದ ಯಾರಾದರೂ ಜಾರಿ ಬಿದ್ದರೂ ಪರವಾಗಿಲ್ಲ. ಬೇರೆಯವರ ತೊಂದರೆಯಿಂದ ನನಗೇನಾಗಬೇಕಾಗಿದೆ, ನಾನು ಚೆನ್ನಾಗಿದ್ದರೆ ಸಾಕು – ಎಂಬ ಭಾವನೆಗಳು ದಿನೇ ದಿನೇ ಹೆಚ್ಚಾಗಿ ಬೆಳೆಯುತ್ತಾ ಹೋಗುತ್ತಿವೆ. ಇದಕ್ಕೆ ಮೂಲಕಾರಣ ಮನಸ್ಸಿನಲ್ಲಿ ದೇವರ ಭಯ-ಭಕ್ತಿ ಇಲ್ಲ. ಜನಸೇವೆಯ ಜ್ಞಾನ ಕಿಂಚಿತ್ತೂ ಇಲ್ಲ.
ತನ್ನ ಮನೆಯ ಕಸವನ್ನು ಬೀದಿಯಲ್ಲಿ ಬಿಸಾಡುತ್ತಾರೆ. ಎಲೆಯಡಿಕೆ, ಗುಟಕ ತಿಂದು ಬೀದಿಯಲ್ಲೇ ಉಗಿಯುತ್ತಾರೆ. ಸಾರ್ವಜನಿಕ ಜಾಗದಲ್ಲಿ ಬಿಂದಾಸಾಗಿ ಧೂಮಪಾನ ಮಾಡುತ್ತಾರೆ. ಮನುಷ್ಯನು ಎಷ್ಟು ಹೊಣೆಗೇಡಿ ಮತ್ತು ನಿಶ್ಚಿಂತನಾಗಿದ್ದಾನೆಂಬುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ. ಇದಕ್ಕೆದುರಾಗಿ ಪ್ರವಾದಿವರ್ಯರ(ಸ) ಬೋಧನೆಗಳು ಪ್ರತಿಯೊಬ್ಬ ವ್ಯಕ್ತಿಯನ್ನೂ ಜವಾಬ್ದಾರಿಯುತನಾದ, ಮಾನವೀಯ ಕಳಕಳಿಯುಳ್ಳ ಸಜ್ಜನನಾಗಿ ಮಾರ್ಪಡಿಸುತ್ತದೆ.
ಪ್ರವಾದಿವರ್ಯರು(ಸ) ಹೀಗೆ ಹೇಳಿದರು : “ಹಸಿದವನಿಗೆ ಉಣಬಡಿಸಿರಿ, ರೋಗಿಯನ್ನು ಸಂದರ್ಶಿಸಿರಿ ಮತ್ತು ಕೈದಿಯನ್ನು ಬಿಡುಗಡೆಗೊಳಿಸಿರಿ.”
–ಹ. ಅಬೂಮೂಸಾ ಅಶ್ಅರಿ(ರ) – ಬುಖಾರಿ
ಮನುಷ್ಯನು ಇತರರು ಕಷ್ಟದಲ್ಲಿರುವಾಗ ಅವರಿಗೆ ನೆರವಾಗಬೇಕು. ಇತರರ ಸಂಕಷ್ಟಗಳನ್ನು ತನ್ನ ಸಂಕಷ್ಟಗಳೆಂದು ಪರಿಗಣಿಸಬೇಕು ಮತ್ತು ಅವನ ಈ ಕಾಳಜಿ ತನ್ನ ಆಪ್ತರಿಗೆ ಮತ್ತು ಸ್ವಜಾತಿ ಬಾಂಧವರಿಗೆ ಮಾತ್ರ ಮೀಸಲಾಗಿರದೆ ತನ್ನವರು ಪರರೆಂಬ ಭೇದವಿಲ್ಲದೆ, ಜಾತಿ ಮತ ಪಕ್ಷಪಾತಗಳಿಲ್ಲದೆ ಸರ್ವರಿಗೂ ಅನ್ವಯಿಸುವಂತಿರಬೇಕು.
ಹಸಿದನಿಗೆ ಉಣಬಡಿಸಬೇಕು. ರೋಗಿಯನ್ನು ಸಂದರ್ಶಿಸಿರಿ ಎಂಬ ಮಾತಿನಲ್ಲಿ ರೋಗಿಯ ಯೋಗಕ್ಷೇಮ ವಿಚಾರಿಸಬೇಕು, ಅವನ ಸೇವೆ ಮತ್ತು ಆರೈಕೆ ಮಾಡಬೇಕು ಎಂಬ ಅರ್ಥವೂ ಸೇರಿದೆ. ಇನ್ನು ಕೈದಿಗಳನ್ನು ಬಿಡುಗಡೆಗೊಳಿಸುವುದೆಂದರೆ, ನಿರಪರಾಧಿಗಳಾಗಿದ್ದು ಯಾವುದಾದರೂ ಕಾರಣಗಳಿಂದ ಬಂಧಿಸಲ್ಪಟ್ಟವರನ್ನು ಸೂಕ್ತ ರೀತಿಯಲ್ಲಿ ಬಿಡಿಸಿಕೊಳ್ಳಲು ಶ್ರಮಿಸಬೇಕು ಎಂದರ್ಥ.
ಪ್ರವಾದಿವರ್ಯರು(ಸ) ಹೇಳಿದರು : “ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆಯಾಗಿದೆ” –ಹ. ಅಬೂಹುರೈರಃ (ರ) – ಬುಖಾರಿ.
ನನ್ನ ಹತ್ತಿರ ಕಾರು, ಬಂಗಲೆ, ಹಣ, ಆಸ್ತಿ, ಅಂತಸ್ತು ಎಲ್ಲಾ ಇದೆ ಆದರೆ ಮನಃಶಾಂತಿಯೇ ಇಲ್ಲ – ಇಂಥ ಮಾತುಗಳನ್ನು ಕೇಳಿರುವುದುಂಟು. ಈ ಲೋಕದಲ್ಲಿ ಅದೆಷ್ಟೋ ಜನ ಶ್ರೀಮಂತರು ಅನೇಕ ಬಗೆಯ ಚಿಂತೆಗಳಲ್ಲಿ ನರಳುತ್ತಿರುವುದನ್ನು ನಾವು ಕಾಣುತ್ತೇವೆ. ಸಾಕಷ್ಟು ಸಂಪತ್ತಿದ್ದರೂ ಅವರು ಯಾವುದೋ ಅಸಮಾಧಾನ ಮತ್ತು ಅತೃಪ್ತಿಯಿಂದ ಕೊರಗುತ್ತಿರುತ್ತಾರೆ.
ಇದಕ್ಕೆ ತದ್ವಿರುದ್ಧವಾಗಿ ಮನಸ್ಸಿನ ಶ್ರೀಮಂತಿಕೆ ಪಡೆದವನು ತನ್ನ ಬಳಿ ಏನಿದೆಯೋ ಅದರಲ್ಲೇ ತೃಪ್ತನಾಗಿರುವುದರಿಂದ ತಾನು ಬಡವನೆಂಬ ಭಾವನೆ ಅವನಲ್ಲಿ ಮೂಡುವುದಿಲ್ಲ. ಅವನ ಈ ಮನೋಭಾವವು ಅವನಿಗೆ ಮನಃಶಾಂತಿಯನ್ನು ತಂದುಕೊಡುತ್ತದೆ. ಇಂತಹ ಮನೋಭಾವದವರು ದಾರಿದ್ರ್ಯದಲ್ಲೂ ದೊರೆಗಳಂತೆ ಬಾಳುತ್ತಾರೆ.
ಪ್ರವಾದಿ (ಸ) ಹೀಗೆ ಹೇಳಿದರು : “ದೇವರು ಶುದ್ಧ ವಸ್ತುಗಳನ್ನು ಮಾತ್ರ ಸ್ವೀಕರಿಸುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಶುದ್ಧ ಸಂಪಾದನೆಯಿಂದ ಕೇವಲ ಒಂದು ಖರ್ಜೂರದಷ್ಟು ದಾನ ಮಾಡಿದರೂ ದೇವರು ಅವನ ದಾನವನ್ನು ಬಲಗೈಯಿಂದ ಸ್ವೀಕರಿಸುತ್ತಾನೆ ಮತ್ತು ನೀವು ನಿಮ್ಮ ಈ ಕರುವನ್ನು ಪೋಷಿಸುವಂತೆ ಅವನು ಅದನ್ನು ಪೋಷಿಸುತ್ತಾನೆ. ಕೊನೆಗೆ ಅದು (ಆ ಸಾಮಾನ್ಯ ದಾನವು ಬೆಳೆದು) ಬೆಟ್ಟದಷ್ಟು ದೊಡ್ಡದಾಗುತ್ತದೆ. –ಹ. ಅಬೂಹುರೈರಃ (ರ) – ಬುಖಾರಿ.
ಕೆಲವರು ಅನ್ಯಾಯದಿಂದ ಸಂಪಾದನೆ ಮಾಡಿದ ಹಣದಿಂದ ದಾನ ಮಾಡುತ್ತಾರೆ. ಅವರು ತನ್ನನ್ನು ದಾನಶೂರನೆಂದು ಕರೆಯಬೇಕು ಎಂಬ ಅಭಿಲಾಷೆಯಿಂದ ದಾನ ಮಾಡುತ್ತಾರೆ. ಇಂತಹ ದಾನ ದೇವರಿಗೆ ಇಷ್ಟವಿಲ್ಲ. ಒಬ್ಬ ವ್ಯಕ್ತಿಗೆ ದೊಡ್ಡ ಮೊತ್ತಗಳನ್ನು ದಾನವಾಗಿ ಕೊಡುವ ಸಾಮಥ್ರ್ಯವಿಲ್ಲದಿದ್ದರೆ ಅವನು ತನಗೆ ಸಾಧ್ಯವಿರುವಷ್ಟನ್ನೂ ದಾನ ಮಾಡಬೇಕು. ದೇವರು ದಾನದ ಪ್ರಮಾಣ ನೋಡಲ್ಲ, ದಾನ ಕೊಡುವವನ ಮನೋಭಾವ ನೋಡುತ್ತಾನೆ. ಪ್ರಾಮಾಣಿಕ ಸಂಕಲ್ಪದಿಂದ ಕೊಡುವ ದಾನಕ್ಕೆ ದೇವರ ದೃಷ್ಟಿಯಲ್ಲಿ ಬಹಳ ಗೌರವವಿದೆ. ಅಂತಹ ದಾನ ಬಹಳ ಸಮೃದ್ಧಿದಾಯಕವಾಗಿರುತ್ತದೆ.
ಪ್ರವಾದಿ (ಸ) ಹೀಗೆ ಹೇಳಿದರು : “ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ. ಏಕೆಂದರೆ ಸ್ತ್ರೀಯನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ ಮತ್ತು ಅತಿ ಹೆಚ್ಚು ವಕ್ರತೆಯು ಪಕ್ಕೆಲುಬಿನ ಮೇಲಿನ ಭಾಗದಲ್ಲಿರುತ್ತದೆ. ನೀವು ಅದನ್ನು ತೀರಾ ನೇರಗೊಳಿಸಲು ಹೊರಟರೆ ಅದು ಮುರಿದುಹೋಗುವುದು. ಮತ್ತು ಅದರ ಪಾಡಿಗೆ ಬಿಟ್ಟರೆ ಅದು ವಕ್ರವಾಗಿಯೇ ಉಳಿಯುವುದು. ಆದ್ದರಿಂದ ಸ್ತ್ರೀಯರೊಂದಿಗೆ ಉತ್ತಮವಾಗಿ ವರ್ತಿಸಿರಿ.” –ಹ. ಅಬೂಹುರೈರಃ (ರ) – ಬುಖಾರಿ.
ಸ್ತ್ರೀಯ ಸ್ವಭಾವದ ದೌರ್ಬಲ್ಯವನ್ನು ಇಲ್ಲಿ ಪಕ್ಕೆಲುಬಿಗೆ ಹೋಲಿಸಲಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಭಾವುಕರಾಗಿ ಇರುತ್ತಾರೆ. ದೇವನು ಮಹಿಳೆಯರಿಗೆ ಪುರುಷರಿಗಿಂತ ಭಿನ್ನವಾದ ಕೆಲವು ನೈಸರ್ಗಿಕ ಕರ್ತವ್ಯಗಳನ್ನು ವಹಿಸಿಕೊಟ್ಟಿದ್ದು, ಆ ಕರ್ತವ್ಯಗಳ ನಿರ್ವಹಣೆಯಲ್ಲಿ ಆಕೆಯ ಆ ಭಾವುಕತೆ ಆಕೆಗೆ ಸಹಾಯವಾಗುತ್ತದೆ. ಗರ್ಭಧಾರಣೆ, ಪ್ರಸವ, ಮಗುವಿನ ಪೋಷಣೆ ಮುಂತಾದ ನೈಸರ್ಗಿಕವಾಗಿ ಸ್ತ್ರೀಯ ಮೇಲೆಯೇ ಇರುವ ಜವಾಬ್ದಾರಿಗಳು ವಸ್ತುತಃ ಅತ್ಯಂತ ತ್ರಾಸದಾಯಕವಾಗಿವೆ. ಆದರೆ ಸ್ತ್ರೀಯರಲ್ಲಿ ಧಾರಾಳ ಪ್ರಮಾಣದಲ್ಲಿರುವ ಭಾವನೆಗಳು ಈ ಸಂಕಷ್ಟಗಳನ್ನು ಸಹಿಸುವಲ್ಲಿ ಆಕೆಗೆ ಸಹಾಯಕವಾಗಿವೆ.
ಈ ರೀತಿ ಭಾವುಕತೆ ಒಂದು ಸಾಮಥ್ರ್ಯವೆಂಬುದು ನಿಜವಾದರೂ ಮನುಷ್ಯನು ತನ್ನ ಅನೇಕ ಸಾಮಥ್ರ್ಯಗಳನ್ನು ತಪ್ಪಾಗಿ ಬಳಸುವಂತೆ, ಸ್ತ್ರೀಯೂ ಕೆಲವೊಮ್ಮೆ ತನ್ನ ಭಾವನಾತ್ಮಕ ಸಾಮಥ್ರ್ಯಗಳನ್ನು ತಪ್ಪಾಗಿ ಬಳಸುವುದುಂಟು. ಭಾವನೆಗಳು ಬುದ್ಧಿಯನ್ನು ಮೀರುವಷ್ಟು ತೀವ್ರವಾಗಿಬಿಟ್ಟಾಗ ತೀರಾ ಸರಳ ವಿಷಯಗಳೂ ಜಗಳಕ್ಕೆ ಕಾರಣವಾಗುತ್ತವೆ. ಒಬ್ಬ ಸ್ತ್ರೀಯು ತನ್ನ ಸ್ವಾಭಾವಿಕ ಸಮತೋಲನವನ್ನು ಉಳಿಸಿಕೊಳ್ಳಲು ಮತ್ತು ತನ್ನನ್ನು ಸರಿಯಾಗಿ ತರಬೇತಿ ಗೊಳಿಸಲು ಪ್ರಯತ್ನಿಸದಿದ್ದರೆ ಅದರಿಂದ ಅಸಂತುಲಿತಗೊಳ್ಳುವ ಆಕೆಯ ಭಾವನೆಗಳು ಅವಳ ಸ್ವಭಾವದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇಂತಹ ದೌರ್ಬಲ್ಯವನ್ನೇ ಈ ಹದೀಸ್ನಲ್ಲಿ ಪಕ್ಕೆಲುಬಿನ ವಕ್ರತೆಗೆ ಹೋಲಿಸಲಾಗಿದೆ. ಮಹಿಳೆಯ ದೌರ್ಬಲ್ಯಗಳನ್ನು ಗಮನದಲ್ಲಿಟ್ಟು ಆಕೆಯ ಸ್ವಭಾವವನ್ನು ಬಲವಂತವಾಗಿ ತಿದ್ದಲೆತ್ನಿಸುವ ಬದಲು ಆಕೆಯೊಂದಿಗೆ ಸೌಮ್ಯತೆ, ಕ್ಷಮಾಶೀಲತೆ ಮತ್ತು ಔದಾರ್ಯದಿಂದ ವರ್ತಿಸಬೇಕು ಎಂದು ಈ ಹದೀಸ್ನಲ್ಲಿ ಪುರುಷರಿಗೆ ಬೋಧಿಸಲಾಗಿದೆ. ಹಾಗೆಯೇ, ಪುರುಷನು ಸ್ತ್ರೀಯ ಗುಣವನ್ನರಿತು ನಿಭಾಯಿಸಿಕೊಂಡು ಹೋಗಲು ಕಲಿಯದಿದ್ದರೆ ವಿಚ್ಛೇದನದ ಗತಿ ಬಂದೀತು ಎಂಬ ಎಚ್ಚರಿಕೆಯನ್ನು ಪುರುಷರಿಗೆ ನೀಡಲಾಗಿದೆ.
ಪ್ರವಾದಿ (ಸ) ಹೀಗೆ ಹೇಳಿರುವರು : “ದೇವರು ತನ್ನ ಗೌರವವನ್ನು ಉಳಿಸಬೇಕೆಂಬ ದೃಷ್ಟಿಯಿಂದ ನಿಮ್ಮಲ್ಲೊಬ್ಬನು ಹಗ್ಗ ಹಿಡಿದುಕೊಂಡು ಕಟ್ಟಿಗೆಯ ಹೊರೆಯನ್ನು ಹೊತ್ತು ತಂದು ಮಾರುತ್ತಾರೆಂದರೆ ಅದು ಜನರ ಬಳಿ ಬೇಡುತ್ತಾ ತಿರುಗುವುದಕ್ಕಿಂತ ಉತ್ತಮ. ಹಾಗೆ ಬೇಡಿದಾಗ ಜನರು ಅವನಿಗೆ ಕೊಡಲೂ ಬಹುದು, ಕೊಡದಿರಲೂ ಬಹುದು.” –ಝುಖೈರ್ ಬಿನ್ ಅವ್ವಾಮ್(ರ) – ಬುಖಾರಿ.
ಜನರೊಂದಿಗೆ ಬೇಡುವ ಅಭ್ಯಾಸ ಬಹಳ ಕೆಟ್ಟದು. ಅದರಿಂದ ಮನುಷ್ಯನ ಸ್ವಾಭಿಮಾನವು ಘಾಸಿಗೊಳ್ಳುತ್ತದೆ. ಆದ್ದರಿಂದ ಪ್ರವಾದಿವರ್ಯರು (ಸ) ಜನರಿಗೆ ಭಿಕ್ಷೆಯಿಂದ ದೂರವಿರಬೇಕೆಂದು ಮತ್ತು ಶ್ರಮಪಟ್ಟು ದುಡಿದು ಸಂಪಾದನೆ ಮಾಡಬೇಕೆಂದು ಬೋಧಿಸಿದ್ದಾರೆ. ಸಂಪಾದನೆಯ ಮಾರ್ಗವೊಂದು ಧರ್ಮಬದ್ಧವಾಗಿರುವ ತನಕ ಆ ಮಾರ್ಗವನ್ನು ಅವಲಂಬಿಸುವ ಬಗ್ಗೆ ಯಾರೂ ಸಂಕೋಚ ಪಡಬಾರದು. ಶ್ರಮಪಟ್ಟು ದುಡಿಯುವುದು ಅಭಿಮಾನಾರ್ಹವೇ ಹೊರತು ಲಜ್ಜಾಸ್ಪದ ಕ್ರಿಯೆಯಲ್ಲ.
ಇಂದಿನ ರಾಜಕೀಯ ರಂಗದಲ್ಲಿ ರಾಜಕೀಯ ವ್ಯಕ್ತಿಗಳು ಅವ್ಯವಹಾರಿಕವಾಗಿ ಕೋಟ್ಯಾಂತರ ರೂಪಾಯಿ ಸ್ನಾನ ಮಾಡುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಬೇಲಿಯೇ ಎದ್ದು ಹೊಲವನ್ನು ಮೇಯುವ ಕಾಲ ಬಂದಿದೆ. ನಾಡಿನ ಪ್ರಜೆಗಳು ಅಸಹಾಯಕರಾಗಿ ತಬ್ಬಲಿಗಳಂತೆ ಮಾಧ್ಯಮಗಳು ಪ್ರಕಟಿಸುತ್ತಿರುವ ಕಟುಸತ್ಯವನ್ನು ನೋಡುತ್ತಿದ್ದಾರೆ. ಅಂಥ ಹಣ, ಅಂಥ ಕುರ್ಚಿ ಶಾಶ್ವತವೇ? ಇಲ್ಲ. ಇಂತಹ ಶ್ರೀಮಂತ ರಾಜಕೀಯ ಭಿಕ್ಷುಕರಿಗೆ ಕಿಂಚಿತ್ತೂ ಸ್ವಾಭಿಮಾನವಿಲ್ಲ. ಅವರಿಗಿಂತ ನಮ್ಮ ನಾಡಿನ ಕೂಲಿ ಆಳುಗಳೇ ಮೇಲು.
ಪ್ರವಾದಿವರ್ಯರು (ಸ) ಹೇಳಿರುವರು : “ಕಾರ್ಮಿಕನ ಬೆವರು ಆರುವುದಕ್ಕಿಂತ ಮುಂಚೆ ಅವನ ವೇತನವನ್ನು ಕೊಟ್ಟುಬಿಡಿ.”
–ಹ. ಅಬ್ದುಲ್ಲಾ ಬಿನ್ ಉಮರ್ (ರ) – ಇಬ್ನುಮಾಜಃ.
ಶ್ರಮಿಕನ ಶ್ರಮದ ವೇತನವನ್ನು ಕೊಡುವುದರಲ್ಲಿ ವಿಳಂಬ ಮಾಡುವುದು ಕೂಡಾ ತಪ್ಪೆಂದು ಪ್ರವಾದಿ (ಸ) ತಿಳಿಸಿರುವರು. ಗಾರೆಕೆಲಸದವರನ್ನು ಮನೆ ಕಟ್ಟಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತೇವೆ. ಎಷ್ಟೋ ಜನ ಅವರ ಕೂಲಿಯನ್ನು ಕೊಡುವುದಿಲ್ಲ. ಯಜಮಾನರ ಹತ್ತಿರ ಅವರು ಹತ್ತು ಸಲ ತಿರುಗಬೇಕಾಗುತ್ತದೆ. ಏನಾದರೂ ಒಂದು ನೆಪ ಹೇಳಿ ಅವರಿಗೆ ಬರಿಗೈಯಲ್ಲಿ ಕಳಿಸುತ್ತಿರುತ್ತಾರೆ. ಇಂತಹ ಅನೇಕ ಪ್ರಸಂಗಗಳನ್ನು ನಾವು ಕಾಣುತ್ತೇವೆ. ಯಾರಿಂದಾದರೂ ಏನೇ ಕೆಲಸ ತೆಗೆದುಕೊಂಡರೆ ಅವರ ಕೂಲಿಯನ್ನು ಚಾಚೂ ತಪ್ಪದೇ ಅವರಿಗೆ ದುಃಖ ಕೊಡದೇ ಅತಿ ಶೀಘ್ರವಾಗಿ ಕೊಟ್ಟುಬಿಡಬೇಕು ಎಂಬ ತಾಕೀತು ಈ ಹದೀಸ್ನಲ್ಲಿದೆ. ಕಾರ್ಮಿಕನ ವೇತನ ಕೊಡದೇ ಹೋದರೆ ಪರಲೋಕದಲ್ಲೂ ಅದರ ವಿಚಾರಣೆ ನಡೆಯುವುದು.
ಪ್ರವಾದಿವರ್ಯರು (ಸ) ಹೇಳಿರುವರು : “ಒಬ್ಬ ಮಹಿಳೆಯನ್ನು ಒಂದು ಬೆಕ್ಕಿನ ವಿಷಯದಲ್ಲಿ ಯಾತನೆಗೆ ಒಳಪಡಿಸಲಾಯಿತು. ಏಕೆಂದರೆ ಆಕೆ ಒಂದು ಬೆಕ್ಕನ್ನು ಬಂಧಿಸಿದ್ದಳು. ಆ ಬೆಕ್ಕು ಅದೇ ಸ್ಥಿತಿಯಲ್ಲಿ ಸತ್ತುಹೋಯಿತು. ಇದೇ ಕಾರಣಕ್ಕಾಗಿ ಆಕೆ ನರಕಾಗ್ನಿಗೆ ತಳ್ಳಲ್ಪಟ್ಟಳು. ಆಕೆ ಆ ಬೆಕ್ಕಿಗೆ ಸ್ವತಃ ತಾನೂ ಆಹಾರ ಕೊಡುತ್ತಿರಲಿಲ್ಲ ಮತ್ತು ಅದು ಭೂಮಿಯ ಹುಳು ಇತ್ಯಾದಿ ಜೀವಿಗಳನ್ನು ತಿಂದುಕೊಳ್ಳುವಂತಾಗಲು ಅದನ್ನು ಮುಕ್ತಗೊಳಿಸಿ ಬಿಡುತ್ತಲೂ ಇರಲಿಲ್ಲ.”
–ಹ. ಅಬ್ದುಲ್ಲಾ ಬಿನ್ ಉಮರ್ (ರ) – ಬುಖಾರಿ.
ಪ್ರವಾದಿವರ್ಯರ (ಸ) ಶಿಕ್ಷಣಗಳಲ್ಲಿ ಕಾರುಣ್ಯದ ಕಲ್ಪನೆ ಎಷ್ಟೊಂದು ವಿಶಾಲವಾಗಿದೆಯೆಂದರೆ ಪ್ರಾಣಿಗಳು ಕೂಡಾ ಅದರ ವೃತ್ತಿಯಿಂದ ಹೊರಗಿಲ್ಲ. ಇಲ್ಲಿ ಪ್ರಾಣಿಗಳಿಗೆ ಅನಗತ್ಯವಾಗಿ ಕಿರುಕುಳ ನೀಡಬಾರದೆಂದು ಬೋಧಿಸಲಾಗಿದೆ. ಹಾಗೆಯೇ ಯಾವುದಾದರೂ ಪ್ರಾಣಿಯನ್ನು ಕಟ್ಟಿಹಾಕಿ ಅನ್ನ ನೀರು ಕೊಡದೆ ಸಾಯಿಸುವುದು ಘೋರ ಪಾಪವೆಂದು ತಿಳಿಸಲಾಗಿದೆ.
ಪ್ರವಾದಿ(ಸ) ಹೀಗೆ ಹೇಳಿರುವರು : “ಪ್ರತಿಕ್ರಿಯೆಯ ರೂಪದಲ್ಲಿ ಹಿತಮಾಡುವವನು ಸಂಬಂಧಿಕರಿಗೆ ಹಿತ ಮಾಡುವವನಲ್ಲ. ವಾಸ್ತವದಲ್ಲಿ ತನಗೆ ಅಹಿತ ಮಾಡಲಾಗಿದ್ದರೂ ತಾನು ಹಿತವನ್ನುಂಟು ಮಾಡುವುದೇ ಸಂಬಂಧಿಕರಿಗೆ ಹಿತ ಮಾಡುವವನಾಗಿದ್ದಾನೆ.” –ಹ. ಅಬ್ದುಲ್ಲಾ ಬಿನ್ ಅಮ್ರ್ – ಬುಖಾರಿ.
ಅಂದರೆ ಮನುಷ್ಯನಿಗೆ ಸ್ವತಃ ತನ್ನ ಕರ್ತವ್ಯಗಳ ಅರಿವಿರಬೇಕು ಮತ್ತು ಇತರರು ಏನು ಮಾಡಿದರೂ ತಾನು ತನ್ನ ಕರ್ತವ್ಯವನ್ನು ನೆರವೇರಿಸಬೇಕೆಂಬ ಪ್ರಜ್ಞೆ ಇರಬೇಕು. ಅವನ ಸಂಬಂಧಿಕರು ಅವನ ವಿಷಯದಲ್ಲಿ ತಮಗಿರುವ ಕರ್ತವ್ಯಗಳನ್ನು ಮರೆತಿದ್ದರೂ, ಅವರ ಹಕ್ಕುಗಳನ್ನು ಕಡೆಗಣಿಸಿದ್ದರೂ ಅವನು ಮಾತ್ರ ಅವರ ಹಕ್ಕುಗಳನ್ನು ಕಡೆಗಣಿಸಬಾರದು. ಇತರರ ಸದ್ವರ್ತನೆಗೆ ಪ್ರತಿಯಾಗಿ ಸದ್ವರ್ತನೆ ತೋರುವುದು ಮಹತ್ಸಾಧನೆಯಲ್ಲ. ಆದರೆ ಇತರರ ದುರ್ವರ್ತನೆಯನ್ನು ಕಡೆಗಣಿಸಿ ತಾನು ಅವರ ಜೊತೆ ಸದ್ವರ್ತನೆ ತೋರುವುದು ಮತ್ತು ಅವರಿಗೆ ಹಿತವನ್ನುಂಟು ಮಾಡುವುದು ಮಹತ್ಸಾಧನೆಯಾಗಿದೆ. ದೇವರಿಗೆ ಇಷ್ಟವಾದ ವರ್ತನೆ ಇದುವೇ ಆಗಿದೆ.
ಒಮ್ಮೆ ಒಬ್ಬ ವ್ಯಕ್ತಿಯು ಪ್ರವಾದಿವರ್ಯರ (ಸ) ಬಳಿ ಬಂದು, ‘ದೇವರ ಸಂದೇಶ ವಾಹಕರೇ! ನನ್ನ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರು ಯಾರು?’ ಎಂದು ಪ್ರಶ್ನಿಸಿದನು. ಆಗ ಅವರು, ‘ನಿನ್ನ ತಾಯಿ‘ ಎಂದುತ್ತರಿಸಿದರು. ‘ಇವರ ಬಳಿಕ ಯಾರು?’ ಎಂದು ಆ ವ್ಯಕ್ತಿ ಪ್ರಶ್ನಿಸಿದನು. ‘ನಿನ್ನ ತಾಯಿ‘ ಎಂದು ಪ್ರವಾದಿ (ಸ) ಉತ್ತರಿಸಿದರು. ಆ ವ್ಯಕ್ತಿ ಪುನಃ ಆ ಬಳಿಕ ಯಾರು? ಎಂದು ಕೇಳಿದನು. ಪ್ರವಾದಿವರ್ಯರು (ಸ) ‘ನಿನ್ನ ತಾಯಿ‘ ಎಂದು ಉತ್ತರಿಸಿದರು. ‘ಅವರ ಬಳಿಕ ಯಾರು?’ ಎಂದು ಅವನು ಮತ್ತೆ ಪ್ರಶ್ನಿಸಿದನು. ಆಗ ಪ್ರವಾದಿ(ಸ) ‘ನಿನ್ನ ತಂದೆ‘ ಎಂದು ಉತ್ತರಿಸಿದರು. –ಹ. ಅಬುಹುರೈರಃ (ರ) – ಬುಖಾರಿ.
ಹೆತ್ತವರೊಂದಿಗೆ ಅತ್ಯುತ್ತಮವಾಗಿ ವರ್ತಿಸಬೇಕು. ಪವಿತ್ರ ಕುರ್ಆನ್ನಲ್ಲಿ ಪದೇ ಪದೇ ಆದೇಶಿಸಲಾಗಿದೆ. ಹಾಗೆಯೇ ತಾಯಿಯು ತನ್ನ ಮಗುವಿಗಾಗಿ ಸಹಿಸುವಂತಹ ಕಷ್ಟಗಳನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲೇ ಪ್ರವಾದಿವರ್ಯರು (ಸ) ಸದ್ವರ್ತನೆಯ ವಿಷಯದಲ್ಲಿ ತಾಯಿಯ ಹಕ್ಕು ತಂದೆಗಿಂತಲೂ ಹೆಚ್ಚಿನದು ಎಂಬುದನ್ನು ಮನವರಿಕೆ ಮಾಡಿಕೊಡಲು ತಾಯಿಯನ್ನು ಮೂರುಸಲ ಪ್ರಸ್ತಾಪಿಸಿದ್ದಾರೆ.
ಈಗಿನ ಸಮಾಜದಲ್ಲಿ ತುತ್ತು ಕೊಟ್ಟವಳಿಗಿಂತ ಮುತ್ತು ಕೊಡುವವಳಿಗೆ ಹೆಚ್ಚಿನ ಆದ್ಯತೆ. ತಾಯಿಯ ಮಾತಿಗೆ ಬೆಲೆ ಕೊಡುವುದಿರಲಿ, ತಾಯಿ ದರ್ಜೆಗೇ ಬೆಲೆ ಇಲ್ಲ. ಹೆಂಡತಿ ಹೇಳಿದ್ದೇ ಸರಿ. ಸಾಂಸಾರಿಕ ಜಗಳದಲ್ಲಿ ಎಷ್ಟೋ ಸಂಸಾರಗಳು ಒಡೆದು ನುಚ್ಚುನೂರಾಗಿ ಹೋಗಿವೆ. ಸಮಸ್ಯೆಯನ್ನು ಒಂದೇ ದೃಷ್ಟಿಕೋನದಿಂದ ಕಾಣುವುದೇ ಇದಕ್ಕೆ ಕಾರಣ. ಸಮಸ್ಯೆಯನ್ನು ಕೂಲಂಕಶವಾಗಿ ಶಾಂತಿಯಿಂದ ಪರಿಶೀಲಿಸಿದರೆ ತಾಯಿಯ ಮಹತ್ವ ಅರಿತುಕೊಳ್ಳಲು ಸುಲಭವಾಗುವುದು. ತಂದೆ-ತಾಯಿಯನ್ನು ಅರಿತುಕೊಳ್ಳಬೇಕಾದರೆ ನಾವು ಅವರ ವಯಸ್ಸನ್ನು ದಾಟಬೇಕಂತೆ. ಆದರೆ ಆಗ ಕಾಲ ಮೀರಿಹೋಗಿರುತ್ತೆ. ಅವರು ನಮ್ಮನ್ನು ಅಗಲಿ ಅಂತಿಮ ಪ್ರಯಾಣ ಮಾಡಿರಬಹುದು. ಪಶ್ಚಾತ್ತಾಪ ಪಟ್ಟರೆ ಆ ಕಾಲ ಮತ್ತೆ ಬರಲು ಸಾಧ್ಯವೇ? ನಮಗೆ ಬುದ್ಧಿ ಬರುವಷ್ಟರಲ್ಲಿ ಎಲ್ಲಾ ಶೂನ್ಯವಾಗಿಹೋಗಿರುತ್ತದೆ. ಅಂತಹ ಸಂದರ್ಭಗಳು ನಮ್ಮ ಜೀವನದಲ್ಲಿ ಬಾರದೇ ಹೋಗಲಿ. ಹೊಸ್ತಿಲಲ್ಲಿ ಅಂತಹ ಸಮಸ್ಯೆಗಳು ನಿಮ್ಮ ಮುಂದಿದ್ದರೆ ಈಗಲೇ ಬಗೆಹರಿಸಿ. ನಿಮ್ಮ ಅಹಂ ಸೋತರೂ ಪರವಾಗಿಲ್ಲ. ತಂದೆ-ತಾಯಿಯ ಪ್ರೀತಿಯನ್ನು, ಅವರ ಗೌರವವನ್ನು ಸೋಲಲು ಬಿಡಬೇಡಿ. ಅವರ ಋಣವಂತೂ ನಾವು ತೀರಿಸಲು ಸಾಧ್ಯವಿಲ್ಲ. ಕೊನೇಪಕ್ಷ ಎರಡು ಪ್ರೀತಿಯ, ವಾತ್ಸಲ್ಯದ, ವಿಶ್ವಾಸದ ಮಾತುಗಳನ್ನು ಆಡಿ ಅವರ ಮನಸ್ಸಿಗೆ ಸಂತೃಪ್ತಿಯಾದರೂ ಕೊಡಲು ಪ್ರಯತ್ನಿಸಿ. ಆಗಲೇ ನಿಮ್ಮ ಜೀವನ ಸಾರ್ಥಕ. ಒಂದು ದಿನವಾದರೂ ನಿಮ್ಮ ತಂದೆ-ತಾಯಿಗೆ ಒಂದು ಜೊತೆ ಬಟ್ಟೆನೋ, ಎಲ್ಲಾದರೂ ಪ್ರವಾಸವೋ, ಔತಣಕೂಟವೋ ಏರ್ಪಡಿಸಿ ನೋಡಿರಿ. ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅವರು ನಿಮ್ಮಿಂದ ಪ್ರೀತಿ ಬಿಟ್ಟು ಏನೂ ಬಯಸುವುದಿಲ್ಲ. ಅದನ್ನೂ ಸಹ ಕೊಡದೆ ಅವರ ಮನಸ್ಸಿಗೆ ನೋವು ಕೊಡುವುದು ಸರಿಯೇ? ಐದು ನಿಮಿಷ ಸ್ವಲ್ಪ ಯೋಚಿಸಿ ನೋಡಿ. ಇಂದಿನಿಂದಲೇ ಖುಷಿ ನೀಡುವಂಥ ಏನಾದರೊಂದು ಕೆಲಸ ಮಾಡಲು ಪ್ರಾರಂಭಿಸಿಕೊಳ್ಳಿ.
ಪ್ರವಾದಿ (ಸ) ಹೀಗೆ ಹೇಳಿದರು : “(ಮಲ್ಲ ಯುದ್ಧದಲ್ಲಿ) ಜನರನ್ನು ಅಪ್ಪಳಿಸುವವನು ಬಲಾಢ್ಯನಲ್ಲ; ಕೋಪ ಬಂದಾಗ ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವನೇ ನಿಜವಾದ ಬಲಾಢ್ಯ.” –ಹ. ಅಬೂಹುರೈರಃ (ರ) – ಬುಖಾರಿ.
ಎಸ್.ಪಿ. ಸಾಂಗ್ಲಿಯಾನರವರು IPS ಅಧಿಕಾರಿಯಾಗಿದ್ದರು. ರಂಜಾನ್ ತಿಂಗಳು. ನಾವು ಹಣ್ಣು-ಹಂಪಲುಗಳನ್ನು ಹಂಚಲು ಬೆಂಗಳೂರಿನ ಹಳೇ ಜೈಲಿಗೆ ಹೋದೆವು. ಜೈಲಿನೊಳಗೆ ಗೋಡೆಯ ಮೇಲೆ ಇಂತಹುದೇ ಒಂದು ವಾಕ್ಯ ಕನ್ನಡದಲ್ಲಿ ಬರೆಯಲಾಗಿತ್ತು. ಅದರ ತಾತ್ಪರ್ಯ- ಕೋಪವನ್ನು ಯಾರು ತಡೆದುಕೊಳ್ಳುವನೋ ಅವನೇ ಶೂರ ಎಂದಾಗಿತ್ತು. ಪ್ರಪಂಚದಲ್ಲಿ ಎಷ್ಟು ಅನಾಹುತಗಳು ನಡೆಯುತ್ತವೋ ಅದಕ್ಕೆ ಕೋಪವೇ ಮುಖ್ಯ ಕಾರಣವಾಗಿದೆ. ಕೋಪ ಹೊರಗಡೆ ಯಾವುದೇ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುವಲ್ಲ. ಅದು ನಮ್ಮಲ್ಲೇ ಜನ್ಮ ಪಡೆಯುವ ಸೈತಾನವಾಗಿದೆ.
ಒಬ್ಬ ಕೋಪ ಬಂದಾಗ ಸಂಯಮ ಕಳೆದುಕೊಳ್ಳದೆ ಸಂತುಲಿತವಾಗಿ ವರ್ತಿಸುತ್ತಾನೆಂದರೆ ಅವನು, ತನ್ನನ್ನು ಪ್ರಚೋದಿಸುವ ಸೈತಾನನನ್ನು ಸೋಲಿಸಿ ಕೆಡವಿಹಾಕಿದ್ದಾನೆಂದೇ ಅರ್ಥ. ನಿಜವಾಗಿ ಶಕ್ತಿಶಾಲಿ ಅಥವಾ ಬಲಾಢ್ಯ ಎಂಬ ಬಿರುದು ಇಂತಹವರಿಗೆ ಸಲ್ಲಬೇಕು.
ಮನುಷ್ಯ ಯಾವ ಸ್ಥಿತಿಯಲ್ಲೂ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿಹೋಗದೆ, ತನ್ನನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂಬುದೇ ಈ ಹದೀಸ್ನಿಂದ ಸಿಗುವ ಪಾಠವಾಗಿದೆ.
ಪ್ರವಾದಿ (ಸ) ಹೀಗೆ ಹೇಳಿರುವರು : “ಮನುಷ್ಯನ ಬಳಿ ಎರಡು ಕಣಿವೆ ತುಂಬಾ ಸಂಪತ್ತಿದ್ದರೂ ಅವನು ಮೂರನೆಯದಕ್ಕಾಗಿ ಹಾತೊರೆಯುತ್ತಾನೆ. ಮನುಷ್ಯನ ಹೊಟ್ಟೆಯನ್ನು ಮಣ್ಣೂ ಮಾತ್ರ ತುಂಬಬಲ್ಲದು. ತನ್ನ ಕಡೆ ಮರಳುವವರ ಕಡೆಗೆ ದೇವರು ಗಮನಹರಿಸುತ್ತಾನೆ. – ಹ. ಇಬ್ನು ಅಬ್ಬಾಸ್ (ರ) – ಬುಖಾರಿ.
ಇದು ಮನುಷ್ಯನ ಲೋಭ ಮತ್ತು ದುರಾಸೆಯ ಬಗ್ಗೆ ನೀಡಲಾಗಿರುವ ಒಂದು ಉಪಮೆಯಾಗಿದೆ. ಸಂಪತ್ತಿನ ಆಸೆಗೆತುತ್ತಾದ ವ್ಯಕ್ತಿಗೆ ಎಷ್ಟು ಸಿಕ್ಕಿದರೂ ತೃಪ್ತಿಯಾಗುವುದಿಲ್ಲ. ಅವನು ಮತ್ತಷ್ಟನ್ನು ಸಂಗ್ರಹಿಸುವ ಆತುರದಲ್ಲಿ ಅವಿಶ್ರಾಂತವಾಗಿ ದುಡಿಯುತ್ತಾನೆ. ಶ್ರೇಷ್ಠ ಉದ್ದೇಶಗಳಿಗಾಗಿ ದೇವನು ತನಗೆ ನೀಡಿರುವ ಜೀವನವನ್ನೆಲ್ಲಾ ಕೇವಲ ಧನ ಸಂಪಾದನೆಗಾಗಿ ಮುಡಿಪಿಟ್ಟುಬಿಡುತ್ತಾನೆ. ಧನ ಸಂಪಾದನೆಯ ಮತ್ತಿನಲ್ಲಿ ಅವನಿಗೆ ತನ್ನ ಜೀವನಕೊಂದು ಉದ್ದೇಶವೂ ಇದೆ ಎಂಬುದೇ ಮರೆತು ಹೋಗುತ್ತದೆ. ಇಂತಹ ವ್ಯಕ್ತಿಯು ತನ್ನ ಜೀವನದ ನಿಜ ಉದ್ದೇಶದಲ್ಲಿ ವಿಫಲನಾಗುತ್ತಾನೆ. ಶ್ರಮವೆಲ್ಲಾ ನಿರರ್ಥಕವೆಂಬುದು ಅವನಿಗೆ ಪರಲೋಕದಲ್ಲಿ ಮನವರಿಕೆಯಾಗುತ್ತದೆ. ಮನುಷ್ಯನ ಹೊಟ್ಟೆಯನ್ನು ಮಣ್ಣು ಮಾತ್ರ ತುಂಬಬಲ್ಲದು ಎಂದರೆ, ಮನುಷ್ಯನ ಲೋಭ ಮತ್ತು ದುರಾಸೆ ಕೊನೆಗೊಳ್ಳುವುದು ಅವನು ಸತ್ತು ಗೋರಿ ಸೇರಿದಾಗ ಮಾತ್ರ ಎಂದರ್ಥ.
ಸಾಮ್ರಾಟ ಸಿಕಂದರ್ ತಾನು ಸತ್ತಾಗ ತನ್ನ ಎರಡು ಕೈಗಳನ್ನು ಶವ ಬಟ್ಟೆಯ ಆಚೆ ಕಾಣುವಂತೆ ಇಡಬೇಕು ಎಂದು ತನ್ನ ಮಂತ್ರಿಗೆ ಹೇಳಿದ್ದನು. ಆತ ಸತ್ತಾಗ ಹಾಗೆಯೇ ಮಾಡಲಾಯಿತು. ಇದರಿಂದ ಸಿಗುವ ಅರ್ಥ – “ನಾನು ದೇಶಗಳ ಅಧಿಪತಿಯಾಗಿದ್ದರೂ, ಅರಮನೆಗಳ ಅರಸನಾಗಿದ್ದರೂ, ಸಾವಿರಾರು ಸೈನಿಕರ ಸೇನೆಗೆ ಒಡೆಯನಾಗಿದ್ದರೂ ಈ ಪ್ರಪಂಚದಿಂದ ಬರಿಗೈಯಲ್ಲೇ ಹೋಗಬೇಕು” ಎಂದಾಗಿತ್ತು. ಮನಸ್ಸು ಕಲಕಿಸುವಂಥ ಉದಾಹರಣೆಯನ್ನು ಪ್ರಪಂಚಕ್ಕೆ ತೋರಿಸಿ ಹೊರಟುಹೋದನು.
ಪ್ರವಾದಿ (ಸ) ನನ್ನ ಹೆಗಲ ಮೇಲೆ ಕೈಯಿಟ್ಟು ಹೀಗೆ ಹೇಳಿದರು : “ಲೋಕದಲ್ಲಿ ನೀವು ವಿದೇಶೀಯರಂತೆ ಅಥವಾ ಒಬ್ಬ ಪ್ರಯಾಣಿಕನಂತೆ ಬದುಕಿರಿ.”
ತನ್ನ ನಾಡನ್ನು ಬಿಟ್ಟು ಯಾವುದಾದರೂ ತಾತ್ಕಾಲಿಕ ಉದ್ದೇಶದಿಂದ ಬೇರೊಂದು ದೇಶಕ್ಕೆ ಹೋದವನು ಅಲ್ಲಿ ಅಪರಿಚಿತತೆಯನ್ನು ಅನುಭವಿಸುತ್ತಾನೆ. ಹೊಸ ಪರಕೀಯ ಪರಿಸರಕ್ಕೆ ಬಗ್ಗಿ ಹೋಗಲು ಅವನಿಗೆ ಕಷ್ಟವಾಗುತ್ತದೆ. ತನ್ನ ತಾಯ್ನಾಡಿನ ನೆನಪು ಅವನನ್ನು ಕಾಡುತ್ತಲಿರುತ್ತದೆ. ಅಲ್ಲದೆ ಹೊಸ ನಾಡಿನಲ್ಲಿ ತಾನು ಕೇವಲ ಕೆಲವೇ ದಿನ ಇರಬೇಕಾಗಿರುವುದರಿಂದ ಅವನು ಅಲ್ಲಿಯ ಸೌಲತ್ತುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಇರಲು ಅನಿವಾರ್ಯವಾಗಿ ಎಷ್ಟು ಬೇಕೋ ಅಷ್ಟು ಸಿಕ್ಕರೆ ಸಾಕು ಅವನು ಸಂತೃಪ್ತನಾಗುತ್ತಾನೆ.
ಇದೇ ರೀತಿ ಪರಲೋಕವೇ ತನ್ನ ನೈಜನೆಲೆಯೆಂದೂ, ಇಹಲೋಕವು ಕೇವಲ ಒಂದು ತಾತ್ಕಾಲಿಕ ನಿವಾಸವೆಂದೂ ಭಾವಿಸುವ ವ್ಯಕ್ತಿಯು ಎಂದೂ ಲೌಕಿಕ ಸುಖಗಳಿಗೆ ಮಾರುಹೋಗಲಾರನು. ಜಗತ್ತಿನ ಆಕರ್ಷಣೆಗಳು ಅವನನ್ನು ಸಮ್ಮೋಹಗೊಳಿಸಲಾರವು. ಅವನು ಲೋಕದಲ್ಲಿ ಸುಖಲೋಲುಪನಾಗುವ ಬದಲು ಇದ್ದುದರಲ್ಲಿ ತೃಪ್ತಿಪಡುವನು. ಲೌಕಿಕವಾಗಿ ಅವನು ಕೇವಲ ಜೀವನದ ನೈಜ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಮಾತ್ರ ಶ್ರಮಿಸುವನು.
ಪ್ರಯಾಣಿಕನ ಬಳಿ ವಸ್ತುಗಳ ಹೊರೆ ಹಗುರವಾಗಿರುವಷ್ಟೇ ಪ್ರಯಾಣವು ಸುಗಮವಾಗಿರುತ್ತದೆ. ಇದೇ ರೀತಿ ಪರಲೋಕದ ಕಡೆಗೆ ಪ್ರಯಾಣಿಸುತ್ತಿರುವ ಮನುಷ್ಯನ ಮೇಲೆ ಲೌಕಿಕ ಸಂಪತ್ಸಾಧನಗಳ ಹೊರೆ ಎಷ್ಟು ಇರುವುದೋ ಅಷ್ಟೇ ಅವನ ಪ್ರಯಾಣವು ಸುಲಭ ಹಾಗು ಸುಖಮಯವಾಗಿರುವುದು.
ಇಸ್ಲಾಮ್ ಲೌಕಿಕ ಪ್ರಗತಿಯನ್ನು ವಿರೋಧಿಸುವುದಿಲ್ಲ. ಅದು ಲೌಕಿಕ ಪ್ರಗತಿಯ ಜೊತೆ ಮನುಷ್ಯನು ವೈಚಾರಿಕ, ನೈತಿಕ ಮತ್ತು ಕರ್ಮಗಳ ಕ್ಷೇತ್ರವು ವಿಕಾಸಗೊಳ್ಳುತ್ತಾ ಹೋಗಬೇಕು ಮತ್ತು ಅವೆಲ್ಲಾ ಮನುಷ್ಯನನ್ನು ಅವನ ನೈಜ ಗುರಿಯಾಗಿರುವ ಪಾರಲೌಕಿಕ ಯಶಸ್ಸಿನೆಡೆಗೆ ಒಯ್ಯಲು ಸಮರ್ಥವಾಗಬೇಕೆಂದು ಆಶಿಸುತ್ತದೆ. ಮೇಲ್ನೋಟಕ್ಕೆ ಪ್ರಗತಿಯಂತೆ ಕಾಣಿಸಿಕೊಂಡು ಒಳಗಿನಿಂದ ಮನುಷ್ಯನನ್ನು ವೈಚಾರಿಕತೆಯೂ, ನೈತಿಕವಾಗಿಯೂ ಕ್ರಿಯಾತ್ಮಕವಾಗಿಯೂ ಅಧೋಗತಿಗೆ ತಳ್ಳುವಂತಹ ಮತ್ತು ಅಂತಿಮವಾಗಿ ಮನುಷ್ಯನನ್ನು ವಿನಾಶದ ಹಳ್ಳಕ್ಕೆ ತಳ್ಳುವಂತಹ ‘ಪ್ರಗತಿ’ಯನ್ನು ಅದು ವಿರೋಧಿಸುತ್ತದೆ.
ಕೆಲ ಮದ್ರಸಾಗಳು, ಖಾನ್ಖಾಹಗಳು ಮತ್ತು ಆಶ್ರಮಗಳು ‘ಕಳ್ಳರ ಸಂತೆ’ ಆಗಿಬಿಟ್ಟಿವೆ. ಮದ್ರಸಾಗಳಿಗೆ ತಲುಪಬೇಕಾದ ಉಚಿತ ಅಕ್ಕಿ ಮೂಟೆಗಳು, ಬೇರೆಯವರ ಮನೆಗಳಿಗೆ ಸಾಗುತ್ತಿವೆ. ಆ ಬಡ ಮಕ್ಕಳಿಗೆ ಸಿಗಬೇಕಾದ ಆ ಹಕ್ಕು ಯಾರೋ ಹೊಡೆದು ತಿನ್ನುತ್ತಿದ್ದಾರೆ. ‘ಫತ್ವಾ’ಗಳು ಸಹ ಹಣಕ್ಕೆ ಮಾರಾಟವಾಗುತ್ತಿವೆ. ಖಾನ್ಖಾಹಗಳು ಆಧ್ಯಾತ್ಮಿಕ ಮಾರುಕಟ್ಟೆಗಳಾಗಿ ಬಿಟ್ಟವೆ. ಆಶ್ರಮಗಳು ಫಾರಿನ್ ಫಂಡ್ ಬ್ಯಾಂಕುಗಳಾಗಿ ಮಾರ್ಪಟ್ಟಿವೆ. ಸ್ವಾಮಿಗಳು ಸ್ತ್ರೀಭಕ್ತರಾಗಿ ಹೋಗಿದ್ದಾರೆ. ರಾಜಕೀಯದವರಂತೂ ಕೇಳಲೇಬೇಡಿ. ರೈತರ ಭೂಮಿ ಕಬಳಿಸುತ್ತಿದ್ದಾರೆ. ಅರಾಜಕತೆ ತಾಂಡವಾಡುತ್ತಿದೆ. ಜೀವನದ ಪ್ರತಿ ಹೆಜ್ಜೆಯಲ್ಲೂ ಲಂಚದ ಹೆಸರು ಕೇಳಿಬರುತ್ತಿದೆ. ಕೋಟ್ಯಾಂತರ ರೂಪಾಯಿಗಳನ್ನು ರಾಜಕೀಯ ವ್ಯಕ್ತಿಗಳು ಅವ್ಯವಹಾರಗಳನ್ನು ನಡೆಸಿ ಸಂಪಾದಿಸುತ್ತಿದ್ದಾರೆ. – ಇಂತಹ ನೂರಾರು ವಿಷಯಗಳನ್ನು ಪ್ರತಿ ಬೆಳಗ್ಗೆ ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಎಲ್ಲರ ಗುರಿ ಒಂದೇ ಸಂಪತ್ತು ಸಂಪತ್ತು ಸಂಪತ್ತು.
ಯಾವ ಧರ್ಮವೂ ಅನೈತಿಕತೆಯ ಪಾಠವನ್ನು ಹೇಳಿಕೊಡುವುದಿಲ್ಲ. ಆನರ ಮನಸ್ಸು ಕಲ್ಲಾಗಿಹೋಗಿದೆ. ಮನುಷ್ಯತ್ವ ಸತ್ತು ಎಷ್ಟೋ ಶತಮಾನಗಳು ಕಳೆದುಹೋಗಿವೆ. ಎಲ್ಲಾ ಯುಗಗಳಲ್ಲೂ ಧರ್ಮ ಜನರನ್ನು ಸನ್ಮಾರ್ಗದ ಕಡೆಗೆ ಒಯ್ಯಲು ಪ್ರಯತ್ನಿಸುತ್ತದೆ. ನಾವು ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡಿದ್ದೇವೆ. ಸತ್ಯ ಕಾಣುವುದೇ ಇಲ್ಲ. ಕೆಲವರು ಅಷ್ಟೋ ಇಷ್ಟೋ ತಗ್ಗಿ ಬಗ್ಗಿ ನಡೆಯುತ್ತಾರೆ. ಬಹುಶಃ ಆದುದರಿಂದಲೇ ಅಲ್ಪ ಸ್ವಲ್ಪ ನ್ಯಾಯ, ನೀತಿ, ಧರ್ಮ ಈ ಭೂಮಿ ಮೇಲೆ ಉಳಿದಿರಬಹುದು ಎಂದು ಕಾಣುತ್ತದೆ.
‘ಇಸ್ಲಾಮ್: ದ ಮಿಸ್ ಅನ್ಡರ್ಸ್ಟುಡ್ ರಿಲೀಜನ್’ (1955 ಮೇ) ಎಂಬ ಗ್ರಂಥದಲ್ಲಿ ಜೇಮ್ಸ್ ಮಿಷನೇರ್ ಹೀಗೆ ಬರೆದಿರುವರು. “ಇತಿಹಾಸದಲ್ಲಿ ಇಸ್ಲಾಮಿನಷ್ಟು ವೇಗವಾಗಿ ಹರಡಿದ ಧರ್ಮ ಬೇರೊಂದಿಲ್ಲ. ಈ ಧರ್ಮದ ಅಲೆಯನ್ನು ಖಡ್ಗದ ಮೂಲಕ ಹರಡಲಾಗಿದೆಯೆಂದು ಪಶ್ಚಿಮದಲ್ಲಿ ಭಾವಿಸಲಾಗುತ್ತಿದೆ. ಆದರೆ ಆಧುನಿಕ ವಿದ್ವಾಂಸರು ಯಾರೂ ಈ ಕಲ್ಪನೆಯನ್ನು ಸ್ವೀಕರಿಸುವುದಿಲ್ಲ. ಮುಹಮ್ಮದ್ ದೈವಿಕ ಪ್ರೇರಣೆಯಿಂದ ಇಸ್ಲಾಮನ್ನು ಕಲಿಸಿದರು. ಅವರು ಮೂರ್ತಿಯನ್ನು ಪೂಜಿಸುವ ಅರೇಬಿಯಾದ ಬುಡಕಟ್ಟಿನಲ್ಲಿ ಜನಿಸಿದರು. ಹುಟ್ಟಿನಲ್ಲೇ ಅನಾಥರಾಗಿದ್ದರು. ಅವರು ಯಾವಾಗಲೂ ಬಡವರು, ನಿರ್ಗತಿಕರು, ವಿಧವೆಯರು, ಅನಾಥರು, ಗುಲಾಮ ಹಾಗೂ ಕೆಳ ವರ್ಗದವರ ಬಗ್ಗೆ ಚಿಂತಾಕ್ರಾಂತರಾಗಿದ್ದರು.’
ಬರ್ನಾರ್ಡ್ ಷಾ ಹೀಗೆ ಹೇಳಿರುವರು: ‘ಮುಹಮ್ಮದರು ಇಂದು ಜೀವಂತವಾಗಿರುತ್ತಿದ್ದರೆ, ಮಾನವ ನಾಗರಿಕತೆಯನ್ನು ನಾಶಗೊಳಿಸುವ ಎಲ್ಲಾ ಸಮಸ್ಯೆಗಳನ್ನು ಪರಿ ಹರಿಸುವಲ್ಲಿ ಸಫಲರಾಗುತ್ತಿದ್ದರು. ಮುಂದಿನ ಶತಮಾನದಲ್ಲಿ ಯಾವದೇ ಧರ್ಮಕ್ಕೆ ಇಂಗ್ಲೆಂಡ್ ಅಥವಾ ಯೂರೋಪನ್ನು ಆಳುವ ಅವಕಾಶ ಇದ್ದರೆ ಅದು ಇಸ್ಲಾಮ್ ಧರ್ಮಕ್ಕಾಗಿದೆ. ನಾನು ಅವರ ಬಗ್ಗೆ ಕಲಿತೆ. ಅವರ ವ್ಯಕ್ತಿತ್ವ ಬೆರಗುಗೊಳಿಸುವಂತಹದ್ದು. ನನ್ನ ಅಭಿಪ್ರಾಯದಂತೆ ಅವರನ್ನು ಮಾನವ ಕುಲದ ವಿಮೋಚಕರೆಂದೇ ಕರೆಯಬೇಕು.’
‘ಹಿಸ್ಟರಿ ಆಫ್ ದ ಇಸ್ಲಾಮಿಕ್ ಪೀಪಲ್ಸ್’ ಎಂಬ ಗ್ರಂಥದಲ್ಲಿ ಡಾ| ಗುಸ್ತವ್ ವೈಲ್ ಹೀಗೆ ಬರೆದಿರುವರು: ‘ಮುಹಮ್ಮದ್ರು ಜನರಿಗೆ ಪ್ರಕಾಶಿಸುವ ಉದಾಹರಣೆಯಾಗಿದ್ದರು. ಅವರ ಗುಣ ನಡತೆ ಪವಿತ್ರವಾಗಿದ್ದು, ಕಳಂಕ ರಹಿತವಾಗಿತ್ತು. ಅವರ ಮನೆ, ವಸ್ತ್ರ, ಆಹಾರ ಇತ್ಯಾದಿಗಳು ಸರಳತೆಯ ವೈಶಿಷ್ಟ್ಯದಿಂದ ತುಂಬಿತ್ತು. ಅವರು ಎಷ್ಟೊಂದು ನಿರಾಡಂಬರರಾಗಿದ್ದರೆಂದರೆ ಅವರು ತಮ್ಮ ಸಂಗಾತಿಗಳಿಂದ ಸನ್ಮಾನವನ್ನು ಸ್ವೀಕರಿಸುತ್ತಿರಲಿಲ್ಲ. ಅವರು ತಮ್ಮ ಸ್ವಂತ ಕೆಲಸಗಳನ್ನು ಗುಲಾಮರಿಂದ ಮಾಡಿಸುತ್ತಿರಲಿಲ್ಲ. ಅವರನ್ನು ಯಾರೂ ಯಾವುದೇ ಸಮಯದಲ್ಲಿ ಕಾಣಬಹುದಾಗಿತ್ತು. ಅವರು ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಅವರ ಜನಾಂಗದ ಕ್ಷೇಮಾಭಿವೃದ್ಧಿಯ ಕಾರ್ಯಾತುರ ಅವರನ್ನು ಮಿತಿಯಿಲ್ಲದ ಔದಾರ್ಯವಂತ ಹಾಗೂ ಉದಾರರನ್ನಾಗಿ ಮಾಡಿತ್ತು.
‘ದ ಲೈಫ್ ಆಂಡ್ ಟೀಚಿಂಗ್ ಆಫ್ ಮುಹಮ್ಮದ್’ (1932) ಎಂಬ ಕೃತಿಯಲ್ಲಿ ಅನ್ನೀಬೆಸೆಂಟ್ ಹೀಗೆ ಬರೆಯುತ್ತಾರೆ, ‘ಅರೇಬಿಯಾದ ಆ ಮಹಾನ್ ಪ್ರವಾದಿಯ ಜೀವನ ಸಂದೇಶವನ್ನು ಯಾರಾದರೂ ಅಧ್ಯಯನ ಮಾಡಿದರೆ ಅವರು ಅದರಿಂದ ಪ್ರಭಾವಿತರಾಗದೇ ಇರಲಾರರು. ಸೃಷ್ಟಿಕರ್ತನೊಂದಿಗಿರುವ ಅವರ ಭಯ ಭಕ್ತಿ ನೋಡಿದರೆ ಅವರು ನಿಶ್ಚಯವಾಗಿಯೂ ಓರ್ವ ಶ್ರೇಷ್ಠ ಸೃಷ್ಟಿಕರ್ತನ ಮಹಾನ್ ಪ್ರವಾದಿಯಾಗಿದ್ದರು ಎಂದು ತಿಳಿಯುತ್ತದೆ ಮತ್ತು ನಿಮಗೆ ತಿಳಿದಿದೆಯಾದರೂ ಅವರ ಬಗ್ಗೆ ತಿಳಿಸಲು ತುಂಬಾ ವಿಶೇಷತೆಗಳು ಇವೆ. ಅವರ ಚಾರಿತ್ರ್ಯವನ್ನು ಪುನಃ ಪುನಃ ಅಧ್ಯಯನ ನಡೆಸಿದಾಗ ಆ ಅರೇಬಿಯಾದ ಮಹಾನ್ ಅಧ್ಯಾಪಕರ ಜೀವನದ ಹೊಸ ಹೊಸ ರಂಗಗಳು ಕಂಡುಬರುತ್ತವೆ.’
ಮಹಾತ್ಮಗಾಂಧಿ ತಮ್ಮ ‘ಯಂಗ್ ಇಂಡಿಯಾ'(1924)ದಲ್ಲಿ, ‘ಮಿಲಿಯಗಟ್ಟಲೆ ಮಾನವ ಹೃದಯದಲ್ಲಿ ಅಚ್ಚೊತ್ತಿರುವ ಓರ್ವ ಉತ್ಕøಷ್ಟ ವ್ಯಕ್ತಿಯ ಜೀವನ ವಿಧಾನವನ್ನು ನಾನು ಅರಿಯಲು ಇಚ್ಛಿಸುತ್ತೇನೆ. ಅವರ ಸಂದೇಶದಲ್ಲಿ ಖಡ್ಗವು ಯಾವ ಸ್ಥಾನವನ್ನೂ ಗಳಿಸಲಿಲ್ಲವೆಂಬುದು ನನ್ನಲ್ಲಿ ಇನ್ನೂ ಹೆಚ್ಚು ನಂಬಿಕೆಯನ್ನುಂಟುಮಾಡಿತು. ಅದು ಸರಳತೆಯ ಪರಾಕಾಷ್ಠೆಯಾಗಿತ್ತು. ಅತಿ ಪ್ರಾಮುಖ್ಯತೆ ಮತ್ತು ನಿಖರತೆಯೊಂದಿಗೆ ವಾಗ್ದಾನಗಳನ್ನು ನೆರವೇರಿಸುವ, ತನ್ನನ್ನು ಯಾವುದೇ ಔನ್ನತ್ಯಕ್ಕೇರಿಸಬಯಸದ, ತನ್ನ ಗೆಳೆಯರ ಮತ್ತು ಅನುಚರರ ಬಗೆಗಿನ ಅವರ ಅರ್ಪಣಾಭಾವ, ತನ್ನ ಪ್ರಭುವಿನ ಮೇಲಿನ ಪರಿಪೂರ್ಣ ವಿಶ್ವಾಸ ಮತ್ತು ತನ್ನ ದೌತ್ಯದ ಬಗ್ಗೆ ಇದ್ದ ಅಚಲವಾದ ವಿಶ್ವಾಸವು ಅವರ ಎಲ್ಲ ಅಡಚಣೆಗಳನ್ನು ಎದಿರಿಸುವಂತೆ ಮಾಡಿತ್ತು. ಇದಾಗಿದೆ ಎಲ್ಲವನ್ನು ಅತಿ ಜಯಿಸಿದ್ದು, ಬದಲಾಗಿ ಖಡ್ಗವಲ್ಲ. ನಾನು ಪ್ರವಾದಿ ಜೀವನ ಚರಿತ್ರೆಯ 2ನೆಯ ಭಾಗವನ್ನು ಓದಿ ಮುಗಿಸಿದಾಗ ಆ ಶ್ರೇಷ್ಠ ಜೀವನದ ಬಗ್ಗೆ ಇನ್ನಷ್ಟು ಓದಲು ಇಲ್ಲವೆಂದು ಖಿನ್ನನಾದೆ.’ –
ಸಂಗ್ರಹ ; ಜಬಿವುಲ್ಲಾ ಖಾನ್, ಬೆಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.