ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ(19) ಸಾವು ಆತ್ಮಹತ್ಯೆ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ದೇಹಕ್ಕೆ ಇಲಿ ವಿಷ ಸೇರಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಂತರಿಕ ಅಂಗಾಂಗಗಳ ಮಾದರಿಯನ್ನು ಕೋಝಿಕ್ಕೋಡ್ ಪ್ರಾದೇಶಿಕ ರಾಸಾಯನಿಕ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಜುಶ್ರೀ ಬರೆದಿರುವ ಶಂಕಿತ ಸೂಸೈಡ್ ನೋಟ್ ಅನ್ನು ಮೇಲ್ಪರಂ ಪೊಲೀಸರು ಕಾಸರಗೋಡು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಾನಸಿಕ ಒತ್ತಡದಿಂದ ಹಿಡಿದುಕೊಳ್ಳಲು ಸಾಧ್ಯವಾಗದೆ ಎಲ್ಲರಿಗೂ ವಿದಾಯ ಹೇಳುತ್ತಿರುವುದಾಗಿ ಟಿಪ್ಪಣಿಯಲ್ಲಿ ಹೇಳಲಾಗಿದೆ.
ಸೈಬರ್ ಸೆಲ್ ಸಹಾಯದಿಂದ ಅಂಜುಶ್ರೀ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಅವರು ಗೂಗಲ್ನಲ್ಲಿ ಇಲಿ ವಿಷಕ್ಕಾಗಿ ಹುಡುಕಾಟ ನಡೆಸಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಎಲ್ಲಿಂದ ಖರೀದಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅದರ ಪ್ಯಾಕೆಟ್ ಮನೆಯಿಂದ ಪತ್ತೆಯಾಗಿಲ್ಲ. ಇದೇ ವೇಳೆ ಅಂಜುಶ್ರೀ ಸಾವಿನ ಎಲ್ಲಾ ಆಯಾಮಗಳ ತನಿಖೆ ನಡೆಸಿ ನಿಗೂಢತೆ ಹೋಗಲಾಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಅಂಜುಶ್ರೀ ಅವರ ಸ್ನೇಹಿತೆ ಚಟ್ಟಂಚಾಲ್ ಮೂಲದ ಬೇಕರಿ ಉದ್ಯೋಗಿಯೂ ಆಗಿದ್ದ ಯುವಕನೋರ್ವ ಅನಾರೋಗ್ಯದಿಂದ ಒಂದೂವರೆ ತಿಂಗಳ ಹಿಂದೆ ಮೃತಪಟ್ಟಿದ್ದರು. ಆ ಯುವಕನನ್ನು ಅಂಜುಶ್ರೀ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಯುವಕ ಮೃತಪಟ್ಟ 41ನೇ ದಿನಕ್ಕೆ ಅಂಜುಶ್ರೀ ಸಾವನ್ನಪ್ಪಿದ್ದಾಳೆ.
ಸಾವಿನ ನಂತರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ನೋಡಲು ಅಂಜುಶ್ರೀ ತೆರಳಿದ್ದರು. ಅಂಜು ಮೊಬೈಲ್ ಪರಿಶೀಲಿಸಿದಾಗ ಪೊಲೀಸರಿಗೆ ಕೆಲ ಸುಳಿವು ಸಿಕ್ಕಿದೆ. ವಿಷಾಹಾರ ಸೇವನೆಯಿಂದ ಅಂಜುಶ್ರೀ ಸಾವು ಸಂಭವಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿಯನ್ನು ಪೊಲೀಸರು ಬಿಡುಗಡೆಗೊಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.