ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಸಮಕಾಲೀನ ಮುಸ್ಲಿಂ ಜಗತ್ತಿನ ಅಗ್ರೇಸರ ವಿದ್ವಾಂಸ, ಅಹ್ಲುಸುನ್ನದ ಅಮರ ನಾಯಕ, ಉಲಮಾ ಲೋಕದ ಕಿರೀಟ, ಆಧ್ಯಾತ್ಮಿಕ ನಭೋಮಂಡಲದ ಮಿನುಗು ತಾರೆ ಶೈಖುನಾ ತಾಜುಲ್ ಉಲಮಾರವರ ಅಗಲುವಿಕೆಯ ನೋವು ಸುನ್ನೀ ಸಮೂಹಕ್ಕೆ ತುಂಬಲಾರದಷ್ಟು ನಷ್ಟವಾಗಿದೆ, ಅವರಿಲ್ಲದ ಶಿಷ್ಯಸಮೂಹವನ್ನು ಅನಾಥರನ್ನಾಗಿಸಿದೆ.
ತಾಜುಲ್ ಉಲಮಾ ರು ಹಿಜ್ ರಾ 1431ರ ರಬೀವುಲ್ ಅವ್ವಲ್ 25ರಂದು ಭೂಲೋಕ ಕಂಡ ಪ್ರವಾದಿ ಕುಟುಂಬದ ಪುನೀತ ಸದಸ್ಯ, ಪವಿತ್ರ ರಬೀವುಲ್ ಅವ್ವಲ್ ನ ವಿದಾಯದೊಂದಿಗೆ ಆಗಮಿಸಿದ ರಬೀವುಲ್ ಆಖಿರ್ ನ ಚಂದ್ರೋದಯ ವಿದ್ವತ್ ಸೋರ್ಯವೊಂದರ ಸಾಕ್ಷಿಯಾಗಿತ್ತು. 2014 ಫೆಬ್ರವರಿ 1, ರಬೀವುಲ್ ಆಖಿರ್ 1ರ ಆ ದಿನ ಕೇರಳ ಕರ್ನಾಟಕ ಮತ್ತು ಅಲ್ಲಿನ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರಭಾವಿತಗೊಂಡ ಪ್ರಪಂಚದ ನಾನಾ ಕಡೆಗಳು ಹರಿಯಬಿಟ್ಟ ಕಣ್ಣೀರ ನದಿಗಳು ಕೇರಳದ ಎಟ್ಟಿಕ್ಕುಳಂ ಎಂಬ ಪುಟ್ಟ ಊರನ್ನು ಬಹುದೊಡ್ಡ ಜನಸಾಗರವನ್ನಾಗಿ ಮಾಡಿಸಿತು.
ತಾಜುಲ್ ಉಲಮಾ ರ ಅಗಲುವಿಕೆಯಿಂದ ಸಮುದಾಯವೊಂದು ಧಾರ್ಮಿಕವಾಗಿ ಅನಾಥವಾಯಿತು. ಮಾತ್ರವಲ್ಲ ತನ್ನ ಪುರುಷಾಯುಷ್ಯವನ್ನ ಕರಾವಳಿ ಕನ್ನಡದ ತಟದಲ್ಲಿ ಕಳೆದು “ಉಳ್ಳಾಲ ತಂಙಳ್” ಎಂದೇ ಜನಪ್ರಿಯರಾದ ಶೈಖುನಾ ತಾಜುಲ್ ಉಲಮಾರ ವಿದಾಯದಿಂದ ಸುನ್ನೀ ಜಗತ್ತಿಗೆ ವಿಶೇಷತಃ ದಕ್ಷಿಣ ಭಾರತಕ್ಕೆ ಅಕ್ಷರಶಃ ಅನಾಥ ಭಾವನೆ ಅಪ್ಪಳಿಸಿದೆ. ತಾಜುಲ್ ಉಲಮಾ ಮಹಾನರು ನಮ್ಮಿಂದ ಅಗಲಿದರೂ ಆ ಮಹಾನರ ಹೆಸರಿರುವ ಅದೆಷ್ಟೊ ಧಾರ್ಮಿಕ ಕೇಂದ್ರಗಳು, ಮದ್ರಸಗಳು, ಮಸ್ಜಿದ್ ಗಳು, ಬಡವರಿಗೆ ಸಹಾಯ ಮಾಡುವ ಅದೆಷ್ಟೊ ಪದ್ಧತಿಗಳು, ಚಾರಿಟಿಗಳು, ಫಂಡ್ ಗಳು ನಾನಾ ಕಡೆಗಳಲ್ಲಿ ಕಾರ್ಯಾಚರಿಸುವಾಗ ಅವೆಲ್ಲವೂ ಕಾಣುವಾಗ ನಮ್ಮ ಮನಸ್ಸಿಗೆ ಅರಿಯದೆ ತಾಜುಲ್ ಉಲಮಾರ ನೆನಪಾಗುತ್ತವೆ.
ಉಳ್ಳಾಲ ದರ್ಗಾಗೆ ಹೋದಾಗ ಅಲ್ಲಿ ದರ್ಗಾದ ಹತ್ತಿರ ಒಂದು ಹಂಚಿನ ಸಣ್ಣ ಕೊಠಡಿಯನ್ನ ಕಾಣಬಹುದು. ತಾಜುಲ್ ಉಲಮಾರವರು ಉಳ್ಳಾಲ ಸಯ್ಯಿದ್ ಮದನಿ ದರ್ಬಾರಿನಲ್ಲಿ ರಾಜನಾಗಿ ಇದ್ದರೂ ಆ ಹಂಚಿನ ಕೊಠಡಿ ಕಾಣುವಾಗ ತಾಜುಲ್ ಉಲಮಾರವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಎಂದರೆ ನಿಜಕ್ಕೂ ಆಶ್ಚರ್ಯಕರ. ಮಹಾನರನ್ನು ಪ್ರೀತಿಸುವವರು ತಾಜುಲ್ ಉಲಮಾ ರವರಲ್ಲಿ ನಿಮಗೆ ಒಂದು ಒಳ್ಳೆಯ ಕೊಠಡಿ ನಿರ್ಮಿಸಿಕೊಡುವೆವು ಎಂದು ಹೇಳಿದರೂ ತಾಜುಲ್ ಉಲಮಾ ರು ಬೇಡ ಎಂದೇ ಹೇಳುತ್ತಿದ್ದರು, ಉಳ್ಳಾಲ ತಂಗಳರ್ ರವರಿಗೆ ಉನ್ನತ ಸ್ಥಾನವಿದ್ದರೂ ತಾಜುಲ್ ಉಲಮಾ ತಂಗಲ್ ರವರು ಆಡಂಬರದ ಜೀವನ ನಡೆಸಬೇಕು ಎಂದು ಆಸೆಪಡಲಿಲ್ಲ .
ತನ್ನ ಸಮಯವನ್ನೆಲ್ಲ ದ್ಸಿಕ್ರ್, ಸ್ವಲಾತ್, ನಮಾಝ್ ನಲ್ಲಿ ಇನ್ನಿತರ ಇಬಾದತ್ ಗಳಲ್ಲಿಯೇ ತಲ್ಲೀನರಾಗುತ್ತಿದ್ದರು. ತನ್ನ ಪುರುಷಾಯುಷ್ಯವನ್ನಿಡೀ ದೀನಿಗಾಗಿ ಸಮರ್ಪಿಸಿದ ಮಹಾನ್ ವಿದ್ವಾಂಸರಾಗಿದ್ದರು ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳ್.
“ಯಾರಾದರೂ ಅಲ್ಲಾಹನೊಂದಿಗಿದ್ದರೆ ಅಲ್ಲಾಹು ಅವನೊಂದಿಗಿರುವನು, ಯಾರಾದರೂ ಅಲ್ಲಾಹನನ್ನು ಭಯಪಟ್ಟರೆ ಎಲ್ಲವೂ ಅವನನ್ನು ಭಯಪಡುವವು” ಎಂಬ ಪವಿತ್ರ ವಚನದ ಸಕ್ಷ್ಯಾತ್ಕಾರವಾಗಿತ್ತು ತಾಜುಲ್ ಉಲಮಾರ ಜೀವನ. ಯಾರಿಗೂ ಬೆರಳು ತೋರಿಸಿ ಆಕ್ಷೇಪಿಸಲು ಸಾಧ್ಯವಾಗದ ರೀತಿಯಲ್ಲಾಗಿತ್ತು ಮಹಾನರ ಜೀವನ. ಸತ್ಯಕ್ಕೆದುರಾದ ಒಂದೇ ಒಂದು ಮಾತು ಅವರಿಂದ ಬರುತ್ತಿರಲಿಲ್ಲ. ಸತ್ಯವನ್ನು ಹೇಳುವುದರಲ್ಲಿ ಅವರು ಯಾರನ್ನೂ ಭಯಪಡುತ್ತಿರಲ್ಲಿಲ್ಲ. ಎಷ್ಟು ದೊಡ್ದ ವ್ಯಕ್ತಿಯಾಗಿದ್ದರೂ ಸರಿ, ಸತ್ಯಕ್ಕಾಗಿ ಘರ್ಜಿಸುವ ಶಕ್ತಿ ಅವರಗಿತ್ತು. ತಾಜುಲ್ ಉಲಮಾ ಎಂಬ ಹೆಸರು ಕೇಳುವಾಗಳೆಲ್ಲ ರೋಮಾಂಚನವಾಗುತ್ತದೆ. ತಾಜುಲ್ ಉಲಮಾ ರವರು ವಿದ್ವಾಂಸರಲ್ಲಿ ಮಹಾ ವಿದ್ವಾಂಸರಾಗಿ, ಸೂಫಿಗಳಲ್ಲಿ ಮಹಾ ಸೂಫಿಯಾಗಿ, ನೇತಾರರಲ್ಲಿ ಮಹಾ ನೇತಾರರಾಗಿ, ಉಲಮಾಗಳ ದೊರೆಯಾಗಿ, ಸಾದಾತ್ತುಗಳಲ್ಲಿ ಮಹೋನ್ನತ ಸಯ್ಯಿದ್ ಆಗಿ ಜೀವಿಸಿದ ಹಾಗೂ ತನ್ನ ಸಮಯವನ್ನೆಲ್ಲ ದೀನಿಗಾಗಿ ಸಮರ್ಪಿಸಿದ ಸರಿಸಾಟಿಯಿಲ್ಲದ ಮಹಾ ತೇಜಸ್ಸು, ಉಲಮಾ ಜಗತ್ತಿನ ಸಾರಥಿ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಜೀವನದ ಬಗ್ಗೆ ವರ್ಣಿಸಿ ಮುಗಿಸಲು ನಮ್ಮಿಂದ ಅಸಾಧ್ಯ. ಇಲ್ಮುಲ್ ತಫ್ಸೀರ್ , ಇಲ್ಮುಲ್ ಹದೀಸ್, ಇಲ್ಮುಲ್ ಕಲಾಂ, ಇಲ್ಮುಲ್ ಫಿಖ್ಹ್, ಉಸೂಲುಲ್ ಫಿಖ್ಹ್, ಇಲ್ಮುಲ್ ಮಆನಿ, ಇಲ್ಮುಲ್ ಮಂತ್ವಿಖ್, ಇಲ್ಮುಲ್ ಅರೂಳ್, ಇಲ್ಮುಲ್ ಫಲಖ್ ಮುಂತಾದ ವಿದ್ಯೆಯ ಎಲ್ಲಾ ಶಾಖೆಗಳಲ್ಲೂ ಅಗ್ರಗಣ್ಯರಾಗಿದ್ದರು.
ಶಾಫೀ ಮದ್ಸ್’ಹಬಿನ ಅತ್ಯಂತ ಪ್ರಮುಖ ಗ್ರಂಥವಾಗಿದೆ ತುಹ್ಫತ್ತುಲ್ ಮುಹ್ತಾಜ್. ಈ ಗ್ರಂಥವನ್ನು ನೋಡದೆ ದರ್ಸ್ ನಡೆಸಲು ಸಾಮರ್ಥ್ಯವಿರುವ ಏಕ ವಿದ್ವಾಂಸರಿದ್ದರೆ ಅದು ತಾಜುಲ್ ಉಲಮಾ ಉಳ್ಳಾಲ ತಂಙಳ್ ರಾಗಿದ್ದಾರೆ. ಉಳ್ಳಾಲ ತಂಙಳ್’ ರವರು ದರ್ಸ್ ಸಮಯ ಕಳೆದರೆ ಆರಾಧನೆಗಳಲ್ಲಿ ತಲ್ಲೀನರಾಗುತ್ತಿದ್ದರು. ಮಾತ್ರವಲ್ಲ ತಾಜುಲ್ ಉಲಮಾರಿಗೆ ಖುರ್’ಆನ್ ಪಾರಾಯಣ ಅಚ್ಚುಮೆಚ್ಚಿನ ಕಾರ್ಯವಾಗಿತ್ತು. ವಾಹನಗಳಲ್ಲಿ ಪ್ರಯಾಣ ಮಾಡುವಾಗಲೂ ಖುರ್’ಆನ್ ಪಾರಾಯಣ ಮಾಡುತ್ತಿದ್ದರು ಮಗ್ರಿಬ್ ಇಶಾ ನಮಾಝಿನ ಮಧ್ಯೆ ಅವರ ರೂಮಿನ ಬಾಗಿಲು ತೆರೆಯಲ್ಪಡುತ್ತಿರಲಿಲ್ಲ. ಏಕೆಂದರೆ ಆ ಸಮಯಗಳಲ್ಲಿ ಅವ್’ರಾದ್ ಗಳಲ್ಲಿ ಮಗ್ನರಾಗುತ್ತಿದ್ದರು. ಹೀಗೆ ಇಲ್ಮ್ ಮತ್ತು ಅಮಲ್ ನ ಪ್ರತಿರೂಪವಾಗಿದ್ದರು ತಂಙಳ್ ರವರು ಸುನ್ನತ್ ಜಮಾಅತ್ ನ ಸಂಘಟನೆಗಳಿಗೆ ನೇತೃತ್ವ ನೀಡಿ ಸುನ್ನೀ ಆದರ್ಶವನ್ನು ಎಲ್ಲೆಡೆ ತಲುಪಿಸುವುದರಲ್ಲಿ ಮಹತ್ತರವಾದ ಪ್ರಯತ್ನವನ್ನು ಮಾಡಿದ್ದರು ಶೈಖುನಾ ತಾಜುಲ್ ಉಲಮಾ (ಖ,ಸಿ)ರವರು. ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷರಾಗಿದ್ದುಕೊಂಡು ಸಂಘಟನೆಯನ್ನು ತನ್ನ ವಾಫಾತಿನವರೆಗೆ ನಿಯಂತ್ರಿಸಿದ್ದರು. ಸತ್ಯಕ್ಕೆದುರಾಗಿ ಯಾರು ಅಭಿಪ್ರಾಯ ಹೇಳಿದರೂ ತಾಜುಲ್ ಉಲಮಾರು ಆ ಕೂಡಲೇ ಘರ್ಜಿಸುತ್ತಿದ್ದರು. ದೀನಿನ ವಿಷಯವನ್ನು ಗಂಭೀರವಾಗಿಯೇ ತೆಗೆದುಕೊಳ್ಳುತ್ತಿದ್ದರು. ಕಿತಾಬ್ ವಿಷಯದಲ್ಲಿ ಯಾವುದೇ ಮುಲಾಜಿಲ್ಲದೆ ತಟ್ಟನೇ ಉತ್ತರ ನೀಡಿ ಅದನ್ನು ನಿವಾರಿಸುತ್ತಿದ್ದರು. ಸತ್ಯಕ್ಕೆದುರಾಗಿ ಯಾರೇ ಕಂಡರೂ ಆ ಕೂಡಲೇ ಅಂತವರ ವಿರುದ್ಧ ಧ್ವನಿ ಎತ್ತುತಿದ್ದರು.
*”ಅಲ್ಲಾಹನೇ…ಸತ್ಯಕ್ಕೆದುರಾಗಿ ನಿಲ್ಲುವ ಕುರ್ಚಿ ನನಗೆ ಬೇಡ. ಸತ್ಯಕ್ಕಾಗಿ ಮಾತ್ರ ದುಡಿಯಲು ನೀನು ತೌಫೀಕ್ ನೀಡು”* ಎಂದು ತಾಜುಲ್ ಉಲಮಾರು ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿದ್ದರು. *ನಾನು ಒಬ್ಬೊಂಟಿಗನಾದರೂ ಸರಿ, ಸತ್ಯಕ್ಕೆ ಬೇಕಾಗಿ ಮಾತ್ರ ನನ್ನ ಕಾರ್ಯಾಚರಣೆ’* ಎಂಬ ದಿಟ್ಟ ಮಾತು ಸುನ್ನತ್ ಜಮಾಅತ್ ನ್ನು ಇನ್ನಷ್ಟೂ ಶಕ್ತಿಗೊಳಿಸಿತು. ತಾಜುಲ್ ಉಲಮಾ ರವರ ಪ್ರಾರ್ಥನೆಯ ಫಲವಾಗಿದೆ ಕೇರಳ ಹಾಗೂ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಬೆಳೆದು ಹೆಮ್ಮರವಾಗಿರುವ SYS, SSF ಹಾಗೂ ಇನ್ನಿತರ ಇದರ ಅಧೀನದಲ್ಲಿರುವ SJM, SBS, KMJ, KCF, ಸಂಘ ಶಕ್ತಿಯು ಕೇರಳ ಹಾಗೂ ಕರ್ನಾಟಕದ ನಾನಾ ಕಡೆಗಳಲ್ಲಿ ನೆರವು ನೀಡುವ ಸಹಾಯ್ ಇವೆಲ್ಲವೂ ತಾಜುಲ್ ಉಲಮಾ ರ ದಿವ್ಯ ನೇತೃತ್ವದ ಫಲವಲ್ಲದೆ ಮತ್ತೇನು..? ಅಂದಿನ ಕಠಿಣ ನಿಲುವಿನಿಂದಾಗಿ ಇಂದು ಯಾರ ಮುಂದೆಯೂ ನಿಂತು ಸುನ್ನತ್ ಜಮಾಅತ್ ಹೇಳಲು ನಮಗೆ ಸಾಧ್ಯವಾಗುತ್ತಿದೆ. ಎಂದಾದರೆ ಅದಕ್ಕೆ ಕಾರಣ ತಾಜುಲ್ ಉಲಮಾರಾಗಿದ್ದಾರೆ . ತಾಜುಲ್ ಉಲಮಾ ರ ಜೀವನ ಶೈಲಿಯನ್ನು ವರ್ಣಿಸಿ ಮುಗಿಸಲು ಅಸಾಧ್ಯ.
ಅಹ್ಲುಬೈತಿನ ಕೊಂಡಿ ಕಳಚಿದ ವಿಷಯವನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಪವಿತ್ರ ಹರಂನ ಪ್ರಮುಖ ಪಂಡಿತ ಅಬ್ಬಾಸ್ ಅಲವಿ ಅಲ್ ಮಾಲಿಕಿರವರಿಗೆ ತಿಳಿಸಲು ದೂರವಾಣಿ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ಅವರು ತಾಜುಲ್ ಉಲಮಾರಿಗಾಗಿ ಮಯ್ಯಿತ್ ನಮಾಝ್ ಮಾಡಲು ಸಿದ್ಧತೆ ಮಾಡುವುದೆಂದು ತಿಳಿಸಿದರು. ಪವಿತ್ರ ಹರಂ ನಲ್ಲಿಯೂ ಕೂಡ ತಾಜುಲ್ ಉಲಮಾರ ಮಯ್ಯಿತ್ ನಮಾಝ್ ನಿರ್ವಹಿಸಿದರು. ಅಷ್ಟೇ ಅಲ್ಲದೆ ಪ್ರಮುಖ ಪಂಡಿತರನ್ನು ಕರೆಯಿಸಿ ತಂಙಳರವರಿಗಾಗಿ ಬೃಹತ್ ದ್ಸಿಕ್ರ್ ಮಜ್ಲಿಸನ್ನು ಸಂಘಟಿಸಿದರು. ಎಷ್ಟೊಂದು ಭಾಗ್ಯವಲ್ಲವೆ..! ತಾಜುಲ್ ಉಲಮಾರು ಇಷ್ಟಪಟ್ಟಿರುವುದು ಇದನ್ನೇ ತಾನೇ. *”ರೂಹ್ ಗಳು ಪರಸ್ಪರ ಸಂಧಿಸುತ್ತದೆ. ಪರಿಚಯವಿರುವವರು ಒಂದುಗೂಡುವರು. ಪರಿಚಯವಿಲ್ಲದವರು ಬೇರ್ಪಡುವರು” ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ವಚನದಂತೆ* ನಮ್ಮನ್ನು ಬಿಟ್ಟಗಲಿದ ನೇತಾರರು, ಸಯ್ಯಿದ್ ಗಳು, ಪಂಡಿತರು, ಮುಅಲ್ಲಿಂಗಳು ಎಲ್ಲರ ರೂಹ್ ಗಳು ಪರಸ್ಪರ ಸಂಪರ್ಕದಲ್ಲಿರುತ್ತದೆ. ಜೀವಿತ ಕಾಲದಲ್ಲಿ ತಾಜುಲ್ ಉಲಮಾ ನಮ್ಮನ್ನು ನಿಯಂತ್ರಿಸಿದಂತೆ ವಫಾತಿನ ಬಳಿಕವೂ ಅವರು ನಮ್ಮೊಂದಿಗೆ ಇರುವರು ಎಂದು ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮಾತು ನಿಜ ಎನ್ನುವುದರಲ್ಲಿ ತರ್ಕವಿಲ್ಲ..
*ಅಲ್ಲಾಹನು ತಾಜುಲ್ ಉಲಮಾ ಮಹಾನರೊಂದಿಗೆ ನಮ್ಮೆಲ್ಲರನ್ನು ಸ್ವರ್ಗೋಧ್ಯಾನದಲ್ಲಿ ಒಂದು ಗೂಡಿಸಲಿ…. ಅವರ ಬರಕತ್ತಿನಿಂದ ಸುನ್ನತ್ ಜಮಾಅತ್ ನಲ್ಲಿ ಪ್ರವರ್ತಿಸುವ ಎಲ್ಲಾ ದೀನಿ ಸ್ಥಾಪನೆಗಳನ್ನು ಇನ್ನಷ್ಟೂ ಉನ್ನತದಿಂದ ಉನ್ನತಿಗೇರಿಸಲಿ…ಹಾಗೂ ತಾಜುಲ್ ಉಲಮಾ ಬರಕತಿನಿಂದ ಅಲ್ಲಾಹನು ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಗೆ ಹಾಗೂ ಅಸ್ಸಯ್ಯಿದ್ ಫಝಲ್ ಕೋಯಮ್ಮ ಅಲ್ ಬುಖಾರಿ, ಕೂರಾ ತಂಙಳರವರಿಗೂ ದೀರ್ಘಾಯುಷ್ಯ ಆರೋಗ್ಯ, ಶಕ್ತಿಯನ್ನು ನೀಡಲಿ… ಸುನ್ನತ್ ಜಮಾಅತ್ ನಲ್ಲಿರುವ ಎಲ್ಲಾ ಉಲಮಾ, ಸಯ್ಯಿದ್ ರವರಿಗೂ, ಪಂಡಿತರಿಗೂ ಹಾಗೂ ಎಲ್ಲಾ ಕಾರ್ಯಕರ್ತರಿಗೂ ಅಲ್ಲಾಹನು ಆಫಿಯತ್, ದೀರ್ಘಾಯುಷ್ಯವನ್ನ ನೀಡಲಿ…. ತಾಜುಲ್ ಉಲಮಾ (ಖ,ಸಿ) ರವರ ಬರಕತ್ತಿನಿಂದ ಅಲ್ಲಾಹನು ನಮ್ಮೆಲ್ಲರ ಮನಸ್ಸಿನಲ್ಲಿರುವ ಎಲ್ಲಾ ಹಲಾಲಾದ ಉದ್ದೇಶಗಳನ್ನು ಈಡೇರಿಸಲಿ…ಆಮೀನ್
✍️𝙏.𝙃 𝙈𝙐𝙃𝘼𝙈𝙈𝘼𝘿 𝙎𝘼𝙁𝙒𝘼𝙉 𝙉𝙀𝙇𝙇𝙔𝘼𝘿𝙄
THAJUL ULAMA (ULLAL THANGAL) (q,s) 9th UROOS MUBARAK 2022 Oct 27, 28, 29 @ Ettikkulam Payyannoor, Kannoor
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.